< ಹೋಶೇಯನು 14 >

1 ಇಸ್ರಾಯೇಲೇ, ನಿನ್ನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೋ. ಏಕೆಂದರೆ ನಿನ್ನ ಪಾಪಗಳೇ, ನಿನ್ನ ಬೀಳುವಿಕೆಗೆ ಕಾರಣ. 2 ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು, ಯೆಹೋವ ದೇವರ ಕಡೆಗೆ ತಿರುಗಿಕೊಂಡು, ಅವರಿಗೆ ಹೇಳಿರಿ: “ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ, ನಮ್ಮಲ್ಲಿ ಒಳ್ಳೆಯದನ್ನು ಸ್ವೀಕರಿಸಿರಿ. ಆಗ ನಮ್ಮ ಸ್ತೋತ್ರ ಬಲಿಯನ್ನು ನಿಮಗೆ ಅರ್ಪಿಸುವೆವು. 3 ಅಸ್ಸೀರಿಯ ನಮ್ಮನ್ನು ರಕ್ಷಿಸುವುದಿಲ್ಲ. ನಾವು ಕುದುರೆಗಳ ಮೇಲೆ ಸವಾರಿ ಮಾಡುವುದಿಲ್ಲ. ನಮ್ಮ ಕೈಗಳಿಂದ ಉಂಟು ಮಾಡಿದವುಗಳಿಗೆ, ‘ನೀವು ನಮ್ಮ ದೇವರುಗಳೇ,’ ಎಂದು ನಾವು ಇನ್ನು ಮುಂದೆ ಹೇಳುವುದೇ ಇಲ್ಲ. ಏಕೆಂದರೆ ನಿಮ್ಮಲ್ಲಿ ದಿಕ್ಕಿಲ್ಲದವರಿಗೆ ಅನುಕಂಪ ದೊರೆಯುತ್ತದೆ.” 4 “ನಾನು ಅವರ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಏಕೆಂದರೆ ನನ್ನ ಕೋಪವು ಅವರ ಕಡೆಯಿಂದ ತಿರುಗಿಕೊಂಡಿದೆ. 5 ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು. ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಆಳಕ್ಕೆ ಹರಡುವನು. 6 ಅವನ ಕೊಂಬೆಗಳು ಹರಡಿಕೊಂಡು, ಅವನ ಸೌಂದರ್ಯವು ಎಣ್ಣೆಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ದೇವದಾರಿನ ಹಾಗೆಯೂ ಇರುವುದು. 7 ಆತನ ನೆರಳಿನಲ್ಲಿ ಜನರು ವಾಸಿಸುವರು, ಧಾನ್ಯದ ಹಾಗೆ ಜೀವಿಸುವರು, ದ್ರಾಕ್ಷಿಬಳ್ಳಿಯ ಹಾಗೆ ಫಲಪ್ರದವಾಗುವರು. ಇಸ್ರಾಯೇಲಿನ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಇರುವುದು. 8 ಎಫ್ರಾಯೀಮೇ, ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನಿಗೆ ಉತ್ತರಿಸಿದ್ದೇನೆ. ನಾನು ಅವನ ಬಗ್ಗೆ ಕಾಳಜಿ ವಹಿಸುತ್ತೇನೆ. ನಾನು ಹಸಿರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಬರುವುದು.” 9 ಯಾರು ಬುದ್ಧಿವಂತರು? ಅವರು ಈ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿ. ಯಾರು ವಿವೇಚನೆಯುಳ್ಳವರು? ಅವರು ಇವುಗಳನ್ನು ತಿಳಿದುಕೊಳ್ಳಲಿ. ಏಕೆಂದರೆ, ಯೆಹೋವ ದೇವರ ಮಾರ್ಗಗಳು ನ್ಯಾಯವಾಗಿವೆ. ನೀತಿವಂತರು ಅದರಲ್ಲಿ ನಡೆಯುವರು. ಆದರೆ ಅಕ್ರಮಗಾರರು ಅವುಗಳಿಂದ ಎಡವಿಬೀಳುವರು.

< ಹೋಶೇಯನು 14 >