< ಯೆಹೆಜ್ಕೇಲನು 17 >
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
೧ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 “ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನ್ನು ಒಗಟಾಗಿ ಹೇಳು.
೨“ನರಪುತ್ರನೇ, ನೀನು ಇಸ್ರಾಯೇಲ್ ವಂಶದವರಿಗೆ ಈ ಸಾಮ್ಯವನ್ನು ಒಗಟಾಗಿ ಹೇಳು,
3 ಅವರಿಗೆ ಹೇಳತಕ್ಕದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಶಕ್ತಿಶಾಲಿ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ಮತ್ತು ವಿಧವಿಧವಾದ ಬಣ್ಣಬಣ್ಣದ ಪುಕ್ಕಗಳಿಂದ ತುಂಬಿದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಕೊಂಬೆಯನ್ನು ಹಿಡಿದು,
೩ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಗಲವಾದ ಮತ್ತು ಉದ್ದವಾದ ರೆಕ್ಕೆಗಳಿಂದ ತುಂಬಿದ, ನಾನಾ ಬಣ್ಣದ ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ಕಿತ್ತು ಹಾಕಿತು.
4 ಅದರ ಚಿಗುರುಗಳ ಕೊನೆಯನ್ನು ಕಿತ್ತು, ವ್ಯಾಪಾರದ ದೇಶಕ್ಕೆ ತೆಗೆದುಕೊಂಡುಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.
೪ತುಟ್ಟತುದಿಯ ಚಿಗುರುಗಳನ್ನು ಕಚ್ಚಿ, ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ಬಹಳ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು.
5 “‘ಅದು ದೇಶದ ಬೀಜವನ್ನೂ ಸಹ ತೆಗೆದುಕೊಂಡುಹೋಗಿ ಫಲವತ್ತಾದ ಭೂಮಿಯಲ್ಲಿ ಇರಿಸಿತು. ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿತು.
೫“‘ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು, ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
6 ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷಿಗಿಡವಾಯಿತು. ಅದರ ರೆಂಬೆಗಳು ಅವನ ಕಡೆಗೆ ತಿರುಗಿಕೊಂಡವು. ಅದರ ಬೇರುಗಳು ಅದರ ಕೆಳಗಿದ್ದವು. ಹೀಗೆ ಅದು ದ್ರಾಕ್ಷಿಗಿಡವಾಯಿತು. ಕೊಂಬೆಗಳು ಹುಟ್ಟಿಕೊಂಡು ಬಳ್ಳಿಗಳು ಹಬ್ಬಿದವು.
೬ಅದು ಮೊಳೆತು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು.
7 “‘ಶಕ್ತಿಶಾಲಿ ರೆಕ್ಕೆಗಳೂ, ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು. ಆಗ ಆ ದ್ರಾಕ್ಷಿ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅವನ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅವನ ಮೂಲಕ ನೀರನ್ನು ಪಡೆಯುತ್ತಿತ್ತು.
೭“‘ಅಗಲವಾದ ರೆಕ್ಕೆಗಳುಳ್ಳ ಗರಿ ತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆಯು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.
8 ಅದು ಕೊಂಬೆಗಳನ್ನು ಬೆಳೆಸಿ ಫಲಕೊಡುವ ಹಾಗೆಯೂ, ಒಳ್ಳೆಯ ದ್ರಾಕ್ಷಿಗಿಡ ಆಗುವ ಹಾಗೆಯೂ, ಒಳ್ಳೆಯ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲಾಗಿತ್ತು.’
೮ಅದು ಸೊಂಪಾದ ದ್ರಾಕ್ಷಾಲತೆಯಾಗಿ ರೆಂಬೆಗಳನ್ನು ಹರಡಿ ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.’”
9 “ಅವರಿಗೆ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮೃದ್ಧಿಯಾಗಿರುವುದೋ? ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ, ಅದು ಒಣಗುವುದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿ ಹೋದಾಗ, ಅದನ್ನು ಬೇರುಸಹಿತ ಕೀಳಬೇಕಾದರೆ ಮಹಾಬಲವಾಗಲಿ ಅಥವಾ ಬಹಳ ಜನರಾಗಲಿ ಇರಬೇಕಿಲ್ಲ.
೯ಈ ಮಾತನ್ನು ನುಡಿ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅದು ಸಮೃದ್ಧವಾಗಿಯೇ ಇರುವುದೋ? ಅದನ್ನು ನಾಟಿದ ಹದ್ದು ಅದರ ಬೇರುಗಳನ್ನು ಕಿತ್ತು, ಅದರ ಫಲವನ್ನು ಕಡಿದುಬಿಡಲು ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದು ಬೇರು ಸಹಿತ ಕೀಳಲ್ಪಡುವುದು; ಬಹಳ ಬಲದಿಂದಲ್ಲ, ಬಹಳ ಜನರಿಂದಲ್ಲ.
