< ಯೆರೆಮೀಯನು 42 >

1 ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ, ಹೋಷಾಯನ ಮಗನಾದ ಎಜನೀಯನೂ, ಕಿರಿಯರು ಮೊದಲುಗೊಂಡು ಹಿರಿಯರವರೆಗೆ ಜನರೆಲ್ಲರು ಹತ್ತಿರ ಬಂದು,
ಆಗ ಸಕಲ ಸೇನಾಧಿಪತಿಗಳು, ಕಾರೇಹನ ಮಗನಾದ ಯೋಹಾನಾನನೂ ಮತ್ತು ಹೋಷಾಯನ ಮಗನಾದ ಯೆಜನ್ಯನೂ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರೂ ಪ್ರವಾದಿಯಾದ ಯೆರೆಮೀಯನ ಬಳಿಗೆ ಬಂದರು.
2 ಪ್ರವಾದಿಯಾದ ಯೆರೆಮೀಯನಿಗೆ, “ನಮ್ಮ ವಿಜ್ಞಾಪನೆ ನಿಮ್ಮ ಮುಂದೆ ಬರಲಿ. ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ, ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ? ನಮಗೋಸ್ಕರವೂ ಎಂದರೆ ಈ ಸಮಸ್ತ ಶೇಷಕ್ಕೋಸ್ಕರವೂ,
ಅವರು ಅವನಿಗೆ, “ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ.
3 ನಾವು ನಡೆಯತಕ್ಕ ಮಾರ್ಗವನ್ನೂ, ನಾವು ಮಾಡತಕ್ಕ ಕಾರ್ಯವನ್ನೂ ನಿನ್ನ ದೇವರಾದ ಯೆಹೋವ ದೇವರು ನಮಗೆ ತಿಳಿಸುವ ಹಾಗೆ, ನಿನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡು,” ಎಂದರು.
ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ, ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ವಿಜ್ಞಾಪಿಸಿದರು.
4 ಆಗ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಾನು ಕೇಳಿದ್ದೇನೆ, ನಿಮ್ಮ ಮಾತುಗಳ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುತ್ತೇನೆ. ಯೆಹೋವ ದೇವರು ನಿಮಗೆ ಯಾವ ಉತ್ತರವನ್ನು ಕೊಡುವರೋ, ಅದನ್ನು ನಿಮಗೆ ತಿಳಿಸುವೆನು. ಒಂದು ಮಾತನ್ನಾದರೂ ನಿಮ್ಮಿಂದ ಹಿಂದೆಗೆಯುವುದಿಲ್ಲ,” ಎಂದು ಹೇಳಿದನು.
ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅವರಿಗೆ, “ನಿಮ್ಮ ಬಿನ್ನಹವನ್ನು ಕೇಳಿದೆನು; ಇಗೋ, ನಿಮ್ಮ ಮಾತಿನಂತೆ ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು; ಯೆಹೋವನು ಯಾವ ಉತ್ತರವನ್ನು ದಯಪಾಲಿಸುವನೋ ಒಂದನ್ನೂ ಬಚ್ಚಿಡದೆ ನಿಮಗೆ ತಿಳಿಸುವೆನು” ಎಂದು ಉತ್ತರಕೊಟ್ಟನು.
5 ಆಗ ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಯಾವ ವಿಷಯದಲ್ಲಿ ನಮ್ಮ ಬಳಿಗೆ ಕಳುಹಿಸುತ್ತಾರೋ, ಆ ಎಲ್ಲಾ ಮಾತುಗಳ ಪ್ರಕಾರ ನಾವು ಮಾಡದೆ ಹೋದರೆ, ಯೆಹೋವ ದೇವರು ನಮಗೆ ಸತ್ಯವಾದ ನಂಬಿಕೆಯುಳ್ಳ ಸಾಕ್ಷಿಯಾಗಿರಲಿ. ನಾವು ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳುವಾಗ, ನಮಗೆ ಒಳ್ಳೆಯದಾಗುವ ಹಾಗೆ,
ಅವರು ಯೆರೆಮೀಯನಿಗೆ, “ನಿನ್ನ ದೇವರಾದ ಯೆಹೋವನು ನಿನ್ನ ಮೂಲಕ ನಮಗೆ ಕಳುಹಿಸುವ ಮಾತಿನಂತೆ ನಾವು ನಡೆಯದಿದ್ದರೆ ಯೆಹೋವನು ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು ನಮ್ಮನ್ನು ಖಂಡಿಸಲಿ!
