< ಆದಿಕಾಂಡ 28 >
1 ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಆಜ್ಞಾಪಿಸಿದ್ದೇನೆಂದರೆ, “ಕಾನಾನ್ಯರ ಸ್ತ್ರೀಯರನ್ನು ನೀನು ಮದುವೆಯಾಗಬಾರದು.
೧ಆಗ ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಅವನಿಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಕಾನಾನ್ಯರ ಹೆಣ್ಣನ್ನು ಮದುವೆಯಾಗಬಾರದು.
2 ಕೂಡಲೇ ನಿನ್ನ ತಾಯಿಯ ತಂದೆ ಬೆತೂಯೇಲನು ಇರುವ ಪದ್ದನ್ ಅರಾಮಿಗೆ ಹೋಗು. ನಿನ್ನ ತಾಯಿಯ ಸಹೋದರ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೋ.
೨ಪದ್ದನ್ ಅರಾಮ್ ದೇಶದಲ್ಲಿರುವ ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೊರಟು ಹೋಗು. ಅಲ್ಲಿ ನಿನ್ನ ತಾಯಿಯ ಸಹೋದರನಾದ ಲಾಬಾನನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೋ.
3 ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಿ, ನೀನು ದೊಡ್ಡ ಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ.
೩ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ.
4 ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ನೀನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೂ, ನಿನ್ನ ಸಂತತಿಗೂ ಕೊಡಲಿ,” ಎಂದನು.
೪ದೇವರು ಅಬ್ರಹಾಮನಿಗೆ ಕೊಟ್ಟಿರುವ ಆಶೀರ್ವಾದವನ್ನು ನಿನಗೂ, ನಿನ್ನ ಸಂತತಿಗೂ ಕೊಡಲಿ, ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಹಾಗೆ, ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಸ್ವತ್ತಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ” ಎಂದನು.
5 ಇಸಾಕನು ಯಾಕೋಬನನ್ನು ಕಳುಹಿಸಿದಾಗ, ಅವನು ಪದ್ದನ್ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿ ರೆಬೆಕ್ಕಳ ಸಹೋದರ ಅರಾಮಿನವನಾದ ಬೆತೂಯೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
೫ಇಸಾಕನು ಯಾಕೋಬನನ್ನು ಕಳುಹಿಸಿದಾಗ ಅವನು ಪದ್ದನ್ ಅರಾಮನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿಯಾದ ರೆಬೆಕ್ಕಳ ಅಣ್ಣನಾದ ಅರಾಮಿನವನಾದ ಬೆತೂವೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
6 ಇಸಾಕನು ಯಾಕೋಬನನ್ನು ಆಶೀರ್ವದಿಸಿ, ಅವನಿಗೆ ಹೆಂಡತಿಯನ್ನು ತೆಗೆದುಕೊಳ್ಳುವುದಕ್ಕೆ ಪದ್ದನ್ ಅರಾಮಿಗೆ ಕಳುಹಿಸಿದ್ದನ್ನೂ, ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ, ಅವನಿಗೆ, “ಕಾನಾನ್ಯರ ಪುತ್ರಿಯರಲ್ಲಿ ಹೆಂಡತಿಯನ್ನು ತೆಗೆದುಕೊಳ್ಳಬಾರದು,” ಎಂದು ಆಜ್ಞಾಪಿಸಿದ್ದನ್ನೂ, ಏಸಾವನು ತಿಳಿದುಕೊಂಡನು.
೬ಇಸಾಕನು ಯಾಕೋಬನನ್ನು ಆಶೀರ್ವದಿಸಿ ಪದ್ದನ್ ಅರಾಮಿನಲ್ಲಿ ಹೆಣ್ಣನ್ನು ಹುಡುಕಿ ಮದುವೆ ಮಾಡಿಕೊಳ್ಳಲು ಕಳುಹಿಸಿದ್ದನ್ನೂ, ಅವನು ಯಾಕೋಬನನ್ನು ಆಶೀರ್ವದಿಸುವಾಗ ಅವನಿಗೆ, ನೀನು ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಕೊಟ್ಟದ್ದನ್ನೂ, ಏಸಾವನು ನೋಡಿದನು.
7 ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ, ಪದ್ದನ್ ಅರಾಮಿಗೆ ಹೋದದ್ದನ್ನೂ
೭ಯಾಕೋಬನು ತನ್ನ ತಂದೆತಾಯಿಗಳ ಮಾತಿಗೆ ವಿಧೇಯನಾಗಿ ಪದ್ದನ್ ಅರಾಮಿಗೆ ಹೋದದ್ದನ್ನೂ ಸಹ ಏಸಾವನು ನೋಡಿದನು.