10 ಹೌದು, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವುದೇ? ಅದಕ್ಕೆ ಪೂರ್ವದಿಕ್ಕಿನ ಗಾಳಿ ಬಡಿಯುವಾಗ ಅದು ಸಂಪೂರ್ಣವಾಗಿ ಒಣಗುವುದಿಲ್ಲವೇ? ಅದು ಮೊಳೆತ ಪಾತಿಗಳಲ್ಲಿಯೇ ಒಣಗಿ ಹೋಗುವುದಿಲ್ಲವೇ?’”
೧೦ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.”
11 ಯೆಹೋವ ದೇವರ ವಾಕ್ಯವು ನನಗೆ ಬಂದಿತು,
೧೧ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
12 “‘ಇದರ ಅಭಿಪ್ರಾಯ ನಿಮಗೆ ತಿಳಿಯುವುದಿಲ್ಲವೋ?’ ಎಂದು ತಿರುಗಿಬೀಳುವ ಮನೆಯವರಿಗೆ ಹೇಳು ಮತ್ತು ಅವರಿಗೆ, ‘ಇಗೋ, ಬಾಬಿಲೋನಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸನನ್ನೂ, ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಒಯ್ದಿದ್ದಾನೆ.
೧೨“ದ್ರೋಹಿ ವಂಶದವರಾದ ಈ ಜನರಿಗೆ ಹೀಗೆ ಹೇಳು, ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಮತ್ತು ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದನು.
13 ಅರಸನ ಸಂತಾನದವರನ್ನು ಕರೆದುಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿ, ಅವನಿಂದ ಪ್ರಮಾಣ ಮಾಡಿಸಿ, ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
೧೩ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವನಿಂದ ಆಣೆಯಿಡಿಸಿದನು.
14 ಆ ರಾಜ್ಯವು ಮೇಲೇಳದ ಹಾಗಿದ್ದರೂ, ಅವನು ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.
೧೪ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಇದ್ದರೂ, ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.
15 ಆದರೆ ಅರಸನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು, ತನ್ನ ರಾಯಭಾರಿಗಳನ್ನು ಈಜಿಪ್ಟಿಗೆ ಕಳುಹಿಸಿ, ತನಗೆ ಕುದುರೆಗಳನ್ನೂ, ಬಹಳ ಜನರನ್ನೂ ಕೊಡಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿಯಾಗುವನೋ? ಇಂತಹ ಸಂಗತಿಗಳನ್ನು ಮಾಡುವವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆಯನ್ನು ಮುರಿದು ತಪ್ಪಿಸಿಕೊಳ್ಳಲಾಗುವುದೋ?
೧೫ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?”
16 “‘ನಿಶ್ಚಯವಾಗಿ ಯಾವನಿಂದ ಅರಸನಾಗಿ ಆಯ್ಕೆಗೊಂಡನೋ ಎಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಡಂಬಡಿಕೆಯನ್ನು ಮೀರಿದನೋ, ನನ್ನ ಜೀವದಾಣೆ ಅವನು ಇರುವಲ್ಲಿಯೇ ಬಾಬಿಲೋನಿನ ಮಧ್ಯದಲ್ಲಿ ಇವನು ಸಾಯುವನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
೧೬ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಇವನು ಯಾರಿಂದ ಅರಸನಾಗಿ ನೇಮಿಸಲ್ಪಟ್ಟನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾರ ಒಡಂಬಡಿಕೆಯನ್ನು ಮೀರಿದನೋ, ಆ ಅರಸನ ಬಳಿಯಲ್ಲಿ, ಅಂದರೆ ಬಾಬೆಲೆಂಬ ಅವನ ವಾಸಸ್ಥಾನದಲ್ಲಿ ಇವನು ಸಾಯುವುದು ಖಂಡಿತ.
17 ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನೂ, ಕೋಟೆಗಳನ್ನೂ ಕಟ್ಟಿದರೂ ಯುದ್ಧದಲ್ಲಿ ಅವನಿಗೆ ಏನೂ ಪ್ರಯೋಜನವಾಗುವುದಿಲ್ಲ.
೧೭ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಕೋಟೆಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗುವುದಿಲ್ಲ.
18 ಅವನು ಒಡಂಬಡಿಕೆಯನ್ನು ಮುರಿದು, ಪ್ರಮಾಣ ವಚನವನ್ನು ತಿರಸ್ಕರಿಸಿದನು. ಅವನು ಒಡಂಬಡಿಕೆಯಲ್ಲಿ ತನ್ನ ಹಸ್ತವನ್ನಿಟ್ಟಿದ್ದರೂ ಈ ಎಲ್ಲಾ ಸಂಗತಿಗಳನ್ನು ಮಾಡಿದ್ದರಿಂದ ಅವನು ತಪ್ಪಿಸಿಕೊಳ್ಳಲಾರನು.
