< ಹೋಶೇಯನು 12 >

1 ಎಫ್ರಾಯೀಮು ಗಾಳಿಯನ್ನು ತಿನ್ನುತ್ತದೆ. ಪೂರ್ವದ ಗಾಳಿಯ ಹಿಂದೆ ಹಿಂಬಾಲಿಸಿಕೊಂಡು ಹೋಗುತ್ತದೆ. ಅವನು ದಿನವೆಲ್ಲಾ ಸುಳ್ಳನ್ನೂ, ಹಿಂಸೆಯನ್ನೂ ಹೆಚ್ಚಿಸಿ, ಅಸ್ಸೀರಿಯರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಹೊತ್ತುಕೊಂಡು ಹೋಗುತ್ತಾನೆ.
ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ. ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ.
2 ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.
ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು.
3 ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು, ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.
ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು, ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು;
4 ಯಾಕೋಬನು ದೇವದೂತನ ಸಂಗಡ ಹೋರಾಡಿ ಜಯಿಸಿದನು. ಅವನು ಅತ್ತು ಆತನ ಅನುಗ್ರಹಕ್ಕಾಗಿ ವಿಜ್ಞಾಪನೆಯನ್ನು ಸಲ್ಲಿಸಿದನು. ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು. ಅಲ್ಲಿ ಅವನು ಆತನೊಂದಿಗೆ ಮಾತನಾಡಿದನು.
ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು. ಯೆಹೋವನೆಂಬ ಸೇನಾಧೀಶ್ವರನಾದ ದೇವರು ಅವನನ್ನು ಬೇತೇಲಿನಲ್ಲಿಯು ಕಂಡು ಅಲ್ಲಿ ಅವನೊಡನೆ ಮಾತನಾಡಿದನು.
5 ಅವರೇ ಸರ್ವಶಕ್ತರಾದ ಯೆಹೋವ ದೇವರು; ಅವರ ಪ್ರಸಿದ್ಧ ಹೆಸರು ಯೆಹೋವ ದೇವರು ಎಂಬುದೇ.
ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ.
6 ಆದರೆ ನೀನು ನಿನ್ನ ದೇವರ ಕಡೆಗೆ ತಿರುಗಿಕೋ. ಪ್ರೀತಿಯನ್ನೂ, ನ್ಯಾಯವನ್ನೂ ಪಾಲಿಸು ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.
ಇಸ್ರಾಯೇಲೇ, ನೀನೂ ನಿನ್ನ ದೇವರ ಕಡೆಗೆ ತಿರುಗಿಕೋ; ನೀತಿ, ಪ್ರೀತಿಗಳನ್ನು ಅನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು.
7 ಅವನು ವ್ಯಾಪಾರಿಯಾಗಿದ್ದು, ಅವನ ಕೈಯಲ್ಲಿ ಮೋಸದ ತಕ್ಕಡಿ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅವನ ದುರಾಶೆ.
ಕಾನಾನು! ಅದರ ಕೈಯಲ್ಲಿ ಮೋಸದ ತ್ರಾಸು ಇದೆ; ಕಸಕೊಳ್ಳಬೇಕೆಂಬದೇ ಅದರ ಆಶೆ.
8 ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ, “ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು. ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”
ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ?
9 ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ, ನಿನ್ನ ದೇವರಾಗಿರುವ ಯೆಹೋವ ದೇವರಾದ ನಾನು, ಜಾತ್ರೆಯ ದಿನಗಳಲ್ಲಿ ನೀವು ವನವಾಸ ಮಾಡಿದಂತೆ, ನಿಮ್ಮನ್ನು ಪುನಃ ಗುಡಾರದ ವಾಸಕ್ಕೆ ಗುರಿಪಡಿಸುವೆನು.
ನೀನು ಐಗುಪ್ತ ದೇಶದಲ್ಲಿ ಇದ್ದಂದಿನಿಂದ ನಾನೇ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ಜಾತ್ರೆಯ ಕಾಲದಲ್ಲಿ ವನವಾಸಮಾಡುವಂತೆ ಗುಡಾರಗಳಲ್ಲಿ ವಾಸಿಸುವ ಗತಿಗೆ ನಿನ್ನನ್ನು ಪುನಃ ತರುವೆನು.
10 ನಾನು ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮ್ಯಗಳನ್ನು ಜನರಿಗೆ ಹೇಳಿದ್ದೇನೆ.
೧೦ನಾನು ಪ್ರವಾದಿಗಳಿಗೆ ನುಡಿದಿದ್ದೇನೆ, ಬಹಳ ದಿವ್ಯದರ್ಶನಗಳನ್ನು ದಯಪಾಲಿಸಿದ್ದೇನೆ. ಪ್ರವಾದಿಗಳ ಮೂಲಕ ಸೂಚಕಕಾರ್ಯಗಳನ್ನು ನಡೆಸಿದ್ದೇನೆ.
11 ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ಅಲ್ಲಿನ ಜನರು ಅಯೋಗ್ಯರೇ? ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ? ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.
೧೧ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವುದು; ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವುದೋ? ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು.
12 ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು. ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ, ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.
೧೨ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು.
13 ಪ್ರವಾದಿಯಿಂದ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಬರಮಾಡಿ, ಆ ಪ್ರವಾದಿಯಿಂದಲೇ ಆತನು ಅವರನ್ನು ಕಾಪಾಡಿದರು.
೧೩ಯೆಹೋವನು ಇಸ್ರಾಯೇಲನ್ನು ಪ್ರವಾದಿಯ ಮುಖಾಂತರ ಐಗುಪ್ತದೊಳಗಿಂದ ಪಾರುಮಾಡಿದನು; ಪ್ರವಾದಿಯ ಮೂಲಕ ಅದು ರಕ್ಷಿಸಲ್ಪಟ್ಟಿತು.
14 ಆದರೂ ಎಫ್ರಾಯೀಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದ್ದರಿಂದ ಯೆಹೋವ ದೇವರು ಅದರ ರಕ್ತಾಪರಾಧವನ್ನು ಅದರ ಮೇಲೆ ಬರಮಾಡುವರು. ಅವನ ನಿಂದೆಯನ್ನು ಯೆಹೋವ ದೇವರು ಅವನ ಮೇಲೆ ಬರಮಾಡುವರು.
೧೪ಎಫ್ರಾಯೀಮು ಯೆಹೋವನನ್ನು ಅತಿ ತೀಕ್ಷ್ಣವಾಗಿ ರೇಗಿಸಿದೆ, ಆದಕಾರಣ ಅದರ ಒಡೆಯನು ಅದರ ರಕ್ತಾಪರಾಧವನ್ನು ಅದರ ಮೇಲೆ ಹೊರಿಸಿ, ಅದು ಮಾಡಿದ ಅವಮಾನವನ್ನು ಅದಕ್ಕೆ ಹಿಂದಿರುಗಿಸುವನು.

< ಹೋಶೇಯನು 12 >