< ಯೆರೆಮೀಯನು 13 >
1 ಯೆಹೋವ ದೇವರು ನನಗೆ, “ನೀನು ಹೋಗಿ, ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆಕೊಟ್ಟರು.
೧ಯೆಹೋವನು ನನಗೆ, “ನೀನು ಹೋಗಿ ನಾರಿನ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ, ನೀರಿನಲ್ಲಿ ನೆನಸಿಡಬೇಡ” ಎಂದು ಅಪ್ಪಣೆಕೊಟ್ಟನು.
2 ನಾನು ಯೆಹೋವ ದೇವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
೨ಆಗ ನಾನು ಯೆಹೋವನ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆನು.
3 ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು,
೩ಆ ಮೇಲೆ ಯೆಹೋವನ ಮಾತು ಎರಡನೆಯ ಬಾರಿ ನನಗೆ ಕೇಳಿ ಬಂತು.
4 ಯೂಫ್ರೇಟೀಸ್ ನದಿಗೆ ಹೋಗಿ ಅದನ್ನು ಅಲ್ಲಿಯ ಬಂಡೆಯ ಸಂದಿಯೊಳಗೆ ಬಚ್ಚಿಡು,” ಎಂಬುದಾಗಿ ಯೆಹೋವ ದೇವರ ಎರಡನೆಯ ಆದೇಶ ನನಗೆ ಬಂದಿತು.
೪ಅವನು ನನಗೆ, “ನೀನು ಕೊಂಡುಕೊಂಡು ಸೊಂಟಕ್ಕೆ ಬಿಗಿದ ನಡುಕಟ್ಟನ್ನು ತೆಗೆದುಕೊಂಡು ಹೊರಟು ಯೂಫ್ರೆಟಿಸ್ ನದಿಗೆ ಹೋಗಿ, ಅದನ್ನು ಅಲ್ಲಿ ಬಂಡೆಯ ಸಂದಿನೊಳಗೆ ಬಚ್ಚಿಡು” ಎಂಬುದಾಗಿ ನುಡಿದನು.
5 ಆಗ ಯೆಹೋವ ದೇವರ ಅಪ್ಪಣೆಯ ಮೇರೆಗೆ ನಾನು ಹೋಗಿ, ಯೂಫ್ರೇಟೀಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
೫ಆಗ ಯೆಹೋವನ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆನು.
6 ಬಹು ದಿನಗಳ ಮೇಲೆ ಯೆಹೋವ ದೇವರು ನನಗೆ, “ಹೊರಡು, ಯೂಫ್ರೇಟೀಸ್ ನದಿಗೆ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
೬ಬಹು ದಿನಗಳ ಮೇಲೆ ಯೆಹೋವನು ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ” ಎಂದು ಹೇಳಿದನು.
7 ಆಗ ನಾನು ಯೂಫ್ರೇಟೀಸ್ ನದಿಗೆ ಹೋಗಿ ಹುಡುಕಿ, ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
೭ನಾನು ಯೂಫ್ರೆಟಿಸ್ ನದಿಗೆ ಹೋಗಿ ಅಗೆದು, ನಾನು ಬಚ್ಚಿಟ್ಟ ಸ್ಥಳದೊಳಗಿಂದ ನಡುಕಟ್ಟನ್ನು ತೆಗೆದೆನು, ಆಹಾ, ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
8 ಆಗ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನೆಂದರೆ,
೮ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
9 “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಈ ಪ್ರಕಾರ ನಾನು ಯೆಹೂದದ ಗರ್ವವನ್ನೂ, ಯೆರೂಸಲೇಮಿನ ಮಹಾ ಗರ್ವವನ್ನು ಕೆಡಿಸುವೆನು.
೯“ಇದು ಯೆಹೋವನಾದ ನನ್ನ ನುಡಿ, ಈ ನಡುಕಟ್ಟಿನಂತೆ ನಾನು ಯೆಹೂದದ ದೊಡ್ಡಸ್ತಿಕೆಯನ್ನೂ ಮತ್ತು ಯೆರೂಸಲೇಮಿನ ಬಲು ದೊಡ್ಡಸ್ತಿಕೆಯನ್ನೂ ಕೆಡಿಸಿಬಿಡುವೆನು.
