< ಇಬ್ರಿಯರಿಗೆ ಬರೆದ ಪತ್ರಿಕೆ 2 >
1 ಆದ್ದರಿಂದ ದಾರಿಬಿಟ್ಟು ಹೋಗದಂತೆ, ನಾವು ಕೇಳಿದ ಸಂಗತಿಗಳಿಗೆ ಹೆಚ್ಚು ಲಕ್ಷ್ಯ ಕೊಡುವವರಾಗಿರಬೇಕು.
2 ಏಕೆಂದರೆ ದೇವದೂತರ ಮೂಲಕ ಹೇಳಲಾದ ವಾಕ್ಯವೇ ದೃಢಪಡಿಸಲಾಯಿತು. ಆದ್ದರಿಂದ ಆ ವಾಕ್ಯವನ್ನು ಮೀರಿದವರಿಗೂ ಅವಿಧೇಯರಾದವರಿಗೂ ನ್ಯಾಯವಾದ ದಂಡನೆ ಕೊಡಲಾಯಿತು.
3 ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.
4 ದೇವರು ಸಹ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ತಮ್ಮ ಚಿತ್ತಾನುಸಾರವಾಗಿ ದಯಪಾಲಿಸಿದ ಪವಿತ್ರಾತ್ಮರ ವರದಾನಗಳಿಂದಲೂ ಸಾಕ್ಷಿನೀಡಿ ದೃಢಪಡಿಸಿದ್ದಾರೆ.
5 ನಾವು ಸಾರುತ್ತಿರುವ ಮುಂದಣ ಲೋಕವನ್ನು ದೇವರು ತಮ್ಮ ದೂತರಿಗೆ ಅಧೀನ ಮಾಡಲಿಲ್ಲವಲ್ಲ.
6 ಆದರೆ ಪವಿತ್ರ ವೇದದ ಒಂದು ಸ್ಥಳದಲ್ಲಿ ಒಬ್ಬನು ಹೀಗೆ ಸಾಕ್ಷಿ ಹೇಳಿದ್ದಾನೆ: “ಮನುಷ್ಯನನ್ನು ನೀನು ನೆನಸುವುದಕ್ಕೆ ಅವನು ಎಷ್ಟು ಮಾತ್ರದವನು? ಮನುಷ್ಯಪುತ್ರನನ್ನು ಲಕ್ಷ್ಯವಿಡುವುದಕ್ಕೆ ಅವನು ಎಷ್ಟರವನು?
7 ನೀನು ಆತನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದೆಯಲ್ಲಾ? ಮಹಿಮೆಯನ್ನೂ ಮಾನವನ್ನೂ ಆತನಿಗೆ ಕಿರೀಟವನ್ನಾಗಿ ಇಟ್ಟೆ.
8 ಎಲ್ಲವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದ್ದೀಯಲ್ಲವೇ?” ಹೀಗೆ ದೇವರು ಎಲ್ಲವನ್ನೂ ಆತನಿಗೆ ಅಧೀನ ಮಾಡಿದರೆಂಬುದರಲ್ಲಿ ಆತನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ ಎಂಬುದು ಸ್ವಷ್ಟವಾಗುತ್ತದೆ. ಆದರೆ ಈಗ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಇನ್ನೂ ಕಾಣುವದಿಲ್ಲ.
9 ಆದರೂ ದೇವದೂತರಿಗಿಂತ ಸ್ವಲ್ಪಕಾಲ ಕಡಿಮೆಯಾಗಿ ಮಾಡಲಾದ ಆ ಒಬ್ಬಾತನು ಯೇಸುವೇ. ಈ ಯೇಸು ಬಾಧೆಪಟ್ಟು ಮೃತಪಟ್ಟಿದ್ದರಿಂದಲೇ ಮಹಿಮೆಯನ್ನೂ ಮಾನವನ್ನೂ ಕಿರೀಟವಾಗಿ ಹೊಂದಿದರೆಂದು ಎಂದು ನಾವು ಕಾಣುತ್ತೇವೆ. ದೇವರ ಕೃಪೆಯಿಂದಲೇ ಎಲ್ಲರಿಗೋಸ್ಕರ ಮರಣವನ್ನು ಈ ಯೇಸು ಅನುಭವಿಸಬೇಕಾಗಿತ್ತು.
10 ದೇವರು ಸಮಸ್ತವನ್ನೂ ತಮಗೋಸ್ಕರವೂ ತಮ್ಮ ಮೂಲಕವೂ ಉಂಟುಮಾಡಿ ಬಹುಮಂದಿ ಮಕ್ಕಳನ್ನು ಮಹಿಮೆಗೆ ತರುವಂತೆ ಅವರ ರಕ್ಷಣಾ ನಾಯಕರಾದ ಕ್ರಿಸ್ತ ಯೇಸುವನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ದೇವರಿಗೆ ಯುಕ್ತವಾಗಿತ್ತು.
11 ಪವಿತ್ರ ಮಾಡುವ ದೇವರೂ ಪವಿತ್ರರಾದವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಯೇಸು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡದೆ,
12 ಹೇಳಿದ್ದು, “ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು. ಸಭಾ ಮಧ್ಯದಲ್ಲಿ ನಿಮಗೆ ಸ್ತುತಿ ಪದಗಳನ್ನು ಹಾಡುವೆನು.”
13 ಎಂದೂ ಪುನಃ, “ನಾನು ದೇವರ ಮೇಲೆ ಭರವಸೆ ಇಡುವೆನು.” ಎಂದೂ ಪುನಃ, “ಇಗೋ ನಾನೂ, ದೇವರು ನನಗೆ ದಯಪಾಲಿಸಿರುವ ಮಕ್ಕಳೂ ನನಗಿದ್ದಾರೆ.” ಎಂದು ಹೇಳಿದ್ದಾರೆ.
14 ಮಕ್ಕಳು ರಕ್ತಮಾಂಸಧಾರಿಗಳು ಆಗಿರುವುದರಿಂದ ಯೇಸು ತಮ್ಮ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ನಾಶಮಾಡುವುದಕ್ಕೂ
15 ಮರಣ ಭಯದಿಂದ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರ ಮಾನವತ್ವದಲ್ಲಿ ಪಾಲುಗಾರರಾದರು.
16 ಯೇಸು ನಿಜವಾಗಿಯೂ ದೂತರಿಗಾಗಿ ಹಾಗೆ ಮಾಡದೆ ಅಬ್ರಹಾಮನ ಸಂತತಿಯವರಿಗಾಗಿ ಹಾಗೆ ಮಾಡಿದರು.
17 ಆದ್ದರಿಂದ ಯೇಸು ಎಲ್ಲಾ ವಿಷಯಗಳಲ್ಲಿಯೂ ತಮ್ಮ ಸಹೋದರರಿಗೆ ಸಮಾನವಾಗಬೇಕಾಯಿತು. ಹೀಗೆ ಅವರು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ದೇವರ ಸೇವೆಯಲ್ಲಿ ಕರುಣೆಯುಳ್ಳ ನಂಬಿಗಸ್ತರಾದ ಮಹಾಯಾಜಕರಾದರು.
18 ಆದ್ದರಿಂದ ಯೇಸು ತಾವೇ ಶೋಧನೆಗೊಳಗಾಗಿ ಬಾಧೆಯನ್ನು ಅನುಭವಿಸಿರುವುದರಿಂದ, ಶೋಧನೆಗೆ ಒಳಗಾಗುವವರಿಗೆ ಸಹಾಯ ಮಾಡುವುದಕ್ಕೆ ಶಕ್ತರಾಗಿದ್ದಾರೆ.