6 ನಾವು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇವೋ, ಆ ನಮ್ಮ ದೇವರಾದ ಯೆಹೋವ ದೇವರ ಮಾತನ್ನು ಅದು ಹಿತವಾದರೂ ಸರಿಯೇ, ಅಹಿತವಾದರೂ ಸರಿಯೇ ಕೇಳುವೆವು,” ಎಂದರು.
ನಮ್ಮ ದೇವರಾದ ಯೆಹೋವನ ಮಾತು ಹಿತವಾಗಲಿ ಅಥವಾ ಅಹಿತವಾಗಲಿ ಆತನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನಿನ್ನನ್ನು ಕಳುಹಿಸುವ ನಾವು ಅದನ್ನು ಕೈಕೊಳ್ಳುವೆವು; ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಿದರೆ ನಮಗೆ ಶುಭವಾಗುವುದು” ಎಂಬುದಾಗಿ ಹೇಳಿದರು.
7 ಹತ್ತು ದಿವಸಗಳಾದ ಮೇಲೆ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂತು.
ಹತ್ತು ದಿನಗಳಾದ ಮೇಲೆ ಯೆಹೋವನು ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು.
8 ಆಗ ಕಾರೇಹನ ಮಗ ಯೋಹಾನಾನನನ್ನೂ, ಅವನ ಸಂಗಡ ಇದ್ದ ಸೇನಾಪತಿಗಳೆಲ್ಲರನ್ನೂ, ಕಿರಿಯರು ಮೊದಲುಗೊಂಡು ಹಿರಿಯರೆಲ್ಲರವರೆಗೆ ಜನರೆಲ್ಲರನ್ನೂ ಕರೆದು,
ಆಗ ಅವನು ಕಾರೇಹನ ಮಗನಾದ ಯೋಹಾನಾನನನ್ನೂ, ಅವನೊಂದಿಗಿದ್ದ ಸಕಲ ಸೇನಾಧಿಪತಿಗಳನ್ನೂ, ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರನ್ನೂ ಕರೆದು,
9 ಅವರಿಗೆ ಹೇಳಿದ್ದೇನೆಂದರೆ, “ಯಾರ ಮುಂದೆ ನಿಮ್ಮ ವಿಜ್ಞಾಪನೆಯನ್ನು ತರುವುದಕ್ಕೆ ನನ್ನನ್ನು ಕಳುಹಿಸಿದ್ದೀರೋ, ಆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ನಿಮ್ಮ ವಿಜ್ಞಾಪನೆಯನ್ನು ಯೆಹೋವನಿಗೆ ಅರಿಕೆಮಾಡುವುದಕ್ಕಾಗಿ ನನ್ನನ್ನು ಕಳುಹಿಸಿದ್ದಿರಲ್ಲಾ; ಅದಕ್ಕೆ ಇಸ್ರಾಯೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ,
10 ‘ನೀವು ಇನ್ನು ಈ ದೇಶದಲ್ಲಿ ವಾಸಮಾಡಿದರೆ, ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತು ಹಾಕದೆ ನೆಡುವೆನು. ಏಕೆಂದರೆ ನಾನು ನಿಮಗೆ ಮಾಡಿರುವ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಡುತ್ತೇನೆ.
೧೦‘ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವುದಿಲ್ಲ; ನೆಡುವೆನು, ಕೀಳುವುದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ.
11 ನೀವು ಭಯಪಡುವ ಬಾಬಿಲೋನಿನ ಅರಸನಿಗೆ ಭಯಪಡಬೇಡಿರಿ; ಅವನಿಗೆ ಭಯಪಡಬೇಡಿರೆಂದು ಯೆಹೋವ ದೇವರು ಹೇಳುತ್ತಾರೆ; ಏಕೆಂದರೆ ನಿಮ್ಮನ್ನು ರಕ್ಷಿಸುವುದಕ್ಕೂ, ಅವನ ಕೈಯಿಂದ ನಿಮ್ಮನ್ನು ತಪ್ಪಿಸುವುದಕ್ಕೂ ನಾನು ನಿಮ್ಮ ಸಂಗಡ ಇದ್ದೇನೆ.
