< ಆದಿಕಾಂಡ 44 >

1 ಯೋಸೇಫನು ತನ್ನ ಮನೆಯ ಉಗ್ರಾಣಿಕನಿಗೆ, “ಈ ಮನುಷ್ಯರ ಚೀಲಗಳಲ್ಲಿ ಹೊರುವುದಕ್ಕಾಗುವಷ್ಟು ಧಾನ್ಯವನ್ನು ತುಂಬಿಸಿ, ಪ್ರತಿಯೊಬ್ಬನ ಹಣವನ್ನು ಅವನವನ ಚೀಲದ ಬಾಯಲ್ಲಿ ಇಡು.
וַיְצַו אֶת־אֲשֶׁר עַל־בֵּיתוֹ לֵאמֹר מַלֵּא אֶת־אַמְתְּחֹת הָֽאֲנָשִׁים אֹכֶל כַּאֲשֶׁר יוּכְלוּן שְׂאֵת וְשִׂים כֶּֽסֶף־אִישׁ בְּפִי אַמְתַּחְתּֽוֹ׃
2 ನನ್ನ ಬೆಳ್ಳಿಯ ಪಾತ್ರೆಯನ್ನು ಚಿಕ್ಕವನ ಚೀಲದ ಬಾಯಲ್ಲಿ ಅವನ ಧಾನ್ಯ ಹಾಗೂ ಹಣದ ಸಂಗಡ ಇಡು,” ಎಂದು ಆಜ್ಞಾಪಿಸಿದನು. ಯೋಸೇಫನು ಹೇಳಿದಂತೆಯೇ ಅವನು ಮಾಡಿದನು.
וְאֶת־גְּבִיעִי גְּבִיעַ הַכֶּסֶף תָּשִׂים בְּפִי אַמְתַּחַת הַקָּטֹן וְאֵת כֶּסֶף שִׁבְרוֹ וַיַּעַשׂ כִּדְבַר יוֹסֵף אֲשֶׁר דִּבֵּֽר׃
3 ಸೂರ್ಯೋದಯವಾದಾಗ ಆ ಮನುಷ್ಯರನ್ನು ತಮ್ಮ ಕತ್ತೆಗಳ ಸಹಿತವಾಗಿ ಕಳುಹಿಸಲಾಯಿತು.
הַבֹּקֶר אוֹר וְהָאֲנָשִׁים שֻׁלְּחוּ הֵמָּה וַחֲמֹרֵיהֶֽם׃
4 ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವುದಕ್ಕಿಂತ ಮುಂಚೆ ಯೋಸೇಫನು ಮನೆಯ ಗೃಹನಿರ್ವಾಹಕನಿಗೆ, “ಆ ಮನುಷ್ಯರ ಹಿಂದೆ ಹೋಗು. ಅವರು ಸಿಕ್ಕಿದಾಗ, ‘ಏಕೆ ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಿದಿರಿ?
הֵם יָֽצְאוּ אֶת־הָעִיר לֹא הִרְחִיקוּ וְיוֹסֵף אָמַר לַֽאֲשֶׁר עַל־בֵּיתוֹ קוּם רְדֹף אַחֲרֵי הָֽאֲנָשִׁים וְהִשַּׂגְתָּם וְאָמַרְתָּ אֲלֵהֶם לָמָּה שִׁלַּמְתֶּם רָעָה תַּחַת טוֹבָֽה׃
5 ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ,’ ಎಂದು ಅವರಿಗೆ ಹೇಳು,” ಎಂದನು.
הֲלוֹא זֶה אֲשֶׁר יִשְׁתֶּה אֲדֹנִי בּוֹ וְהוּא נַחֵשׁ יְנַחֵשׁ בּוֹ הֲרֵעֹתֶם אֲשֶׁר עֲשִׂיתֶֽם׃
6 ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು.
וַֽיַּשִּׂגֵם וַיְדַבֵּר אֲלֵהֶם אֶת־הַדְּבָרִים הָאֵֽלֶּה׃
7 ಆಗ ಅವರು ಅವನಿಗೆ, “ನಮ್ಮ ಒಡೆಯನು ಏಕೆ ಇಂಥ ಮಾತುಗಳನ್ನಾಡುತ್ತಾನೆ? ನಿನ್ನ ದಾಸರು ಹೀಗೆ ಮಾಡುವವರಲ್ಲ.
