< ಯೆಶಾಯನು 6 >
1 ಅರಸನಾದ ಉಜ್ಜೀಯನು ಮರಣ ಹೊಂದಿದ ವರುಷದಲ್ಲಿ ಯೆಹೋವ ದೇವರು ಉನ್ನತೋನ್ನತವಾಗಿ ಸಿಂಹಾಸನದ ಮೇಲೆ ಕೂತಿರುವುದನ್ನು ಕಂಡೆನು. ಅವರ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.
೧ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ಕರ್ತನು ಉನ್ನತೋನ್ನತವಾಗಿ ಸಿಂಹಾಸನಾರೂಢನಾಗಿರುವುದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಆಲಯದಲ್ಲೆಲ್ಲಾ ಹರಡಿತ್ತು.
2 ಅವರ ಮೇಲೆ ಸೆರಾಫಿಯರು ನಿಂತಿದ್ದರು. ಪ್ರತಿಯೊಬ್ಬನಿಗೂ ಆರು ರೆಕ್ಕೆಗಳಿದ್ದವು. ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದರು.
೨ಆತನ ಸುತ್ತಲು ಸೆರಾಫಿಯರು ಇದ್ದರು. ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು.
3 ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರ ಯೆಹೋವ ದೇವರು ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು. ಭೂಮಂಡಲವೆಲ್ಲಾ ಅವರ ಮಹಿಮೆಯಿಂದ ತುಂಬಿದೆ,” ಎಂದು ಕೂಗಿ ಹೇಳಿದನು.
೩ಆಗ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು.
4 ಕೂಗುವವನ ಸ್ವರಕ್ಕೆ ದ್ವಾರದ ನಿಲುವುಗಳು ಕದಲಿದವು; ಧೂಮವು ಆಲಯವನ್ನೆಲ್ಲ ತುಂಬಿತು.
೪ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿದವು ಮತ್ತು ಧೂಮವು ಆಲಯದಲ್ಲೆಲ್ಲಾ ತುಂಬಿತು.
5 ಆಗ ನಾನು, “ಅಯ್ಯೋ, ನಾನು ನಾಶವಾದೆನಲ್ಲಾ! ಏಕೆಂದರೆ, ನಾನು ಅಶುದ್ಧ ತುಟಿಯವನು. ನಾನು ಅಶುದ್ಧ ತುಟಿಯುಳ್ಳವರ ಮಧ್ಯದಲ್ಲಿ ವಾಸಿಸುವವನು. ನನ್ನ ಕಣ್ಣುಗಳು ರಾಜಾಧಿರಾಜರೂ ಸೇನಾಧೀಶ್ವರ ಯೆಹೋವ ದೇವರನ್ನು ಕಂಡವು!” ಎಂದೆನು.
೫ಆಗ ನಾನು, “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು. ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು. ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡೆವಲ್ಲಾ!” ಎಂದು ಕೂಗಿಕೊಳ್ಳಲು,
6 ಆಗ ಸೆರಾಫಿಯರಲ್ಲಿ ಒಬ್ಬನು ಬಲಿಪೀಠದಿಂದ ತಾನು ಉರಿಯುವ ಕೆಂಡವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಹಾರಿ ಬಂದು,
೬ಆಗ ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ಉರಿಯುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು,
7 ಅದರಿಂದ ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳನ್ನು ತಗಲಿದೆ. ನಿನ್ನ ದೋಷವು ತೊಲಗಿದೆ, ನಿನ್ನ ಪಾಪಪರಿಹಾರ ಆಯಿತು,” ಎಂದು ಹೇಳಿದನು.
೭ನನ್ನ ಬಾಯಿಗೆ ಮುಟ್ಟಿಸಿ, “ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು. ನಿನ್ನ ದೋಷವು ನೀಗಿತು. ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು” ಎಂದನು.
8 ಆಗ, “ಯಾರನ್ನು ಕಳುಹಿಸಲಿ, ಯಾರು ನಮಗೋಸ್ಕರ ಹೋಗುವರು?” ಎಂಬ ಯೆಹೋವ ದೇವರ ನುಡಿಯನ್ನು ನಾನು ಕೇಳಿ, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿರಿ,” ಎಂದೆನು.
೮ಆಗ, “ಯಾರನ್ನು ಕಳುಹಿಸಲಿ? ಯಾರು ನಮಗೋಸ್ಕರ ಹೋಗುವನು?” ಎಂಬ ಕರ್ತನ ನುಡಿಯನ್ನು ಕೇಳಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದೆನು.
9 ಅದಕ್ಕೆ ಅವರು, “ನೀನು ಈ ಜನರ ಬಳಿಗೆ ಹೋಗಿ: “‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ,’
೯ಅದಕ್ಕೆ ಆತನು, “ನೀನು ಈ ಜನರ ಬಳಿಗೆ ಹೋಗಿ, ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ,
10 ತಮ್ಮ ಕಣ್ಣುಗಳಿಂದ ನೋಡದಂತೆಯೂ, ತಮ್ಮ ಕಿವಿಗಳಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗದಂತೆಯೂ ಈ ಜನರ ಹೃದಯವನ್ನು ಕಠಿಣಗೊಳಿಸಿ, ಅವರ ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣುಗಳನ್ನು ಮೊಬ್ಬಾಗಿಸು,” ಎಂದು ನನಗೆ ಹೇಳಿದರು.
೧೦ಕಣ್ಣಿನಿಂದ ನೋಡದಂತೆಯೂ, ಕಿವಿಯಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರಿಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಈ ಜನರ ಹೃದಯವನ್ನು ಕೊಬ್ಬಿಸಿ, ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣಿಗೆ ಅಂಟು ಬಳಿ” ಎಂದು ನನಗೆ ಹೇಳಿದನು.
11 ಆಗ ನಾನು, “ಯೆಹೋವ ದೇವರೇ, ಇದು ಎಷ್ಟರವರೆಗೆ?” ಎಂದೆನು. ಅದಕ್ಕೆ ಅವರು ಹೀಗೆ ಉತ್ತರಕೊಟ್ಟರು, “ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯನಿಲ್ಲದೆ, ಹೊಲಗಳು ಸಂಪೂರ್ಣವಾಗಿ ಹಾಳಾಗುವವರೆಗೂ,
೧೧ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು, “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ, ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.
12 ಯೆಹೋವ ದೇವರಾದ ನಾನು ಮನುಷ್ಯರನ್ನು ದೂರ ಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗಿರುವುದು.
೧೨ಯೆಹೋವನು ಮನುಷ್ಯರನ್ನು ದೂರಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗೆ ಇರುವುದು.
13 ಆದರೆ ದೇಶದಲ್ಲಿ ಹತ್ತನೆಯ ಪಾಲು ಉಳಿದಿದ್ದರೂ, ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ. ಅದೇ ರೀತಿಯಾಗಿ ಪವಿತ್ರ ಜನರು ದೇಶದಲ್ಲಿ ಬುಡವಾಗಿ ಉಳಿದಿರುವರು.”
೧೩ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ, ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು.