< ಯೆಶಾಯನು 8 >
1 ಯೆಹೋವ ದೇವರು, “ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಸಾಮಾನ್ಯ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್, ಎಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ ಎಂದು ಬರೆ,” ಎಂಬುದಾಗಿ ನನಗೆ ಹೇಳಿದರು.
೧ಆ ಮೇಲೆ ಯೆಹೋವನು ನನಗೆ, “ದೊಡ್ಡ ಹಲಗೆಯನ್ನು ತೆಗೆದುಕೊಂಡು ಸಾಧಾರಣ ಲೇಖನಿಯಿಂದಲೇ ವಿಷಯ ಸೂಚಕವಾದ ಈ ಪದವನ್ನು ಬರೆ, ‘ಮಹೇರ್ ಶಾಲಾಲ್ ಹಾಷ್ ಬಜ್’ ಅಂದರೆ ಸೂರೆಗೆ ಅತುರ, ಕೊಳ್ಳೆಗೆ ಅವಸರ.
2 ನಾನು ಯಾಜಕನಾದ ಊರೀಯನನ್ನೂ ಯೆಬೆರೆಕ್ಯನ ಮಗನಾದ ಜೆಕರ್ಯನನ್ನೂ ನಂಬಿಗಸ್ತ ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
೨ನೀನು ಹೀಗೆ ಬರೆದದ್ದಕ್ಕೆ ಯಾಜಕನಾದ ಊರೀಯ, ಯೆಬೆರೆಕ್ಯನ ಮಗನಾದ ಜೆಕರ್ಯ ಈ ನಂಬಿಗಸ್ತರಾದ ಸಾಕ್ಷಿಗಳನ್ನು ಕರೆಯುವೆನು” ಎಂದು ಹೇಳಿದನು.
3 ಅನಂತರ ನಾನು ಪ್ರವಾದಿನಿಯಾದ ನನ್ನ ಹೆಂಡತಿಯನ್ನು ಕೂಡಲು, ಆಕೆಯು ಗರ್ಭಧರಿಸಿ ಒಬ್ಬ ಗಂಡುಮಗುನ್ನು ಹೆತ್ತಳು. ಆಗ ಯೆಹೋವ ದೇವರು ನನಗೆ, “ಆ ಮಗುವಿಗೆ, ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು, ಎಂದು ಹೇಳಿದರು.
೩ಅನಂತರ, “ನಾನು ನನ್ನ ಹೆಂಡತಿಯೊಡನೆ ಸಂಗಮಿಸಲು ಆಕೆಯು ಬಸುರಾಗಿ ಗಂಡು ಮಗುವನ್ನು ಹೆತ್ತಳು. ಆಗ ಯೆಹೋವನು ನನಗೆ, ಅದಕ್ಕೆ ‘ಮಹೇರ್ ಶಾಲಾಲ್ ಹಾಷ್ ಬಜ್ ಎಂದು ಹೆಸರಿಡು’ ಎಂದು ಹೇಳಿದನು.
4 ಏಕೆಂದರೆ ಆ ಮಗುವು, ‘ಅಪ್ಪಾ’ ಅಥವಾ ‘ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮುಂಚೆ ಅಸ್ಸೀರಿಯದ ಅರಸನು ದಮಸ್ಕದ ಆಸ್ತಿಯನ್ನೂ ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದರು.
೪ಆ ಮಗುವು, ‘ಅಪ್ಪಾ, ಅಮ್ಮಾ’ ಎಂದು ಕೂಗಬಲ್ಲವನಾಗುವುದಕ್ಕಿಂತ ಮೊದಲೇ ಅಶ್ಶೂರದ ಅರಸನು ದಮಸ್ಕದ ಆಸ್ತಿಯನ್ನೂ, ಸಮಾರ್ಯದ ಸೂರೆಯನ್ನೂ ತೆಗೆದುಕೊಂಡು ಹೋಗುವನು” ಎಂದು ಹೇಳಿದನು.