10 ನನ್ನ ವಾಕ್ಯಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಕಲ್ಪನೆಯಂತೆ ನಡೆದುಕೊಂಡು, ಬೇರೆ ದೇವರುಗಳನ್ನು ಸೇವಿಸುವುದಕ್ಕೂ, ಅವುಗಳನ್ನು ಆರಾಧಿಸುವುದಕ್ಕೂ ಹಿಂಬಾಲಿಸುವ ಈ ದುಷ್ಟಜನರು ಯಾವ ಕೆಲಸಕ್ಕಾದರೂ ಬಾರದ ಈ ನಡುಕಟ್ಟಿನ ಹಾಗಿರುವರು.
೧೦ನನ್ನ ಮಾತುಗಳನ್ನು ಕೇಳದೆ ತಮ್ಮ ಹೃದಯದ ಹಟದಂತೆ ನಡೆದು, ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸುತ್ತಿರುವ ಈ ದುಷ್ಟ ಜನರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಮಾನವಾಗಿರುವರು.
11 ಯಾವ ಪ್ರಕಾರ ಇದು ಮನುಷ್ಯನ ನಡುವಿಗೆ ಹತ್ತಿಕೊಳ್ಳುವುದೋ, ಅದೇ ಪ್ರಕಾರ ನಾನು ಇಸ್ರಾಯೇಲಿನ ಮನೆತನವನ್ನೆಲ್ಲವನ್ನೂ, ಯೆಹೂದದ ಮನೆತನವನ್ನೆಲ್ಲವನ್ನೂ ನನಗೆ ಜನರೂ ಹೆಸರೂ ಸ್ತೋತ್ರವೂ ಮಹಿಮೆಯೂ ಆಗುವ ಹಾಗೆ ನನಗೆ ಹತ್ತಿಕೊಳ್ಳುವಂತೆ ಮಾಡಿದೆನು, ಆದರೆ ಅವರು ಕೇಳದೇ ಹೋದರು ಎಂದು ಯೆಹೋವ ದೇವರ ಅನ್ನುತ್ತಾರೆ.’
೧೧ಸಮಸ್ತ ಇಸ್ರಾಯೇಲ್ ವಂಶವೂ ಮತ್ತು ಸಕಲ ಯೆಹೂದ ವಂಶವೂ ನನ್ನ ಪ್ರಜೆಯಾಗಿದ್ದು ನನಗೆ ಹೆಸರೂ, ಸ್ತೋತ್ರವೂ, ಮಹಿಮೆಯೂ ಆಗಿರಲೆಂದು ನಡುಕಟ್ಟನ್ನು ಸೊಂಟಕ್ಕೆ ಬಿಗಿದಿರುವಂತೆ ಇವರನ್ನು ಬಿಗಿದುಕೊಂಡಿದ್ದೇನೆ; ಆದರೂ ಇವರು ಕೇಳದೆ ಹೋದರು ಎಂದು ಯೆಹೋವನು ನುಡಿಯುತ್ತಾನೆ” ಎಂಬುದೇ.
12 “ಆದ್ದರಿಂದ ನೀನು ಅವರಿಗೆ ಈ ಮಾತನ್ನು ಹೇಳಬೇಕು: ‘ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವು. ಆಗ ಅವರು ನಿನಗೆ ಗಡಿಗೆಗಳೆಲ್ಲಾ ದ್ರಾಕ್ಷಾರಸದಿಂದ ತುಂಬಿರುವುವೆಂದು ನಮಗೆ ಚೆನ್ನಾಗಿ ತಿಳಿಯಿತಲ್ಲವೋ,’ ಎಂದು ನಿನಗೆ ಹೇಳುವರು.
೧೨“ಹೀಗಿರಲು ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು” ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ಹೇಳುವ ಮಾತನ್ನು ಕೇಳಿರಿ ಎಂದು ನೀನು ಅವರಿಗೆ ಸಾರು; ಆಗ ಅವರು ನಿನಗೆ, “ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು ನಮಗೆ ಗೊತ್ತಿಲ್ಲವೋ” ಎಂದು ಹೇಳುವರು.
13 ಆಗ ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಯೆಹೋವ ದೇವರು ಹೀಗೆ ಹೇಳುತ್ತಾರೆ, ಇಗೋ, ನಾನು ಈ ದೇಶದ ನಿವಾಸಿಗಳನ್ನೆಲ್ಲಾ ದಾವೀದನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ನಿವಾಸಿಗಳೆಲ್ಲರನ್ನೂ ಅಮಲಿನಿಂದ ತುಂಬಿಸುವೆನು.