וַיֹּאמְרוּ אֵלָיו לָמָּה יְדַבֵּר אֲדֹנִי כַּדְּבָרִים הָאֵלֶּה חָלִילָה לַעֲבָדֶיךָ מֵעֲשׂוֹת כַּדָּבָר הַזֶּֽה׃
8 ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವುದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು?
הֵן כֶּסֶף אֲשֶׁר מָצָאנוּ בְּפִי אַמְתְּחֹתֵינוּ הֱשִׁיבֹנוּ אֵלֶיךָ מֵאֶרֶץ כְּנָעַן וְאֵיךְ נִגְנֹב מִבֵּית אֲדֹנֶיךָ כֶּסֶף אוֹ זָהָֽב׃
9 ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವುದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು,” ಎಂದರು.
אֲשֶׁר יִמָּצֵא אִתּוֹ מֵעֲבָדֶיךָ וָמֵת וְגַם־אֲנַחְנוּ נִֽהְיֶה לַֽאדֹנִי לַעֲבָדִֽים׃
10 ಆಗ ಅವನು, “ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ, ಅವನು ನನಗೆ ದಾಸನಾಗಿರಲಿ, ಆದರೆ ನೀವು ನಿರಪರಾಧಿಗಳಾಗಿರುವಿರಿ,” ಎಂದನು.
וַיֹּאמֶר גַּם־עַתָּה כְדִבְרֵיכֶם כֶּן־הוּא אֲשֶׁר יִמָּצֵא אִתּוֹ יִהְיֶה־לִּי עָבֶד וְאַתֶּם תִּהְיוּ נְקִיִּֽם׃
11 ಅದಕ್ಕೆ ಅವರು ತ್ವರೆಪಟ್ಟು, ತಮ್ಮ ತಮ್ಮ ಚೀಲಗಳನ್ನು ನೆಲಕ್ಕೆ ಇಳಿಸಿ ಅವುಗಳನ್ನು ಬಿಚ್ಚಿದರು.
וַֽיְמַהֲרוּ וַיּוֹרִדוּ אִישׁ אֶת־אַמְתַּחְתּוֹ אָרְצָה וַֽיִּפְתְּחוּ אִישׁ אַמְתַּחְתּֽוֹ׃
12 ಅವರು ಹಿರಿಯನನ್ನು ಮೊದಲುಗೊಂಡು ಕಿರಿಯವನವರೆಗೆ ಶೋಧಿಸಲಾಗಿ, ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು.
וַיְחַפֵּשׂ בַּגָּדוֹל הֵחֵל וּבַקָּטֹן כִּלָּה וַיִּמָּצֵא הַגָּבִיעַ בְּאַמְתַּחַת בִּנְיָמִֽן׃
13 ಆಗ ಅವರು ತಮ್ಮ ವಸ್ತ್ರಗಳನ್ನು ಹರಿದುಕೊಂಡು, ತಮ್ಮ ತಮ್ಮ ಕತ್ತೆಗಳ ಮೇಲೆ ಚೀಲಗಳನ್ನು ಹೇರಿಕೊಂಡು ಪಟ್ಟಣಕ್ಕೆ ಮರಳಿ ಬಂದರು.
וַֽיִּקְרְעוּ שִׂמְלֹתָם וַֽיַּעֲמֹס אִישׁ עַל־חֲמֹרוֹ וַיָּשֻׁבוּ הָעִֽירָה׃
14 ಯೆಹೂದನೂ ಅವನ ಸಹೋದರರೂ ಯೋಸೇಫನು ಇನ್ನೂ ಮನೆಯಲ್ಲಿದ್ದಾಗಲೇ, ಅವನ ಮನೆಗೆ ಬಂದು ಮುಂದೆ ಅಡ್ಡಬಿದ್ದರು.
וַיָּבֹא יְהוּדָה וְאֶחָיו בֵּיתָה יוֹסֵף וְהוּא עוֹדֶנּוּ שָׁם וַיִּפְּלוּ לְפָנָיו אָֽרְצָה׃
15 ಆಗ ಯೋಸೇಫನು ಅವರಿಗೆ, “ನೀವು ಮಾಡಿದ ಈ ಕೆಲಸವೇನು? ನನ್ನಂಥ ಮನುಷ್ಯನು ದೈವೋಕ್ತಿಗಳನ್ನು ಬಲ್ಲೆನೆಂದು ನಿಮಗೆ ತಿಳಿದಿರಲಿಲ್ಲವೋ?” ಎಂದನು.
