< ಯೆಶಾಯನು 63 >

1 ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? “ನೀತಿಯನ್ನು ಘೋಷಿಸುವವನೂ, ರಕ್ಷಿಸಲು ಬಲಿಷ್ಠನೂ ನಾನೇ.”
ಆಹಾ, ರಕ್ತವರ್ಣದ ಉಡುಪನ್ನಿಟ್ಟು, ಘನವಸ್ತ್ರಗಳನ್ನು ಧರಿಸಿಕೊಂಡು, ಮಹಾಶೌರ್ಯಯುಕ್ತನಾಗಿ ಮೆರೆಯುತ್ತಾ, ಎದೋಮಿನ ಬೊಚ್ರದಿಂದ ಬರುವ ಇವನು ಯಾರು? ಸತ್ಯಾನುಸಾರವಾಗಿ ಮಾತನಾಡುವವನು, ರಕ್ಷಿಸಲು ಸಮರ್ಥನು ಆದ ನಾನೇ.
2 ನಿನ್ನ ವಸ್ತ್ರಗಳು ಏಕೆ ಕೆಂಪಾದವು? ನಿನ್ನ ಬಟ್ಟೆಗಳು ಏಕೆ ದ್ರಾಕ್ಷಿಯನ್ನು ತುಳಿಯುವವನ ಹಾಗಿವೆ?
ನಿನ್ನ ಉಡುಪು ಏಕೆ ಕೆಂಪಾಗಿದೆ, ನಿನ್ನ ವಸ್ತ್ರಗಳು ದ್ರಾಕ್ಷಿಯನ್ನು ತುಳಿಯುವವನ ಬಟ್ಟೆಯ ಹಾಗಿರುವುದು ಏಕೆ?
3 “ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ;
ನಾನೊಬ್ಬನೇ ದ್ರಾಕ್ಷಿಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ತುಳಿದುಹಾಕಿದೆನು; ಅವರ ಜೀವಸತ್ವ ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಲಿನ ಮಾಡಿಕೊಂಡೆನು.
4 ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. ನಾನು ವಿಮೋಚಿಸಿದವರ ವರುಷವು ಬಂತು.
ಏಕೆಂದರೆ ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಸಿದ್ಧವಾಗಿತ್ತು, ನನ್ನ ಜನರನ್ನು ವಿಮೋಚಿಸುವ ವರ್ಷವು ಒದಗಿತ್ತು.
5 ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು. ಆಗ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನು ಉಂಟುಮಾಡಿತು. ನನ್ನ ಕೋಪವೇ ನನಗೆ ಆಧಾರವಾಯಿತು.
ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, ಯಾವ ಬೆಂಬಲವೂ ಇಲ್ಲದ್ದನ್ನು ಕಂಡು ಸ್ತಬ್ಧನಾದೆನು; ಆಗ ನನ್ನ ಸ್ವಹಸ್ತವೇ ನನಗೆ ರಕ್ಷಣಾಸಾಧನವಾಯಿತು, ನನ್ನ ರೌದ್ರವೇ ನನಗೆ ಆಧಾರವಾಯಿತು.
6 ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.”
ನನ್ನ ಕೋಪದಿಂದ ಜನಾಂಗಗಳನ್ನು ತುಳಿದು ರೋಷವೇರಿದವನಾಗಿ, ಅವುಗಳನ್ನು ಚೂರುಚೂರು ಮಾಡಿ ನೆಲದ ಮೇಲೆ ಅವುಗಳ ಸಾರವನ್ನು ಸುರಿಸಿದೆನು.
7 ಯೆಹೋವ ದೇವರು ನಮಗೆ ಮಾಡಿದ್ದೆಲ್ಲದರ ಪ್ರಕಾರ, ಯೆಹೋವ ದೇವರ ಪ್ರೀತಿ ಕೃಪೆಗಳನ್ನೂ, ಯೆಹೋವ ದೇವರ ಕಾರ್ಯಗಳನ್ನು ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು. ಆತನು ತನ್ನ ಅಂತಃಕರುಣೆಯ ಪ್ರಕಾರವೂ, ತನ್ನ ಕೃಪೆಯ ಮಹಾ ಒಳ್ಳೆಯತನದ ಪ್ರಕಾರವೂ, ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ.
ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಮತ್ತು ಸ್ತುತ್ಯಕೃತ್ಯಗಳನ್ನು, ಆತನು ಕನಿಕರದಿಂದಲೂ, ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು.
8 ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು.
“ನಿಜವಾಗಿ ಇವರು ನನ್ನ ಜನರು, ನನ್ನ ಮಕ್ಕಳು, ಮೋಸ ಮಾಡಲಾರರು” ಎಂದು ಆತನು ಅಂದುಕೊಂಡು ಅವರಿಗೆ ರಕ್ಷಕನಾದನು.
9 ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.
10 ಆದರೆ ಅವರು ತಿರುಗಿಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು.
೧೦ಅವರಾದರೋ ಎದುರುಬಿದ್ದು ಆತನ ಪವಿತ್ರಾತ್ಮವನ್ನು ದುಃಖಪಡಿಸಿದರು; ಆದುದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿದನು.
11 ಆಗ ಆತನು ಪೂರ್ವಕಾಲದ ದಿವಸಗಳನ್ನೂ, ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು “ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? ಅವರ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
೧೧ಆಗ ಆತನ ಜನರು ಪುರಾತನವಾದ ಮೋಶೆಯ ಕಾಲವನ್ನು ಜ್ಞಾಪಕಮಾಡಿಕೊಂಡು ಹೀಗೆಂದರು, “ತನ್ನ ಜನವೆಂಬ ಮಂದೆಯನ್ನು ಕುರುಬರ ಸಹಿತ ಸಮುದ್ರದೊಳಗಿಂದ ಮೇಲಕ್ಕೆ ಬರಮಾಡಿದಾತನು ಎಲ್ಲಿ?
12 ಮೋಶೆಯ ಬಲಗೈಯ ಮುಖಾಂತರ ತನ್ನ ಬಲವಾದ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡೆಸಿದವನೂ, ತನಗೆ ನಿತ್ಯವಾದ ಹೆಸರನ್ನು ಉಂಟುಮಾಡುವ ಹಾಗೆ ಅವರ ಮುಂದೆ ಜನರಾಶಿಯನ್ನೂ ಇಬ್ಬಾಗಿಸಿದವನು ಎಲ್ಲಿ?
೧೨ಅವರ ಮಧ್ಯದಲ್ಲಿ ತನ್ನ ಪವಿತ್ರಾತ್ಮವನ್ನಿರಿಸಿ, ಮೋಶೆಯ ಬಲಗೈಯೊಂದಿಗೆ ತನ್ನ ಘನಹಸ್ತವನ್ನೂ ಮುಂದುವರೆಸುತ್ತಾ ತನ್ನ ಹೆಸರು ಶಾಶ್ವತವಾಗಿರಬೇಕೆಂದು ಅವರೆದುರಿಗೆ ಜಲರಾಶಿಯನ್ನು ಇಬ್ಭಾಗ ಮಾಡಿದಾತನು ಎಲ್ಲಿ?
13 ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡೆಸಿದವನು ಎಲ್ಲಿ?”
೧೩ಸಾಗರದ ತಳಕ್ಕೆ ಅವರನ್ನು ನಡೆಸಿದಾತನು ಎಲ್ಲಿ? ಕುದುರೆಯು ಮೈದಾನದಲ್ಲಿ ನಡೆಯುವ ಪ್ರಕಾರ ಅವರು ಮುಗ್ಗರಿಸಲಿಲ್ಲ.
14 ಪಶುವು ತಗ್ಗಿಗೆ ಇಳಿಯುವ ಪ್ರಕಾರ, ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ.
೧೪ತಗ್ಗಿಗೆ ಇಳಿಯುವ ದನಗಳೋಪಾದಿಯಲ್ಲಿ ಯೆಹೋವನ ಆತ್ಮವು ಅವರನ್ನು ವಿಶ್ರಾಂತಿಯ ಸ್ಥಾನಕ್ಕೆ ಕರೆತಂದಿತು; ನಿನ್ನ ನಾಮವನ್ನು ಘನಪಡಿಸಿಕೊಳ್ಳುವುದಕ್ಕಾಗಿ ನಿನ್ನ ಜನರನ್ನು ಹೀಗೆ ನಡೆಸಿದಿ.
15 ಆಕಾಶದಿಂದ ಕೆಳಗೆ ನೋಡಿರಿ, ನಿಮ್ಮ ಪವಿತ್ರವೂ ಮಹಿಮೆಯೂ ಆದ ನಿಮ್ಮ ಸಿಂಹಾಸನದಿಂದ ದೃಷ್ಟಿಸಿ ನೋಡಿರಿ. ನಿಮ್ಮ ಆಸಕ್ತಿಯೂ, ನಿಮ್ಮ ಪರಾಕ್ರಮವೂ, ನಿಮ್ಮ ಹೃದಯದ ಘೋಷವೂ, ನಮ್ಮ ವಿಷಯವಾದ ನಿಮ್ಮ ಕರುಣೆ ಕನಿಕರಗಳೂ ಎಲ್ಲಿ? ಬಿಗಿಹಿಡಿದುಕೊಂಡಿದ್ದೀರೋ?
೧೫ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು; ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ.
16 ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ
೧೬ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ.
17 ಯೆಹೋವ ದೇವರೇ, ಏಕೆ ನಮ್ಮನ್ನು ನಿಮ್ಮ ಮಾರ್ಗಗಳಿಂದ ತಪ್ಪಿಹೋಗುವಂತೆ ಅನುಮತಿಸಿದ್ದೀರಿ? ಏಕೆ ನಮ್ಮ ಹೃದಯವನ್ನು ನಿಮಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀರಿ? ನಿಮ್ಮ ಸೇವಕರಿಗೋಸ್ಕರವೂ, ನಿಮ್ಮ ಬಾಧ್ಯರಾಗಿರುವ ಗೋತ್ರಗಳ ನಿಮಿತ್ತ ನೀವು ಹಿಂದಿರುಗಿರಿ.
೧೭ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು.
18 ಸ್ವಲ್ಪಕಾಲ ಮಾತ್ರ ನಿಮ್ಮ ಪರಿಶುದ್ಧ ಜನರು ಅದನ್ನು ಸ್ವಾಧೀನಮಾಡಿಕೊಂಡರು. ನಮ್ಮ ಶತ್ರುಗಳು ನಿಮ್ಮ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ.
೧೮ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ.
19 ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ.
೧೯ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ.

< ಯೆಶಾಯನು 63 >