< ಯೆಶಾಯನು 24 >
1 ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.
2 ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು.
3 ಭೂಮಿಯು ಬಟ್ಟಬರಿದಾಗುವುದು, ಸಂಪೂರ್ಣ ಸುಲಿಗೆಯಾಗುವುದು. ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ.
4 ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. ಲೋಕವು ಸೊರಗಿ ಬಾಡಿಹೋಗುವುದು. ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು.
5 ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ದೈವನಿಯಮಗಳನ್ನು ಬದಲಾಯಿಸಿ, ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು.
6 ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, ಕೆಲವರು ಮಾತ್ರ ಉಳಿದಿದ್ದಾರೆ.
7 ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
8 ದಮ್ಮಡಿಗಳ ಉತ್ಸಾಹವು ಮುಗಿದಿದೆ. ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
9 ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು.
10 ಹಾಳುಪಟ್ಟಣವು ಬಿದ್ದುಹೋಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
11 ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. ಉಲ್ಲಾಸವೆಲ್ಲ ಅಸ್ತಮಿಸಿದೆ. ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ.
12 ಪಟ್ಟಣದಲ್ಲಿ ಹಾಳೇ ಉಳಿದಿವೆ. ನಾಶನವು ಹೆಬ್ಬಾಗಿಲಿಗೆ ಬಡಿದಿದೆ.
13 ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.
14 ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು.
15 ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.
16 ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”
17 ಭೂಮಿಯ ನಿವಾಸಿಗಳೇ, ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ.
18 ಆಗ ಭಯದ ಶಬ್ದಕ್ಕೆ ಓಡಿಹೋಗುವವನು ಗುಂಡಿಯೊಳಗೆ ಬೀಳುವನು. ಗುಂಡಿಯೊಳಗಿಂದ ಏರಿಬರುವವನು ಬಲೆಗೆ ಸಿಕ್ಕಿಬೀಳುವನು. ಆಕಾಶದ ದ್ವಾರಗಳು ತೆರೆದಿವೆ. ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
19 ಭೂಮಿಯು ಬಿರುಕುಬಿಟ್ಟಿದೆ, ಬಿರಿದು ಬಿರಿದಿದೆ, ಭೂಮಿಯು ಕದಲಿಹೋಗಿದೆ.
20 ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.
21 ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.
22 ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.
23 ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.