5 ಯೆಹೋವ ದೇವರು ಮತ್ತೊಮ್ಮೆ ನನಗೆ,
೫ಯೆಹೋವನು ಮತ್ತೊಂದಾವರ್ತಿ ನನಗೆ ಹೀಗೆ ನುಡಿದನು,
6 “ಈ ಜನರು ಮೆಲ್ಲಗೆ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ ರೆಮಲ್ಯನ ಮಗನನ್ನೂ ನೆಚ್ಚಿಕೊಂಡು ಮೆರೆದಿದ್ದರಿಂದ,
೬“ಈ ಜನರು ನಿಧಾನವಾಗಿ ಹರಿಯುವ ಸಿಲೋವದ ನೀರನ್ನು ತ್ಯಜಿಸಿ, ರೆಚೀನನನ್ನೂ, ರೆಮಲ್ಯನ ಮಗನನ್ನೂ ನಂಬಿ ಮೆರೆದಿದ್ದರಿಂದ,
7 ಯೆಹೋವ ದೇವರಾದ ನಾನು ಎಲ್ಲಾ ಪ್ರತಾಪದಿಂದ ಕೂಡಿದ ಅಸ್ಸೀರಿಯದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವೆನು. ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
೭ಇಗೋ ಕರ್ತನು ಪೂರ್ಣ ಪ್ರತಾಪದಿಂದ ಕೂಡಿದ ಅಶ್ಶೂರದ ಅರಸನೆಂಬ ಮಹಾನದಿಯ ರಭಸವಾದ ದೊಡ್ಡ ಪ್ರವಾಹವನ್ನು ಇವರ ಮೇಲೆ ಬರಮಾಡುವನು. ಅದು ತನ್ನ ಕಾಲುವೆಗಳನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ,
8 ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುಯೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವುವು.”
೮ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶವನ್ನೆಲ್ಲಾ ಆವರಿಸಿಕೊಳ್ಳುವುದು.”
9 ಜನಾಂಗಗಳೇ, ನೀವು ಯುದ್ಧವನ್ನು ಘೋಷಿಸಿರಿ, ಆದರೂ ಚದರಿಹೋಗುವಿರಿ! ಎಲ್ಲಾ ದೂರ ದೇಶದವರೇ ಕಿವಿಗೊಡಿರಿ. ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ! ನಡುಕಟ್ಟಿಕೊಳ್ಳಿರಿ, ಆದರೂ ಚದರಿಹೋಗುವಿರಿ!
೯ಜನಾಂಗಗಳೇ, ನೀವು ಒಟ್ಟಾಗಿ ಸೇರಿಕೊಳ್ಳಿರಿ, ಇಲ್ಲದಿದ್ದರೆ ನೀವು ಒಡೆದು ತುಂಡಾಗುವಿರಿ; ದೂರದೇಶಿಯರೇ, ಕಿವಿಗೊಡಿರಿ; ನಡುಕಟ್ಟಿರಿ, ಭಂಗಪಡುವಿರಿ; ಹೌದು ನಡುಕಟ್ಟಿರಿ, ಭಂಗಪಡುವಿರಿ.
10 ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದು ಹೋಗುವುದು, ನಿಮ್ಮ ಯೋಜನೆಯನ್ನು ಪ್ರಸ್ತಾಪಿಸಿರಿ, ಆದರೆ ಅದು ನಿಲ್ಲುವುದಿಲ್ಲ, ಏಕೆಂದರೆ ದೇವರು ನಮ್ಮ ಸಂಗಡ ಇದ್ದಾರೆ.
೧೦ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದುಹೋಗುವುದು. ಅಪ್ಪಣೆ ಮಾಡಿರಿ, ಅದು ನಿಲ್ಲುವುದಿಲ್ಲ. ಏಕೆಂದರೆ ದೇವರು ನಮ್ಮ ಕೂಡ ಇದ್ದಾನಷ್ಟೆ.
