< ಆದಿಕಾಂಡ 25 >
1 ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬಳನ್ನು ಮದುವೆಮಾಡಿಕೊಂಡನು.
2 ಆಕೆಯು ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.
3 ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು. ದೆದಾನನ ಪುತ್ರರು ಅಶ್ಯೂರರು, ಲೆಟೂಶ್ಯರೂ, ಲೆಯುಮ್ಯರೂ.
4 ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು.
5 ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕನಿಗೆ ಕೊಟ್ಟನು.
6 ಅಬ್ರಹಾಮನಿಗೆ ಇದ್ದ ಉಪಪತ್ನಿಯರ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು, ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಕಳುಹಿಸಿದನು.
7 ಅಬ್ರಹಾಮನು ನೂರೆಪ್ಪತ್ತೈದು ವರ್ಷಗಳವರೆಗೆ ಜೀವಿಸಿದನು.
8 ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿ ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.
9 ಅವನ ಪುತ್ರರಾದ ಇಸಾಕನೂ, ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಳಿಟ್ಟರು.
10 ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅಬ್ರಹಾಮನಿಗೂ, ಅವನ ಹೆಂಡತಿ ಸಾರಳಿಗೂ ಒಂದೇ ಸ್ಥಳದಲ್ಲಿ ಸಮಾಧಿ ಆಯಿತು.
11 ಅಬ್ರಹಾಮನು ಸತ್ತ ನಂತರ ದೇವರು ಅವನ ಮಗ ಇಸಾಕನನ್ನು ಆಶೀರ್ವದಿಸಿದರು. ಇಸಾಕನು ಬೇರ್ ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು.
12 ಸಾರಳ ದಾಸಿ ಈಜಿಪ್ಟಿನ ಹಾಗರಳು ಅಬ್ರಹಾಮನಿಗೆ ಹೆತ್ತ ಮಗ ಇಷ್ಮಾಯೇಲನ ವಂಶಾವಳಿ:
13 ಜನನದ ಪ್ರಕಾರ ಇಷ್ಮಾಯೇಲನ ಪುತ್ರರ ಹೆಸರುಗಳು ಇವೇ: ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತ್, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
14 ಮಿಷ್ಮಾ, ದೂಮಾ, ಮಸ್ಸಾ,
15 ಹದದ್, ತೇಮಾ, ಯೆಟೂರ್, ನಾಫೀಷ್, ಕೇದೆಮ.
16 ಇವರೇ ಇಷ್ಮಾಯೇಲನ ಪುತ್ರರು. ಇವುಗಳೇ ಅವರ ಗ್ರಾಮಗಳ ಪ್ರಕಾರವಾಗಿಯೂ, ಪಾಳೆಯಗಳ ಪ್ರಕಾರವಾಗಿಯೂ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.
17 ಇಷ್ಮಾಯೇಲನು ಬದುಕಿದ ವರ್ಷಗಳು ನೂರಮೂವತ್ತೇಳು. ಅವನು ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.
18 ಅವನ ವಂಶಸ್ಥರು ಅಸ್ಸೀರಿಯಗೆ ಹೋಗುವ, ಈಜಿಪ್ಟಿನ ಮೇರೆಯಲ್ಲಿ ಹವೀಲದಿಂದ ಶೂರ್ವರೆಗಿನ ಪ್ರದೇಶದಲ್ಲಿ ವಾಸಿಸಿದರು. ಅವರು ತಮ್ಮ ಎಲ್ಲಾ ಸಹೋದರರೊಂದಿಗೆ ಎದುರುಬದಿರಿನಲ್ಲೇ ವಾಸಮಾಡಿದರು.
19 ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನಿಂದ ಇಸಾಕನು ಹುಟ್ಟಿದನು.
20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂಯೇಲನ ಮಗಳೂ, ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತೆಗೆದುಕೊಂಡನು.
21 ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು.
22 ಅವಳ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು, “ನನಗೆ ಏಕೆ ಹೀಗಾಗುತ್ತಿದೆ?” ಎಂದು ಕೇಳಿ, ಯೆಹೋವ ದೇವರ ಬಳಿಗೆ ವಿಚಾರಿಸುವುದಕ್ಕೆ ಹೋದಳು.
