< ಆದಿಕಾಂಡ 23 >
1 ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು.
೧ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದಳು. ಇದು ಅವಳ ಒಟ್ಟು ಜೀವಮಾನ ಕಾಲದ ವರ್ಷಗಳು.
2 ಅವಳು ಕಾನಾನ್ ದೇಶದಲ್ಲಿರುವ ಹೆಬ್ರೋನಿನಲ್ಲಿ ಅಂದರೆ ಕಿರ್ಯತ್ ಅರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡಿದನು.
೨ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಗಾಗಿ ಗೋಳಾಡಿ ಕಣ್ಣೀರು ಸುರಿಸಿದನು.
3 ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ,
೩ಆಮೇಲೆ ಆಕೆಯ ಶವದ ಬಳಿಯಿಂದ ಅಬ್ರಹಾಮನು ಎದ್ದು ಹಿತ್ತಿಯರ ಬಳಿಗೆ ಹೋಗಿ ಅವರಿಗೆ,
4 “ನಾನು ನಿಮ್ಮೊಂದಿಗೆ ಪರದೇಶಸ್ಥನೂ, ಪರವಾಸಿಯೂ ಆಗಿದ್ದೇನೆ. ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ. ಆಗ ನನ್ನ ಹೆಂಡತಿಯ ಶವವನ್ನು ಹೂಳಿಡುವೆನು,” ಎಂದನು.
೪“ನಾನು ನಿಮ್ಮಲ್ಲಿ ಪರದೇಶದವನೂ, ಪ್ರವಾಸಿಯೂ ಆಗಿದ್ದೇನೆ. ಈಗ ಮರಣಹೊಂದಿರುವ ನನ್ನ ಪತ್ನಿಯ ಸಮಾಧಿಗೋಸ್ಕರ ಸ್ವಲ್ಪ ಭೂಮಿಯನ್ನು ನನ್ನ ಸ್ವಂತಕ್ಕೆ ಕೊಡಿ” ಎಂದು ಕೇಳಿಕೊಂಡನು.
5 ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು,
೫ಹಿತ್ತಿಯರು ಅಬ್ರಹಾಮನಿಗೆ,
6 “ಒಡೆಯಾ, ನಮ್ಮ ಮಾತನ್ನು ಕೇಳು, ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ. ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಳಿಡು. ನಮ್ಮಲ್ಲಿ ಯಾರೂ ನಿನಗೆ ಸಮಾಧಿಯನ್ನು ಕೊಡುವುದಿಲ್ಲ ಎಂದು ಹೇಳಲಾರರು,” ಎಂದರು.
೬“ಸ್ವಾಮಿ, ನಮ್ಮ ಮಾತನ್ನು ಕೇಳು. ನೀನು ನಮಗೆ ಮಹಾ ಪ್ರಭುವಾಗಿದ್ದೀಯಷ್ಟೆ. ಮರಣಹೊಂದಿರುವ ನಿನ್ನ ಪತ್ನಿಯ ದೇಹವನ್ನು ನಮಗಿರುವ ಸಮಾಧಿಯೊಳಗೆ ಶೇಷ್ಠವಾದದ್ದರಲ್ಲಿ ಇಡಬಹುದು. ನಿನ್ನ ಹೆಂಡತಿಯ ಶವವನ್ನು ಇಡುವುದಕ್ಕೆ ನಮ್ಮೊಳಗೆ ಯಾರೂ ಸ್ಮಶಾನ ಭೂಮಿಯನ್ನು ಕೊಡುವುದಕ್ಕೆ ಹಿಂದೆಗೆಯುವುದಿಲ್ಲ” ಎಂದು ಉತ್ತರ ಕೊಡಲು
7 ಆಗ ಅಬ್ರಹಾಮನು ಎದ್ದು, ಆ ದೇಶದ ಜನರಾದ ಹಿತ್ತಿಯರ ಮುಂದೆ ತಲೆಬಾಗಿ,
೭ಅಬ್ರಹಾಮನು ಎದ್ದು, ಹಿತ್ತಿಯರಾಗಿದ್ದ ಆ ದೇಶದವರಿಗೆ ತಲೆಬಾಗಿ ನಮಸ್ಕರಿಸಿದನು.