೧೧ನೀವು ಹೆದರಿರುವ ಬಾಬೆಲಿನ ಅರಸನಿಗೆ ಹೆದರಬೇಡಿರಿ, ಅವನಿಗೆ ಅಂಜದಿರಿ; ನಾನು ನಿಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಲಿಕ್ಕೆ ನಿಮ್ಮೊಂದಿಗಿದ್ದೇನಲ್ಲಾ. ಇದು ಯೆಹೋವನಾದ ನನ್ನ ನುಡಿ.
12 ಇದಲ್ಲದೆ ನಾನು ನಿಮಗೆ ಕರುಣೆಯನ್ನು ತೋರಿಸುವೆನು; ಆಗ ಅವನು ನಿಮ್ಮನ್ನು ಕರುಣಿಸಿ, ನಿಮ್ಮನ್ನು ತಿರುಗಿ ನಿಮ್ಮ ಸ್ವದೇಶಕ್ಕೆ ಬರಮಾಡುವನು.’
೧೨ಅವನು ನಿಮ್ಮನ್ನು ಕರುಣಿಸಿ ಸ್ವದೇಶಕ್ಕೆ ಹೋಗುವಂತೆ ನಾನು ನಿಮಗೆ ಕರುಣೆಯನ್ನು ಅನುಗ್ರಹಿಸುವೆನು’ ಎಂದೆನು.
13 “ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ‘ನಾವು ಈ ದೇಶದಲ್ಲಿ ವಾಸಮಾಡುವುದಿಲ್ಲ’ ಎಂದು ಹೇಳಿದರೆ,
೧೩ಆದರೆ ನೀವು ನಿಮ್ಮ ದೇವರಾದ ಯೆಹೋವನ ನುಡಿಗೆ ಕಿವಿಗೊಡದೆ ‘ಈ ದೇಶದಲ್ಲಿ ನಾವು ನೆಲೆಸುವುದೇ ಇಲ್ಲ;
14 ನೀವು, ‘ಇಲ್ಲ, ನಾವು ಈಜಿಪ್ಟ್ ದೇಶಕ್ಕೆ ಹೋಗುತ್ತೇವೆ; ಅಲ್ಲಿ ನಾವು ಯುದ್ಧವನ್ನು ನೋಡುವುದಿಲ್ಲ, ತುತೂರಿಯ ಶಬ್ದವನ್ನು ಕೇಳುವುದಿಲ್ಲ, ರೊಟ್ಟಿಯ ವಿಷಯ ಕ್ಷಾಮವಾಗುವುದಿಲ್ಲ.’ ಅಲ್ಲಿ ವಾಸಮಾಡುವೆವೆಂದು ಹೇಳಿದರೆ,
೧೪ಬೇಡವೇ ಬೇಡ; ನಾವು ಯುದ್ಧ ಕಾಣದೆ, ತುತ್ತೂರಿಯ ಶಬ್ದ ಕೇಳದೆ, ಅನ್ನದ ಕೊರತೆಯಿಂದ ಹಸಿವಾಗದೆ ಇರುವ ಐಗುಪ್ತ ದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು’ ಎಂದುಕೊಂಡರೆ,
15 ಯೆಹೂದದ ಶೇಷವೇ, ಹಾಗಾದರೆ ಈಗ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀವು ನಿಶ್ಚಯವಾಗಿ ನಿಮ್ಮ ಮುಖಗಳನ್ನು ಈಜಿಪ್ಟಿಗೆ ಹೋಗುವಹಾಗೆ ಇಟ್ಟರೆ ಮತ್ತು ನೀವು ಅಲ್ಲಿ ತಂಗುವುದಕ್ಕೆ ಹೋದರೆ,
೧೫ಯೆಹೂದ್ಯರಲ್ಲಿ ಉಳಿದವರೇ, ಯೆಹೋವನ ವಾಕ್ಯವನ್ನು ಈಗ ಕೇಳಿರಿ, ‘ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀವು ಐಗುಪ್ತಕ್ಕೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವುದಾದರೆ,
16 ನೀವು ಭಯಪಡುವ ಖಡ್ಗವು ಈಜಿಪ್ಟ್ ದೇಶದಲ್ಲಿ ನಿಮ್ಮನ್ನು ಹಿಡಿಯುವುದು. ನೀವು ಹೆದರಿಕೊಳ್ಳುವ ಕ್ಷಾಮವು ಈಜಿಪ್ಟ್ ದೇಶಕ್ಕೆ ನಿಮ್ಮನ್ನು ಹಿಂದಟ್ಟುವುದು, ನೀವು ಅಲ್ಲೇ ಸಾಯುವಿರಿ.
