< ಯೆರೆಮೀಯನು 4 >
1 “ಇಸ್ರಾಯೇಲೇ, ನೀನು ಹಿಂದಿರುಗುವಿಯಾದರೆ ನನ್ನ ಕಡೆ ಹಿಂದಿರುಗಿ ಬಾ,” ಎಂದು ಯೆಹೋವ ದೇವರು ನುಡಿಯುತ್ತಾರೆ. “ನೀನು ನಿನ್ನ ಅಸಹ್ಯಗಳನ್ನು ನನ್ನ ಎದುರಿನಿಂದ ತೆಗೆದುಬಿಟ್ಟರೆ, ಅಲೆದಾಡದೆ ಇರುವೆ.
೧ಯೆಹೋವನು, “ಇಸ್ರಾಯೇಲೇ, ನೀನು ತಿರುಗಿಕೊಂಡರೆ ನನ್ನ ಬಳಿಗೇ ಬರುವಿ; ನನ್ನ ಕಣ್ಣೆದುರಿನಿಂದ ನಿನ್ನ ಅಸಹ್ಯವಸ್ತುಗಳನ್ನು ತೆಗೆದುಬಿಟ್ಟರೆ, ನೀನು ಇನ್ನು ದಿಕ್ಕು ದೆಸೆಗಳಿಲ್ಲದೆ ನರಳುವುದಿಲ್ಲ.
2 ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿಯಿಂದಲೂ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡುವೆ. ಆಗ ರಾಷ್ಟ್ರಗಳೆಲ್ಲ ನನ್ನಿಂದ ಆಶೀರ್ವಾದ ಪಡೆಯ ಬಯಸುವರು. ನನ್ನಲ್ಲಿಯೇ ಹೆಮ್ಮೆಪಡುವರು.”
೨‘ಯೆಹೋವನ ಜೀವದಾಣೆ’ ಎಂದು ಸತ್ಯ, ನ್ಯಾಯ ಮತ್ತು ಧರ್ಮಾನುಸಾರವಾಗಿ ನೀನು ಪ್ರಮಾಣ ಮಾಡಿದರೆ, ಜನಾಂಗಗಳು ಆತನಿಂದ ತಮ್ಮನ್ನು ಆಶೀರ್ವದಿಸಿಕೊಂಡು ಆತನಲ್ಲಿ ಹೆಚ್ಚಳಪಡುವರು” ಎಂದು ಹೇಳುತ್ತಾನೆ.
3 ಏಕೆಂದರೆ ಯೆಹೋವ ದೇವರು ಯೆಹೂದದ ಮತ್ತು ಯೆರೂಸಲೇಮಿನ ಜನರಿಗೆ ಹೀಗೆ ಹೇಳುತ್ತಾರೆ: “ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನಿಮ್ಮ ಬಂಜರು ಭೂಮಿಯನ್ನು ಗೆಯ್ಯಿರಿ. ಮುಳ್ಳುಗಳಲ್ಲಿ ಬೀಜ ಬಿತ್ತಬೇಡಿರಿ.
೩ಯೆಹೋವನು ಯೆಹೂದದವರಿಗೂ ಮತ್ತು ಯೆರೂಸಲೇಮಿನವರಿಗೂ, “ಪಾಳು ಬಿದ್ದಿರುವ ನಿಮ್ಮ ಭೂಮಿಯನ್ನು ಉತ್ತು ಹದಮಾಡಿ, ಮುಳ್ಳುಗಳಲ್ಲಿ ಬಿತ್ತಬೇಡಿರಿ.
4 ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರಿಗೋಸ್ಕರ ಸುನ್ನತಿ ಮಾಡಿಕೊಳ್ಳಿರಿ; ನಿಮ್ಮ ಹೃದಯಗಳ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲದಿದ್ದರೆ ನನ್ನ ಉಗ್ರವು ಬೆಂಕಿಯ ಹಾಗೆ ಹೊರಟು, ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸಲಾಗದ ಹಾಗೆ ಉರಿಯುವುದು.”
೪ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ, ಯೆಹೋವನಿಗಾಗಿ ಸುನ್ನತಿ ಮಾಡಿಕೊಳ್ಳಿರಿ. ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು, ಯಾರೂ ಆರಿಸಲಾಗದಷ್ಟು ರಭಸವಾಗಿ ಧಗಧಗಿಸುವುದು” ಎಂದು ಹೇಳುತ್ತಾನೆ.
5 “ಯೆಹೂದದಲ್ಲಿ ಪ್ರಚಾರಪಡಿಸಿರಿ, ಯೆರೂಸಲೇಮಿನಲ್ಲಿ ಪ್ರಕಟಿಸಿರಿ, ‘ಇಡೀ ದೇಶದಲ್ಲಿ ತುತೂರಿ ಊದಿರಿ!’ ಎಂದು ಹೇಳಿರಿ. ಗಟ್ಟಿಯಾಗಿ ಹೀಗೆ ಕೂಗಿರಿ, ‘ಕೂಡಿಕೊಂಡು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ!’ ಎಂದು ಹೇಳಿರಿ.
೫ಯೆಹೂದದಲ್ಲಿ ಸಾರಿರಿ, ಯೆರೂಸಲೇಮಿನೊಳಗೆ ಪ್ರಕಟಿಸುತ್ತಾ, “ದೇಶದಲ್ಲೆಲ್ಲಾ ಕೊಂಬೂದಿರಿ, ಕೂಡಿಬನ್ನಿರಿ ಕೋಟೆಕೊತ್ತಲಗಳ ಊರುಗಳನ್ನು ಸೇರೋಣ ಎಂದು ಕೂಗಿರಿ.
6 ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ವಿಳಂಬವಿಲ್ಲದೆ ಸುರಕ್ಷತೆಗಾಗಿ ಓಡಿಹೋಗಿರಿ. ಏಕೆಂದರೆ ನಾನು ಉತ್ತರದಿಂದ ಕೇಡನ್ನೂ, ದೊಡ್ಡ ನಾಶವನ್ನೂ ತರುತ್ತೇನೆ.”
೬ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ, ತಡಮಾಡದೆ ವಲಸೆಹೋಗಿರಿ; ನಾನು ಉತ್ತರ ದಿಕ್ಕಿನಿಂದ ವಿಪತ್ತನ್ನು ಮತ್ತು ಘೋರನಾಶವನ್ನು ಬರಮಾಡುವೆನು.
7 ಸಿಂಹವು ತನ್ನ ಪೊದೆಯೊಳಗಿಂದ ಏರಿ ಬರುತ್ತದೆ. ಇತರ ಜನಾಂಗಗಳನ್ನು ನಾಶ ಮಾಡುವವನು ಹೊರಟಿದ್ದಾನೆ. ನಿನ್ನ ದೇಶವನ್ನು ಹಾಳು ಮಾಡುವುದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ. ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವುದು.
೭ಜನಾಂಗದ ನಾಶಕ್ಕೆ ಒಂದು ಸಿಂಹವು ತನ್ನ ಪೊದೆಯೊಳಗಿಂದ ಎದ್ದು, ಹೊರಟಿದೆ, ಅದರ ಸ್ಥಳದಿಂದ ತೆರಳಿದೆ. ಅದು ನಿನ್ನ ದೇಶವನ್ನು ಹಾಳುಮಾಡುವುದು, ನಿನ್ನ ಪಟ್ಟಣಗಳು ಪಾಳುಬಿದ್ದು ನಿರ್ಜನ ಪ್ರದೇಶಗಳಾಗುವುವು.
8 ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ. ಯೆಹೋವ ದೇವರ ಉಗ್ರಕೋಪದ ಉರಿಯು ನಮ್ಮಿಂದ ಹಿಂದಿರುಗಲಿಲ್ಲ.
೮ಇದರ ನಿಮಿತ್ತ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ಪ್ರಲಾಪಿಸಿರಿ, ಗೋಳಾಡಿರಿ; ಯೆಹೋವನ ರೋಷಾಗ್ನಿಯು ನಮ್ಮನ್ನು ಬಿಟ್ಟಿಲ್ಲವಲ್ಲಾ.
9 ಆ ದಿವಸದಲ್ಲಿ, “ಅರಸನ ಹೃದಯವೂ ಎದೆಗುಂದುವುದು. ಅಧಿಪತಿಯ ಹೃದಯವೂ ಕುಗ್ಗುವುದು. ಯಾಜಕರು ಭ್ರಮೆಗೊಳ್ಳುವರು. ಪ್ರವಾದಿಗಳು ಸ್ತಬ್ಧರಾಗುವರು,” ಎಂದು ಯೆಹೋವ ದೇವರು ನುಡಿಯುತ್ತಾರೆ.