8 ಅವರ ಸಂಗಡ ಮಾತನಾಡಿ, “ನಾನು ನನ್ನ ಹೆಂಡತಿಯ ಶವವನ್ನು ಹೂಳಿಡುವುದು ನಿಮ್ಮ ಮನಸ್ಸಿಗೆ ಸರಿಬಿದ್ದರೆ, ನನ್ನ ಮಾತು ಕೇಳಿ ಚೋಹರನ ಮಗ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.
೮ಅವನು ಅವರ ಸಂಗಡ ಪುನಃ ಮಾತನಾಡಿ, “ನಾನು ನಿಮ್ಮಲ್ಲಿ ನನ್ನ ಪತ್ನಿಯ ಶವವನ್ನು ಸಮಾಧಿಮಾಡುವುದು ನಿಮಗೆ ಒಪ್ಪಿಗೆಯಾಗಿದ್ದರೆ ನನಗೆ ನಿಮ್ಮಲ್ಲಿ ಒಂದು ವಿಜ್ಞಾಪನೆ ಇದೆ. ನೀವು ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತನಾಡಿ,
9 ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲಾ ಗವಿಯನ್ನು ನನಗೆ ಕೊಡಲಿ. ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ,” ಎಂದನು.
೯ಅವನ ಭೂಮಿಯ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಿಸಿ ಎಂದು ಕೇಳಿದನು. ಅವನು ನನ್ನ ಸ್ವಂತಕ್ಕೆ ಈ ಸಮಾಧಿಯ ಸ್ಥಳ ನಿಮ್ಮೆದುರಿನಲ್ಲಿ ನನಗೆ ಕೊಟ್ಟರೆ ಪೂರ್ಣ ಕ್ರಯವನ್ನು ಕೊಡುತ್ತೇನೆ” ಎಂದನು.
10 ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ,
೧೦ಎಫ್ರೋನನು ಅಲ್ಲಿ ಹಿತ್ತಿಯರ ನಡುವೆ ಕುಳಿತಿದ್ದನು. ಹೀಗಿರಲಾಗಿ ಹಿತ್ತಿಯನಾದ ಎಫ್ರೋನನು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಎದುರಿನಲ್ಲಿ ಅಬ್ರಹಾಮನಿಗೆ,
11 “ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
೧೧“ಹಾಗಲ್ಲ ಸ್ವಾಮಿ, ನನ್ನ ಮಾತನ್ನು ಲಾಲಿಸು. ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ನಿನಗೆ ದಾನವಾಗಿ ಕೊಡುತ್ತೇನೆ; ನನ್ನ ಜನರ ಮುಂದೆಯೇ ಕೊಡುತ್ತೇನೆ; ಮರಣಹೊಂದಿದ ನಿನ್ನ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು”
12 ಆಗ ಅಬ್ರಹಾಮನು ದೇಶದ ಜನರ ಮುಂದೆ ತಲೆಬಾಗಿ,
೧೨ಎಂದು ಹೇಳಲು ಅಬ್ರಹಾಮನು ಆ ದೇಶದ ಜನರಿಗೆ ನಮಸ್ಕರಿಸಿ ಅವರೆಲ್ಲರ ಮುಂದೆ
13 ದೇಶದ ಜನರು ಕೇಳುವಂತೆ ಎಫ್ರೋನನಿಗೆ, “ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು. ನಾನು ಹೊಲದ ಕ್ರಯವನ್ನು ಕೊಡುತ್ತೇನೆ. ಅದನ್ನು ನನ್ನಿಂದ ತೆಗೆದುಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಳಿಡುವೆನು,” ಎಂದನು.
