< ಯೆಶಾಯನು 59 >
1 ಯೆಹೋವ ದೇವರ ಕೈ ರಕ್ಷಿಸಲಾರದ ಹಾಗೆ ಮೋಟುಗೈಯಲ್ಲ. ಆತನ ಕಿವಿ ಕೇಳಲಾರದ ಹಾಗೆ ಮಂದವಾಗಿಲ್ಲ.
೧ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತಹ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ.
2 ನಿಮ್ಮ ಅಕ್ರಮಗಳೇ, ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿವೆ. ನಿಮ್ಮ ಪಾಪಗಳೇ, ಆತನು ಹೇಳಿದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಸಿವೆ.
೨ಆದರೆ ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನ್ನು ಅಗಲಿಸುತ್ತಾ ಬಂದಿವೆ; ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ.
3 ಏಕೆಂದರೆ ನಿಮ್ಮ ಕೈಗಳು ರಕ್ತದಿಂದಲೂ, ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ. ನಿಮ್ಮ ತುಟಿಗಳು ಸುಳ್ಳನ್ನು ಆಡುತ್ತವೆ. ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.
೩ನಿಮ್ಮ ಕೈಗಳು ರಕ್ತದಿಂದ ಹೊಲಸಾಗಿವೆ, ನಿಮ್ಮ ಬೆರಳುಗಳು ಅಪರಾಧದಿಂದ ಅಶುದ್ಧವಾಗಿವೆ; ನಿಮ್ಮ ತುಟಿಗಳು ಸುಳ್ಳಾಡುತ್ತವೆ, ನಿಮ್ಮ ನಾಲಿಗೆಯು ಕೆಡುಕನ್ನು ನುಡಿಯುತ್ತದೆ.
4 ನೀತಿಗೋಸ್ಕರ ಕರೆಯುವವನು ಯಾವನೂ ಇಲ್ಲ, ಸತ್ಯಕ್ಕೋಸ್ಕರ ನ್ಯಾಯ ವಿಚಾರಿಸುವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡುತ್ತಾರೆ. ಸುಳ್ಳನ್ನು ಮಾತನಾಡುತ್ತಾರೆ. ಕೇಡನ್ನು ಗರ್ಭಧರಿಸಿ, ಅಕ್ರಮವನ್ನು ಹೆರುತ್ತಾರೆ.
೪ಇವರಲ್ಲಿ ಯಾರೂ ನ್ಯಾಯಸ್ಥಾನಕ್ಕೆ ನ್ಯಾಯವಾಗಿ ಹೋಗುವುದಿಲ್ಲ, ಯಾರೂ ಸತ್ಯವಾಗಿ ವಾದಿಸುವುದಿಲ್ಲ; ಇವರು ಶೂನ್ಯವಾಗಿರುವುದನ್ನು ನಂಬಿಕೊಂಡು ಸುಳ್ಳನ್ನಾಡುತ್ತಾರೆ; ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುತ್ತಾರೆ.
5 ಹಾವಿನಂತೆ ಮೊಟ್ಟೆಗಳನ್ನು ಮರಿಮಾಡುತ್ತಾರೆ. ಜೇಡರ ಹುಳದಂತೆ ಬಲೆಯನ್ನು ನೇಯುತ್ತಾರೆ. ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು. ಒಡೆದುಬಿಡುವವನಿಗೆ ವಿಷದ ಮರಿ ಹೊರಡುವುದು.
೫ಹಾವಿನಂತೆ ಕೇಡಿನ ಮೊಟ್ಟೆಗಳನ್ನು ಮರಿಮಾಡುತ್ತಾರೆ, ಜೇಡರ ಹುಳದಂತೆ ಬಲೆಯನ್ನು ನೇಯುತ್ತಾರೆ; ಆ ಮೊಟ್ಟೆಗಳನ್ನು ತಿನ್ನುವವನಿಗೆ ಮರಣ ಉಂಟಾಗುವುದು, ಅದನ್ನು ಒಡೆದುಬಿಡುವುದರಿಂದ ವಿಷದ ಮರಿ ಹೊರಡುವುದು.
