< ಯೆಶಾಯನು 32 >
1 ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.
೧ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.
2 ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ, ಬಿರುಗಾಳಿಗೋಸ್ಕರ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿಯ ನೀರಿನ ಕಾಲುವೆಗಳ ಹಾಗೂ, ಬಾಯಾರಿದ ನಾಡಿಗೆ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.
೨ಆಗ ಪ್ರತಿ ಮನುಷ್ಯನು ಗಾಳಿಯಲ್ಲಿ ಅಡಗಿಕೊಳ್ಳುವಂತೆಯೂ, ಅತಿವೃಷ್ಟಿಯಲ್ಲಿ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿನ ನೀರಿನ ಕಾಲುವೆಗಳ ಹಾಗೂ, ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.
3 ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.
೩ಆಗ ನೋಡುವವರ ಕಣ್ಣು ಮೊಬ್ಬಾಗದು, ಕೇಳುವವರ ಕಿವಿ ಮಂದವಾಗದು.
4 ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆ ಸ್ವಚ್ಛವಾಗಿ ಮಾತನಾಡುವುದಕ್ಕೆ ಸಿದ್ಧವಾಗಿರುವುದು.
೪ಆತುರಗಾರರ ಹೃದಯವು ತಿಳಿವಳಿಕೆಯನ್ನು ಗ್ರಹಿಸುವುದು. ತೊದಲು ಮಾತನಾಡುವವರ ನಾಲಿಗೆಯು ಸ್ವಚ್ಛವಾಗಿಯೂ, ಶೀಘ್ರವಾಗಿಯೂ ಮಾತನಾಡುವುದು.
5 ಇನ್ನು ಮೇಲೆ ಮೂರ್ಖನು ಘನವಂತನೆನಿಸಿಕೊಳ್ಳನು. ಮೋಸಗಾರನು ಮಹನೀಯನೆನಿಸಿಕೊಳ್ಳನು.
೫ಇನ್ನು ಮೇಲೆ ನೀಚನು ಘನವಂತನೆನಿಸಿಕೊಳ್ಳನು. ಕಳ್ಳನು ಮಹನೀಯನೆನಿಸಿಕೊಳ್ಳನು.
6 ಏಕೆಂದರೆ ಮೂರ್ಖನು ಮೂರ್ಖವಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾಸಿಸುವಂತೆಯೂ, ಯೆಹೋವ ದೇವರಿಗೆ ವಿರೋಧವಾಗಿ ಸಂಪೂರ್ಣವಾಗಿ ತಪ್ಪಿ ಹೋಗುವವರಂತೆಯೂ, ಹಸಿವೆಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
೬ಏಕೆಂದರೆ ನೀಚನು ನೀಚವಾಗಿ ಮಾತನಾಡುವನು. ಅವನ ಹೃದಯವು ಕೇಡನ್ನು ಕಲ್ಪಿಸಿ, ನಡೆಯದೆ ಇರುವುದನ್ನು ನಡಿಸಿ ಯೆಹೋವನಿಗೆ ವಿರುದ್ಧವಾಗಿ ಅಸತ್ಯವನ್ನಾಡಿ, ಹಸಿದವನ ಆಶೆಯನ್ನು ಬರಿದುಮಾಡಿ, ಬಾಯಾರಿದವನ ಪಾನವನ್ನು ತಪ್ಪಿಸುವುದು.
7 ಮೋಸಗಾರನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವನು ಬಡವರನ್ನು ಸುಳ್ಳು ಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.
೭ಮೋಸಗಾರನ ಆಯುಧಗಳು ಕೆಟ್ಟವುಗಳೇ, ದೀನದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ, ಅವರನ್ನು ಸುಳ್ಳುಮಾತುಗಳಿಂದ ಕೆಡಿಸುವುದಕ್ಕೆ ಕುಯುಕ್ತಿಗಳನ್ನು ಕಲ್ಪಿಸುವನು.
8 ಘನವಂತನಾದರೋ, ಘನಕಾರ್ಯಗಳನ್ನು ಕಲ್ಪಿಸುವನು. ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
೮ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು. ಘನವಾದವುಗಳಲ್ಲಿಯೇ ನಿರತನಾಗಿರುವನು.
9 ನಿಶ್ಚಿಂತೆಯರಾದ ಮಹಿಳೆಯರೇ, ಏಳಿರಿ. ನನ್ನ ಸ್ವರವನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
೯ನಿಶ್ಚಿಂತರಾದ ಸ್ತ್ರೀಯರೇ, ಏಳಿರಿ, ನನ್ನ ಧ್ವನಿಯನ್ನು ಕೇಳಿರಿ. ಭಯವಿಲ್ಲದ ಹೆಣ್ಣು ಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ!
10 ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷಿ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.
೧೦ನಿರ್ಭೀತರೇ, ಒಂದು ವರ್ಷದ ನಂತರ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಆಗ ದ್ರಾಕ್ಷಿಯ ಕೊಯ್ಲು ಇಲ್ಲದೆ ಹೋಗುವುದು, ಯಾವ ಬೆಳೆಯೂ ನಿಮಗೆ ದೊರೆಯುವುದಿಲ್ಲ.
11 ನಿಶ್ಚಿಂತೆಯುಳ್ಳ ಸ್ತ್ರೀಯರೇ, ನೀವು ನಡುಗಿರಿ. ನಿರ್ಭೀತ ಪುತ್ರಿಯರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಯನ್ನು ಕಿತ್ತುಹಾಕಿ, ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
೧೧ನಿಶ್ಚಿಂತರಾದ ಸ್ತ್ರೀಯರೇ, ನಡುಗಿರಿ! ನಿರ್ಭೀತರೇ, ಕಳವಳಗೊಳ್ಳಿರಿ! ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
12 ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಳ ನಿಮಿತ್ತವೂ ನಿಮ್ಮ ಎದೆ ಬಡಿದುಕೊಳ್ಳಿರಿ.