8 ಕಾನಾನ್ಯರ ಪುತ್ರಿಯರು ತನ್ನ ತಂದೆ ಇಸಾಕನಿಗೆ ಮೆಚ್ಚಿಗೆಯಾಗಲಿಲ್ಲವೆಂದು ಏಸಾವನು ತಿಳಿದು,
೮ಕಾನಾನ್ಯರ ಹೆಣ್ಣು ಮಕ್ಕಳು ತನ್ನ ತಂದೆಯಾದ ಇಸಾಕನಿಗೆ ಇಷ್ಟವಿಲ್ಲವೆಂದು ಏಸಾವನು ತಿಳಿದುಕೊಂಡನು.
9 ಅವನು ಇಷ್ಮಾಯೇಲನ ಬಳಿಗೆ ಹೋಗಿ, ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗ ಇಷ್ಮಾಯೇಲನ ಮಗಳೂ, ನೆಬಾಯೋತನ ತಂಗಿಯೂ ಆಗಿರುವ ಮಹಲತ್ ಎಂಬವಳನ್ನೂ ಮದುವೆಮಾಡಿಕೊಂಡನು.
೯ಏಸಾವನು ಇಷ್ಮಾಯೇಲನ ಬಳಿಗೆ ಹೋಗಿ ಅಬ್ರಹಾಮನ ಮಗನೂ ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತಳನ್ನು ಮದುವೆ ಮಾಡಿಕೊಂಡನು.
10 ಆಗ ಯಾಕೋಬನು ಬೇರ್ಷೆಬದಿಂದ ಹಾರಾನಿನ ಕಡೆಗೆ ಹೊರಟನು.
೧೦ಆಗ ಯಾಕೋಬನು ಹಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು.
11 ಅವನು ಒಂದು ಸ್ಥಳಕ್ಕೆ ಸೇರಿದಾಗ, ಸೂರ್ಯಾಸ್ತಮವಾದದ್ದರಿಂದ ಅಲ್ಲಿ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದು ತಲೆ ದಿಂಬನ್ನಾಗಿ ಇಟ್ಟುಕೊಂಡು, ಆ ಸ್ಥಳದಲ್ಲಿ ಮಲಗಿಕೊಂಡನು.
೧೧ಅವನು ಪ್ರಯಾಣಾರ್ಥವಾಗಿ ಹೋಗುತ್ತಿರುವಾಗ ಹೊತ್ತು ಮುಳುಗಿದ್ದರಿಂದ ಆ ರಾತ್ರಿ ಅಲ್ಲಿಯೇ ಉಳಿದುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.
12 ಆಗ ಅವನು ಒಂದು ಕನಸುಕಂಡನು. ಏಣಿಯು ಭೂಮಿಯ ಮೇಲೆ ನಿಂತಿತ್ತು. ಅದರ ತುದಿಯು ಪರಲೋಕಕ್ಕೆ ಮುಟ್ಟಿತ್ತು. ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
೧೨ಆ ರಾತ್ರಿ ಅವನು ಒಂದು ಕನಸು ಕಂಡನು. ಆ ಕನಸಿನಲ್ಲಿ ಒಂದು ಏಣಿಯು ಭೂಮಿಯ ಮೇಲೆ ನಿಂತಿತು. ಅದರ ತುದಿ ಆಕಾಶವನ್ನು ಮುಟ್ಟಿತು. ಅದರ ಮೇಲೆ ದೇವ ದೂತರು ಏರುತ್ತಾ ಇಳಿಯುತ್ತಾ ಇದ್ದರು.
13 ಇದಲ್ಲದೆ ಯೆಹೋವ ದೇವರು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರೂ, ಇಸಾಕನ ದೇವರೂ ಆದ ಯೆಹೋವ ದೇವರು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು.
೧೩ಇದಲ್ಲದೆ ಯೆಹೋವನು ಅದರ ಮೇಲೆ ನಿಂತುಕೊಂಡು, “ನಿನ್ನ ತಂದೆಯಾದ ಅಬ್ರಹಾಮನ ದೇವರೂ, ಇಸಾಕನ ದೇವರೂ ಆಗಿರುವ ಯೆಹೋವನು ನಾನೇ. ನೀನು ಮಲಗಿರುವ ಭೂಮಿಯನ್ನು ನಿನಗೂ, ನಿನ್ನ ಸಂತತಿಗೂ ಕೊಡುವೆನು.
14 ನಿನ್ನ ಸಂತತಿಯು ಭೂಮಿಯ ಧೂಳಿನಂತೆ ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣೋತ್ತರಗಳಿಗೆ ಹರಡಿಕೊಳ್ಳುವೆ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಜನರು ಆಶೀರ್ವಾದ ಹೊಂದುವರು.
