< ಯೆಶಾಯನು 13 >

1 ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ:
ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡು ಬಂದ ದೈವೋಕ್ತಿ.
2 ಶತ್ರುಗಳು ಬಂದು ಶ್ರೇಷ್ಠರ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
ಶತ್ರುಗಳು ಬಂದು ಪ್ರಭುಗಳ ಪುರದ್ವಾರಗಳಲ್ಲಿ ನುಗ್ಗುವಂತೆ, ಬೋಳು ಬೆಟ್ಟದ ಮೇಲೆ ಧ್ವಜವೆತ್ತಿ ಕೂಗಿರಿ, ಅವರನ್ನು ಕೈಬೀಸಿ ಕರೆಯಿರಿ.
3 ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ, ನನ್ನ ಜಯದಲ್ಲಿ ಉಲ್ಲಾಸಿಸುವವರನ್ನೂ, ನನ್ನ ಶೂರರನ್ನೂ ಸಹ ನನ್ನ ಕೋಪವನ್ನು ತೆಗೆದುಕೊಂಡು ಹೋಗಲು ಕರೆದಿದ್ದೇನೆ.
ನಾನು ಆರಿಸಿಕೊಂಡ ಪರಿಶುದ್ಧರಿಗೆ ಅಪ್ಪಣೆ ಕೊಟ್ಟಿದ್ದೇನೆ. ಹೌದು, ನನ್ನ ಜಯದಲ್ಲಿ ಹೆಮ್ಮೆಪಡುವವರು, ನನ್ನ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆದಿದ್ದೇನೆ.
4 ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ. ಒಟ್ಟಿಗೆ ಕೂಡಿಕೊಂಡ ರಾಜ್ಯಗಳ ಜನಾಂಗಗಳ ಆರ್ಭಟ, ಸೇನಾಧೀಶ್ವರ ಯೆಹೋವ ದೇವರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾರೆ.
ಆಹಾ, ಬಹುಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ! ಇಗೋ, ಜನಾಂಗಗಳ ಆರ್ಭಟವು ಒಟ್ಟಿಗೆ ಕೂಡಿಕೊಂಡ ಅನೇಕ ರಾಜ್ಯಗಳ ಆರ್ಭಟದಂತೆ ಇದೆ! ಯೆಹೋವನು ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡುತ್ತಾನೆ.
5 ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.
ಯೆಹೋವನು ತಾನು ನ್ಯಾಯ ತೀರಿಸುವ ಆಯುಧಗಳೊಡನೆ ದೂರ ದೇಶದಿಂದ ಅಂದರೆ, ಆಕಾಶ ಮಂಡಲದ ಕಟ್ಟಕಡೆಯಿಂದ ಭೂಮಿಯನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾನೆ.
6 ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.
ಗೋಳಾಡಿರಿ! ಏಕೆಂದರೆ ಯೆಹೋವನ ದಿನವು ಸಮೀಪಿಸಿತು. ಅದು ಸರ್ವಶಕ್ತನಿಂದ ನಾಶವಾಗುವಂತೆ ಬರುವುದು.
7 ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.
ಆದುದರಿಂದ ಎಲ್ಲರ ಕೈಗಳು ಜೋಲು ಬೀಳುವುದು. ಎಲ್ಲರ ಹೃದಯವು ಕರಗಿ ನೀರಾಗುವುದು.
8 ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.
ಅವರು ಭಯಪಡುವರು. ಪ್ರಸವ ವೇದನೆಯಲ್ಲಿರುವ ಸ್ತ್ರೀಯಂತೆ ಯಾತನೆ, ಸಂಕಟಗಳನ್ನು ಅನುಭವಿಸುವರು. ಒಬ್ಬರನ್ನೊಬ್ಬರು ನೋಡಿ ವಿಸ್ಮಯಪಡುವರು. ಅವರ ಮುಖಗಳು ತಲ್ಲಣಗೊಂಡು ಬೆಂಕಿಯಿಂದ ಉರಿಯುವವು.
9 ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.
ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭೂಮಿಯನ್ನು ಹಾಳು ಮಾಡಿ, ಪಾಪಿಗಳನ್ನು ನಿರ್ಮೂಲಮಾಡುವುದಕ್ಕೆ ಆತನ ಕೋಪೋದ್ರೇಕದಿಂದಲೂ, ತೀಕ್ಷ್ಣವಾದ ರೋಷದಿಂದಲೂ ಕ್ರೂರವಾಗಿರುವುದು.