೧೩ಆಗ ನೀನು ಅವರಿಗೆ, “ಯೆಹೋವನ ಈ ಮಾತನ್ನು ಕೇಳಿರಿ, ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ಸಕಲ ನಿವಾಸಿಗಳನ್ನೂ ಅಂತು ದೇಶದ ಜನರೆಲ್ಲರನ್ನೂ,
14 ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು ಹಾಗೂ ನಾಶಮಾಡದೆ ಬಿಡೆನು,’ ಇದು ಯೆಹೋವ ದೇವರಾದ ನನ್ನ ನುಡಿ.”
೧೪ನಾನು ಅಮಲಿನಿಂದ ತುಂಬಿಸಿ ಹಿರಿಕಿರಿಯರಾದ ಸಮಸ್ತರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ನಾನು ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ನಾಶಮಾಡದೆ ಬಿಡೆನು” ಇದು ಯೆಹೋವನ ನುಡಿ.
15 ಕೇಳಿರಿ, ಕಿವಿಗೊಡಿರಿ, ಗರ್ವಪಡಬೇಡಿರಿ; ಏಕೆಂದರೆ ಯೆಹೋವ ದೇವರು ಮಾತನಾಡಿದ್ದಾರೆ.
೧೫ಕಿವಿಗೊಟ್ಟು ಕೇಳಿರಿ, ಹೆಮ್ಮೆಪಡಬೇಡಿರಿ; ಯೆಹೋವನೇ ಮಾತನಾಡಿದ್ದಾನೆ.
16 ಅವರು ಕತ್ತಲೆಯನ್ನು ತರುವುದಕ್ಕಿಂತ ಮೊದಲು ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವುದಕ್ಕಿಂತ ಮುಂಚೆ ನಿಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ. ನೀವು ಬೆಳಕನ್ನು ನಿರೀಕ್ಷಿಸಿದ್ದೀರಿ. ಆದರೆ ಅವರು ಗಾಡಾಂಧಕಾರದ ಗುಡ್ಡಗಳನ್ನು ತಂದಾರು.
೧೬ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಿರಿ; ಇಲ್ಲದಿದ್ದರೆ ಸ್ವಲ್ಪ ಕಾಲದೊಳಗೆ ಆತನು ಕತ್ತಲನ್ನು ಉಂಟುಮಾಡುವನು. ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವವು; ನೀವು ಬೆಳಕನ್ನು ನಿರೀಕ್ಷಿಸುತ್ತಿರುವಾಗ ಆತನು ಅದನ್ನು ಮರಣಾಂಧಕಾರದ ಕಾರ್ಗತ್ತಲನ್ನಾಗಿ ಮಾಡುವನು.
17 ನೀವು ಕೇಳದಿದ್ದರೆ, ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು, ಯೆಹೋವ ದೇವರ ಮಂದೆಯು ಸೆರೆಯಾಗಿ ಹೋದದ್ದರಿಂದ ಬಹಳವಾಗಿ ಅಳುವೆನು. ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.
೧೭ನೀವು ಕೇಳದಿದ್ದರೆ ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು. ಯೆಹೋವನ ಮಂದೆಯು ಸೆರೆಯಾಗಿ ಹೋದುದರಿಂದ ಬಹಳವಾಗಿ ಅಳುವೆನು, ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.
18 ರಾಜನಿಗೂ ರಾಜಮಾತೆಗೂ ಹೀಗೆ ಹೇಳಿರಿ, “ನೆಲದಲ್ಲಿ ಕೂತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ.”
೧೮ರಾಜನಿಗೂ ಮತ್ತು ರಾಜಮಾತೆಗೂ, “ನೆಲದಲ್ಲಿ ಕುಳಿತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ” ಎಂದು ಹೇಳಿರಿ.
19 ದಕ್ಷಿಣ ದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ. ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ.
೧೯ದಕ್ಷಿಣ ಯೆಹೂದ ದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ; ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ.
20 ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು, ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?
೨೦ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡೂ ಎಲ್ಲಿ?
21 ನಿಮ್ಮ ವಿಶೇಷ ಮಿತ್ರರಾಗಿ ನೀವು ಬೆಳೆಸಿದವರನ್ನು ಯೆಹೋವ ದೇವರು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳೋ ಎಂಬಂತೆ ಹಿಡಿಯುವುದಲ್ಲವೆ?
