< ಯೆರೆಮೀಯನು 48 >
1 ಮೋವಾಬನ್ನು ಕುರಿತದ್ದು: ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೆಬೋ ಊರಿನವರಿಗೆ ಕಷ್ಟ! ಆ ಊರು ಸೂರೆಯಾಯಿತು; ಕಿರ್ಯಾತಯಿಮು ಶತ್ರುವಿನ ಕೈವಶವಾಗಿ ಅವಮಾನಕ್ಕೆ ಗುರಿಯಾಗಿದೆ; ಬಲವಾದ ಕೋಟೆಯು ಸಹ ಚದರಿ ನಾಚಿಕೆಗೆ ಈಡಾಗಿದೆ.
2 ಮೋವಾಬಿನ ಸ್ತೋತ್ರ ಇನ್ನು ಮೇಲೆ ಇರುವುದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ರಾಷ್ಟ್ರವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ; ಮದ್ಮೆನೇ, ನೀನು ಸಹ ಸುಮ್ಮನಾಗುವೆ; ಖಡ್ಗವು ನಿನ್ನನ್ನು ಹಿಂದಟ್ಟುವುದು.
3 ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶವು, ಹೊರಡುವುದು.
4 ಮೋವಾಬು ನಾಶವಾಯಿತು: ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು.
5 ಲೂಹೀತ್ ದಿಣ್ಣೆಯನ್ನು ಅಳುತ್ತಲೇ ಹತ್ತುವರು; ಹೊರೊನಯಿಮಿನ ಇಳಿಜಾರಿನಲ್ಲಿ ಶತ್ರುಗಳು ನಾಶದ ಶಬ್ದವನ್ನು ಕೇಳಿದ್ದಾರೆ.
6 ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಮರುಭೂಮಿಯಲ್ಲಿರುವ ಒಣ ಗಿಡದ ಹಾಗಿರಿ.
7 ಏಕೆಂದರೆ ನಿನ್ನ ಕ್ರಿಯೆಗಳಲ್ಲಿಯೂ, ನಿನ್ನ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟಿದ್ದರಿಂದ, ನೀನು ಸಹ ಸೆರೆಯಾಗುವಿ ಮತ್ತು ಕೆಮೋಷನು, ಅವನ ಯಾಜಕರು, ಅವನ ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.
8 ಒಂದೊಂದು ಪಟ್ಟಣದ ಮೇಲೆ ವಿನಾಶಕನು ಬರುವನು; ಯೆಹೋವ ದೇವರು ಹೇಳಿದ ಹಾಗೆಯೇ, ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳಲಾರದು. ತಗ್ಗೂ ಸಹ ನಾಶವಾಗುವುದು; ಮತ್ತು ಬಯಲು ಹಾಳಾಗುವುದು.
9 ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಏಕೆಂದರೆ ಅದರ ಪಟ್ಟಣಗಳು ಹಾಳಾಗುವುವು; ಅವುಗಳಲ್ಲಿ ನಿವಾಸಿಗಳಿರುವುದಿಲ್ಲ.
10 “ಯೆಹೋವ ದೇವರು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ರಕ್ತದಿಂದ ತನ್ನ ಖಡ್ಗವನ್ನು ಹಿಂದೆಗೆಯುವವನಿಗೆ ಶಾಪವಾಗಲಿ.
11 “ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯಲಾಗುವುದಿಲ್ಲ; ಸೆರೆಗೆ ಹೋಗಲಿಲ್ಲ; ಆದ್ದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
12 ಆದ್ದರಿಂದ ಇಗೋ, ದಿನಗಳು ಬರುವವು” ಎಂದು ಯೆಹೋವ ದೇವರು ಅನ್ನುತ್ತಾರೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು; ಅದರ ಪಾತ್ರೆಗಳನ್ನು ಬರಿದುಮಾಡಿ, ತಮ್ಮ ಬುದ್ದಲಿಗಳನ್ನು ಒಡೆಯುವರು.
13 ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ, ಹಾಗೆಯೇ ಮೋವಾಬು ಕೆಮೋಷನ ವಿಷಯ ನಾಚಿಕೆಪಡುವುದು.
14 “‘ನಾವು ಪರಾಕ್ರಮಶಾಲಿಗಳೂ, ಯುದ್ಧಕ್ಕೆ ಬಲಿಷ್ಠರೂ,’ ಎಂದು ನೀವು ಹೇಳುವುದು ಹೇಗೆ?
15 ಮೋವಾಬು ಸೂರೆಯಾಯಿತು. ಅದರ ಪಟ್ಟಣಗಳು ಏರಿ ಹೋದವು, ಅದರ ಶ್ರೇಷ್ಠ ಯೌವನಸ್ಥರು ಹತರಾಗುವುದಕ್ಕೆ ಹೋಗಿದ್ದಾರೆ,” ಎಂದು ಸರ್ವಶಕ್ತ ಯೆಹೋವ ಎಂಬ ಹೆಸರುಳ್ಳ ರಾಜಾಧಿರಾಜರ ನುಡಿ.