10 ಏಕೆಂದರೆ, ಆಕಾಶದ ನಕ್ಷತ್ರಗಳು ಮತ್ತು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವುದಿಲ್ಲ.
೧೦ಆಕಾಶದ ತಾರೆಗಳೂ, ನಕ್ಷತ್ರ ರಾಶಿಗಳೂ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ಪ್ರಕಾಶಿಸುವುದಿಲ್ಲ.
11 ಅವರ ಕೆಟ್ಟ ಕಾರ್ಯಗಳಿಗೋಸ್ಕರವೂ, ದುಷ್ಟರ ಅಪರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸುವೆನು, ಗರ್ವಿಷ್ಠರ ಅಹಂಕಾರವನ್ನು ನಿಲ್ಲಿಸಿಬಿಡುವೆನು. ಭಯಂಕರವಾದವರ ಹೆಮ್ಮೆಯನ್ನು ತಗ್ಗಿಸುವೆನು.
೧೧ನಾನು ಲೋಕದವರಿಗೆ ಅವರ ಪಾಪದ ಫಲವನ್ನೂ, ದುಷ್ಟರಿಗೆ ಅವರ ದುಷ್ಕೃತ್ಯಗಳ ಫಲಗಳಿಗಾಗಿ ಶಿಕ್ಷಿಸಿ, ಸೊಕ್ಕಿದವರ ಅಹಂಕಾರವನ್ನು ಅಡಗಿಸಿ, ಭಯಂಕರವಾದ ಅವರ ಹೆಮ್ಮೆಯನ್ನು ತಗ್ಗಿಸುವೆನು.
12 ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ, ಓಫೀರ್ ಬಂಗಾರಕ್ಕಿಂತಲೂ ಜನರು ವಿರಳವಾಗಿರುವಂತೆ ಮಾಡುವೆನು.
೧೨ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ ಮತ್ತು ಓಫೀರಿನ ಬಂಗಾರಕ್ಕಿಂತಲೂ ವಿರಳವಾಗುವಂತೆ ಮಾಡುವೆನು.
13 ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರ ಕೋಪವೂ, ಅವರ ತೀಕ್ಷ್ಣರೋಷವೂ ಪ್ರಕಟವಾಗುವ ಆ ದಿನದಂದು, ಆಕಾಶಮಂಡಲ ನಡುಗುವುದು. ಭೂಮಂಡಲ ಅದರ ಸ್ಥಳದಿಂದ ಕದಲುವುದು.
೧೩ಆದುದರಿಂದ ಸೇನಾಧೀಶ್ವರನಾದ ಯೆಹೋವನ ಕೋಪೋದ್ರೇಕದಿಂದ ತೀಕ್ಷ್ಣರೋಷದಿಂದ ಆಕಾಶಮಂಡಲವನ್ನು ನಡುಗಿಸಿ, ಭೂಲೋಕವನ್ನು ಅದರ ಸ್ಥಳದಿಂದ ಕದಲಿಸಿ ನಡುಗಿಸುವೆನು.
14 ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.
೧೪ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆಯೂ, ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನೂ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
15 ಸಿಕ್ಕಿದ ಪ್ರತಿಯೊಬ್ಬನೂ ಇರಿತಕ್ಕೆ ಗುರಿಯಾಗುವನು. ಅಟ್ಟಿಹಿಡಿಯಲಾದ ಪ್ರತಿಯೊಬ್ಬನೂ ಖಡ್ಗಕ್ಕೆ ತುತ್ತಾಗುವನು.
೧೫ಸಿಕ್ಕಿದವರೆಲ್ಲರು ಇರಿಯಲ್ಪಡುವರು. ಹಿಂಬಾಲಿಸಿ ಹಿಡಿಯಲ್ಪಟ್ಟ ಸಕಲ ಜನರು ಕತ್ತಿಗೆ ತುತ್ತಾಗುವರು.
16 ಅವರ ಮಕ್ಕಳೂ ಸಹ ಅವರ ಕಣ್ಣೆದುರಿಗೆ ಹತರಾಗುವರು. ಅವರ ಮನೆಗಳು ಸೂರೆಮಾಡಲಾಗುವುದು. ಅವರ ಹೆಂಡತಿಯರು ಅತ್ಯಾಚಾರಕ್ಕೆ ಈಡಾಗುವರು.
