< ಯೆಹೆಜ್ಕೇಲನು 25 >
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
೧ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 “ಮನುಷ್ಯಪುತ್ರನೇ, ನೀನು ಅಮ್ಮೋನ್ಯರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು.
೨“ನರಪುತ್ರನೇ, ನೀನು ಅಮ್ಮೋನಿಗೆ ವಿರುದ್ಧವಾಗಿ, ಅದರ ವಿಷಯದಲ್ಲಿ ದೈವಸಂಕಲ್ಪವನ್ನು ಪ್ರವಾದಿಸುತ್ತಾ ಅದಕ್ಕೆ ಹೀಗೆ ನುಡಿ,
3 ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ
೩‘ಕರ್ತನಾದ ಯೆಹೋವನ ಮಾತನ್ನು ಕೇಳು’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಮ್ಮೋನೇ, ನನ್ನ ಪವಿತ್ರಾಲಯವು ಅಪವಿತ್ರವಾದದ್ದನ್ನು, ಇಸ್ರಾಯೇಲ್ ದೇಶವು ಹಾಳುಬಿದ್ದದನ್ನು, ಯೆಹೂದ ವಂಶದವರು ಸೆರೆಹೋದದ್ದನ್ನು ನೀನು ನೋಡಿ, “ಅಹಾ!” ಎಂದು ಹಿಗ್ಗಿಕೊಂಡೆ.
4 ನಾನು ನಿಮ್ಮನ್ನು ಪೂರ್ವದೇಶದ ಜನರಿಗೆ ಸೊತ್ತಾಗಿ ಕೊಡುತ್ತೇನೆ, ಅವರು ತಮ್ಮ ಗುಡಾರಗಳನ್ನು ನಿನ್ನಲ್ಲಿ ನೆಲೆಗೊಳಿಸುವರು. ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿಮ್ಮ ಫಲವನ್ನು ತಿಂದು ನಿಮ್ಮ ಹಾಲನ್ನೇ ಕುಡಿಯುವರು.
೪ಆದುದರಿಂದ ಇಗೋ, ನಾನು ನಿನ್ನನ್ನು ಮೂಡಣದವರಿಗೆ ಬಾಧ್ಯವಾಗಿ ವಶಪಡಿಸುವೆನು; ಅವರು ನಿನ್ನಲ್ಲಿ ತಮ್ಮ ಗುಡಾರಗಳನ್ನು ಹಾಕಿ ಪಾಳೆಯಮಾಡಿಕೊಳ್ಳುವರು; ನಿನ್ನ ಹಣ್ಣನ್ನು ತಿಂದು, ನಿನ್ನ ಹಾಲನ್ನು ಕುಡಿದುಬಿಡುವರು.
5 ನಾನು ರಬ್ಬಾ ಪಟ್ಟಣವನ್ನು ಒಂಟೆಗಳ ನಿವಾಸ ಸ್ಥಳವಾಗಿ ಮತ್ತು ಅಮ್ಮೋನ್ ದೇಶವನ್ನು ಮಂದೆಗಳು ಮಲಗುವ ಸ್ಥಳವನ್ನಾಗಿ ಮಾಡುವೆನು. ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
೫ನಾನು ರಬ್ಬಾ ಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿಯೂ, ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ತಂಗುವ ಸ್ಥಳವನ್ನಾಗಿಯೂ ಮಾಡುವೆನು. ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”
6 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ನೀವು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶದವರನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಅದರ ಸ್ಥಿತಿಗೆ ಸಂತೋಷಪಟ್ಟದ್ದರಿಂದ,
೬ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಬಡಿದು, ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದರ ಗತಿಗೆ ಹಿಗ್ಗಿಕೊಂಡೆ.
7 ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಇತರ ಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಾಂಗಗಳೊಳಗಿಂದ ನಿಮ್ಮನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನ ಹೆಸರನ್ನು ಅಳಿಸಿಬಿಡುವೆನು. ನಾನು ನಿಮ್ಮನ್ನು ನಾಶಮಾಡುವೆನು. ಆಗ ನಾನೇ ಯೆಹೋವ ದೇವರೆಂದು ತಿಳಿಯುವಿರಿ.’”
೭ಆದುದರಿಂದ ಇಗೋ, ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ಸುಲಿಗೆಗಾಗಿ ಮ್ಲೇಚ್ಛರಿಗೆ ವಶಪಡಿಸಿ, ಜನಾಂಗಗಳೊಳಗಿಂದ ಕಿತ್ತುಬಿಟ್ಟು, ದೇಶಗಳೊಳಗಿಂದ ನಿನ್ನ ಹೆಸರನ್ನು ಅಳಿಸಿ, ನಿನ್ನನ್ನು ಹಾಳುಮಾಡುವೆನು; ಆಗ ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವುದು.”
8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಮೋವಾಬು ಮತ್ತು ಸೇಯೀರು, “ಇಗೋ, ಯೆಹೂದನ ಮನೆಯು ಸಮಸ್ತ ಇತರ ಜನಾಂಗಗಳ ಹಾಗಿದೆ,” ಎಂದು ಹೇಳುವರು.
೮ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಯೆಹೂದ ವಂಶವು ಎಲ್ಲಾ ಜನಾಂಗಗಳ ಹಾಗೆಯೇ ಇದೆ, ವಿಶೇಷವೇನು? ಎಂದು ಮೋವಾಬೂ ಮತ್ತು ಸೇಯೀರೂ ಅಂದುಕೊಂಡಿದೆ.
9 ಆದ್ದರಿಂದ ಇಗೋ, ದೇಶದ ವೈಭವಗಳಾದ ಮೋವಾಬಿನ ಗಡಿಯ ಪಟ್ಟಣಗಳಾದ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾತಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.