೧೬ಆಗ ನೀವು ಹೆದರುತ್ತಿರುವ ಖಡ್ಗವು ಐಗುಪ್ತದಲ್ಲಿಯೂ ನಿಮ್ಮನ್ನು ಹಿಂದಟ್ಟಿ ಹಿಡಿಯುವುದು, ನೀವು ಅಂಜುತ್ತಿರುವ ಕ್ಷಾಮವು ಅಲ್ಲಿಯೂ ನಿಮ್ಮ ಬೆನ್ನ ಹತ್ತುವುದು; ಅಲ್ಲೇ ಸಾಯುವಿರಿ.
17 ಈಜಿಪ್ಟಿಗೆ ಹೋಗಿ ಅಲ್ಲಿ ವಾಸಿಸುವ ಹಾಗೆ ತಮ್ಮ ಮುಖಗಳನ್ನಿಡುವ ಮನುಷ್ಯರಿಗೆಲ್ಲಾ ಹೀಗಾಗುವುದು. ಅವರು ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವರು. ನಾನು ಅವರ ಮೇಲೆ ಬರಮಾಡುವ ಕೇಡಿಗೆ ತಪ್ಪಿಸಿಕೊಂಡು ಉಳಿಯುವವನು ಒಬ್ಬನೂ ಅವರೊಳಗೆ ಇರುವುದಿಲ್ಲ.’
೧೭ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸಲು ಹಟಹಿಡಿಯುವ ಎಲ್ಲಾ ಜನರಿಗೂ ಇದೇ ಗತಿಯಾಗುವುದು; ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವರು. ನಾನು ಅವರಿಗೆ ಬರಮಾಡುವ ವಿಪತ್ತಿನಿಂದ ಯಾರೂ ತಪ್ಪಿಸಿಕೊಳ್ಳರು, ಯಾರೂ ಉಳಿಯರು.
18 ಇಸ್ರಾಯೇಲಿನ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಯೆರೂಸಲೇಮಿನ ಮೇಲೆ ಹೇಗೆ ಸುರಿಯಿತೋ, ಹಾಗೆಯೇ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೇ, ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ಸ್ಥಳವನ್ನು ನೀವು ಮತ್ತೆ ನೋಡಲಾರಿರಿ.’
೧೮ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನನ್ನ ಉಗ್ರರೋಷಾಗ್ನಿಯು ಯೆರೂಸಲೇಮಿನವರ ಮೇಲೆ ಹೇಗೆ ಸುರಿಯಿತೋ ಹಾಗೆಯೇ ನೀವು ಐಗುಪ್ತದಲ್ಲಿ ಕಾಲಿಟ್ಟ ಕೂಡಲೆ ನನ್ನ ರೋಷಾಗ್ನಿಯು ನಿಮ್ಮ ಮೇಲೆಯೂ ಸುರಿಯುವುದು; ನೀವು ಅಪವಾದ, ವಿಸ್ಮಯ, ಶಾಪ ಮತ್ತು ದೂಷಣೆಗಳಿಗೆ ಗುರಿಯಾಗುವಿರಿ; ಈ ಸ್ಥಳವು ಮತ್ತೆ ನಿಮ್ಮ ಕಣ್ಣಿಗೆ ಬೀಳದು.’”