11 ನಾನು ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ಯೆಹೋವ ದೇವರು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ನನಗೆ,
೧೧ಯೆಹೋವನು ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು, ಈ ಜನರ ಮಾರ್ಗದಲ್ಲಿ ನಡೆಯಬಾರದೆಂದು ನನಗೆ ಉಪದೇಶಿಸುತ್ತಾ ಹೀಗೆಂದನು,
12 “ಇವರು ಯಾವುದನ್ನು ಒಳಸಂಚು ಎಂದು ಹೇಳುತ್ತಾರೋ, ನೀವು ಅದನ್ನು ಒಳಸಂಚು ಎಂದು ಹೇಳಬೇಡಿರಿ. ಅವರ ಭಯಕ್ಕೆ ನೀವು ಭಯಪಡಬೇಡಿರಿ, ಇಲ್ಲವೆ ಹೆದರಬೇಡಿರಿ.
೧೨“ಇವರು ಯಾವುದನ್ನು ಒಪ್ಪಂದವೆನ್ನುತ್ತಾರೋ ನೀವು ಅದನ್ನು ಒಪ್ಪಂದವೆನ್ನಬೇಡಿರಿ; ಇವರು ಯಾವುದಕ್ಕೆ ಹೆದರುತ್ತಾರೋ ನೀವು ಅದಕ್ಕೆ ಹೆದರಬೇಡಿರಿ, ನಡುಗಬೇಡಿರಿ.
13 ಸೇನಾಧೀಶ್ವರ ಯೆಹೋವ ದೇವರನ್ನೇ ಪ್ರತಿಷ್ಠೆ ಪಡಿಸಿಕೊಳ್ಳಿರಿ; ನೀವು ಭಯಪಡಬೇಕಾದುದು ಅವರಿಗೇ, ನೀವು ಹೆದರಬೇಕಾಗಿರುವುದು ಅವರಿಗೇ.
೧೩ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೆ ಹೆದರಿಕೊಳ್ಳಿರಿ, ನಡುಗಿರಿ.
14 ಅವರೇ ನಿಮಗೆ ಪರಿಶುದ್ಧ ಸ್ಥಳವಾಗಿರುವರು. ಆದರೆ ಇಸ್ರಾಯೇಲ್ ಮತ್ತು ಯಹೂದ ಎರಡು ಮನೆಗಳಿಗೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ, ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಬೋನೂ ಆಗಿರುವರು.
೧೪ಆತನು ಆಶ್ರಯವಾಗುವನು; ಆದರೆ ಇಸ್ರಾಯೇಲಿನ ಎರಡು ಮನೆತನಕ್ಕೆ ಎಡವುವ ಕಲ್ಲೂ, ಮುಗ್ಗರಿಸುವ ಬಂಡೆಯೂ ಯೆರೂಸಲೇಮಿನ ನಿವಾಸಿಗಳಿಗೆ ಬಲೆಯೂ, ಪಂಜರವಾಗುವುದು.
15 ಅವರಲ್ಲಿ ಅನೇಕರು ಎಡವಿಬೀಳುವರು, ಮುಗ್ಗರಿಸಿ ಮೂಳೆ ಮುರಿದುಕೊಳ್ಳುವರು, ಬಲೆಗೆ ಸಿಕ್ಕಿ ಬೀಳುವರು.”
೧೫ಅವರಲ್ಲಿ ಅನೇಕರು ಎಡವಿ ಬಿದ್ದು ಭಂಗಪಡುವರು, ಬಲೆಗೆ ಸಿಕ್ಕಿ ವಶವಾಗುವರು.”
16 ಸಾಕ್ಷಿಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ದೇವರ ಶಿಕ್ಷಣವನ್ನು ಮುದ್ರಿಸು.
೧೬ಬೋಧನೆಯನ್ನು ಕಟ್ಟಿಡು, ನನ್ನ ಶಿಷ್ಯರೊಳಗೆ ಉಪದೇಶವನ್ನು ಮುಚ್ಚಿ ಮುದ್ರಿಸು.