೯ಆ ಕಾಲದಲ್ಲಿ ಅರಸನ ಎದೆಯು ಕುಂದುವುದು, ಅಧಿಪತಿಗಳ ಹೃದಯವು ಕುಗ್ಗುವುದು, ಯಾಜಕರು ಸ್ತಬ್ಧರಾಗುವರು, ಪ್ರವಾದಿಗಳು ಬೆರಗಾಗುವರು” ಎಂದು ಯೆಹೋವನು ನುಡಿಯುತ್ತಾನೆ.
10 ಆಗ ನಾನು ಹೇಳಿದ್ದೇನೆಂದರೆ, “ಹಾ, ಸಾರ್ವಭೌಮ ಯೆಹೋವ ದೇವರೇ, ನಿಶ್ಚಯವಾಗಿ ನೀವು ಈ ಜನರಿಗೂ, ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು,’ ಎಂದು ಹೇಳಿ, ಬಹಳ ಮೋಸ ಮಾಡಿದಿರಿ. ಖಡ್ಗವು ಅವರ ಕುತ್ತಿಗೆಗೆ ಬಂದಿದೆ” ಎಂದೆನು.
೧೦ಆಗ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಈ ಜನರಿಗೂ ಮತ್ತು ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು’ ಎಂದು ಹೇಳಿ ನಿಶ್ಚಯವಾಗಿ ಇವರನ್ನು ಬಹಳ ಮೋಸಗೊಳಿಸಿದ್ದಿ; ಖಡ್ಗವು ಪ್ರಾಣದ ಮಟ್ಟಿಗೂ ಇಳಿಯುತ್ತದಲ್ಲಾ” ಅಂದೆನು.
11 ಆ ಸಮಯದಲ್ಲಿ ಈ ಜನರಿಗೂ, ಯೆರೂಸಲೇಮಿಗೂ ಈ ಮಾತುಗಳನ್ನು ತಿಳಿಸಲಾಗುವುದು: “ಒಣ ಗಾಳಿಯು ಮರುಭೂಮಿಯ ಉನ್ನತ ಸ್ಥಳಗಳಿಂದ ನನ್ನ ಜನರ ಪುತ್ರಿಯರ ಕಡೆಗೆ ಬರುತ್ತದೆ. ಅದು ತೂರುವುದಕ್ಕೂ, ಶುದ್ಧಮಾಡುವುದಕ್ಕೂ ಆಗತಕ್ಕದ್ದಲ್ಲ.
೧೧ಈ ಕಾಲದಲ್ಲಿ ಈ ಜನರಿಗೂ ಯೆರೂಸಲೇಮಿಗೂ ಈ ಮಾತಾಗುವುದು, “ಬಿಸಿಗಾಳಿಯು ಅರಣ್ಯದ ಬೋಳುಗುಡ್ಡಗಳಿಂದ ನನ್ನ ಪ್ರಜೆಯೆಂಬ ಯುವತಿಯ ಮೇಲೆ ಬೀಸುತ್ತದೆ; ಅದು ತೂರುವುದಕ್ಕೂ, ಶೋಧಿಸುವುದಕ್ಕೂ ಆಗದು.
12 ಅದಕ್ಕಿಂತ ಬಿರುಸಾದ ಗಾಳಿ ಆ ಸ್ಥಳಗಳಿಂದ ನನ್ನ ಬಳಿಗೆ ಬರುವುದು. ಈಗಲೂ ನಾನು ಅವರಿಗೆ ವಿರೋಧವಾಗಿ ನ್ಯಾಯತೀರ್ಪುಗಳನ್ನು ಕೊಡುವೆನು.”
೧೨ಇಂಥಾ ಕೆಲಸಗಳಿಗೆ ಅನುಕೂಲಿಸದಂತೆ ನನ್ನ ಅಪ್ಪಣೆಯ ಮೇರೆಗೆ ಬಿರುಸಾಗಿ ಹೊಡೆಯುತ್ತದೆ; ಈಗ ನನ್ನ ಜನರಿಗೆ ನ್ಯಾಯದಂಡನೆಗಳನ್ನು ವಿಧಿಸುವೆನು” ಎಂಬುದೇ.
13 ಇಗೋ, ಮೇಘಗಳ ಹಾಗೆ ಏರಿ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು. ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.
೧೩ಇಗೋ, ಆ ಶತ್ರುವು ಮೇಘಗಳೋಪಾದಿಯಲ್ಲಿ ಬರುತ್ತಾನೆ, ಅವರ ರಥಗಳು ಬಿರುಗಾಳಿಯಂತಿವೆ, ಅವನ ಅಶ್ವಗಳು ಹದ್ದುಗಳಿಗಿಂತ ವೇಗವಾಗಿವೆ! ನಮ್ಮ ಗತಿಯನ್ನು ಏನು ಹೇಳೋಣ, ಹಾಳಾದೆವಲ್ಲಾ.
14 ಯೆರೂಸಲೇಮೇ, ನಿನಗೆ ರಕ್ಷಣೆಯಾಗುವ ಹಾಗೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರವರೆಗೆ ನಿನ್ನಲ್ಲಿ ತಂಗುವುವು.
೧೪ಯೆರೂಸಲೇಮೇ, ನಿನಗೆ ರಕ್ಷಣೆಯಾಗುವಂತೆ ನಿನ್ನ ಹೃದಯದ ಕೆಟ್ಟತನವನ್ನು ತೊಳೆದುಕೋ. ದುರಾಲೋಚನೆಗಳು ನಿನ್ನಲ್ಲಿ ಇನ್ನೆಷ್ಟರವರೆಗೆ ತಂಗಿರುವವು?
15 ಏಕೆಂದರೆ ಒಂದು ಶಬ್ದವು ದಾನಿನಿಂದ ಪ್ರಕಟಮಾಡುತ್ತದೆ; ಎಫ್ರಾಯೀಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
೧೫ಆಹಾ, ದಾನ್ ನಗರದಿಂದ ಪ್ರಕಟಣೆಯ ಧ್ವನಿಯು ಕೇಳಿಬರುತ್ತದೆ, ಎಫ್ರಾಯೀಮಿನ ಬೆಟ್ಟದಲ್ಲಿಯೂ ಕೇಡನ್ನು ಸಾರುತ್ತದೆ.
16 “ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯಪಡಿಸಿರಿ. ಏನೆಂದರೆ, ‘ಮುತ್ತಿಗೆ ಹಾಕುವ ಸೈನ್ಯದವರು ದೂರದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ಯುದ್ಧದ ಕೂಗನ್ನು ಎಬ್ಬಿಸುತ್ತಾರೆ.
೧೬ಇಗೋ, ಜನಾಂಗಗಳಿಗೆ ಅರುಹಿರಿ, “ಮುತ್ತುವವರು ದೂರದೇಶದಿಂದ ಯೆರೂಸಲೇಮಿಗೆ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರುದ್ಧವಾಗಿ ದನಿ ಎತ್ತುತ್ತಾರೆ” ಎಂದು ಪ್ರಚುರಪಡಿಸಿರಿ.
17 ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿದ್ದಾರೆ. ಏಕೆಂದರೆ ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು,’” ಎಂದು ಯೆಹೋವ ದೇವರು ಹೇಳುತ್ತಾರೆ.
೧೭ಆ ನಗರವು ನನಗೆ ತಿರುಗಿಬಿದ್ದ ಕಾರಣ ಅದನ್ನು ಹೊಲಕಾಯುವವರಂತೆ ಸುತ್ತಿಕೊಂಡಿದ್ದಾರೆ ಎಂದು ಯೆಹೋವನು ನುಡಿಯುತ್ತಾನೆ.
18 “ನಿನ್ನ ಮಾರ್ಗವೂ, ನಿನ್ನ ಕ್ರಿಯೆಗಳೂ, ಇವುಗಳನ್ನು ನಿನಗೆ ಉಂಟುಮಾಡಿದವು, ಇದೇ ನಿನ್ನ ಶಿಕ್ಷೆ. ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ನಾಟುವುದಿಲ್ಲವೋ?”
೧೮ನಿನ್ನ ನಡತೆಯೂ ನಿನ್ನ ಕೃತ್ಯಗಳೂ ಈ ಕಷ್ಟವನ್ನು ನಿನಗೆ ಒದಗಿಸಿವೆ, ಇದು ನಿನ್ನ ದುರ್ನೀತಿಯ ಫಲ, ಇದು ವಿಷವೇ; ಹೃದಯದವರೆಗೂ ಏರುತ್ತದೆ.
19 ಓ, ನನ್ನ ಕರುಳು, ನನ್ನ ಕರುಳು! ನಾನು ನೋವಿನಿಂದ ನರಳುತ್ತೇನೆ. ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ. ನಾನು ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿ ಶಬ್ದವನ್ನೂ, ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ.
೧೯ಹಾ, ನನ್ನ ಕರುಳು! ಕರುಳು! ಯಾತನೆಪಡುತ್ತದೆ; ಆಹಾ, ನನ್ನ ಗುಂಡಿಗೆಯ ಪಕ್ಕಗಳು! ನನ್ನ ಹೃದಯವು ನನ್ನೊಳಗೆ ತಳಮಳಗೊಂಡಿದೆ! ನಾನು ಬಾಯಿಮುಚ್ಚಿಕೊಂಡಿರಲಾರೆ; ನನ್ನ ಆತ್ಮವೇ, ನೀನು ತುತ್ತೂರಿಯ ಶಬ್ದವನ್ನೂ, ಯುದ್ಧದ ಘೋಷವನ್ನೂ ಕೇಳುತ್ತಿಯಲ್ಲಾ.
20 ನಾಶನದ ಮೇಲೆ ನಾಶನದ ಸುದ್ದಿಬರುತ್ತಿದೆ. ದೇಶವೆಲ್ಲಾ ಹಾಳಾಯಿತು. ಫಕ್ಕನೆ ನನ್ನ ಗುಡಾರಗಳೂ, ಕ್ಷಣಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
೨೦ನಾಶದ ಮೇಲೆ ನಾಶವು, ಒಂದರ ಮೇಲೊಂದು ನಾಶದ ಸುದ್ದಿಬರುತ್ತಿದೆ; ದೇಶವೆಲ್ಲಾ ಹಾಳಾಯಿತು; ತಟ್ಟನೆ ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ಭಗ್ನವಾದವು.
21 ಎಷ್ಟರವರೆಗೆ ನಾನು ಯುದ್ಧದ ಧ್ವಜವನ್ನು ನೋಡುತ್ತಿರಲಿ? ತುತೂರಿಯ ಶಬ್ದವನ್ನು ಎಷ್ಟರವರೆಗೆ ನಾನು ಕೇಳಲಿ?
೨೧ನಾನು ಎಷ್ಟರವರೆಗೆ ಯುದ್ಧದ ಪತಾಕೆಗಳನ್ನು ನೋಡಲಿ, ಎಂದಿನ ತನಕ ತುತ್ತೂರಿಯ ಶಬ್ದವನ್ನು ಕೇಳಲಿ!
22 “ಏಕೆಂದರೆ ನನ್ನ ಜನರು ಮೂಢರಾಗಿದ್ದಾರೆ. ನನ್ನನ್ನು ಅವರು ಅರಿಯರು; ಮೂರ್ಖ ಮಕ್ಕಳಾಗಿದ್ದಾರೆ, ಅವರು ಗ್ರಹಿಕೆಯಿಲ್ಲದವರು; ಕೆಟ್ಟದ್ದನ್ನು ಮಾಡುವುದಕ್ಕೆ ಜಾಣರಾಗಿದ್ದಾರೆ, ಆದರೆ ಒಳ್ಳೆಯದನ್ನು ಮಾಡುವುದಕ್ಕೆ ಅರಿಯರು.”
೨೨ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು; ಮೂಢಸಂತತಿಯವರು, ಅವಿವೇಕಿಗಳು; ದುಷ್ಕಾರ್ಯದಲ್ಲಿ ನಿಪುಣರು, ಸತ್ಕಾರ್ಯವನ್ನು ಮಾಡಲು ಅರಿಯರು.
23 ನಾನು ಭೂಮಿಯನ್ನು ನೋಡಿದೆನು, ಇಗೋ, ಅದು ನಿರಾಕಾರವಾಗಿಯೂ, ಹಾಳಾಗಿಯೂ, ಶೂನ್ಯವಾಗಿಯೂ ಇತ್ತು. ಆಕಾಶಗಳನ್ನು ಸಹ ನೋಡಿದೆನು, ಅವುಗಳಿಗೆ ಬೆಳಕಿರಲಿಲ್ಲ.
೨೩ನಾನು ದಿವ್ಯಜ್ಞಾನದಿಂದ ನೋಡಿದೆನು, ಆಹಾ! ಭೂಲೋಕವು ಹಾಳುಪಾಳಾಗಿತ್ತು; ಆಕಾಶವನ್ನು ನೋಡಿದೆನು, ಅದರಲ್ಲಿ ಬೆಳಕೇ ಇರಲಿಲ್ಲ.
