< ಯೆರೆಮೀಯನು 31 >
1 “ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಮಸ್ತ ಕುಟುಂಬಗಳಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು,” ಎಂದು ಯೆಹೋವ ದೇವರು ಸಾರುತ್ತಾರೆ.
೧ಯೆಹೋವನು, “ಆ ಕಾಲದಲ್ಲಿ ನಾನು ಇಸ್ರಾಯೇಲಿನ ಸಕಲ ಗೋತ್ರಗಳವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳುತ್ತಾನೆ.
2 ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಾನು ಅವರಿಗೆ ವಿಶ್ರಾಂತಿ ಕೊಡುವುದಕ್ಕೆ ಹೋಗಲಾಗಿ, ಖಡ್ಗಕ್ಕೆ ತಪ್ಪಿಸಿಕೊಂಡ ಇಸ್ರಾಯೇಲಿನ ಜನರಿಗೆ ಮರುಭೂಮಿಯಲ್ಲಿ ದಯೆ ದೊರಕಿತು.”
೨ಕರ್ತನಾದ ಯೆಹೋವನು, “ಖಡ್ಗಕ್ಕೆ ಹತರಾಗದೆ ಉಳಿದ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯುವುದು; ಇಸ್ರಾಯೇಲ್ ವಿಶ್ರಾಂತಿಯನ್ನು ಹುಡುಕುವುದಕ್ಕೆ ಹೋಗುವಾಗ ಯೆಹೋವನು ದೂರದಿಂದ ಬಂದು ಅದಕ್ಕೆ ದರ್ಶನಕೊಟ್ಟು,
3 ಯೆಹೋವ ದೇವರು ಪೂರ್ವದಲ್ಲಿ ನನಗೆ ಕಾಣಿಸಿಕೊಂಡು, “ಹೌದು, ಶಾಶ್ವತ ಪ್ರೀತಿಯಿಂದ ನಿನ್ನನ್ನು ಪ್ರೀತಿಸಿದ್ದೇನೆ. ಕುಂದದ ದಯೆಯಿಂದಲೇ ನಿನ್ನನ್ನು ಸೆಳೆದುಕೊಂಡಿದ್ದೇನೆ.
೩‘ನಾನು ನಿನ್ನನ್ನು ಪ್ರೀತಿಸಿರುವುದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ,
4 ಇಸ್ರಾಯೇಲಿನ ಕನ್ಯೆಯೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು. ನೀನು ಪುನಃ ನಿರ್ಮಿತವಾಗುವೆ. ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷ ಪಡುವವರ ನಾಟ್ಯದಲ್ಲಿ ಹೊರಡುವೆ.
೪ಇಸ್ರಾಯೇಲೆಂಬ ಯುವತಿಯೇ, ನಾನು ನಿನ್ನ ಹಾಳುಪ್ರದೇಶಗಳನ್ನು ಪುನಃ ಕಟ್ಟುವೆನು; ಅವು ಕಟ್ಟಡಗಳಾಗುವವು. ನೀನು ಮತ್ತೆ ದಮ್ಮಡಿಗಳಿಂದ ವೈಭವಗೊಂಡು ವಿನೋದಪಡುವವರ ನಾಟ್ಯಗಳಲ್ಲಿ ಸೇರಿಕೊಳ್ಳುವಿ.
5 ಸಮಾರ್ಯದ ಪರ್ವತಗಳಲ್ಲಿ ತಿರುಗಿ ದ್ರಾಕ್ಷಿಗಿಡಗಳನ್ನು ನೆಡುವೆ. ರೈತರು ನೆಟ್ಟು ಸಾಧಾರಣವಾದವುಗಳಂತೆ ಫಲ ಅನುಭವಿಸುವರು.
೫ನೀನು ತಿರುಗಿ ಸಮಾರ್ಯದ ಗುಡ್ಡಗಳಲ್ಲಿ ದ್ರಾಕ್ಷಿತೋಟಗಳನ್ನು ಮಾಡಿಕೊಳ್ಳುವಿ; ನೆಡುವವರು ನೆಟ್ಟು ಫಲವನ್ನು ಅನುಭವಿಸುವರು.
6 ಒಂದು ದಿನ ಬರುವದು, ಆಗ ಎಫ್ರಾಯೀಮನ ಪರ್ವತಗಳ ಮೇಲಿರುವ ಕಾವಲುಗಾರರು, ‘ಏಳಿರಿ, ಚೀಯೋನಿಗೆ, ನಮ್ಮ ಯೆಹೋವ ದೇವರ ಬಳಿಗೆ ಹೋಗೋಣ,’” ಎಂದು ಕೂಗುವರು.
