< ಎಜ್ರನು 1 >
1 ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ:
೧ಪರ್ಷಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪರ್ಷಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದನು.
2 “ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ.
೨ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ, “ಪರ್ಷಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ. ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ.
3 ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಯೆಹೂದ, ಯೆರೂಸಲೇಮಿಗೆ ಹೋಗಿ, ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ ಒಂದು ದೇವಾಲಯವನ್ನು ಕಟ್ಟಲಿ, ಅವರ ಸಂಗಡ ಅವರ ದೇವರು ಇರಲಿ!
೩ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ.
4 ಯೆಹೂದ್ಯರಲ್ಲಿ ಬದುಕುಳಿದವರು ಈಗ ವಾಸಿಸುತ್ತಿರುವ ಯಾವುದೇ ಪ್ರದೇಶದಲ್ಲಿ, ಜನರು ಅವರಿಗೆ ಬೆಳ್ಳಿ ಮತ್ತು ಬಂಗಾರ, ಸರಕುಗಳು ಮತ್ತು ಪ್ರಾಣಿಪಶುಗಳನ್ನು ಮತ್ತು ಯೆರೂಸಲೇಮಿನ ದೇವಾಲಯಕ್ಕೆ ಉಚಿತ ಕಾಣಿಕೆಗಳನ್ನು ಒದಗಿಸಬೇಕು.’”
೪ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ” ಎಂದು ಪ್ರಕಟಿಸಿದನು.
5 ಆಗ ಯೆಹೂದ ಹಾಗೂ ಬೆನ್ಯಾಮೀನ್ ಕುಟುಂಬಗಳ ಮುಖ್ಯಸ್ಥರೂ, ಯಾಜಕರೂ, ಲೇವಿಯರೂ, ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಹೋಗಲು ಯೆಹೋವ ದೇವರಿಂದ ಪ್ರೇರಿತರಾದವರೆಲ್ಲರೂ ಎದ್ದರು.
೫ಆಗ ಯೆಹೂದ ಮತ್ತು ಬೆನ್ಯಾಮೀನ್ ಗೋತ್ರ ಪ್ರಧಾನರಲ್ಲಿಯೂ, ಯಾಜಕರಲ್ಲಿಯೂ ಮತ್ತು ಲೇವಿಯರಲ್ಲಿಯೂ ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯವನ್ನು ಕಟ್ಟುವುದಕ್ಕಾಗಿ ಹೊರಟುಹೋದರು.
6 ಅವರ ನೆರೆಯವರೆಲ್ಲರು ಎಲ್ಲಾ ಕಾಣಿಕೆಗಳಲ್ಲದೇ, ಬೆಳ್ಳಿ ಹಾಗೂ ಬಂಗಾರದಿಂದ ಮಾಡಿದ ವಸ್ತುಗಳಿಂದಲೂ, ಪಶುಗಳಿಂದಲೂ, ಬೆಲೆಯುಳ್ಳವುಗಳಿಂದಲೂ ಅವರಿಗೆ ಧಾರಾಳವಾಗಿ ಸಹಾಯ ಮಾಡಿದರು.
೬ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು.
7 ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು, ತನ್ನ ದೇವರುಗಳ ಮಂದಿರಗಳಲ್ಲಿ ಇರಿಸಿದ್ದ ಯೆಹೋವ ದೇವರ ಆಲಯದ ಸಲಕರಣೆಗಳನ್ನು ಪಾರಸಿಯ ಅರಸನಾದ ಕೋರೆಷನು ತರಿಸಿದನು.
೭ಅಲ್ಲಿಂದ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು.
8 ಅವುಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸದವನಾದ ಮಿತ್ರದಾತನ ಕೈಯಿಂದ ತರಿಸಿ, ಯೆಹೂದದ ರಾಜಕುಮಾರನಾದ ಶೆಷ್ಬಚ್ಚರನಿಗೆ ಎಣಿಸಿಕೊಟ್ಟನು.
೮ಅವನು ಅವುಗಳನ್ನು ಖಜಾನೆಯ ಅಧಿಕಾರಿಯಾದ ಮಿತ್ರದಾತನಿಗೆ ಒಪ್ಪಿಸಿದನು. ಇವನು ಅವುಗಳನ್ನು ಯೆಹೂದದ ಪ್ರಭುವಾಗಿರುವ ಶೆಷ್ಬಚ್ಚರನಿಗೆ ಲೆಕ್ಕಮಾಡಿ ಕೊಟ್ಟನು.
9 ಅವುಗಳ ಲೆಕ್ಕವು ಹೀಗಿವೆ: ಬಂಗಾರದ 30 ತಟ್ಟೆಗಳು. ಬೆಳ್ಳಿಯ 1,000 ತಟ್ಟೆಗಳು. ಬೆಳ್ಳಿಯ 29 ಪಾತ್ರೆಗಳು.
೯ಆ ಸಾಮಾನುಗಳ ಲೆಕ್ಕ: ಬಂಗಾರದ ಬೋಗುಣಿಗಳು ಮೂವತ್ತು; ಬೆಳ್ಳಿಯ ಬೋಗುಣಿಗಳು ಒಂದು ಸಾವಿರ; ಕತ್ತಿಗಳು ಇಪ್ಪತ್ತೊಂಭತ್ತು;
10 ಬಂಗಾರದ 30 ಬಟ್ಟಲುಗಳು. ಬೆಳ್ಳಿಯ 410 ಬಟ್ಟಲುಗಳು. ಇನ್ನಿತರು 1,000 ವಸ್ತುಗಳು.
೧೦ಚಿನ್ನದ ಬಟ್ಟಲುಗಳು ಮೂವತ್ತು; ಎರಡನೆಯ ದರ್ಜೆಯ ಬೆಳ್ಳಿಯ ಬಟ್ಟಲುಗಳು ನಾನೂರಹತ್ತು ಮತ್ತು ಇತರ ಪಾತ್ರೆಗಳು ಒಂದು ಸಾವಿರ.
11 ಒಟ್ಟು 5,400 ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳು. ಇವುಗಳನ್ನೆಲ್ಲಾ ಬಾಬಿಲೋನಿನಿಂದ ಯೆರೂಸಲೇಮಿಗೆ ಪ್ರಯಾಣಮಾಡಿದವರ ಸಂಗಡ ಶೆಷ್ಬಚ್ಚರನು ತೆಗೆದುಕೊಂಡು ಹೋದನು.
೧೧ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.