೧೩ಎಫ್ರೋನನಿಗೆ, “ಕೊಡಲಿಕ್ಕೆ ಮನಸ್ಸಿದ್ದರೆ ದಯವಿಟ್ಟು ನಾನು ಅರಿಕೆಮಾಡುವುದನ್ನು ಕೇಳು; ಆ ಭೂಮಿಗೆ ಕ್ರಯವನ್ನು ಕೊಡುತ್ತೇನೆ. ನನ್ನಿಂದ ಕ್ರಯ ತೆಗೆದುಕೊಂಡರೆ ಅದರಲ್ಲಿ ನನ್ನ ಪತ್ನಿಗೆ ಸಮಾಧಿ ಮಾಡುವೆನು” ಎಂದು ಹೇಳಿದನು.
14 ಎಫ್ರೋನನು ಅಬ್ರಹಾಮನಿಗೆ ಉತ್ತರವಾಗಿ,
೧೪ಅದಕ್ಕೆ ಎಫ್ರೋನನು ಅಬ್ರಹಾಮನಿಗೆ,
15 “ನನ್ನ ಒಡೆಯನೇ, ನನ್ನ ಮಾತನ್ನು ಕೇಳು. ಆ ಭೂಮಿಯು ನಾನೂರು ಬೆಳ್ಳಿಯ ನಾಣ್ಯಗಳ ಬೆಲೆಯುಳ್ಳದ್ದು, ಈ ಕುರಿತು ನಮ್ಮೊಳಗೇ ವಾದವೇಕೆ? ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.
೧೫“ಸ್ವಾಮಿ, ನನ್ನ ಮಾತನ್ನು ಲಾಲಿಸು; ನಾನೂರು ಬೆಳ್ಳಿ ನಾಣ್ಯಗಳ ಬೆಲೆಬಾಳುವ ಭೂಮಿಯ ವಿಷಯದಲ್ಲಿ ನಿನಗೂ ನನಗೂ ವಾದವೇತಕ್ಕೆ? ಸಮಾಧಿಮಾಡಬಹುದು” ಎಂದನು.
16 ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿಕೊಂಡು, ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ಬೆಲೆ ಅಂದರೆ, ವರ್ತಕರಲ್ಲಿ ನಡೆಯುವ ನಾನೂರು ಬೆಳ್ಳಿ ನಾಣ್ಯಗಳನ್ನು ತೂಕಮಾಡಿ ಅವನಿಗೆ ಕೊಟ್ಟನು.
೧೬ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ನಾನೂರು ನಾಣ್ಯಗಳನ್ನು ಅಬ್ರಹಾಮನು ವರ್ತಕರಲ್ಲಿ ಸಲ್ಲುವ ಬೆಳ್ಳಿಯಿಂದ ತೂಕ ಮಾಡಿಕೊಟ್ಟನು.
17 ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋನನ ಹೊಲವೂ, ಆ ಹೊಲದಲ್ಲಿರುವ ಗವಿಯೂ, ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ,
೧೭ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಭೂಮಿಯು, ಅದಕ್ಕೆ ಸೇರಿದ ಗವಿಯು ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿ ಇದ್ದ ಮರಗಳ ಸಹಿತವಾಗಿ,
18 ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು.
೧೮ಅಬ್ರಹಾಮನ ಸ್ವಂತ ಭೂಮಿಯೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ತೀರ್ಮಾನವಾಯಿತು.
19 ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿಟ್ಟನು.
೧೯ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ಶವವನ್ನು ಕಾನಾನ್ ದೇಶದಲ್ಲಿ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಭೂಮಿಯಲ್ಲಿರುವ ಗವಿಯೊಳಗೆ ಹೂಣಿಟ್ಟನು.
20 ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಅಬ್ರಹಾಮನಿಗೆ ಸ್ವಂತ ಸಮಾಧಿ ಎಂದು ಸ್ಥಿರವಾಯಿತು.
೨೦ಹಿತ್ತಿಯರು ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ಸ್ವಂತವಾದ ಸ್ಮಶಾನ ಭೂಮಿಯನ್ನಾಗಿ ಅಬ್ರಹಾಮನಿಗೆ ಕೊಟ್ಟು ದೃಢಪಡಿಸಿದರು.