וַיֹּאמֶר לָהֶם יוֹסֵף מָֽה־הַמַּעֲשֶׂה הַזֶּה אֲשֶׁר עֲשִׂיתֶם הֲלוֹא יְדַעְתֶּם כִּֽי־נַחֵשׁ יְנַחֵשׁ אִישׁ אֲשֶׁר כָּמֹֽנִי׃
16 ಯೆಹೂದನು, “ನಾವು ನಮ್ಮ ಒಡೆಯನಿಗೆ ಏನು ಹೇಳೋಣ? ಏನು ಮಾತನಾಡೋಣ? ಹೇಗೆ ನಮ್ಮನ್ನು ನಾವು ನೀತಿವಂತರಾಗಿ ಮಾಡಿಕೊಳ್ಳೋಣ? ನಿನ್ನ ದಾಸರ ಪಾಪವನ್ನು ದೇವರು ಹೊರಪಡಿಸಿದ್ದಾರೆ. ನಾವೂ ಪಾತ್ರೆಯು ಯಾರ ಕೈಯಲ್ಲಿ ಸಿಕ್ಕಿತೋ ಅವನೂ ನನ್ನ ಒಡೆಯನಿಗೆ ದಾಸರಾಗಿದ್ದೇವೆ,” ಎಂದನು.
וַיֹּאמֶר יְהוּדָה מַה־נֹּאמַר לַֽאדֹנִי מַה־נְּדַבֵּר וּמַה־נִּצְטַדָּק הָאֱלֹהִים מָצָא אֶת־עֲוֺן עֲבָדֶיךָ הִנֶּנּוּ עֲבָדִים לַֽאדֹנִי גַּם־אֲנַחְנוּ גַּם אֲשֶׁר־נִמְצָא הַגָּבִיעַ בְּיָדֽוֹ׃
17 ಆಗ ಯೋಸೇಫನು, “ಹಾಗೆ ಎಂದಿಗೂ ಆಗಬಾರದು. ಯಾರ ಬಳಿಯಲ್ಲಿ ಆ ಪಾತ್ರೆಯು ಸಿಕ್ಕಿತೋ, ಅವನು ನನಗೆ ದಾಸನಾಗಿರಲಿ. ಆದರೆ ನೀವು ಸಮಾಧಾನವಾಗಿ ನಿಮ್ಮ ತಂದೆಯ ಬಳಿಗೆ ಹೋಗಿರಿ,” ಎಂದನು.
וַיֹּאמֶר חָלִילָה לִּי מֵעֲשׂוֹת זֹאת הָאִישׁ אֲשֶׁר נִמְצָא הַגָּבִיעַ בְּיָדוֹ הוּא יִהְיֶה־לִּי עָבֶד וְאַתֶּם עֲלוּ לְשָׁלוֹם אֶל־אֲבִיכֶֽם׃
18 ಯೆಹೂದನು ಅವನ ಸಮೀಪಕ್ಕೆ ಬಂದು, “ನನ್ನ ಒಡೆಯನೇ, ನನ್ನ ಒಡೆಯನ ಕಿವಿಗಳಲ್ಲಿ ಒಂದು ಮಾತು ಹೇಳುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಗಬೇಕು. ನಿನ್ನ ದಾಸನ ಮೇಲೆ ನಿನ್ನ ಕೋಪವು ಉರಿಯದೆ ಇರಲಿ. ಏಕೆಂದರೆ ನೀನು ಫರೋಹನಿಗೆ ಸಮಾನನು.
וַיִּגַּשׁ אֵלָיו יְהוּדָה וַיֹּאמֶר בִּי אֲדֹנִי יְדַבֶּר־נָא עַבְדְּךָ דָבָר בְּאׇזְנֵי אֲדֹנִי וְאַל־יִחַר אַפְּךָ בְּעַבְדֶּךָ כִּי כָמוֹךָ כְּפַרְעֹֽה׃
19 ನನ್ನ ಒಡೆಯನೇ, ‘ನಿಮಗೆ ತಂದೆಯೂ ಸಹೋದರರೂ ಇದ್ದಾರೋ,’ ಎಂದು ತನ್ನ ದಾಸರನ್ನು ಕೇಳಲು,
אֲדֹנִי שָׁאַל אֶת־עֲבָדָיו לֵאמֹר הֲיֵשׁ־לָכֶם אָב אוֹ־אָֽח׃
20 ನಾವು ನಮ್ಮ ಒಡೆಯನಿಗೆ, ‘ನಮಗೆ ಮುದುಕನಾದ ತಂದೆಯೂ ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಚಿಕ್ಕ ಮಗನೂ ಇದ್ದಾನೆ, ಅವನ ಸಹೋದರನು ಸತ್ತುಹೋಗಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿಸುತ್ತಾನೆ,’ ಎಂದು ಹೇಳಿದೆವು.