೧೬ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಬಿಡುವರು. ಅವರ ಮನೆಗಳನ್ನು ಸೂರೆಮಾಡುವರು. ಅವರ ಹೆಂಡತಿಯರನ್ನು ಅತ್ಯಾಚಾರಕ್ಕೆ ಗುರಿಮಾಡುವರು.
17 ಇಗೋ, ಬೆಳ್ಳಿಯನ್ನು ಲಕ್ಷಿಸದೆ, ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧವಾಗಿ ನಾನು ಎಬ್ಬಿಸುವೆನು.
೧೭ಇಗೋ, ಅವರ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವೆನು. ಇವರು ಬೆಳ್ಳಿಯನ್ನು ಲಕ್ಷಿಸರು. ಬಂಗಾರವನ್ನು ಪ್ರೀತಿಸರು.
18 ಅವರ ಬಿಲ್ಲುಗಳು ಸಹ ಯುವಕರನ್ನು ಸಂಹರಿಸುವುವು. ಇವರು ಹಸುಳೆಗಳನ್ನು ಕರುಣಿಸರು. ಇವರು ಮಕ್ಕಳನ್ನು ಕನಿಕರಿಸುವುದಿಲ್ಲ.
೧೮ಅವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು. ಇವರು ಹಸುಳೆಗಳನ್ನು ಕನಿಕರಿಸುವುದಿಲ್ಲ. ಇವರು ಮಕ್ಕಳನ್ನು ಉಳಿಸುವುದಿಲ್ಲ.
19 ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.
೧೯ರಾಜ್ಯಗಳ ಘನತೆಯೂ, ಕಸ್ದೀಯರ ಮಹಿಮೆಯ ಭೂಷಣವೂ ಆದ ಬಾಬಿಲೋನಿಗೆ, ದೇವರು ನಾಶಮಾಡಿದ ಸೊದೋಮ್ ಗೋಮೋರಗಳ ಗತಿಯೇ ಸಂಭವಿಸುವುದು.
20 ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.
೨೦ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರ ಹಾಕನು ಅಥವಾ ಕುರುಬರು ಮಂದೆಯನ್ನು ತಂಗಿಸರು.
21 ಆದರೆ ಕಾಡುಮೃಗಗಳು ಅಲ್ಲಿ ಮಲಗುವುವು. ಅವರ ಮನೆಗಳು ನರಿಗಳಿಂದ ತುಂಬಿರುವುವು, ಅಲ್ಲಿ ಗೂಬೆಗಳು ವಾಸಿಸುವುವು ಮತ್ತು ಕಾಡುಮೇಕೆಗಳು ಅಲ್ಲಿ ಕುಣಿದಾಡುವುವು.
೨೧ಕಾಡು ಮೃಗಗಳು ಅಲ್ಲಿ ಮಲಗುವವು. ಅವರ ಮನೆಗಳು ಗೂಬೆಗಳಿಂದ ತುಂಬಿರುವವು. ಅಲ್ಲಿ ಉಷ್ಟ್ರಪಕ್ಷಿಗಳು ವಾಸಿಸುವವು ಮತ್ತು ಕಾಡಿನ ಟಗರುಗಳು ಅಲ್ಲಿ ಕುಣಿದಾಡುವವು.
22 ಅವರ ಕೋಣೆಗಳಲ್ಲಿ ತೋಳಗಳು ಕೂಗುವುವು, ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ನರಿಗಳು ವಾಸಿಸುವುವು. ಬಾಬಿಲೋನಿಗೆ ಕಾಲವು ಸಮೀಪಿಸಿತು. ಇನ್ನು ಅದರ ದಿನಗಳು ಮುಂದುವರಿಯುವುದಿಲ್ಲ.
೨೨ಅವರ ಕೋಟೆಗಳಲ್ಲಿ ತೋಳಗಳೂ, ಅರಮನೆಗಳಲ್ಲಿ ನರಿಗಳೂ ಕೂಗುವವು. ಸಮಯವು ಹತ್ತಿರವಾಗಿದೆ. ಇನ್ನು ಆ ದಿನಗಳು ಬರುವುದಕ್ಕೆ ತಡವಾಗುವುದಿಲ್ಲ.

< ಯೆಶಾಯನು 13 >