೬ಒಂದು ದಿನವು ಬರುವುದು, ಆಗ ಎಫ್ರಾಯೀಮಿನ ಗುಡ್ಡಗಳ ಮೇಲಿರುವ ಕಾವಲುಗಾರರು, ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಯೆಹೋವನ ಸನ್ನಿಧಾನಕ್ಕೆ ಹೋಗೋಣ ಬನ್ನಿ’ ಎಂದು ಕೂಗುವರು” ಎಂದು ಹೇಳುವನು.
7 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಯಾಕೋಬನ ವಿಷಯ ಸಂತೋಷದಿಂದ ಹಾಡಿ, ಮೂಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ. ಸಾರಿರಿ. ಸ್ತುತಿಸಿರಿ. ‘ಯೆಹೋವ ದೇವರೇ, ನಿನ್ನ ಜನರನ್ನೂ, ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು,’ ಎಂದು ಹೇಳಿರಿ.
೭ಯೆಹೋವನು ಇಂತೆನ್ನುತ್ತಾನೆ, “ಯಾಕೋಬಿನ ನಿಮಿತ್ತ ಹರ್ಷಧ್ವನಿಗೈಯಿರಿ, ಜನಾಂಗಗಳ ಶಿರೋಮಣಿಯ ವಿಷಯದಲ್ಲಿ ಕೇಕೆಹಾಕಿರಿ. ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದ ನಿನ್ನ ಜನವನ್ನು ರಕ್ಷಿಸು ಎಂದು ಘೋಷಿಸಿ ಸ್ತುತಿಸಿರಿ.
8 ಇಗೋ, ನಾನು ಅವರನ್ನು ಉತ್ತರ ದೇಶದಿಂದ ತಂದು ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ. ಅವರಲ್ಲಿ ಕುರುಡರೂ, ಕುಂಟರೂ, ಗರ್ಭಿಣಿಯಾದವರೂ, ದಿನತುಂಬಿದ ಗರ್ಭಿಣಿಯರೂ ಇರುವರು. ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗಿ ಬರುವರು.
೮ಇಗೋ, ನಾನು ಅವರನ್ನು ಉತ್ತರ ದೇಶದಿಂದ ಬರಮಾಡುವೆನು, ದಿಗಂತಗಳಿಂದ ಅವರನ್ನು ಕೂಡಿಸುವೆನು. ಅವರೊಂದಿಗೆ ಕುರುಡರನ್ನೂ, ಕುಂಟರನ್ನೂ, ಗರ್ಭಿಣಿಯರನ್ನೂ, ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು.
9 ಅವರು ಅಳುತ್ತಾ ಬರುವರು. ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು. ಅವು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು. ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ. ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.
೯ಅವರು ತಮ್ಮ ವಿಜ್ಞಾಪನೆಗಳಿಂದ ಅಳುತ್ತಾ ನಡೆದು ಬರುವರು, ನಾನು ಅವರನ್ನು ಸಂತೈಸಿ ಮುನ್ನಡೆಸುವೆನು. ಎಡವದ ಸಮಮಾರ್ಗದಲ್ಲಿ ನಡೆಸುತ್ತಾ ತುಂಬಿದ ತೊರೆಗಳ ಬಳಿಗೆ ಬರಮಾಡುವೆನು. ನಾನು ಇಸ್ರಾಯೇಲಿಗೆ ತಂದೆ, ಎಫ್ರಾಯೀಮು ನನ್ನ ಹಿರಿಯ ಮಗನಲ್ಲವೆ.
10 “ಜನಾಂಗಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ಸಾರಿರಿ! ‘ಇಸ್ರಾಯೇಲನ್ನು ಚದರಿಸಿದಾತನೇ ಅವರನ್ನು ಕೂಡಿಸಿ, ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವರನ್ನು ಕಾಯುವನು’ ಎಂದು ಪ್ರಕಟಿಸಿರಿ.
೧೦ಜನಾಂಗಗಳೇ, ಯೆಹೋವನ ವಾಕ್ಯವನ್ನು ಕೇಳಿರಿ, ದೂರ ದ್ವೀಪಗಳಲ್ಲಿ ಸಾರಿರಿ! ಇಸ್ರಾಯೇಲರನ್ನು ಚದರಿಸಿದಾತನು, ‘ಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನು’ ಎಂದು ಪ್ರಕಟಿಸಿರಿ. ಯೆಹೋವನು ಯಾಕೋಬ್ಯರನ್ನು ವಿಮೋಚಿಸಿದ್ದಾನಲ್ಲಾ,
11 ಏಕೆಂದರೆ ಯೆಹೋವ ದೇವರು ಯಾಕೋಬ್ಯರನ್ನು ವಿಮೋಚಿಸಿದ್ದಾರೆ. ಅವರಿಗಿಂತ ಬಲಿಷ್ಠರ ಕೈಯೊಳಗಿಂದ ಅವರನ್ನು ಬಿಡಿಸಿದ್ದಾರೆ.