וַנֹּאמֶר אֶל־אֲדֹנִי יֶשׁ־לָנוּ אָב זָקֵן וְיֶלֶד זְקֻנִים קָטָן וְאָחִיו מֵת וַיִּוָּתֵר הוּא לְבַדּוֹ לְאִמּוֹ וְאָבִיו אֲהֵבֽוֹ׃
21 “ಅದಕ್ಕೆ ನೀನು ನಿನ್ನ ದಾಸರಿಗೆ, ‘ನಾನು ಅವನನ್ನು ನೋಡುವ ಹಾಗೆ, ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,’ ಎಂದು ಹೇಳಿದೆಯಲ್ಲಾ.
וַתֹּאמֶר אֶל־עֲבָדֶיךָ הוֹרִדֻהוּ אֵלָי וְאָשִׂימָה עֵינִי עָלָֽיו׃
22 ನಾವು ನಮ್ಮ ಒಡೆಯನಿಗೆ, ‘ಆ ಹುಡುಗನು ನಮ್ಮ ತಂದೆಯನ್ನು ಬಿಡಕೂಡದು. ಅವನು ತಂದೆಯನ್ನು ಬಿಟ್ಟರೆ, ಅವನು ಸಾಯುವನು,’ ಎಂದು ಹೇಳಿದೆವು.
וַנֹּאמֶר אֶל־אֲדֹנִי לֹא־יוּכַל הַנַּעַר לַעֲזֹב אֶת־אָבִיו וְעָזַב אֶת־אָבִיו וָמֵֽת׃
23 ಆಗ ನೀವು ನಿನ್ನ ದಾಸರಿಗೆ, ‘ನಿಮ್ಮ ಚಿಕ್ಕ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ, ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು,’ ಎಂದು ಹೇಳಿದೆ.
וַתֹּאמֶר אֶל־עֲבָדֶיךָ אִם־לֹא יֵרֵד אֲחִיכֶם הַקָּטֹן אִתְּכֶם לֹא תֹסִפוּן לִרְאוֹת פָּנָֽי׃
24 ಹೀಗಿರಲಾಗಿ ನಾವು ನಿನ್ನ ದಾಸನಾದ ನಮ್ಮ ತಂದೆಯ ಬಳಿಗೆ ಹೋದಾಗ, ನನ್ನ ಒಡೆಯನ ಮಾತುಗಳನ್ನು ಅವನಿಗೆ ತಿಳಿಸಿದೆವು.
וַיְהִי כִּי עָלִינוּ אֶֽל־עַבְדְּךָ אָבִי וַנַּגֶּד־לוֹ אֵת דִּבְרֵי אֲדֹנִֽי׃
25 “ನಮ್ಮ ತಂದೆಯು, ‘ನೀವು ತಿರುಗಿ ಹೋಗಿ, ನಮಗೆ ಸ್ವಲ್ಪ ಆಹಾರವನ್ನು ಕೊಂಡುಕೊಳ್ಳಿರಿ,’ ಎಂದನು.
וַיֹּאמֶר אָבִינוּ שֻׁבוּ שִׁבְרוּ־לָנוּ מְעַט־אֹֽכֶל׃
26 ಆಗ ನಾವು, ‘ಹೋಗುವುದಕ್ಕಾಗದು, ನಮ್ಮ ಚಿಕ್ಕ ತಮ್ಮನು ನಮ್ಮೊಂದಿಗೆ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಏಕೆಂದರೆ ನಮ್ಮ ಚಿಕ್ಕ ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ, ಆ ಮನುಷ್ಯನ ಮುಖವನ್ನು ನಾವು ನೋಡುವುದಕ್ಕಾಗುವುದು,’ ಎಂದು ಹೇಳಿದೆವು.
