< ಯೆಶಾಯನು 58 >
1 “ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು. ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನು ಘೋಷಿಸು.
2 ಆದರೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕುತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ಆಜ್ಞೆಗಳನ್ನು ಬಿಡದೆ, ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ, ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸಮೀಪಿಸುವುದರಲ್ಲಿ ಸಂತೋಷಿಸುತ್ತಾರೆ.
3 ‘ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸಲಿಲ್ಲ?’ ‘ನಮ್ಮ ಪ್ರಾಣವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವುದೇಕೆ?’ ಎಂದು ಅವರು ಅಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ದಿನದಲ್ಲಿಯೂ ನಿಮ್ಮ ಇಷ್ಟದ ಕೆಲಸವನ್ನು ನಡೆಸಿ ಮತ್ತು ನಿಮ್ಮ ಕೆಲಸದವರನ್ನು ದುಡಿತಕ್ಕೆ ಎಳೆಯುತ್ತೀರಿ.
4 ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಹೊಡೆದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.
5 ನಾನು ಆಯ್ದುಕೊಂಡದ್ದು ಇಂಥಾ ಉಪವಾಸವೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ಯೆಹೋವ ದೇವರಿಗೆ ಮೆಚ್ಚಿಗೆಯಾಗುವ ಉಪವಾಸ ಎನ್ನುತ್ತೀರೋ?
6 “ನಾನು ಆಯ್ದುಕೊಳ್ಳುವ ಉಪವಾಸವು ಅನ್ಯಾಯದ ಸರಪಣಿಯನ್ನು ಬಿಚ್ಚುವುದೂ, ಭಾರವಾದ ಹೊರೆಯನ್ನು ಬಿಚ್ಚುವುದೂ, ದಬ್ಬಾಳಿಕೆಯಾದವರನ್ನು ಬಿಡಿಸುವುದೂ, ನೊಗಗಳನ್ನೆಲ್ಲಾ ಮುರಿದುಹಾಕುವುದೂ, ಇವೇ ಅಲ್ಲವೋ?
7 ಹಸಿದವರಿಗೆ ಅನ್ನ ಕೊಡುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬಟ್ಟೆಯಿಲ್ಲದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೇ ನನಗೆ ಇಷ್ಟಕರವಾದ ಉಪವಾಸ ವ್ರತ?
8 ಆಗ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವುದು. ನಿನ್ನ ಆರೋಗ್ಯ ತ್ವರಿತವಾಗಿ ಕಾಣಿಸಿಕೊಳ್ಳುತ್ತದೆ. ನಿನ್ನ ನೀತಿ ನಿನಗೆ ಮುಂಬಲವಾಗಿರುವುದು. ಯೆಹೋವ ದೇವರ ಮಹಿಮೆಯು ನಿನಗೆ ಹಿಂಬಲವಾಗಿರುವುದು.
9 ಆಗ ನೀನು ಕರೆದರೆ ಯೆಹೋವ ದೇವರು ಉತ್ತರಕೊಡುವರು. ನೀನು ಕೂಗುವೆ, ಆಗ ಅವರು, ‘ನಾನು ಇಲ್ಲಿ ಇದ್ದೇನೆ,’ ಅನ್ನುವರು. “ನೀನು ನಿನ್ನ ಮಧ್ಯದೊಳಗಿಂದ ದಬ್ಬಾಳಿಕೆಯ ನೊಗವನ್ನೂ, ಬೆರಳ ಸನ್ನೆಯನ್ನೂ, ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ,
10 ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ದಬ್ಬಾಳಿಕೆಗೆ ಒಳಗಾದವನ ಪ್ರಾಣವನ್ನು ತೃಪ್ತಿಪಡಿಸಿದರೆ, ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವುದು. ನಿನ್ನ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು.
11 ಯೆಹೋವ ದೇವರು ನಿನ್ನನ್ನು ನಿತ್ಯವೂ ನಡೆಸುತ್ತಾ, ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ, ನಿನ್ನ ಎಲುಬುಗಳನ್ನು ಬಲಪಡಿಸುವರು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಇರುವೆ. ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ
12 ಆಗ ನಿನ್ನವರು ಪುರಾತನ ಕಾಲದ ಹಾಳಾದ ಸ್ಥಳಗಳನ್ನು ಕಟ್ಟುವರು. ತಲತಲಾಂತರಗಳಿಂದ ಹಾಳುಬಿದ್ದಿರುವ ಅಸ್ತಿವಾರಗಳನ್ನು ನೀನು ಎಬ್ಬಿಸುವೆ. ಬಿದ್ದ ಗೋಡೆಯನ್ನು ಎಬ್ಬಿಸುವ ದೇಶ ಎಂದೂ, ನಿವಾಸಿಗಳಿಗಾಗಿ ನಡೆದಾಡಲು ಹಾದಿಗಳನ್ನು ಉಂಟುಮಾಡುವ ದೇಶ ಎಂದೂ ನಿನಗೆ ಬಿರುದು ಬರುವುದು.
13 “ನೀನು ಸಬ್ಬತ್ ದಿನದಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟವನ್ನು ಮಾಡದೆ ಹೋದರೆ, ಸಬ್ಬತ್ ದಿನವನ್ನು ಆನಂದಕರವಾದದ್ದೆಂದೂ, ಯೆಹೋವ ದೇವರ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ, ಸ್ವಂತ ಇಷ್ಟಗಳನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,
14 ಆಗ ಯೆಹೋವ ದೇವರಲ್ಲಿ ಆನಂದಗೊಳ್ಳುವಿ. ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿಸುವಂತೆ ನಿನಗೆ ಮಾಡುವೆನು.” ಏಕೆಂದರೆ ಯೆಹೋವ ದೇವರ ಬಾಯಿ ಇದನ್ನು ನುಡಿದಿದೆ.