೧೧ಅವರಿಗಿಂತ ಬಲಿಷ್ಠರ ಕೈಯಿಂದ ಅವರನ್ನು ಬಿಡಿಸಿದ್ದಾನಷ್ಟೆ.
12 ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು; ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ, ಅಂತು ಯೆಹೋವ ದೇವರು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹದಂತೆ ಬರುವರು. ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು; ಅವರು ಇನ್ನು ಮುಂದೆ ದುಃಖಪಡುವುದಿಲ್ಲ.
೧೨ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು. ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ ಅಂತು ಯೆಹೋವನು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹದೋಪಾದಿಯಲ್ಲಿ ಬರುವರು. ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು; ಅವರು ಇನ್ನು ಕಳೆಗುಂದರು.
13 ಆಗ ಕನ್ನಿಕೆಯರೂ, ಪ್ರಾಯದವರೂ, ವೃದ್ಧರ ಸಹಿತವಾಗಿ ನಾಟ್ಯವಾಡುತ್ತಾ ಹರ್ಷಿಸುವರು. ಏಕೆಂದರೆ ನಾನು ಅವರ ದುಃಖವನ್ನು ಆನಂದಕ್ಕೆ ಬದಲಾಯಿಸುವೆನು. ನಾನು ಅವರನ್ನು ಆಧರಿಸಿ, ಅವರ ದುಃಖದಿಂದ ಬಿಡಿಸಿ, ಅವರಿಗೆ ಸಂತೋಷವನ್ನುಂಟು ಮಾಡುವೆನು.
೧೩ಆಗ ಯುವತಿಯು ನಾಟ್ಯವಾಡುತ್ತಾ ಉಲ್ಲಾಸಿಸುವಳು; ಯುವಕರು ಮತ್ತು ವೃದ್ಧರು ಜೊತೆಯಾಗಿ ಹರ್ಷಿಸುವರು. ನಾನು ಅವರ ದುಃಖವನ್ನು ನೀಗಿಸಿ ಸಂತೋಷವನ್ನು ಉಂಟುಮಾಡಿ, ಅವರು ತಮ್ಮ ವ್ಯಸನವನ್ನು ಬಿಟ್ಟು ಆನಂದಿಸುವಂತೆ ಅವರನ್ನು ಸಂತೈಸುವೆನು.
14 ಇದಲ್ಲದೆ ಯಾಜಕರನ್ನು ಹೇರಳವಾಗಿ ತೃಪ್ತಿಗೊಳಿಸುವೆನು. ನನ್ನ ಜನರು ನನ್ನ ಒಳ್ಳೆಯತನದಿಂದ ತೃಪ್ತಿಪಡುವರು,” ಎಂದು ಯೆಹೋವ ದೇವರು ಹೇಳುತ್ತಾರೆ.
೧೪ಯಾಜಕರನ್ನು ಮೃಷ್ಟಾನ್ನಭೋಜನದಿಂದ ತೃಪ್ತಿಗೊಳಿಸುವೆನು; ನಾನು ಅನುಗ್ರಹಿಸುವ ಮೇಲುಗಳನ್ನು ನನ್ನ ಜನರು ಸಮೃದ್ಧಿಯಾಗಿ ಅನುಭವಿಸುವರು. ಇದು ಯೆಹೋವನ ನುಡಿ.”
15 ಯೆಹೋವ ದೇವರು ಮತ್ತೆ ಹೀಗೆ ಹೇಳುತ್ತಾರೆ: “ರಾಮದಲ್ಲಿ ರೋದನೆಯೂ, ಗೋಳಾಟವೂ ಅಘೋರವಾದ ಅಳುವಿಕೆಯೂ ಕೇಳಿಸುತ್ತಿದೆ. ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ, ಆದರಣೆ ಹೊಂದದೆ ಹೋಗಿದ್ದಾಳೆ. ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”
೧೫ಯೆಹೋವನು ಇಂತೆನ್ನುತ್ತಾನೆ, “ರಾಮಾದಲ್ಲಿ ಬೊಬ್ಬೆಯು ಕೇಳಿಸುತ್ತದೆ, ಗೋಳಾಟವೂ ಮತ್ತು ಘೋರ ರೋದನವೂ ಉಂಟಾಗಿವೆ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದದೆ ಇದ್ದಾಳೆ.”
16 ಯೆಹೋವ ದೇವರು ಇಂತೆನ್ನುತ್ತಾರೆ: “ನಿನ್ನ ಧ್ವನಿಯು ಗೋಳಾಡದಿರಲಿ; ನಿನ್ನ ಕಣ್ಣು ನೀರು ಸುರಿಸದಿರಲಿ; ನಿನ್ನ ಪ್ರಯಾಸವು ಸಾರ್ಥಕವಾಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು.