6 ಅವರ ನೂಲು ವಸ್ತ್ರಕ್ಕಾಗದು. ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದುಕೊಳ್ಳರು. ಅವರ ಕೆಲಸಗಳು ಅಕ್ರಮದ ಕೆಲಸಗಳೇ. ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಇವೆ.
೬ಇವರ ಬಲೆಯ ದಾರವು ಬಟ್ಟೆಯಾಗದು, ಇವರು ನೇಯ್ದದ್ದು ಹೊದಿಕೆಯಾಗದು; ಇವರ ಕಾರ್ಯಗಳು ಅಧರ್ಮಕಾರ್ಯಗಳು, ಇವರ ಕೈಯಲ್ಲಿ ಬಲಾತ್ಕಾರವೇ ತುಂಬಿದೆ.
7 ಅವರ ಕಾಲುಗಳು ಪಾಪಕ್ಕೆ ಓಡುತ್ತವೆ. ಅಪರಾಧವಿಲ್ಲದ ರಕ್ತವನ್ನು ಚೆಲ್ಲುವುದಕ್ಕೆ ತ್ವರೆ ಪಡುತ್ತವೆ. ಅವರ ಆಲೋಚನೆಗಳು ಅಧರ್ಮದ ಆಲೋಚನೆಗಳೇ. ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿವೆ.
೭ಇವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುತ್ತವೆ, ಇವರು ನಿರಪರಾಧಿಯ ರಕ್ತವನ್ನು ಸುರಿಸಲು ಆತುರಪಡುತ್ತಾರೆ, ಇವರ ಯೋಚನೆಗಳು ಅಧರ್ಮದ ಯೋಚನೆಗಳೇ, ಇವರು ಹೋದ ದಾರಿಗಳಲ್ಲಿ ನಷ್ಟವೂ, ನಾಶನವೂ ಉಂಟಾಗುತ್ತವೆ;
8 ಸಮಾಧಾನದ ಮಾರ್ಗವನ್ನೇ ಅವರು ಅರಿಯರು. ಅವರ ದಾರಿಗಳಲ್ಲಿ ನ್ಯಾಯವಿಲ್ಲ. ತಮ್ಮ ಹಾದಿಗಳನ್ನು ವಕ್ರಮಾಡಿಕೊಂಡಿದ್ದಾರೆ. ಅವುಗಳಲ್ಲಿ ನಡೆಯುವವರೆಲ್ಲರೂ ಸಮಾಧಾನವನ್ನರಿಯರು.
೮ಇವರು ಸಮಾಧಾನದ ಮಾರ್ಗವನ್ನೇ ಅರಿಯರು, ಇವರ ಹಾದಿಗಳಲ್ಲಿ ಯಾವ ನ್ಯಾಯವೂ ಇಲ್ಲ, ತಮ್ಮ ಮಾರ್ಗಗಳನ್ನು ಡೊಂಕು ಮಾಡಿಕೊಂಡಿದ್ದಾರೆ, ಅವುಗಳಲ್ಲಿ ನಡೆಯುವವರು ಸಮಾಧಾನವನ್ನು ಅರಿಯರು.
9 ಆದಕಾರಣ ನ್ಯಾಯ ನಿರ್ಣಯವು ನಮಗೆ ದೂರವಾಗಿದೆ. ನೀತಿಯು ನಮ್ಮನ್ನು ತಲುಪುವುದಿಲ್ಲ, ಬೆಳಕನ್ನು ಎದುರು ನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ; ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲಿಯೇ ನಡೆಯುತ್ತೇವೆ.
೯ಆದಕಾರಣ ಯೆಹೋವನ ನ್ಯಾಯನಿರ್ಣಯವು ನಮಗೆ ದೂರವಾಗಿದೆ. ಆತನ ರಕ್ಷಣಾಧರ್ಮದ ಕಾರ್ಯವು ನಮಗೆ ಲಭಿಸುವುದಿಲ್ಲ; ಬೆಳಕನ್ನು ಎದುರುನೋಡುತ್ತಿರುವ ನಮ್ಮನ್ನು ಕತ್ತಲೆಯೇ ಆವರಿಸಿದೆ, ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಾವು ಅಂಧಕಾರದಲ್ಲೇ ನಡೆಯುತ್ತೇವೆ.