24 ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹಗುರವಾಗಿ ಅದುರಿದವು.
೨೪ಪರ್ವತಗಳನ್ನು ನೋಡಿದೆನು, ಆಹಾ, ನಡುಗುತ್ತಿದ್ದವು, ಎಲ್ಲಾ ಗುಡ್ಡಗಳೂ ಅಲ್ಲಕಲ್ಲೋಲವಾಗಿದ್ದವು.
25 ನಾನು ನೋಡಿದೆನು, ಇಗೋ, ಮನುಷ್ಯನು ಇರಲಿಲ್ಲ; ಆಕಾಶದ ಪಕ್ಷಿಗಳೆಲ್ಲಾ ಹಾರಿ ಹೋಗಿದ್ದವು.
೨೫ನಾನು ನೋಡಲಾಗಿ ಅಯ್ಯೋ, ಜನವೇ ಇರಲಿಲ್ಲ, ಆಕಾಶದ ಸಕಲ ಪಕ್ಷಿಗಳು ಹಾರಿಹೋಗಿದ್ದವು.
26 ನಾನು ನೋಡಿದೆನು, ಇಗೋ, ಫಲವುಳ್ಳ ಸ್ಥಳವು ಮರುಭೂಮಿಯಾಯಿತು; ಅದರ ಪಟ್ಟಣಗಳೆಲ್ಲಾ ಯೆಹೋವ ದೇವರ ಮುಂದೆಯೂ, ಅವರ ಉಗ್ರಕೋಪದ ಉರಿಯ ಮುಂದೆಯೂ ಬಿದ್ದು ಹೋಗಿದ್ದವು.
೨೬ನಾನು ನೋಡಲಾಗಿ ಫಲವತ್ತಾದ ಭೂಮಿಯು ಕಾಡಾಗಿತ್ತು, ಅಯ್ಯೋ! ಅಲ್ಲಿನ ಊರುಗಳೆಲ್ಲಾ ರೋಷಾಗ್ನಿಯುಕ್ತನಾದ ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದುಹೋಗಿದ್ದವು.
27 ಏಕೆಂದರೆ ಯೆಹೋವ ದೇವರು ಹೀಗೆ ಹೇಳಿದ್ದಾರೆ: “ದೇಶವೆಲ್ಲಾ ಹಾಳಾಗುವುದು. ಆದರೂ ನಾನು ಅದನ್ನು ಪೂರ್ಣ ನಾಶ ಮಾಡಿಲ್ಲ.
೨೭ಯೆಹೋವನು, “ದೇಶವೆಲ್ಲಾ ಬಟ್ಟಬರಿದಾಗುವುದು, ಆದರೆ ನಾನು ಸಂಪೂರ್ಣವಾಗಿ ಲಯಮಾಡೆನು.
28 ಇದರ ನಿಮಿತ್ತ ಭೂಮಿಯು ದುಃಖಿಸುವುದು. ಮೇಲಿರುವ ಆಕಾಶವು ಕಪ್ಪಾಗುವುದು. ಏಕೆಂದರೆ ನಾನು ಅದನ್ನು ಹೇಳಿದ್ದರಿಂದ ನಿಶ್ಚಯಿಸಿದ್ದೇನೆ. ಮಾನಸಾಂತರ ಪಡುವುದಿಲ್ಲ. ಇಲ್ಲವೆ ಅದರಿಂದ ಹಿಂದಿರುಗುವುದಿಲ್ಲ.”
೨೮ಇದಕ್ಕಾಗಿ ಭೂಲೋಕವು ಪ್ರಲಾಪಿಸುವುದು, ಮೇಲೆ ಆಕಾಶವು ಕಪ್ಪಾಗುವುದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಇದರಿಂದ, ಹಿಂದೆಗೆಯನು” ಎಂದು ನುಡಿಯುತ್ತಾನೆ.
29 ರಾವುತರ ಮತ್ತು ಬಿಲ್ಲಿನವರ ಶಬ್ದದ ನಿಮಿತ್ತ ಪಟ್ಟಣವೆಲ್ಲಾ ಓಡಿ ಹೋಗುವುದು. ಪೊದೆಗಳಲ್ಲಿ ಹೊಕ್ಕು, ಬಂಡೆಗಳನ್ನು ಹತ್ತುವರು. ಪಟ್ಟಣಗಳೆಲ್ಲಾ ನಾಶವಾಗುವುವು. ಅವುಗಳಲ್ಲಿ ಒಬ್ಬನಾದರೂ ವಾಸಮಾಡನು.
೨೯ಪಟ್ಟಣದವರೆಲ್ಲರೂ ಸವಾರರ ಮತ್ತು ಬಿಲ್ಲುಗಾರರ ಆರ್ಭಟಕ್ಕೆ ಹೆದರಿ ಓಡುತ್ತಾರೆ; ಇತ್ತ ಪೊದೆಗಳಲ್ಲಿ ಅವಿತುಕೊಳ್ಳುತ್ತಾರೆ, ಅತ್ತ ಬಂಡೆಗಳನ್ನು ಹತ್ತುತ್ತಾರೆ; ಪ್ರತಿಯೊಂದು ಪಟ್ಟಣವು ಯಾವ ನಿವಾಸಿಯೂ ಇಲ್ಲದೆ ನಿರ್ಜನವಾಗುತ್ತದೆ.
30 ಆಗ ನೀನು ನಿರ್ಜನನಾದಾಗ ಏನು ಮಾಡುವೆ? ನೀನು ಕಡುಕೆಂಪು ಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡರೇನು? ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು? ನೀವು ವ್ಯರ್ಥವಾಗಿ ನಿನ್ನನ್ನು ಅಲಂಕರಿಸಿಕೊಳ್ಳುತ್ತಿ. ನಿನ್ನ ಪ್ರೇಮಿಗಳು ನಿನ್ನನ್ನು ತಿರಸ್ಕರಿಸುತ್ತಾರೆ; ಅವರು ನಿನ್ನನ್ನು ಕೊಲ್ಲಲು ಬಯಸುತ್ತಾರೆ.
೩೦ಎಲೈ, ನಗರವೇ, ನೀನು ಸೂರೆಯಾಗುವಾಗ ಏನು ಮಾಡುವಿ? ನೀನು ರಕ್ತಾಂಬರವನ್ನು ಹೊದ್ದು ಸುವರ್ಣಾಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡು, ನೀಲಾಂಜನ ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು, ನಿನ್ನನ್ನು ಶೃಂಗಾರಿಸಿಕೊಳ್ಳುವುದು ವ್ಯರ್ಥ. ನಿನ್ನೊಂದಿಗೆ ವ್ಯಭಿಚಾರ ಮಾಡಿದವರೇ ನಿನ್ನನ್ನು ಧಿಕ್ಕರಿಸಿ ನಿನ್ನ ಪ್ರಾಣವನ್ನೇ ಹುಡುಕುತ್ತಾರೆ.
31 ಏಕೆಂದರೆ ಪ್ರಸವವೇದನೆ ಪಡುವವಳಂತೆ, ಚೊಚ್ಚಲನ್ನು ಹೆರುವವಳ ಸಂಕಟಕ್ಕೆ ಸಮಾನವಾಗಿರುವ ಚೀಯೋನಿನ ಮಗಳ ಕಿರಿಚುವ ಕೂಗನ್ನು ಕೇಳಿದ್ದೇನೆ. ಆಕೆಯು ಗೋಳಾಡುತ್ತಾಳೆ, ಕೈಗಳನ್ನು ಚಾಚಿ, “ಅಯ್ಯೋ, ನನಗೀಗ ಕಷ್ಟ! ಕೊಲೆಗಾರರ ನಿಮಿತ್ತ ನನ್ನ ಪ್ರಾಣವು ಬೇಸರಗೊಳ್ಳುತ್ತದೆ,” ಎಂದು ಅರಚಿಕೊಳ್ಳುತ್ತಾಳೆ.
೩೧ಚೀಯೋನ್ ನಗರವು ಬೇನೆತಿನ್ನುವವಳಂತೆ, ಚೊಚ್ಚಲಹೆರಿಗೆಯ ವೇದನೆಯನ್ನು ಅನುಭವಿಸುವವಳ ಹಾಗೆ ಕೂಗಿಕೊಳ್ಳುವುದನ್ನು ನಾನು ಕೇಳಿದ್ದೇನೆ; ಏದುಸಿರುಬಿಡುತ್ತಾ ಕೈಚಾಚಿ, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ಕೊಲೆಗಾರರಿಂದ ನನ್ನ ಪ್ರಾಣವು ಬಳಲುತ್ತದೆ” ಎಂದು ಅರಚಿಕೊಳ್ಳುತ್ತಾಳೆ.