೯ಆದುದರಿಂದ, ಇಗೋ, ದೇಶಭೂಷಣಗಳಾದ ಮೋವಾಬಿನ ಗಡಿಯ ಪಟ್ಟಣಗಳು, ಅಂದರೆ ಬೇತ್ ಯೆಷೀಮೋತ್, ಬಾಳ್ ಮೆಯೋನ್, ಕಿರ್ಯಾಥಯಿಮ್ ಎಂಬ ಪಟ್ಟಣಗಳು ಇರುವ ಕಡೆಯಲ್ಲಿ ನಾನು ಮೋವಾಬಿನ ಮೇರೆಯನ್ನು ಒಡೆದುಬಿಡುವೆನು.
10 ಆ ಅಮ್ಮೋನನ್ನೂ ಪೂರ್ವದವರೆಗೆ ಸೊತ್ತಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವರಿಗೆ ಸೊತ್ತಾಗಿ ಕೊಡುವೆನು.
೧೦ಆ ಸೀಮೆಯನ್ನಲ್ಲದೆ, ಅಮ್ಮೋನನ್ನೂ ಮೂಡಣದವರಿಗೆ ಬಾಧ್ಯವಾಗಿ ಕೊಟ್ಟು, ಅಮ್ಮೋನ್ಯರು ಜನಾಂಗಗಳೊಳಗೆ ನಿರ್ನಾಮವಾಗಬೇಕೆಂಬ ನನ್ನ ಸಂಕಲ್ಪವನ್ನು ನೆರವೇರಿಸುವೆನು.
11 ಮೋವಾಬ್ಯರಿಗೆ ನಾನು ಶಿಕ್ಷೆಯನ್ನು ವಿಧಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’”
೧೧ಮೋವಾಬ್ಯರಿಗೂ ದಂಡನೆಗಳನ್ನು ವಿಧಿಸಿ ತೀರಿಸುವೆನು. ಆಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”
12 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಏಕೆಂದರೆ ಎದೋಮು ಯೆಹೂದನ ಮನೆತನದವರಿಗೆ ಮುಯ್ಯಿಗೆ ಮುಯ್ಯಿ ತೀರಿಸಿದ್ದರಿಂದ ಅತಿ ಅಪರಾಧಮಾಡಿ ಅವರಲ್ಲಿ ಸೇಡು ತೀರಿಸಿಕೊಂಡಿತು.
೧೨ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಎದೋಮು ಯೆಹೂದ ವಂಶಕ್ಕೆ ಪ್ರತಿಕಾರಮಾಡಿದೆ; ಮುಯ್ಯಿಗೆ ಮುಯ್ಯಿ ತೀರಿಸಿ ಮಹಾಪರಾಧವನ್ನು ನಡೆಸಿದೆ.”
13 ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಎದೋಮಿನ ವಿರುದ್ಧ ನನ್ನ ಕೈಯನ್ನು ಚಾಚುತ್ತೇನೆ: ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ. ಅದನ್ನು ಕಾಡನ್ನಾಗಿ ಮಾಡುತ್ತೇನೆ, ತೇಮಾನು ಮೊದಲುಗೊಂಡು ದೆದಾನಿಯವರು ಖಡ್ಗದಿಂದ ಬೀಳುವರು.
೧೩ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಮತ್ತು ಪಶುಗಳನ್ನೂ ನಿರ್ಮೂಲಮಾಡಿ, ತೇಮಾನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.
14 ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿತೀರಿಸುವೆನು, ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು, ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು, ಇದು ಸಾರ್ವಭೌಮ ಯೆಹೋವ ದೇವರ ನುಡಿ.’”
೧೪ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿ ತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತಿಕಾರವು ಎದೋಮಿನ ಅನುಭವಕ್ಕೆ ಬರುವುದು” ಇದು ಕರ್ತನಾದ ಯೆಹೋವನ ನುಡಿ.
15 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ತೀರಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಯೆಹೂದವನ್ನು ಕೆಡಿಸಿದರು.
೧೫ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಫಿಲಿಷ್ಟಿಯರು ಯೆಹೂದಕ್ಕೆ ಪ್ರತಿಕಾರಮಾಡಿದ್ದಾರೆ; ಹೌದು, ಮುಯ್ಯಿಗೆಮುಯ್ಯಿ ತೀರಿಸುತ್ತಾ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ.”
16 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಫಿಲಿಷ್ಟಿಯರ ವಿರುದ್ಧ ನನ್ನ ಕೈಯನ್ನು ಚಾಚುವೆನು. ಕೆರೇತಿಯರನ್ನು ಕಡಿದುಬಿಡುವೆನು: ಉಳಿದವರನ್ನು ಸಮುದ್ರ ತೀರದಲ್ಲಿ ನಾಶಮಾಡುವೆನು.
೧೬ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಫಿಲಿಷ್ಟಿಯರ ಮೇಲೆ ಕೈಯೆತ್ತುವೆನು; ಕೆರೇತಿಯರನ್ನು ಕತ್ತರಿಸಿಬಿಟ್ಟು, ಸಮುದ್ರತೀರದಲ್ಲಿನ ಜನಶೇಷವನ್ನು ನಿಶ್ಶೇಷಮಾಡುವೆನು.
17 ನಾನು ದೊಡ್ಡ ಪ್ರತಿದಂಡನೆಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ಮುಯ್ಯಿತೀರಿಸುವೆನು. ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’”
೧೭ಅವರೆಲ್ಲರನ್ನು ಬಲವಾಗಿ ಖಂಡಿಸಿ ಮುಯ್ಯಿಗೆಮುಯ್ಯಿ ತೀರಿಸುವೆನು; ಹೀಗೆ ಪ್ರತಿಕಾರಮಾಡುವುದರಿಂದ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವುದು.”