೧೬ಯೆಹೋವನು, “ನಿನ್ನ ಧ್ವನಿಯು ಗೋಳಾಟದ ಸ್ವರವಾಗದಿರಲಿ, ನಿನ್ನ ಕಣ್ಣು ನೀರು ಸುರಿಸದಿರಲಿ. ನಿನ್ನ ಪ್ರಯಾಸವು ಸಾರ್ಥಕವಾಗುವುದು; ಇದು ಯೆಹೋವನ ನುಡಿ; ನಿನ್ನ ಮಕ್ಕಳು ಶತ್ರುವಿನ ದೇಶದಿಂದ ಹಿಂದಿರುಗುವರು” ಎನ್ನುತ್ತಾನೆ.
17 ನಿನ್ನ ಭವಿಷ್ಯದಲ್ಲಿ ನಿರೀಕ್ಷೆಯಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನಿನ್ನ ಮಕ್ಕಳು ತಮ್ಮ ಸ್ವಂತ ದೇಶಕ್ಕೆ ತಿರುಗಿ ಬರುವರು.”
೧೭ಯೆಹೋವನು ಇಂತೆನ್ನುತ್ತಾನೆ, “ನಿನಗೆ ಮುಂದೆ ಒಳ್ಳೆಯ ಗತಿಯಾಗುವುದೆಂದು ನಿರೀಕ್ಷೆಯಿದೆ. ನಿನ್ನ ಮಕ್ಕಳು ಹಿಂದಿರುಗಿ ಸ್ವಂತ ಸೀಮೆಯನ್ನು ಸೇರುವರು.
18 “ಎಫ್ರಾಯೀಮನು ಅಂಗಲಾಚುವುದನ್ನು ನಿಶ್ಚಯವಾಗಿ ಕೇಳಿದೆನು. ಹೇಗೆಂದರೆ, ‘ನೀನು ನನ್ನನ್ನು ಶಿಕ್ಷಿಸಿದೆ. ಪಳಗದ ಹೋರಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು. ನನ್ನನ್ನು ತಿರುಗಿಸು, ಆಗ ತಿರುಗಿಕೊಳ್ಳುವೆನು. ಯೆಹೋವ ದೇವರೇ, ನೀವೇ ನನ್ನ ದೇವರಾಗಿದ್ದೀರಿ.
೧೮ಎಫ್ರಾಯೀಮು ಹೀಗೆ ಪ್ರಲಾಪಿಸಿಕೊಳ್ಳುವುದನ್ನು ಕೇಳಿದ್ದೇನೆ, ‘ನೀನು ನನ್ನನ್ನು ಶಿಕ್ಷಿಸಿದ್ದಿ, ಪಳಗದ ಹೋರಿಯಂತೆ ಶಿಕ್ಷೆಯನ್ನು ಅನುಭವಿಸಿದೆನು. ನನ್ನನ್ನು ತಿರುಗಿಸು, ನೀನು ತಿರುಗಿಸಿದ ಹಾಗೆ ತಿರುಗುವೆನು; ನೀನು ನನ್ನ ದೇವರಾದ ಯೆಹೋವನಲ್ಲವೆ.
19 ನಾನು ನಿಮ್ಮಿಂದ ದೂರವಾದ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳುವಳಿಕೆ ಹೊಂದಿದ ಮೇಲೆಯೇ ದುಃಖದಿಂದ ನನ್ನ ಎದೆಯನ್ನು ಬಡಿದುಕೊಂಡೆನು. ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ನಾನು ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’
೧೯ತಿರುಗಿಸಲ್ಪಟ್ಟ ಮೇಲೆಯೇ ಪಶ್ಚಾತ್ತಾಪ ಪಟ್ಟೆನು; ತಿಳಿವಳಿಕೆಯನ್ನು ಹೊಂದಿದ ಮೇಲೆಯೇ ತೊಡೆಯನ್ನು ಬಡಿದುಕೊಂಡೆನು. ನನ್ನ ಯೌವನದ ಅವಮಾನವನ್ನು ನನ್ನ ಮೇಲೆ ಹೊತ್ತುಕೊಂಡ ಕಾರಣ ಲಜ್ಜೆಗೊಂಡೆನು, ಹೌದು, ತುಂಬಾ ನಾಚಿಕೆಪಟ್ಟೆನು.’”
