< ಇಬ್ರಿಯರಿಗೆ ಬರೆದ ಪತ್ರಿಕೆ 5 >
1 ಪ್ರತಿಯೊಬ್ಬ ಮಹಾಯಾಜಕ ಮನುಷ್ಯರೊಳಗಿಂದ ಆರಿಸಲಾಗಿ ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗಾಗಿ ಸಮರ್ಪಿಸಲು ಮನುಷ್ಯರ ಪರವಾಗಿ ದೇವರ ಕಾರ್ಯಗಳಿಗಾಗಿ ನೇಮಿಸಲಾಗುತ್ತಾನಲ್ಲಾ.
2 ಮಹಾಯಾಜಕನು ತಾನೂ ಬಲಹೀನ ಆಗಿರುವುದರಿಂದ ಆತನು ಅಜ್ಞಾನಿಗಳನ್ನೂ ಮಾರ್ಗ ತಪ್ಪಿದವರನ್ನೂ ಕುರಿತು ಕನಿಕರ ತೋರಿಸಬಲ್ಲನು.
3 ಆ ಬಲಹೀನತೆಯ ಕಾರಣದಿಂದ ಆತನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಬೇಕಾದವನಾಗಿದ್ದಾನೆ.
4 ಆರೋನನಂತೆ ದೇವರಿಂದ ಕರೆ ಹೊಂದದ ಹೊರತು ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳಲಾರನು.
5 ಅದೇ ರೀತಿಯಾಗಿ ಕ್ರಿಸ್ತ ಯೇಸು ಮಹಾಯಾಜಕರಾಗುವ ಮಹಿಮೆಯನ್ನು ತಮ್ಮ ಮೇಲೆ ತಾವೇ ತೆಗೆದುಕೊಳ್ಳಲಿಲ್ಲ. ಆದರೆ ದೇವರು, “ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದು ಹೇಳಿದರು.
6 ದೇವರು ಇನ್ನೊಂದು ಸ್ಥಳದಲ್ಲಿ: “ನೀನು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಪ್ರಕಾರವಿರುವ ಯಾಜಕನು!” ಎಂದು ಹೇಳುತ್ತಾರೆ. (aiōn )
7 ಕ್ರಿಸ್ತ ಯೇಸುವು ಭೂಲೋಕದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತರಾಗಿರುವ ದೇವರಿಗೆ ಬಲವಾಗಿ ಕೂಗುತ್ತಾ ಕಣ್ಣೀರಿಟ್ಟರು. ಯೇಸುವಿನ ಭಯಭಕ್ತಿಯ ನಿಮಿತ್ತ ಅವರ ಪ್ರಾರ್ಥನೆ, ವಿಜ್ಞಾಪನೆಗಳಿಗೆ ಉತ್ತರ ಸಿಕ್ಕಿತ್ತು.
8 ಕ್ರಿಸ್ತ ಯೇಸು ದೇವರ ಪುತ್ರರಾಗಿದ್ದರೂ ತಾವು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡರು.
9 ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು. (aiōnios )
10 ಯೇಸು ದೇವರಿಂದ ನೇಮಕಗೊಂಡು, ಮೆಲ್ಕಿಜೆದೇಕನ ಕ್ರಮದ ಪ್ರಕಾರ ಮಹಾಯಾಜಕರಾದರು.
11 ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ನೀವು ಗ್ರಹಿಸ ಬಯಸದಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ.
12 ನೀವು ಇಷ್ಟರೊಳಗೆ ಬೋಧಕರಾಗಿ ಇರಬೇಕಾಗಿತ್ತು. ಆದರೂ ನಿಮಗೆ ದೇವರ ವಾಕ್ಯಗಳ ಪ್ರಾಥಮಿಕ ಉಪದೇಶಗಳನ್ನೇ ಕಲಿಸಿಕೊಡಬೇಕಾಗಿದೆ. ನಿಮಗೆ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.
13 ಹಾಲು ಕುಡಿಯುವವರು ಕೂಸಿನಂತಿದ್ದು ನೀತಿ ಬೋಧನೆಯಲ್ಲಿ ಅನುಭವ ಇಲ್ಲದವರಾಗಿದ್ದಾರೆ.
14 ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ಹೊಂದಿದವರಿಗೆ ಸೇರಿದ್ದಾಗಿದೆ.