೧೨ಇಷ್ಟವಾದ ಹೊಲಗಳ ಮತ್ತು ಫಲವತ್ತಾದ ದ್ರಾಕ್ಷಾಲತೆಗಾಗಿ ಎದುರುನೋಡಿರಿ.
13 ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ.
೧೩ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದೆಗಳು ಹುಟ್ಟಿಕೊಂಡಿವೆ. ಉತ್ಸಾಹದಿಂದ ಕೂಡಿದ್ದ ಎಲ್ಲಾ ಮನೆಗಳ ಮತ್ತು ಪಟ್ಟಣಗಳಲ್ಲೂ ಮುಳ್ಳುಗಿಡಗಳು ಹುಟ್ಟಿಕೊಂಡಿವೆ.
14 ಅರಮನೆ ಹಾಳುಬಿದ್ದಿದೆ. ಗಲಭೆಯಪಟ್ಟಣವು ನಿರ್ಜನವಾಗುವುದು, ಪರ್ವತ ಮತ್ತು ಬುರುಜು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ, ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.
೧೪ಅರಮನೆಯು ಪಾಳುಬೀಳುವುದು, ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು, ಓಫೆಲ್ ಗುಡ್ಡವೂ, ಗೋಪುರವೂ ಶಾಶ್ವತವಾದ ಗುಹೆಗಳಾಗಿಯೂ, ಕಾಡುಕತ್ತೆಗಳಿಗೆ ಉಲ್ಲಾಸಕರವಾದ ಸ್ಥಳವಾಗಿಯೂ, ದನಕುರಿಗಳ ಹಿಂಡುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುದು.
15 ಆದರೆ ದೇವರು ಉನ್ನತಲೋಕದಲ್ಲಿ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು, ಫಲಭರಿತ ಭೂಮಿ ಸಮೃದ್ಧವಾದ ಅರಣ್ಯವಾಗಿ ಮಾರ್ಪಡುವುದು.
೧೫ಬಳಿಕ ಉನ್ನತಲೋಕದಿಂದ ದಿವ್ಯಾತ್ಮಧಾರೆಯು ನಮ್ಮ ಮೇಲೆ ಸುರಿಸಲ್ಪಡುವುದು. ಆಗ ಅರಣ್ಯವು ತೋಟವಾಗುವುದು, ಈಗಿನ ತೋಟವು (ಮುಂದೆ ಬರುವವರಿಗೆ) ಅರಣ್ಯವಾಗಿ ಕಾಣಿಸುವುದು.
16 ನ್ಯಾಯವು ಮರುಭೂಮಿಯಲ್ಲಿ ನೆಲೆಗೊಳ್ಳುವುದು, ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವುದು.
೧೬ನ್ಯಾಯವು ಅಡವಿಯಲ್ಲಿ ನೆಲೆಗೊಳ್ಳುವುದು, ಧರ್ಮವು ತೋಟದಲ್ಲಿ ಇದ್ದೇ ಇರುವುದು.
17 ನೀತಿಯ ಕೆಲಸವು ಸಮಾಧಾನವೂ, ನೀತಿಯ ಫಲವು ನಿತ್ಯವಾದ ಶಾಂತಿಯೂ, ಭರವಸೆಯೂ ಆಗಿರುವುದು.
೧೭ನೀತಿಯ ಪರಿಣಾಮ ಶಾಂತಿ; ನೀತಿಯ ಫಲವು, ನಿತ್ಯವಾದ ಸಮಾಧಾನ ಮತ್ತು ನಿತ್ಯವಾದ ಭರವಸೆ ಆಗಿರುವವು.
18 ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ, ಭದ್ರವಾದ ಸ್ಥಳಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
೧೮ನನ್ನ ಜನರು ಸಮಾಧಾನದ ನಿವಾಸದಲ್ಲಿಯೂ, ನಿರ್ಭಯವಾದ ನಿಲಯಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
19 ಆದರೆ ಕಲ್ಮಳೆ ಸುರಿಯುವಾಗ ವನವು ಹಾಳಾಗುವುದು. ಪಟ್ಟಣವು ಸಂಪೂರ್ಣವಾಗಿ ನೆಲಸಮವಾಗುವುದು.
೧೯ಆದರೆ ಕಲ್ಮಳೆ ಸುರಿಯಲು ವನವು ಹಾಳಾಗುವುದು, ಪಟ್ಟಣವು ನೆಲಸಮವಾಗುವುದು.
20 ನೀರಿರುವ ಎಲ್ಲಾ ಕಡೆಗಳಲ್ಲಿ ಬಿತ್ತನೆ ಮಾಡಿ, ದನಕತ್ತೆಗಳನ್ನು ಮೇಯಲು ಬಿಡುವ ನೀವು ಧನ್ಯರೇ ಸರಿ.
೨೦ನೀರಾವರಿಗಳಲ್ಲೆಲ್ಲಾ ಬೀಜ ಬಿತ್ತುತ್ತಲೂ, ದನ ಕತ್ತೆಗಳನ್ನು ಮೇಯಲು ಬಿಡುತ್ತಲೂ ಇರುವ ನೀವು ಧನ್ಯರೇ ಸರಿ!