10 ಕುರುಡರ ಹಾಗೆ ಗೋಡೆಯನ್ನು ತಡವರಿಸುತ್ತೇವೆ. ಕಣ್ಣಿಲ್ಲದವರ ಹಾಗೆ ಮುಟ್ಟಿ ನೋಡುತ್ತೇವೆ. ಮಧ್ಯಾಹ್ನದಲ್ಲಿ ರಾತ್ರಿಯಂತೆ ಎಡವುತ್ತೇವೆ. ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ.
೧೦ಕುರುಡರಂತೆ ಗೋಡೆಯನ್ನು ತಡವರಿಸಿ ನಡೆಯುತ್ತೇವೆ, ಹೌದು, ಕಣ್ಣಿಲ್ಲದವರ ಹಾಗೆ ತಡಕಾಡುತ್ತೇವೆ, ಮಧ್ಯಾಹ್ನದಲ್ಲಿ ಸಂಜೆಯಂತೆ ಎಡವುತ್ತೇವೆ, ಪುಷ್ಟರ ನಡುವೆ ಸತ್ತವರ ಹಾಗಿದ್ದೇವೆ.
11 ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ. ನಾವು ಪಾರಿವಾಳಗಳಂತೆ ದುಃಖದಿಂದ ಕೊರಗುತ್ತೇವೆ. ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ. ಆದರೆ ಅದು ಸಿಕ್ಕದು, ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.
೧೧ನಾವೆಲ್ಲರೂ ಕರಡಿಗಳಂತೆ ಗುರುಗುಟ್ಟುತ್ತೇವೆ, ಪಾರಿವಾಳಗಳಂತೆ ಮುಲುಗುತ್ತಲೇ ಇದ್ದೇವೆ; ನಾವು ಯೆಹೋವನ ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಕ್ಕದು, ಆತನ ರಕ್ಷಣಕಾರ್ಯವನ್ನು ನಿರೀಕ್ಷಿಸಿದರೂ ಅದು ನಮಗೆ ದೂರವಾಗಿರುವುದು.
12 ಏಕೆಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ. ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ. ನಮ್ಮ ದ್ರೋಹಗಳು ನಮ್ಮ ಸಂಗಡ ಇವೆ. ನಮ್ಮ ಅಕ್ರಮಗಳನ್ನು ನಾವೇ ಬಲ್ಲೆವು.
೧೨ಏಕೆಂದರೆ ನಮ್ಮ ತಪ್ಪುಗಳು ನಿನ್ನ ದೃಷ್ಟಿಗೆ ಹೆಚ್ಚಾಗಿ ಬಿದ್ದಿವೆ, ನಮ್ಮ ಪಾಪಗಳು ನಮ್ಮ ವಿರುದ್ಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ತಪ್ಪುಗಳು ನಮ್ಮ ಸಂಗಡಲೇ ಇವೆ, ನಮ್ಮ ಅಪರಾಧಗಳನ್ನು ನಾವೇ ಬಲ್ಲೆವು.
13 ದ್ರೋಹಮಾಡಿದ್ದೇವೆ, ಯೆಹೋವ ದೇವರಿಗೆ ಸುಳ್ಳಾಡಿದ್ದೇವೆ. ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ. ಬಲಾತ್ಕಾರದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತನಾಡಿದ್ದೇವೆ. ಸುಳ್ಳು ಮಾತುಗಳಿಂದ ಬಸುರಾಗಿ ಅವುಗಳನ್ನು ಹೃದಯದಿಂದ ನುಡಿದಿದ್ದೇವೆ.
೧೩ಹೌದು, ಯೆಹೋವನಿಗೆ ತಪ್ಪಿ ನಡೆದು ಆತನನ್ನು ಅಲ್ಲಗಳೆದಿದ್ದೇವೆ, ನಮ್ಮ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟು ಅವನಿಂದ ದೂರವಾಗಿದ್ದೇವೆ. ಅನ್ಯಾಯವನ್ನೂ ದ್ರೋಹವನ್ನೂ ನುಡಿದಿದ್ದೇವೆ, ಹೃದಯಪೂರ್ವಕವಾಗಿ ಸುಳ್ಳುಮಾತುಗಳನ್ನು ಕಲ್ಪಿಸಿ ಆಡಿದ್ದೇವೆ.