16 “ಮೋವಾಬಿಗೆ ಆಪತ್ತು ಬರುವುದಕ್ಕೆ ಸಮೀಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ.
17 ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ, ‘ಬಲವಾದ ಕೋಲೂ, ಮಹಿಮೆಯ ಬೆತ್ತವೂ ಹೇಗೆ ಮುರಿದುಹೋಯಿತು?’ ಎಂದು ಹೇಳಿರಿ.
18 “ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ಒಣಭೂಮಿಯ ಬಾಯಾರಿದವಳಂತೆ ಕೂತುಕೋ, ಏಕೆಂದರೆ ಮೋವಾಬನ್ನು ವಿನಾಶ ಮಾಡುವವನು ನಿನ್ನ ಮೇಲೆ ಬರುವನು; ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿಬಿಡುವನು.
19 ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿ ಹೋಗುವವನನ್ನೂ, ತಪ್ಪಿಸಿಕೊಳ್ಳುವವನನ್ನೂ ಏನಾಯಿತೆಂದು ಕೇಳು.
20 ಮೋವಾಬು ಚದರಿಹೋಯಿತೆಂದು ನಾಚಿಕೆಗೆ ಈಡಾಗಿದೆ. ಗೋಳಾಡಿರಿ, ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನಲ್ಲಿ ತಿಳಿಸಿರಿ.
21 ಇದಲ್ಲದೆ ಬಯಲುಸೀಮೆಯ ಮೇಲೆ ನ್ಯಾಯ ತೀರ್ವಿಕೆ ಬಂತು; ಹೋಲೋನ್, ಯಹಚ, ಮೇಫಾತ್,
22 ದೀಬೋನ್, ನೆಬೋ, ಬೇತ್ ದಿಬ್ಲಾತಯಿಮ್,
23 ಕಿರ್ಯಾತಯಿಮ್, ಬೇತ್ ಗಾಮುಲ್, ಬೇತ್ ಮೆಯೋನ್,
24 ಬೊಚ್ರ, ಕೆರೀಯೋತ್, ಹೀಗೆ ಸಮೀಪದಲ್ಲಾಗಲಿ, ದೂರದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು.
25 ಮೋವಾಬಿನ ಕೊಂಬು ಕಡಿದು ಹಾಕಲಾಗಿದೆ; ಅದರ ತೋಳು ಮುರಿಯಲಾಗಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
26 “ಅದನ್ನು ನೀವು ಅಮಲೇರಿಸಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ವಾಂತಿ ಮಾಡಿದ್ದರಲ್ಲಿ ಹೊರಳಾಡುವುದು; ಅದೇ ಹಾಸ್ಯಕ್ಕಾಗಿರುವುದು.
27 ಏಕೆಂದರೆ ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕ್ಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ಏಕೆಂದರೆ ನೀನು ಅದರ ವಿಷಯ ಯಾವಾಗ ಮಾತನಾಡಿದಂದಿನಿಂದ ತಲೆ ಅಲ್ಲಾಡಿಸಿದ್ದೀಯಲ್ಲಾ.
28 ಮೋವಾಬಿನಲ್ಲಿ ವಾಸವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರಿ; ಸಂದುಗಳ ಬಾಯಿಗಳ ಪಕ್ಕಗಳಲ್ಲಿ ಗೂಡು ಕಟ್ಟುವ ಪಾರಿವಾಳದ ಹಾಗಿರಿ.
29 “ಮೋವಾಬಿನ ಹೆಮ್ಮೆಯನ್ನು ಕುರಿತು, ಅದರ ಮಹಾ ಗರ್ವವನ್ನು ಕುರಿತು, ಅದರ ಡಂಭವನ್ನೂ, ಅಹಂಕಾರವನ್ನೂ, ಬಡಾಯಿಯನ್ನೂ, ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.
30 ನಾನು ಅದರ ಕೋಪೋದ್ರೇಕವನ್ನು ಬಲ್ಲೆನೆಂದು, ಅದು ವ್ಯರ್ಥ”, ಎಂದು ಯೆಹೋವ ದೇವರು ಅನ್ನುತ್ತಾರೆ; “ಆದರೆ ಅದು ಹಾಗೆ ಆಗುವುದಿಲ್ಲ; ಅವನ ಸುಳ್ಳುಗಳು ಸರಿಬೀಳುವುದಿಲ್ಲ.
31 ಆದ್ದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವುದು.
32 ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲು ನಿನ್ನ ನಿಮಿತ್ತವಾಗಿ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ, ನಿನ್ನ ದ್ರಾಕ್ಷಿ ಸುಗ್ಗಿಯ ಮೇಲೆಯೂ ವಿನಾಶ ಮಾಡುವವನು ಬಿದ್ದಿದ್ದಾನೆ.
33 ಫಲವುಳ್ಳ ಹೊಲದಿಂದಲೂ, ಮೋವಾಬಿನ ದೇಶದಿಂದಲೂ ಸಂತೋಷವೂ, ಉಲ್ಲಾಸವೂ ತೆಗೆಯಲಾಗಿವೆ; ಏಕೆಂದರೆ ದ್ರಾಕ್ಷಿ ಆಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಆರ್ಭಟದ ಸಂಗಡ ಅವರು ಯಾರೂ ತುಳಿಯುವುದಿಲ್ಲ; ಆರ್ಭಟವೇ ಆರ್ಭಟವಾಗುವುದಿಲ್ಲ.
34 “ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಲೆಯವರೆಗೂ, ಯಹಚಿನವರೆಗೂ, ಚೋಗರ್ ಮೊದಲ್ಗೊಂಡು ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಮೂರು ವರ್ಷದ ಕಡಸಿನಂತೆ ತಮ್ಮ ಶಬ್ದವನ್ನೆತ್ತಿದ್ದರು; ಏಕೆಂದರೆ ನಿಮ್ರೀಮ್ನ ನೀರು ಸಹ ಹಾಳಾದವು.
35 ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
36 “ಆದ್ದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ಏಕೆಂದರೆ ಅವನು ಮಾಡಿಕೊಂಡ ದ್ರವ್ಯ ನಾಶವಾಯಿತು.
37 ಏಕೆಂದರೆ ಎಲ್ಲಾ ತಲೆಗಳು ಬೋಳಾಗುವುವು; ಎಲ್ಲಾ ಗಡ್ಡಗಳು ಕ್ಷೌರವಾಗುವುವು; ಎಲ್ಲಾ ಕೈಗಳ ಮೇಲೆ ಗಾಯಗಳು, ಸೊಂಟಗಳ ಮೇಲೆ ಗೋಣಿತಟ್ಟು ಇರುವುವು.
38 ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿ ಇರುವುದು. ಏಕೆಂದರೆ ಯಾರಿಗೂ ಬೇಡದ ಮಡಕೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ.
39 “ಆಹಾ, ಭಂಗವಾಯಿತು! ಕಿರುಚಿಕೊಳ್ಳುತ್ತಾರಲ್ಲಾ! ಓಹೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ! ಅದರ ನೆರೆಹೊರೆಯವರು ಅಣಕಿಸುವುದಕ್ಕೂ, ಬೆಚ್ಚಿಬೀಳುವುದಕ್ಕೂ ಆಸ್ಪದವಾಗಿದೆ.”
40 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಅವನು ಹದ್ದಿನ ಹಾಗೆ ಹಾರಿ, ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು.
41 ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.
42 ಏಕೆಂದರೆ ಮೋವಾಬು ಅದು ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ, ಜನಾಂಗವಲ್ಲದ ಹಾಗೆ ನಾಶವಾಗುವುದು.
43 ಮೋವಾಬಿನ ನಿವಾಸಿಯೇ, ಹೆದರಿಕೆಯೂ, ಕುಳಿಯೂ, ಬೋನೂ ನಿನ್ನ ಮೇಲೆ ಇರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.
44 “ಹೆದರಿಕೆಗೆ ಓಡಿಹೋಗುವವನು ಗುಂಡಿಯಲ್ಲಿ ಬೀಳುವನು. ಗುಂಡಿಯೊಳಗಿಂದ ಏರಿಬರುವವನು, ಬೋನಿನಲ್ಲಿ ಸಿಕ್ಕಿಬೀಳುವನು. ಏಕೆಂದರೆ ನಾನು ಅದರ ಮೇಲೆ ಅಂದರೆ, ಮೋವಾಬಿನ ಮೇಲೆಯೇ ಅವರ ದಂಡನೆಯ ವರ್ಷವನ್ನು ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
45 “ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ, ಸೀಹೋನನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ, ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವುದು.
46 ಮೋವಾಬೇ, ನೀನೇ ಅಯ್ಯೋ! ಕೆಮೋಷಿನ ಜನರು ನಾಶವಾದರು; ಏಕೆಂದರೆ ನಿನ್ನ ಗಂಡು ಹೆಣ್ಣುಮಕ್ಕಳು, ಗಡೀಪಾರಾಗಿ ಸೆರೆಯಾದರು.
47 “ಆದರೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸಮೃದ್ಧಿಯನ್ನು ತಿರುಗಿ ತರುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ಈವರೆಗೆ ಮೋವಾಬಿನ ನ್ಯಾಯ ತೀರ್ವಿಕೆಯು ಇರುವುದು.