೧೪ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣ ಉತ್ತರ ದಿಕ್ಕುಗಳಿಗೆ ಹರಡಿಕೊಳ್ಳುವಿ. ನಿನ್ನಿಂದಲೂ, ನಿನ್ನ ಸಂತತಿಯಿಂದಲೂ, ಭೂಮಿಯ ಎಲ್ಲಾ ಕುಲದವರು ಆಶೀರ್ವಾದ ಹೊಂದುವರು.
15 ಇಗೋ, ನಾನು ನಿನ್ನ ಸಂಗಡ ಇದ್ದು, ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಈ ದೇಶಕ್ಕೆ ನಿನ್ನನ್ನು ತಿರುಗಿ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವವರೆಗೆ ನಿನ್ನನ್ನು ಬಿಡುವುದಿಲ್ಲ,” ಎಂದರು.
೧೫ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ, ಪುನಃ ಈ ದೇಶಕ್ಕೆ ಬರಮಾಡುವೆನು. ಏಕೆಂದರೆ ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸದ ಹೊರತು ಬಿಡುವುದಿಲ್ಲ” ಎಂದನು.
16 ತರುವಾಯ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ನಿಶ್ಚಯವಾಗಿ ಈ ಸ್ಥಳದಲ್ಲಿ ಯೆಹೋವ ದೇವರು ಇದ್ದಾರೆ. ಇದನ್ನು ನಾನು ಅರಿಯಲಿಲ್ಲ,” ಎಂದನು.
೧೬ಯಾಕೋಬನು ನಿದ್ದೆಯಿಂದ ಎಚ್ಚೆತ್ತು, “ನಿಜವಾಗಿ ಯೆಹೋವನು ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇದು ನನಗೆ ತಿಳಿಯದೆ ಹೋಯಿತು” ಎಂದನು.
17 ಅವನು ಭಯಪಟ್ಟು, “ಈ ಸ್ಥಳವು ಎಷ್ಟೋ ಗಂಭೀರವಾದದ್ದು, ಇದು ದೇವರ ಮನೆಯೇ ಹೊರತು ಬೇರೆಯಲ್ಲ. ಇದೇ ಪರಲೋಕದ ಬಾಗಿಲು,” ಎಂದನು.
೧೭ಅವನು ಭಯಪಟ್ಟವನಾಗಿ, “ಈ ಸ್ಥಳವು ಪವಿತ್ರವಾದ್ದದು. ಇದು ದೇವರ ಮನೆಯೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು” ಎಂದನು.
18 ಯಾಕೋಬನು ಬೆಳಿಗ್ಗೆ ಎದ್ದು, ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು, ಅದನ್ನು ಸ್ತಂಭವಾಗಿ ನೆಟ್ಟು, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
೧೮ಯಾಕೋಬನು ಬೆಳಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನಿಲ್ಲಿಸಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
19 ಇದಲ್ಲದೆ ಅವನು ಆ ಸ್ಥಳಕ್ಕೆ, ಬೇತೇಲ್, ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಸ್ಥಳಕ್ಕೆ, ಲೂಜ್ ಎಂದು ಹೆಸರಿತ್ತು.
೧೯ಇದಲ್ಲದೆ ಅವನು ಆ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು. ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ “ಲೂಜ್” ಎಂದು ಹೆಸರಿತ್ತು.
20 ಆಗ ಯಾಕೋಬನು ಪ್ರಮಾಣಮಾಡಿ, “ದೇವರು ನನ್ನ ಸಂಗಡ ಇದ್ದು, ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ, ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ ನನಗೆ ಕೊಟ್ಟು,
೨೦ಯಾಕೋಬನು ಅಲ್ಲಿ ಪ್ರಮಾಣ ಮಾಡಿ, “ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ಉಣ್ಣುವುದಕ್ಕೆ ಆಹಾರವನ್ನೂ, ಉಡುವುದಕ್ಕೆ ವಸ್ತ್ರವನ್ನೂ, ನನಗೆ ಕೊಟ್ಟು,
21 ನನ್ನನ್ನು ಸಮಾಧಾನವಾಗಿ ನನ್ನ ತಂದೆಯ ಮನೆಗೆ ತಿರುಗಿ ಬರಮಾಡಿದರೆ, ಯೆಹೋವ ನನಗೆ ದೇವರಾಗಿರುವರು.
೨೧ತಿರುಗಿ ನನ್ನನ್ನು ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಯೆಹೋವನೇ ನನಗೆ ದೇವರಾಗಿರುವನು.
22 ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವುದು. ಆಗ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ದೇವರಿಗೆ ನಾನು ಖಂಡಿತವಾಗಿ ಕೊಡುವೆನು,” ಎಂದನು.
೨೨ಇದಲ್ಲದೆ ನಾನು ಸ್ತಂಭವಾಗಿ ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗುವುದು. ಆಗ ನೀನು ನನಗೆ ಕೊಡುವುದರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು” ಎಂದು ಹರಕೆಮಾಡಿಕೊಂಡನು.