೧೮ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಆಣೆಮಾಡಿದರೆ ಪ್ರಯೋಜನವೇನು? ಇದನ್ನೆಲ್ಲಾ ಮಾಡಿದ್ದರಿಂದ ಇವನು ಪಾರಾಗನು.”
19 “‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ ನಿಶ್ಚಯವಾಗಿ ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ, ಅವನು ಮೀರಿದ ಒಡಂಬಡಿಕೆಯನ್ನೂ ಅವನ ತಲೆಯ ಮೇಲೆಯೇ ಹೊರಿಸುವೆನು.
೧೯ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ, ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಗೆ ಕಟ್ಟುವೆನು.
20 ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ. ಆಗ ಅವನು ನನ್ನ ಉರುಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಬಾಬಿಲೋನಿಗೆ ಕರೆತಂದಿದ್ದೇನೆ ಮತ್ತು ಅವನು ನನಗೆ ನಂಬಿಕೆದ್ರೋಹ ಮಾಡಿದ ಕಾರಣ ಅಲ್ಲಿ ಅವನಿಗೆ ನ್ಯಾಯತೀರ್ಪು ವಿಧಿಸುತ್ತೇನೆ.
೨೦ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು, ಅವನನ್ನು ಬಾಬಿಲೋನಿಗೆ ತಂದು ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.
21 ಅವನ ಸೈನ್ಯಗಳೆಲ್ಲಾ ಖಡ್ಗದಿಂದ ಬೀಳುವುದು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಹೋಗುವರು. ಆಗ ಯೆಹೋವ ದೇವರಾದ ನಾನೇ ಅದನ್ನು ಹೇಳಿದೆನೆಂದು ನಿಮಗೆ ತಿಳಿಯುವುದು.
೨೧ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲಾ ಕಡೆಯ ಗಾಳಿಗೂ ತೂರಿಬಿಡುವೆನು; ಈ ಮಾತನ್ನು ಆಡಿದವನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”
22 “‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು. ಇದರ ತುದಿಯಲ್ಲಿರುವ ಎಳೆಯದಾದ ಕೊಂಬೆಯನ್ನು ಕತ್ತರಿಸಿ, ಎತ್ತರವಾದ ಪರ್ವತದ ಮೇಲೆ ನಾಟುವೆನು.
೨೨ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನೇ ಎತ್ತರವಾದ ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ತೆಗೆದು ಅದನ್ನು ನೆಡುವೆನು; ತುಟ್ಟತುದಿಯ ಚಿಗುರುಗಳಲ್ಲಿ ಅತಿ ಕೋಮಲವಾದದ್ದನ್ನು ಚಿವುಟಿ ತಂದು, ಉನ್ನತೋನ್ನತವಾದ ಪರ್ವತದ ಮೇಲೆ ನೆಡುವೆನು.
23 ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು. ಅದು ಕೊಂಬೆಗಳಲ್ಲಿ ಹುಟ್ಟಿಕೊಂಡು ಫಲಫಲಿಸುವುದು; ಸೊಂಪಾದ ದೇವದಾರು ಆಗುವುದು. ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಗಳೂ, ಅದರ ಕೊಂಬೆಗಳ ನೆರಳಿನ ಕೆಳಗೆ ವಾಸಮಾಡುವುವು.
೨೩ನಾನು ಅದನ್ನು ಇಸ್ರಾಯೇಲಿನ ಉನ್ನತ ಪರ್ವತಾಗ್ರದಲ್ಲಿ ನೆಡಲು, ಅದು ಸೊಂಪಾದ ದೇವದಾರು ಮರವಾಗಿ ರೆಂಬೆಗಳನ್ನು ಹರಡಿ ಫಲಕೊಡುವುದು; ಅದರಲ್ಲಿ ಸಕಲವಿಧವಾದ ಪಕ್ಷಿಗಳು ವಾಸಿಸುತ್ತಾ ಅದರ ರೆಂಬೆಗಳ ನೆರಳನ್ನು ಆಶ್ರಯಿಸುವವು.
24 ಯೆಹೋವ ದೇವರಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರ ಪಡಿಸಿ, ಹಸುರಾಗಿರುವುದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ, ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವುದು. “‘ಯೆಹೋವ ದೇವರಾದ ನಾನೇ ಮಾತನಾಡಿ, ಅದನ್ನು ನಡೆಸಿದ್ದೇನೆ.’”
೨೪ಆಗ ಯೆಹೋವನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರಗೊಳಿಸಿ, ಹಸುರಾದದ್ದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವವು. ಇದನ್ನು ಯೆಹೋವನಾದ ನಾನೇ ನುಡಿದು ನಡೆಸಿದ್ದೇನೆ.”