೨೧ನಿನ್ನೊಡನೆ ಗೆಳೆಯರಂತೆ ಬಾಳಲು ನೀನು ಅಭ್ಯಾಸಮಾಡಿಸಿದವರನ್ನು ಯೆಹೋವನು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳನ್ನೋ ಎಂಬಂತೆ ಹಿಡಿಯುವುದಲ್ಲವೇ.
22 ಒಂದು ವೇಳೆ, “ಇವು ನನಗೆ ಏಕೆ ಸಂಭವಿಸಿದವು?” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ನೆರಿಗೆಯು ಕೀಳಲಾಗುವುದು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.
೨೨“ಇವು ನನಗೆ ಏಕೆ ಸಂಭವಿಸಿದವು” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ಉಡುಗೆಯು ಕೀಳಲ್ಪಟ್ಟು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದುದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.
23 ಕೂಷ್ಯನು ತನ್ನ ಚರ್ಮವನ್ನೂ, ಚಿರತೆಯು ತನ್ನ ಮಚ್ಚೆಯನ್ನೂ ಮಾರ್ಪಡಿಸುವುದಕ್ಕಾಗುವುದೋ? ಹಾಗಾದರೆ ಕೆಟ್ಟತನದ ಅಭ್ಯಾಸವುಳ್ಳವರಾದ ನೀವೂ ಸಹ ಒಳ್ಳೆಯದನ್ನು ಮಾಡುವುದಕ್ಕಾದೀತೇ?
೨೩ಕೂಷ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸಲು ಸಾಧ್ಯವೇ? ಹೀಗಾದರೆ ದುಷ್ಟತನದಲ್ಲಿ ಶಿಕ್ಷಿತರಾದ ನೀವು ಶಿಷ್ಟತನದಲ್ಲಿ ನಡೆಯಬಹುದು.
24 “ಅಡವಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತೆ ಅವರನ್ನು ಚದರಿಸುವೆನು.
೨೪ಆದಕಾರಣ ಬಿರುಗಾಳಿಯು ಬಡಿದುಕೊಂಡು ಹೋಗುವ ಒಣ ಹುಲ್ಲನ್ನೋ ಎಂಬಂತೆ ನಾನು ಅವರನ್ನು ಚದರಿಸಿಬಿಡುವೆನು.
25 ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು,” ಎಂದು ಯೆಹೋವ ದೇವರು ಹೇಳುತ್ತಾರೆ. “ಏಕೆಂದರೆ ನನ್ನನ್ನು ಮರೆತುಬಿಟ್ಟು, ಸುಳ್ಳು ದೇವರುಗಳಲ್ಲಿ ಭರವಸೆಯಿಟ್ಟಿದ್ದೀಯೇ.
೨೫ನೀನು ನನ್ನನ್ನು ಮರೆತು ಸುಳ್ಳನ್ನು ನಂಬಿದ್ದರಿಂದ ಇದೇ ನಿನ್ನ ಪಾಲು, ಇದೇ ನಾನು ನಿನಗೆ ಅಳೆದುಕೊಟ್ಟ ಭಾಗ ಎಂದು ಯೆಹೋವನು ನುಡಿಯುತ್ತಾನೆ.
26 ಆದ್ದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ, ನಿನ್ನ ಮುಖದ ಮೇಲೆ ಎತ್ತುವೆನು.
೨೬ನಿನ್ನ ಉಡುಗೆಯನ್ನು ನಿನ್ನ ಕಣ್ಣಮುಂದೆಯೇ ಕೀಳಿಸುವೆನು, ನಿನಗೆ ಅವಮಾನವಾಗುವುದು.
27 ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಕಾಮುಕತನವನ್ನು, ನಿನ್ನ ಕೀಳಾದ ವೇಶ್ಯತನವನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯ ಕಾರ್ಯಗಳನ್ನು ಕಂಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ಇನ್ನೆಷ್ಟು ಕಾಲ ನೀನು ಅಶುದ್ಧಳಾಗಿರುವೆ?”
೨೭ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಹೇಕಾರಗಳನ್ನು, ನಿನ್ನ ವ್ಯಭಿಚಾರದ ನಡತೆಯನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲ ಬೇಕು?