< ವಿಮೋಚನಕಾಂಡ 1 >
1 ಯಾಕೋಬನೊಂದಿಗೆ ಈಜಿಪ್ಟಿಗೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲನ ಮಕ್ಕಳ ಹೆಸರುಗಳು:
೧ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು:
2 ರೂಬೇನ್, ಸಿಮೆಯೋನ್, ಲೇವಿ ಮತ್ತು ಯೆಹೂದ,
೨ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
3 ಇಸ್ಸಾಕಾರ್ ಜೆಬುಲೂನ್ ಮತ್ತು ಬೆನ್ಯಾಮೀನ್,
೩ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್,
4 ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್.
೪ದಾನ್, ಗಾದ್, ನಫ್ತಾಲಿ ಮತ್ತು ಆಶೇರ್.
5 ಯಾಕೋಬನ ವಂಶಜರು ಒಟ್ಟು ಎಪ್ಪತ್ತು ಮಂದಿ ಆದರೆ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.
೫ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು.
6 ಹಲವು ವರ್ಷಗಳ ಬಳಿಕ ಯೋಸೇಫನೂ ಅವನ ಸಹೋದರರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.
೬ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು.
7 ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡು ಬಲಗೊಂಡರು, ಅದರಿಂದ ಆ ದೇಶವು ಅವರಿಂದ ತುಂಬಿತು.
೭ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು.
8 ತರುವಾಯ ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.
೮ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು.
9 ಅವನು ತನ್ನ ಜನರಿಗೆ, “ಇಸ್ರಾಯೇಲರು ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಹೆಚ್ಚು ಬಲವುಳ್ಳವರಾಗಿದ್ದಾರೆ.
೯ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ.
10 ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು, ನಮಗೆ ವಿರೋಧವಾಗಿ ಯುದ್ಧಮಾಡಿ, ದೇಶವನ್ನು ಬಿಟ್ಟು ಹೋಗಬಹುದು ಆದ್ದರಿಂದ ಅವರು ವೃದ್ಧಿಯಾಗದಂತೆ ಅವರೊಂದಿಗೆ ಬುದ್ಧಿವಂತಿಕೆಯಿಂದ ನಾವು ವರ್ತಿಸೋಣ,” ಎಂದನು.
೧೦ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ
11 ಆಗ ಅವರನ್ನು ಬಿಟ್ಟೀ ಕೆಲಸಗಳಿಂದ ಶ್ರಮಪಡಿಸುವುದಕ್ಕಾಗಿ, ಬಿಟ್ಟೀ ಕೆಲಸಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ಮತ್ತು ರಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
೧೧ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು.
12 ಆದರೆ ಈಜಿಪ್ಟನವರು ಅವರನ್ನು ಎಷ್ಟು ಶ್ರಮಪಡಿಸಿದರೋ, ಅಷ್ಟು ಅಧಿಕವಾಗಿ ಅವರು ಹೆಚ್ಚಿ ಹರಡಿಕೊಂಡದ್ದರಿಂದ ಈಜಿಪ್ಟಿನವರು ಇಸ್ರಾಯೇಲರ ಬಗ್ಗೆ ಹೆದರಿದವರಾದರು.
೧೨ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು.
13 ಆದ್ದರಿಂದ ಈಜಿಪ್ಟಿನವರು ಇಸ್ರಾಯೇಲರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾ ಸೇವೆ ಮಾಡಿಸಿಕೊಂಡರು.
೧೩ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು.
14 ಮಣ್ಣು ಅಗೆಯುವ, ಇಟ್ಟಿಗೆಯನ್ನು ಮಾಡುವ ಮತ್ತು ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಈಜಿಪ್ಟಿನವರು ಅವರಿಂದ ಮಾಡಿಸಿದ ಎಲ್ಲಾ ಕೆಲಸವು ಕಠೋರವಾಗಿತ್ತು.
೧೪ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು.
15 ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಹಿಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿ,
೧೫ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು.
16 ಅವರಿಗೆ, “ನೀವು ಹಿಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವುದಕ್ಕೆ ಹೆರಿಗೆಯ ಸಮಯದಲ್ಲಿ ಅವರನ್ನು ಪರಾಂಬರಿಸುವಾಗ, ಗಂಡು ಮಗುವಾದರೆ ಅದನ್ನು ಕೊಂದುಹಾಕಿರಿ, ಹೆಣ್ಣಾದರೆ ಬದುಕಲಿ,” ಎಂದು ಹೇಳಿದ್ದನು.
೧೬ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು.
17 ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಈಜಿಪ್ಟಿನ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.
೧೭ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು.
18 ಆಗ ಈಜಿಪ್ಟಿನ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ಏಕೆ ಗಂಡು ಮಕ್ಕಳನ್ನು ಬದುಕಿಸಿದ್ದೀರಿ? ಇಂಥ ಕೆಲಸವನ್ನು ಏಕೆ ಮಾಡಿದಿರಿ?” ಎಂದನು.
೧೮ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು.
19 ಸೂಲಗಿತ್ತಿಯರು ಫರೋಹನಿಗೆ, “ಹಿಬ್ರಿಯರ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯರು ಅವರ ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದರು.
೧೯ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು.
20 ಆದ್ದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದರು. ಇದಲ್ಲದೆ ಇಸ್ರಾಯೇಲರು ಸಂಖ್ಯೆಯಲ್ಲೂ ಹೆಚ್ಚಾಗಿ ಬಹು ಬಲಗೊಂಡರು.
೨೦ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು.
21 ಸೂಲಗಿತ್ತಿಯರು ದೇವರಿಗೆ ಭಯಪಟ್ಟದ್ದರಿಂದ, ದೇವರು ಅವರ ಕುಟುಂಬಕ್ಕೆ ಅಭಿವೃದ್ಧಿಯನ್ನು ಉಂಟುಮಾಡಿದರು.
೨೧ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು.
22 ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.
೨೨ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.