17 ಯಾಕೋಬಿನ ವಂಶದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವ ದೇವರಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು. ನಾನು ದೇವರ ಮೇಲೆ ಭರವಸೆ ಇಡುವೆನು.
೧೭ಯಾಕೋಬಿನ ಮನೆತನದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವನಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು.
18 ಇಗೋ, ನಾನೂ ಯೆಹೋವ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರ ಯೆಹೋವ ದೇವರಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲಿನಲ್ಲಿದ್ದೇವೆ.
೧೮ಆಹಾ, ನಾನೂ, ನನಗೆ ಯೆಹೋವನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಯೆಹೋವನಿಂದ ಉಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲರ ಮಧ್ಯದಲ್ಲಿದ್ದೇವೆ.
19 ಲೊಚಗುಟ್ಟುವ, ಪಿಸುಮಾತಾಡುವ ಮಂತ್ರಗಾರರನ್ನೂ; ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ, ಜನರು ತಮ್ಮ ದೇವರನ್ನೇ ಹುಡುಕುವುದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವುದುಂಟೋ?
೧೯“ಗುಣಗುಟ್ಟುವ, ಪಿಸುಮಾತನಾಡುವ, ಪ್ರೇತವಿಚಾರಕರನ್ನೂ, ಬೇತಾಳಿಕರನ್ನೂ ಆಶ್ರಯಿಸಿರಿ” ಎಂದು ಒಂದು ವೇಳೆ ನಿಮಗೆ ಹೇಳಾರು, “ಜನರು ತಮ್ಮ ದೇವರನ್ನೇ ಆಶ್ರಯಿಸಬಾರದೋ? ಜೀವಿತರಿಗಾಗಿ ಸತ್ತವರಲ್ಲಿ ವಿಚಾರಿಸುವುದು ಯುಕ್ತವೋ?
20 ದೇವರ ಶಿಕ್ಷಣ ಮತ್ತು ಎಚ್ಚರಿಸುವ ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಒಂದು ವೇಳೆ ಅವರು ಹೇಳದಿದ್ದರೆ, ಅವರಲ್ಲಿ ಮುಂಜಾವಿನ ಬೆಳಕು ಮೂಡಿಬರುವುದಿಲ್ಲ.
೨೦ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ.
21 ಅವರು ಘೋರಕಷ್ಟಕ್ಕೊಳಗಾಗಿ ಹಸಿದು ದೇಶದಲ್ಲಿ ಅಲೆಯುವರು. ಅವರು ಹಸಿದಾಗ ರೇಗಿಕೊಂಡು ತಮ್ಮ ರಾಜನನ್ನೂ, ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
೨೧ಅವರು ಘೋರ ಕಷ್ಟಕ್ಕೊಳಗಾಗಿ ಹಸಿವೆಯಿಂದ ದೇಶದಲ್ಲಿ ಅಲೆಯುವರು. ಅವರು ಹಸಿದಾಗ ಸಿಟ್ಟುಗೊಂಡು ತಮ್ಮ ಅರಸನನ್ನೂ, ತಮ್ಮ ದೇವರನ್ನೂ ಶಪಿಸಿ ಮೇಲಕ್ಕೆ ನೋಡುವರು.
22 ಅವರು ಭೂಮಿಯನ್ನು ದೃಷ್ಟಿಸಿದರೂ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು, ಕಾರ್ಗತ್ತಲೆಗೆ ಅವರನ್ನು ದೂಡಲಾಗುವುದು.
೨೨ಮೇಲಕ್ಕೆ ಕಣ್ಣೆತ್ತಿದ್ದರೂ, ಭೂಮಿಯನ್ನು ದೃಷ್ಟಿಸಿದರೂ ಇಗೋ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು. ಕಾರ್ಗತ್ತಲೆಗೆ ತಳ್ಳಲ್ಪಡುವರು.