14 ನಾವು ನ್ಯಾಯವನ್ನು ಸಹ ಹಿಂದಕ್ಕೆ ತಳ್ಳಿಬಿಟ್ಟಿದ್ದೇವೆ. ನೀತಿಯನ್ನು ದೂರದಲ್ಲಿ ನಿಲ್ಲಿಸಿಬಿಟ್ಟಿದ್ದೇವೆ. ಸತ್ಯವು ಬೀದಿಯಲ್ಲಿ ಎಡವುತ್ತದೆ. ಯಥಾರ್ಥತೆಗೆ ಪ್ರವೇಶಿಸ ಇಲ್ಲಾ. ಸತ್ಯವು ಬೀದಿಯಲ್ಲಿ ಎಡವುತ್ತದೆ. ಯಥಾರ್ಥತೆಯು ಪ್ರವೇಶಿಸಕೂಡದು.
೧೪ನ್ಯಾಯವು ಹಿಂದಕ್ಕೆ ತಳ್ಳಲ್ಪಟ್ಟಿದೆ, ಧರ್ಮವು ದೂರದಲ್ಲಿ ನಿಂತಿದೆ, ಸತ್ಯವು ಚಾವಡಿಯಲ್ಲಿ ಬಿದ್ದುಹೋಗಿದೆ, ಯಥಾರ್ಥತ್ವವು ಪ್ರವೇಶಿಸಲಾರದು.
15 ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಬೇಟೆಯಾಗುತ್ತಾನೆ. ಯೆಹೋವ ದೇವರು ಇದನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು.
೧೫ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಸೂರೆಯಾಗುತ್ತಾನೆ.
16 ಮಧ್ಯಸ್ಥಿಕನು ಒಬ್ಬನೂ ಇಲ್ಲವೆಂದು ಕಂಡು ಸ್ಥಬ್ಧನಾದನು. ಆದ್ದರಿಂದ ಆತನ ಸ್ವಹಸ್ತವೇ ಆತನಿಗೆ ರಕ್ಷಣೆಯ ಸಾಧನವಾಯಿತು. ಆತನ ನೀತಿಯೇ ಆತನಿಗೆ ಆಧಾರವಾಯಿತು.
೧೬ಯೆಹೋವನು ಇವುಗಳನ್ನು ನೋಡಿ ನ್ಯಾಯವಿಲ್ಲವಲ್ಲಾ ಎಂದು ವ್ಯಸನಗೊಂಡನು; ಉದ್ಧಾರಕನಾದ ಯಾವ ಪುರುಷನೂ ಇಲ್ಲವೆಂದು ಕಂಡು ಸ್ತಬ್ಧನಾದನು; ಆಗ ಆತನ ಸ್ವಹಸ್ತವೇ ಆತನಿಗೆ ರಕ್ಷಣಾ ಸಾಧನವಾಯಿತು, ಆತನ ಧರ್ಮವೇ ಆತನಿಗೆ ಆಧಾರವಾಯಿತು.
17 ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪ್ರತೀಕಾರದ ವಸ್ತ್ರಗಳನ್ನು ಹೊದಿಕೆಯಾಗಿ ಹೊದ್ದುಕೊಂಡು, ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
೧೭ಅವನು ನೀತಿಯನ್ನು ವಜ್ರಕವಚವನ್ನಾಗಿ ಹಾಕಿಕೊಂಡು, ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡನು; ರೋಷವೆಂಬ ವಸ್ತ್ರವನ್ನು ಉಡುಪುಮಾಡಿಕೊಂಡು, ಸೇಡನ್ನು ನಿಲುವಂಗಿಯನ್ನಾಗಿ ಹಾಕಿಕೊಂಡನು.