20 ಯೆಹೋವ ದೇವರು ಮುಂದುವರೆಸಿ, ‘ಎಫ್ರಾಯೀಮನು ನನಗೆ ಪ್ರಿಯ ಪುತ್ರನಲ್ಲವೇ? ಅವನು ನನಗೆ ಹರ್ಷಗೊಂಡಿರುವ ನನ್ನ ಮಗುವಲ್ಲವೋ? ನಾನು ಅವನಿಗೆ ವಿರೋಧವಾಗಿ ಆಗಾಗ ಮಾತಾಡಿದ್ದರೂ, ಅವನನ್ನು ಇನ್ನು ಬಹಳವಾಗಿ ಜ್ಞಾಪಕ ಮಾಡುತ್ತೇನೆ. ಆದ್ದರಿಂದ ಅವನಿಗೋಸ್ಕರ ನನ್ನ ಹೃದಯ ಮರುಗುತ್ತದಲ್ಲಾ ಅವನನ್ನು ಕನಿಕರಿಸುವೆನು,’” ಎಂದು ಯೆಹೋವ ದೇವರು ಹೇಳುತ್ತಾರೆ.
೨೦ಯೆಹೋವನು ಇಂತೆನ್ನುತ್ತಾನೆ, “ಎಫ್ರಾಯೀಮು ನನಗೆ ಪ್ರಿಯಪುತ್ರ, ಮುದ್ದುಮಗುವಲ್ಲವೇ? ಅವನ ಹೆಸರೆತ್ತಿದಾಗೆಲ್ಲಾ ಅವನನ್ನು ಜ್ಞಾಪಿಸಿಕೊಳ್ಳುತ್ತಲೇ ಬರುತ್ತೇನೆ; ಇದರಿಂದ ನನ್ನ ಕರುಳು ಅವನಿಗಾಗಿ ಮರುಗುತ್ತದಲ್ಲಾ, ಅವನನ್ನು ಕರುಣಿಸುವೆನು.
21 “ನಿನಗೋಸ್ಕರ ದಾರಿ ತೋರುವ ಕಂಬಗಳನ್ನೂ ಮತ್ತು ಕೈಮರಗಳನ್ನೂ ನಿಲ್ಲಿಸಿಕೋ ಹೆದ್ದಾರಿಯ ಕಡೆಗೆ ನೀನು ಹೋದ ದಾರಿಗೂ ನಿನ್ನ ಹೃದಯವನ್ನು ಇಟ್ಟುಕೋ. ಇಸ್ರಾಯೇಲಿನ ಕನ್ಯಾ ಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
೨೧ದಾರಿ ತೋರುವ ಕಂಬಗಳನ್ನೂ ಮತ್ತು ಕೈಮರಗಳನ್ನೂ ನಿಲ್ಲಿಸಿಕೋ; ನೀನು ಯಾವ ಮಾರ್ಗದಲ್ಲಿ ಹೋಗಿಬಿಟ್ಟಿಯೋ ಅದಕ್ಕೆ ನಿನ್ನ ಮನಸ್ಸನ್ನು ತಿರುಗಿಸಿಕೋ. ಇಸ್ರಾಯೇಲೆಂಬ ಯುವತಿಯೇ, ತಿರುಗಿಕೋ, ಈ ನಿನ್ನ ಪಟ್ಟಣಗಳಿಗೆ ಹಿಂದಿರುಗು.
22 ವಿಶ್ವಾಸದ್ರೋಹಿ ಇಸ್ರಾಯೇಲ್ ಮಗಳೇ ಎಷ್ಟರವರೆಗೆ ಅಡ್ಡಾಡುವೆ? ಏಕೆಂದರೆ ಯೆಹೋವ ದೇವರು ಭೂಮಿಯಲ್ಲಿ ಹೊಸದನ್ನು ಸೃಷ್ಟಿಸುತ್ತಾರೆ. ಹೆಂಗಸು ಗಂಡಸನ್ನು ಕಾಪಾಡುವಳು.”
೨೨ದ್ರೋಹಿಯಾದ ಮಗಳೇ, ಎಂದಿನವರೆಗೆ ಅತ್ತಿತ್ತ ಅಲೆದಾಡುವಿ? ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಉಂಟುಮಾಡಿದ್ದಾನೆ ನೋಡು, ಸ್ತ್ರೀಯಾದವಳು ತನ್ನ ಪುರುಷನನ್ನು ಕಾಪಾಡುವಳು.”
23 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ ನಾನು ಅವರ ಸೆರೆಯನ್ನು ತಿರುಗಿ ತರುವಾಗ, ‘ನೀತಿಯ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವ ದೇವರು ನಿನ್ನನ್ನು ಆಶೀರ್ವದಿಸಲಿ,’ ಎಂದು ಇನ್ನೂ ಹೇಳುವರು.
೨೩ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ನಾನು ನನ್ನ ಜನರ ದುರವಸ್ಥೆಯನ್ನು ತಪ್ಪಿಸುವಾಗ ಯೆಹೂದ ದೇಶದಲ್ಲಿಯೂ ಅದರ ಪಟ್ಟಣಗಳಲ್ಲಿಯೂ, ‘ನ್ಯಾಯದ ನಿವಾಸವೇ, ಪರಿಶುದ್ಧ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ’ ಎಂದು ಮತ್ತೆ ಮಾತನಾಡುವರು.