23 ಯೆಹೋವ ದೇವರು ಆಕೆಗೆ ಹೀಗೆ ಹೇಳಿದರು: “ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ಜನಾಂಗಗಳು ಹೊರಟುಬಂದು ಬೇರೆಯಾಗುವುವು. ಒಂದು ಇನ್ನೊಂದಕ್ಕಿಂತ ಬಲವಾಗಿರುವುದು. ಇದಲ್ಲದೆ ಹಿರಿಯನು ಕಿರಿಯವನಿಗೆ ಸೇವೆಮಾಡುವನು.”
24 ಆಕೆಯು ಹೆರುವುದಕ್ಕೆ ದಿನತುಂಬಿದಾಗ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು.
25 ಮೊದಲನೆಯವನು ಕೆಂಪಾಗಿಯೂ ಕೂದಲಿನ ವಸ್ತ್ರದಂತೆ ಇಡೀ ದೇಹವು ಇದ್ದುದರಿಂದ ಅವನಿಗೆ, ಏಸಾವ, ಎಂದು ಹೆಸರಿಟ್ಟರು.
26 ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹೊರಗೆ ಬಂದನು. ಅವನಿಗೆ, ಯಾಕೋಬ, ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರವತ್ತು ವರ್ಷದವನಾಗಿದ್ದನು.
27 ಆ ಹುಡುಗರು ಬೆಳೆದಾಗ ಏಸಾವನು ಬೇಟೆಯಾಡುವುದರಲ್ಲಿ ಜಾಣನಾಗಿದ್ದು, ಅಡವಿಯ ಮನುಷ್ಯನಾದನು. ಯಾಕೋಬನು ಗುಡಾರಗಳಲ್ಲಿ ವಾಸಮಾಡುವ ಸಾಧು ಮನುಷ್ಯನಾಗಿದ್ದನು.
28 ಬೇಟೆಯಲ್ಲಿ ಆಸಕ್ತನಾಗಿದ್ದ ಇಸಾಕನು ಏಸಾವನನ್ನು ಪ್ರೀತಿಸಿದನು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29 ಒಂದು ಸಾರಿ ಯಾಕೋಬನು ಅಡಿಗೆ ಮಾಡುತ್ತಿದ್ದಾಗ, ಏಸಾವನು ದಣಿದು ಅಡವಿಯಿಂದ ಬಂದನು.
30 ಏಸಾವನು ಯಾಕೋಬನಿಗೆ, “ಆ ಕೆಂಪಾದ ಪದಾರ್ಥವನ್ನು ತಿನ್ನುವುದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ,” ಎಂದನು. ಆದ್ದರಿಂದ ಅವನಿಗೆ, ಎದೋಮ್, ಎಂದು ಹೆಸರಾಯಿತು.
31 ಆಗ ಯಾಕೋಬನು, “ಈ ಹೊತ್ತು ನಿನ್ನ ಜೇಷ್ಠ ಪುತ್ರನ ಹಕ್ಕನ್ನು ನನಗೆ ಮಾರು,” ಎಂದನು.
32 ಏಸಾವನು, “ಇಗೋ, ನಾನು ಸಾಯುತ್ತಿದ್ದೇನೆ, ಜೇಷ್ಠ ಪುತ್ರನ ಹಕ್ಕಿನಿಂದ ನನಗೇನು ಲಾಭ?” ಎಂದನು.
33 ಯಾಕೋಬನು, “ಈ ಹೊತ್ತು ನನಗೆ ಪ್ರಮಾಣಮಾಡು,” ಎಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ, ತನ್ನ ಜೇಷ್ಠ ಪುತ್ರನ ಹಕ್ಕನ್ನು ಅವನಿಗೆ ಮಾರಿದನು.
34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ, ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಅವನು ತಿಂದು, ಕುಡಿದು ಎದ್ದು ಹೋದನು. ಹೀಗೆ ಏಸಾವನು ತನ್ನ ಜೇಷ್ಠ ಪುತ್ರನ ಹಕ್ಕನ್ನು ತಾತ್ಸಾರದಿಂದ ಕಂಡನು.