19 “ಯೆಹೂದದ ಶೇಷವೇ, ಯೆಹೋವ ದೇವರು ನಿಮ್ಮ ವಿಷಯವಾಗಿ ಹೇಳಿದ್ದೇನೆಂದರೆ: ‘ಈಜಿಪ್ಟಿಗೆ ಹೋಗಬೇಡಿರಿ,’ ಇದನ್ನು ಖಚಿತಪಡಿಸಿಕೊಳ್ಳಿ: ನಾನು ಇಂದು ನಿಮಗೆ ಎಚ್ಚರಿಕೆ ನೀಡುತ್ತೇನೆ.
೧೯“ಯೆಹೂದ್ಯರಲ್ಲಿ ಉಳಿದವರೇ, ಯೆಹೋವನು ನಿಮ್ಮನ್ನು ಕುರಿತು, ‘ಐಗುಪ್ತಕ್ಕೆ ಹೋಗಬೇಡಿರಿ’ ಎಂದು ಅಪ್ಪಣೆಮಾಡಿದ್ದಾನೆ; ನಾನು ಈ ದಿನ ಆ ಮಾತನ್ನು ನಿಮಗೆ ಪ್ರಕಟಿಸಿದ್ದೇನೆ, ಚೆನ್ನಾಗಿ ತಿಳಿದಿರಲಿ.
20 ನೀವೇ ನನ್ನ ಬಳಿಗೆ ಬಂದು ನಮ್ಮ ದೇವರಾದ ಯೆಹೋವ ದೇವರನ್ನು ನಮಗಾಗಿ ಪ್ರಾರ್ಥಿಸು, ‘ನಮ್ಮ ದೇವರಾದ ಯೆಹೋವ ದೇವರು ಯಾವ ಅಪ್ಪಣೆ ಕೊಡುತ್ತಾರೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು,’ ಎಂದು ಹೇಳಿ ಮಾರಣಾಂತಿಕ ತಪ್ಪನ್ನು ಮಾಡಿದ್ದೀರಿ.
೨೦ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು, ‘ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆ ಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು’ ಎಂಬುದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ.
21 ನಾನು ಈ ಹೊತ್ತು ಅದನ್ನು ನಿಮಗೆ ತಿಳಿಸಿದ್ದೇನೆ. ಆದರೆ ನೀವು ನಿಮ್ಮ ದೇವರಾದ ಯೆಹೋವ ದೇವರ ಶಬ್ದವನ್ನಾದರೂ ಅವರು ಯಾವುದರ ವಿಷಯವಾಗಿ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೋ ಅದರಲ್ಲಿ ಯಾವುದನ್ನಾದರೂ ಕೇಳಲಿಲ್ಲ.
೨೧ನಾನು ಯೆಹೋವನ ಅಪ್ಪಣೆಯನ್ನು ಈ ದಿನ ನಿಮಗೆ ತಿಳಿಸಿದ್ದೇನೆ; ನೀವಾದರೆ ನಿಮ್ಮ ದೇವರಾದ ಯೆಹೋವನು ನನ್ನ ಮೂಲಕ ನಿಮಗೆ ಹೇಳಿ ಕಳುಹಿಸಿದ ಯಾವ ಮಾತನ್ನೂ ಕೇಳಲಿಲ್ಲ.
22 ಹೀಗಿರುವುದರಿಂದ ನೀವು ವಾಸಿಸುವುದಕ್ಕೆ ಹೋಗಲು ಮನಸ್ಸು ಮಾಡುವ ಸ್ಥಳದಲ್ಲಿ ಖಡ್ಗದಿಂದಲೂ ಕ್ಷಾಮದಿಂದಲೂ ವ್ಯಾಧಿಯಿಂದಲೂ ಸಾಯುವಿರೆಂದು ಈಗ ನಿಶ್ಚಯವಾಗಿ ತಿಳಿದುಕೊಳ್ಳಿರಿ,” ಎಂದನು.
೨೨ನೀವು ಯಾವ ಸ್ಥಳದಲ್ಲಿ ವಾಸಮಾಡಲು ಅಪೇಕ್ಷಿಸಿ ಹೋಗುತ್ತೀರೋ ಆ ಸ್ಥಳದಲ್ಲೇ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಸಾಯುವಿರಿ ಎಂದು ಖಂಡಿತವಾಗಿ ತಿಳಿಯಿರಿ” ಎಂದು ಹೇಳಿದನು.

< ಯೆರೆಮೀಯನು 42 >