24 ಯೆಹೂದದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ ಬೇಸಾಯ ಮಾಡುವವರೂ, ಮಂದೆಯ ಸಂಗಡ ಹೊರಡುವವರೂ ವಾಸವಾಗುವರು.
೨೪ಆ ಸಕಲ ಪಟ್ಟಣಗಳವರು, ವ್ಯವಸಾಯಗಾರರು, ಮಂದೆ ಮೇಯಿಸುತ್ತಾ ದೇಶದಲ್ಲಿ ಸಂಚರಿಸುವರು, ಅಂತು ಯೆಹೂದ್ಯರೆಲ್ಲರೂ ಅಲ್ಲಿ ಒಟ್ಟಿಗೆ ವಾಸಿಸುವರು.
25 ದಣಿದ ಪ್ರಾಣವನ್ನು ತೃಪ್ತಿಪಡಿಸಿದ್ದೇನೆ. ಕುಂದಿದ ಪ್ರಾಣಗಳನ್ನೆಲ್ಲಾ ತುಂಬಿಸಿದ್ದೇನೆ.”
೨೫ನಾನು ಬಳಲಿದವರನ್ನು ತಂಪುಗೊಳಿಸಿ, ಕುಂದಿದವರೆಲ್ಲರನ್ನೂ ತೃಪ್ತಿಪಡಿಸುವೆನಷ್ಟೆ” ಎಂಬುದೇ.
26 ಅಷ್ಟರಲ್ಲಿ ಎಚ್ಚೆತ್ತು ನೋಡಿದೆನು. ನನ್ನ ನಿದ್ದೆ ನನಗೆ ಮಧುರವಾಗಿತ್ತು.
೨೬ಇದಾದ ಮೇಲೆ ನಾನು ಎಚ್ಚೆತ್ತು ನಿಜಸ್ಥಿತಿಯನ್ನು ನೋಡಿದೆನು; ಆಗ ನನ್ನ ಕನಸು ನನಗೆ ಮನೋಹರವಾಗಿ ಕಾಣಿಸಿತು.
27 ಯೆಹೋವ ದೇವರು ಹೇಳುವುದೇನೆಂದರೆ, “ದಿನಗಳು ಬರುತ್ತವೆ. ಆಗ ನಾನು ಇಸ್ರಾಯೇಲ್ ಮತ್ತು ಯೆಹೂದ ರಾಜ್ಯಗಳಲ್ಲಿ ಮನುಷ್ಯರನ್ನೂ ಪ್ರಾಣಿಗಳನ್ನೂ ಬಿತ್ತಿ ಭರ್ತಿಮಾಡುವೆನು.
೨೭ಕರ್ತನಾದ ಯೆಹೋವನು, “ಇಗೋ, ನಾನು ಇಸ್ರಾಯೇಲ್ ಮತ್ತು ಯೆಹೂದ ಕ್ಷೇತ್ರಗಳಲ್ಲಿ ಮನುಷ್ಯರನ್ನೂ, ಪಶುಗಳನ್ನೂ ಬಿತ್ತುವ ದಿನಗಳು ಬರುವವು.
28 ನಾನು ಅವರನ್ನು ಕೀಳಲು, ಕೆಡವಲು, ಅಳಿಸಲು ಹಾಳುಮಾಡಲು, ಎಚ್ಚರವಹಿಸಿದ ಹಾಗೆಯೇ ಇನ್ನು ಮುಂದೆ ಅವರನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಅವರ ವಿಷಯವಾಗಿ ಎಚ್ಚರವಹಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
೨೮ನಾನು ಮೊದಲು ಇವರನ್ನು ಕಿತ್ತುಹಾಕಲು, ಕೆಡವಲು, ಹಾಳುಮಾಡಲು, ನಾಶಪಡಿಸಲು, ಬಾಧಿಸಲು ಹೇಗೆ ಎಚ್ಚರಗೊಂಡಿದ್ದೆನೋ ಹಾಗೆಯೇ ಇನ್ನು ಮೇಲೆ ಇವರನ್ನು ಕಟ್ಟಲು, ನೆಡಲು ಎಚ್ಚರಗೊಳ್ಳುವೆನು. ಇದು ಯೆಹೋವನ ನುಡಿ.
29 “ಆ ದಿನಗಳಲ್ಲಿ, “‘ತಂದೆಗಳು ಹುಳಿ ದ್ರಾಕ್ಷಿಯನ್ನು ತಿಂದದ್ದರಿಂದ, ಮಕ್ಕಳ ಹಲ್ಲುಗಳು ಚಳಿತು ಹೋದವೆಂದು ಇನ್ನು ಹೇಳುವುದಿಲ್ಲ.’
೨೯‘ಹೆತ್ತವರು ಹುಳಿದ್ರಾಕ್ಷಿಯನ್ನು ತಿಂದರು, ಅದರಿಂದ ಮಕ್ಕಳ ಹಲ್ಲುಗಳು ಚಳಿತುಹೋಗಿವೆ’ ಎಂದು ಆ ಕಾಲದಲ್ಲಿ ಜನರು ಮತ್ತೆ ಹೇಳುವುದಿಲ್ಲ.
30 ಆದರೆ ಒಬ್ಬೊಬ್ಬನು ಸ್ವಂತ ಪಾಪಕ್ಕಾಗಿ ಸಾಯುವನು. ಹುಳಿ ದ್ರಾಕ್ಷಿಯನ್ನು ತಿಂದ ಮನುಷ್ಯನು ಯಾವನೋ, ಅವನ ಹಲ್ಲುಗಳು ಚಳಿತು ಹೋಗುವುವು.”
೩೦ಸಾಯತಕ್ಕವನು ತನ್ನ ತನ್ನ ದೋಷದಿಂದ ಸಾಯುವನು. ಹುಳಿದ್ರಾಕ್ಷಿಯನ್ನು ತಿನ್ನುವವನ ಹಲ್ಲುಗಳೇ ಚಳಿತುಹೋಗುವವು” ಎಂದು ಹೇಳುತ್ತಾನೆ.
31 ಯೆಹೋವ ದೇವರು ಹೇಳುವುದನ್ನು ಕೇಳಿ: “ನಾನು ಇಸ್ರಾಯೇಲ್ ವಂಶದವರೊಂದಿಗೂ, ಯೆಹೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
೩೧ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಮತ್ತು ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
32 ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು ಈಜಿಪ್ಟ್ ದೇಶದಿಂದ ಕರೆದು ತಂದಾಗ, ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ, ಆ ನನ್ನ ಒಡಂಬಡಿಕೆಯನ್ನು ಅವರು ಮೀರಿ ನಡೆದರು,” ಎಂದು ಯೆಹೋವ ದೇವರು ಹೇಳುತ್ತಾರೆ.
೩೨ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈ ಹಿಡಿದು ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ.
33 “ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು,” ಎಂದು ಯೆಹೋವ ದೇವರು ಹೇಳುತ್ತಾರೆ. “ನನ್ನ ನಿಯಮವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
೩೩ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.
34 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ, ‘ಯೆಹೋವ ದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು. ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ.”
೩೪ನೆರೆಹೊರೆಯವರೂ, ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು, ‘ಯೆಹೋವನ ಜ್ಞಾನವನ್ನು ಪಡೆಯಿರಿ’ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವುದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ. ಇದು ಯೆಹೋವನ ನುಡಿ” ಎಂಬುದೇ.
35 ಇದು ಯೆಹೋವ ದೇವರಾದ ನನ್ನ ನುಡಿ, ಯೆಹೋವ ದೇವರು, ಹಗಲಲ್ಲಿ ಬೆಳಕು ನೀಡಲು ಸೂರ್ಯನನ್ನು ನೇಮಿಸಿದವರು. ಇರುಳಲ್ಲಿ ಬೆಳಕು ನೀಡಲು ಚಂದ್ರ ನಕ್ಷತ್ರಗಳನ್ನು ಏರ್ಪಡಿಸಿದವರು. ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ಕೆರಳಿಸುವವರು, ಸೇನಾಧೀಶ್ವರ ಯೆಹೋವ ದೇವರು ಎಂಬ ನಾಮಧೇಯದಿಂದ ಪ್ರಸಿದ್ಧರು.
೩೫ಹಗಲಿನಲ್ಲಿ ಸೂರ್ಯನನ್ನು, ರಾತ್ರಿಯಲ್ಲಿ ಚಂದ್ರ ಮತ್ತು ನಕ್ಷತ್ರಗಳ ಕಟ್ಟಳೆಗಳನ್ನು ಪ್ರಕಾಶಕ್ಕಾಗಿ ನೇಮಿಸುವಾತನೂ, ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ರೇಗಿಸುವಾತನೂ, ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯದಿಂದ ಪ್ರಸಿದ್ಧನೂ ಆಗಿರುವ ಯೆಹೋವನು ಇಂತೆನ್ನುತ್ತಾನೆ,
36 “ಈ ನಿಯಮಗಳು ನನ್ನ ಸನ್ನಿಧಿಯಿಂದ ಯಾವಾಗ ಇಲ್ಲದೆ ಹೋಗುವುವೋ, ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತುಹೋಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.