18 ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು. ತನ್ನ ವೈರಿಗಳಿಗೆ ಉರಿಯನ್ನೂ, ತನ್ನ ಶತ್ರುಗಳಿಗೆ ಪ್ರತಿಫಲವನ್ನೂ, ದ್ವೀಪಗಳಿಗೆ ಪ್ರತಿಫಲವನ್ನೂ ಸಲ್ಲಿಸುವನು.
೧೮ತನ್ನ ವಿರೋಧಿಗಳಲ್ಲಿಟ್ಟ ಕ್ರೋಧವನ್ನು ಈಡೇರಿಸಿ, ತನ್ನ ಶತ್ರುಗಳಿಗೆ ದಂಡನೆಯನ್ನು ವಿಧಿಸಿ, ಅವರವರ ಕೃತ್ಯಗಳಿಗೆ ತಕ್ಕಂತೆ ಮುಯ್ಯಿತೀರಿಸುವನು; ಕರಾವಳಿಯಲ್ಲಿರುವವರಿಗೂ ತಕ್ಕ ಪ್ರತಿಫಲವನ್ನು ನೀಡುವನು.
19 ಆಗ ಪಶ್ಚಿಮದ ಕಡೆಯವರು ಯೆಹೋವ ದೇವರ ಹೆಸರಿಗೂ, ಸೂರ್ಯೋದಯದ ಕಡೆಯವರು ದೇವರ ಘನಕ್ಕೂ ಭಯಪಡುವರು. ವೈರಿಯು ಪ್ರಳಯದಂತೆ ಬರುವಾಗ, ಯೆಹೋವ ದೇವರ ಆತ್ಮವು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವರು.
೧೯ಹೀಗಿರಲು ಪಶ್ಚಿಮದವರು ಯೆಹೋವನ ನಾಮಕ್ಕೆ ಹೆದರುವರು, ಪೂರ್ವ ದಿಕ್ಕಿನವರು ಆತನ ಮಹಿಮೆಗೆ ಅಂಜುವರು; ಬಿರುಗಾಳಿಯಿಂದ ಹೊಡೆಯಲ್ಪಟ್ಟು ಇಕ್ಕಟ್ಟಿನಲ್ಲಿ ಹರಿಯುವ ತೊರೆಯ ಹಾಗೆ ಆತನು ರಭಸದಿಂದ ಬರುವನಷ್ಟೆ.
20 “ವಿಮೋಚಕನು ಚೀಯೋನಿಗೂ ಯಾಕೋಬಿನಲ್ಲಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವವರಿಗಾಗಿಯೂ ಬರುವನು,” ಎಂದು ಯೆಹೋವ ದೇವರು ಹೇಳುತ್ತಾರೆ.
೨೦“ಒಬ್ಬ ವಿಮೋಚಕನು ಚೀಯೋನಿಗೂ, ದ್ರೋಹವನ್ನು ಬಿಟ್ಟುಬಿಟ್ಟ ಯಾಕೋಬ್ಯರ ಬಳಿಗೂ ಬರುವನು”, ಯೆಹೋವನೇ ಇದನ್ನು ನುಡಿದಿದ್ದಾನೆ.
21 ಮಾತ್ರವಲ್ಲದೆ, “ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ. ಎಂದು ಯೆಹೋವ ದೇವರು ಹೇಳುತ್ತಾರೆ. ನಿನ್ನ ಮೇಲಿರುವ ನನ್ನ ಆತ್ಮನೂ, ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ, ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ, ನಿನ್ನ ಸಂತಾನದ ಬಾಯಿಂದಲೂ ತೊಲಗುವುದಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ.
೨೧ನಾನಂತೂ ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು, ನೋಡಿರಿ; “ನಿಮ್ಮಲ್ಲಿ ಪ್ರವೇಶಿಸಿರುವ ನನ್ನ ಆತ್ಮವೂ, ನಿಮ್ಮ ಬಾಯಿಗೆ ನಾನು ಕೊಟ್ಟಿರುವ ಮಾತುಗಳೂ, ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ ಅಥವಾ ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ ಇಂದಿನಿಂದ ಎಂದಿಗೂ ತೊಲಗುವುದಿಲ್ಲ” ಎಂದು ಯೆಹೋವನು ಹೇಳುತ್ತಾನೆ.