וַנֹּאמֶר לֹא נוּכַל לָרֶדֶת אִם־יֵשׁ אָחִינוּ הַקָּטֹן אִתָּנוּ וְיָרַדְנוּ כִּי־לֹא נוּכַל לִרְאוֹת פְּנֵי הָאִישׁ וְאָחִינוּ הַקָּטֹן אֵינֶנּוּ אִתָּֽנוּ׃
27 “ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು, ‘ನನ್ನ ಹೆಂಡತಿಯು ನನಗೆ ಇಬ್ಬರು ಪುತ್ರರನ್ನು ಹೆತ್ತಳೆಂಬುದು ನಿಮಗೆ ತಿಳಿದಿದೆ.
וַיֹּאמֶר עַבְדְּךָ אָבִי אֵלֵינוּ אַתֶּם יְדַעְתֶּם כִּי שְׁנַיִם יָֽלְדָה־לִּי אִשְׁתִּֽי׃
28 ಒಬ್ಬನು ನನ್ನ ಬಳಿಯಿಂದ ಹೋಗಿ ಬಿಟ್ಟನು. “ಅವನು ನಿಶ್ಚಯವಾಗಿ ಕಾಡುಮೃಗದಿಂದ ಸೀಳಿ ಸತ್ತಿರಬೇಕು,” ಎಂದು ಹೇಳಿದಿರಿ. ಅವನನ್ನು ನಾನು ಈ ದಿನದವರೆಗೂ ನೋಡಲಿಲ್ಲ.
וַיֵּצֵא הָֽאֶחָד מֵֽאִתִּי וָאֹמַר אַךְ טָרֹף טֹרָף וְלֹא רְאִיתִיו עַד־הֵֽנָּה׃
29 ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಅವನಿಗೂ ಕೇಡು ಬಂದರೆ, ನನ್ನ ಮುದಿ ತಲೆಯು ದುಃಖದಿಂದ ಸಮಾಧಿಗೆ ಇಳಿಯುವಂತೆ ಮಾಡುವಿರಿ,’ ಎಂದು ಹೇಳಿದನು. (Sheol h7585)
וּלְקַחְתֶּם גַּם־אֶת־זֶה מֵעִם פָּנַי וְקָרָהוּ אָסוֹן וְהֽוֹרַדְתֶּם אֶת־שֵׂיבָתִי בְּרָעָה שְׁאֹֽלָה׃ (Sheol h7585)
30 “ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದಲ್ಲಿ ನೆಟ್ಟಿದ್ದರಿಂದ,
וְעַתָּה כְּבֹאִי אֶל־עַבְדְּךָ אָבִי וְהַנַּעַר אֵינֶנּוּ אִתָּנוּ וְנַפְשׁוֹ קְשׁוּרָה בְנַפְשֽׁוֹ׃
31 ಹುಡುಗನು ನಮ್ಮ ಸಂಗಡ ಇಲ್ಲದಿರುವುದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯುವಂತೆ ಮಾಡುವರು. (Sheol h7585)
וְהָיָה כִּרְאוֹתוֹ כִּי־אֵין הַנַּעַר וָמֵת וְהוֹרִידוּ עֲבָדֶיךָ אֶת־שֵׂיבַת עַבְדְּךָ אָבִינוּ בְּיָגוֹן שְׁאֹֽלָה׃ (Sheol h7585)
32 ಏಕೆಂದರೆ ನಿನ್ನ ದಾಸನಾದ ನಾನು, ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆಯಾಗಿ, ‘ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆನು,’ ಎಂದು ಹೇಳಿಕೊಂಡಿದ್ದೇನೆ.
כִּי עַבְדְּךָ עָרַב אֶת־הַנַּעַר מֵעִם אָבִי לֵאמֹר אִם־לֹא אֲבִיאֶנּוּ אֵלֶיךָ וְחָטָאתִי לְאָבִי כׇּל־הַיָּמִֽים׃
33 “ಹಾಗಿದ್ದಲ್ಲಿ ಆ ಹುಡುಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು. ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ.
וְעַתָּה יֵֽשֶׁב־נָא עַבְדְּךָ תַּחַת הַנַּעַר עֶבֶד לַֽאדֹנִי וְהַנַּעַר יַעַל עִם־אֶחָֽיו׃
34 ಹುಡುಗನು ನನ್ನ ಬಳಿಯಲ್ಲಿರದೆ, ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡಬೇಕಾದೀತು,” ಎಂದನು.
כִּי־אֵיךְ אֶֽעֱלֶה אֶל־אָבִי וְהַנַּעַר אֵינֶנּוּ אִתִּי פֶּן אֶרְאֶה בָרָע אֲשֶׁר יִמְצָא אֶת־אָבִֽי׃

< ಆದಿಕಾಂಡ 44 >