೩೬“ಈ ಕಟ್ಟಳೆಗಳು ನನ್ನ ಪರಾಂಬರಿಕೆಗೆ ಬಾರದೆ ತೊಲಗಿ ಹೋದರೆ, ಆಗ ಇಸ್ರಾಯೇಲ್ ಸಂತಾನವು ನನ್ನ ಪರಾಂಬರಿಕೆಗೆ ಒಳಗಾಗದೆ ಎಂದಿಗೂ ಜನಾಂಗವಾಗದೆ ಹೋಗುವುದು.”
37 ಹಾಗೆಯೇ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಮೇಲಿನ ಆಕಾಶಮಂಡಲವನ್ನು ಅಳೆಯಬಹುದಾದರೆ, ಕೆಳಗಿನ ಭೂಮಂಡಲದ ವಿಸ್ತಾರವನ್ನು ಪರೀಕ್ಷಿಸಬಹುದಾದರೆ, ಆಗ ಮಾತ್ರ ಅದರ ದುಷ್ಕೃತ್ಯಗಳನ್ನು ಮುನ್ನಿಟ್ಟು, ಇಸ್ರಾಯೇಲ್ ವಂಶವನ್ನು ನಾನು ನಿರಾಕರಿಸಿ ಬಿಡಲು ಸಾಧ್ಯ,” ಎಂದು ಯೆಹೋವ ದೇವರು ಹೇಳುತ್ತಾರೆ.
೩೭ಯೆಹೋವನು, “ಮೇಲೆ ಆಕಾಶಮಂಡಲವನ್ನು ಅಳೆಯಬಹುದಾದರೆ, ಕೆಳಗೆ ಭೂಮಂಡಲದ ಅಸ್ತಿವಾರವನ್ನು ಪರೀಕ್ಷಿಸಬಹುದಾದರೆ ಆಗ ಇಸ್ರಾಯೇಲ್ ವಂಶವು ಮಾಡಿರುವ ಸಕಲ ದುಷ್ಕೃತ್ಯಗಳ ನಿಮಿತ್ತ, ನಾನು ಆ ವಂಶವನ್ನು ನಿರಾಕರಿಸಿಬಿಡುವೆನು” ಎಂದು ಹೇಳುತ್ತಾನೆ.
38 ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ಹನನೇಲನ ಬುರುಜು ಮೊದಲುಗೊಂಡು ಮೂಲೆಯ ಬಾಗಿಲಿನವರೆಗೂ ಪಟ್ಟಣವು ಕರ್ತರಿಗೆ ಕಟ್ಟಲಾಗುವ ದಿನಗಳು ಬರಲಿದೆ.
೩೮ಯೆಹೋವನು, “ಇಗೋ, ಮುಂದಿನ ಕಾಲದಲ್ಲಿ ಈ ಪಟ್ಟಣವು ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಯೆಹೋವನ ಘನತೆಗಾಗಿ ವಿಸ್ತರಿಸುವುದು.
39 ಅಳತೆ ದಾರವು ಅದಕ್ಕೆ ಎದುರಾಗಿ ಗಾರೇಬಿನ ಗುಡ್ಡದ ಮೇಲೆ ನೇರವಾಗಿ ಹೊರಟು, ಗೋಯದವರೆಗೂ ಆವರಿಸಿಕೊಳ್ಳುವುದು.
೩೯ಅಳತೆಯ ನೂಲು ಇನ್ನು ಮೇಲೆ ಗಾರೇಬ್ ಗುಡ್ಡದ ತನಕ ನೆಟ್ಟಗೆ ಎಳೆಯಲ್ಪಟ್ಟು, ಗೋಯದ ಕಡೆಗೆ ತಿರುಗುವುದು.
40 ಹೆಣ ಹೂಣುವ ಮತ್ತು ಬೂದಿ ತುಂಬುವ ಕಣಿವೆಯಿಂದ, ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲಮೂಲೆ, ಇವುಗಳವರೆಗಿರುವ ಪ್ರದೇಶವೆಲ್ಲವೂ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಈ ಪಟ್ಟಣವು ಇನ್ನೆಂದಿಗೂ ನಿರ್ಮೂಲವಾಗದು, ನಾಶವಾಗದು.”
೪೦ಆಗ ಬೂದಿ, ಹೆಣ ಇವುಗಳಿಂದ ಹೊಲಸಾದ ತಗ್ಗೂ ಅಲ್ಲಿಂದ ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆ ಬಾಗಿಲ ಮೂಲೆ ಇವುಗಳ ವರೆಗಿರುವ ಪ್ರದೇಶವೆಲ್ಲವೂ ಯೆಹೋವನಿಗೆ ಪರಿಶುದ್ಧ ಸ್ಥಾನವಾಗುವವು; ಪಟ್ಟಣವು ಇನ್ನು ಮೇಲೆ ಎಂದಿಗೂ ಕೀಳಲ್ಪಡುವುದಿಲ್ಲ, ಕೆಡವಲ್ಪಡುವುದಿಲ್ಲ” ಎನ್ನುತ್ತಾನೆ.