< ವಿಮೋಚನಕಾಂಡ 8 >
1 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಕಳುಹಿಸು.
2 ಕಳುಹಿಸುವುದಕ್ಕೆ ನಿರಾಕರಿಸಿದರೆ, ನಾನು ನಿನ್ನ ದೇಶವನ್ನೆಲ್ಲಾ ಕಪ್ಪೆಗಳಿಂದ ಉಪದ್ರವ ತರುವೆನು.
3 ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ನಿನ್ನ ಅರಮನೆಯಲ್ಲಿಯೂ ನೀನು ಮಲಗುವ ಕೊಠಡಿಯಲ್ಲಿಯೂ ನಿನ್ನ ಹಾಸಿಗೆಯ ಮೇಲೂ ನಿನ್ನ ಸೇವಕರ ಮನೆಗಳಲ್ಲಿಯೂ ನಿನ್ನ ಜನರ ಮೇಲೆಯೂ ನಿನ್ನ ಒಲೆಗಳಲ್ಲಿಯೂ ನಿನ್ನ ಹಿಟ್ಟು ನಾದುವ ಹರಿವಾಣಗಳಲ್ಲಿಯೂ ಕಾಣಿಸಿಕೊಳ್ಳುವುವು.
4 ನಿನ್ನ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಎಲ್ಲಾ ಅಧಿಕಾರಿಗಳ ಮೇಲೆಯೂ ಕಪ್ಪೆಗಳು ಏರಿ ಬರುವುವು,’ ಎಂದು ಹೇಳು,” ಎಂದರು.
5 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನೀನು ಕೋಲನ್ನು ಹಿಡಿದುಕೊಂಡು ನದಿ, ಕಾಲುವೆ, ಕೆರೆಗಳ ಮೇಲೆಲ್ಲಾ ನಿನ್ನ ಕೈಚಾಚಿ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಬರುವಂತೆ ಮಾಡು,’ ಎಂದು ಹೇಳಬೇಕು,” ಎಂದರು.
6 ಆರೋನನು ಈಜಿಪ್ಟಿನ ನೀರಿನ ಮೇಲೆ ಕೈಚಾಚಿದಾಗ, ಕಪ್ಪೆಗಳು ಏರಿಬಂದು ಈಜಿಪ್ಟ್ ದೇಶವನ್ನು ಮುತ್ತಿಕೊಂಡವು.
7 ಆದರೆ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿ, ಕಪ್ಪೆಗಳನ್ನು ಈಜಿಪ್ಟ್ ದೇಶದ ಮೇಲೆ ಬರಮಾಡಿದರು.
8 ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, “ನೀವು ಯೆಹೋವ ದೇವರನ್ನು ಬೇಡಿಕೊಂಡು ಈ ಕಪ್ಪೆಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಯೆಹೋವ ದೇವರಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು,” ಎಂದನು.
9 ಅದಕ್ಕೆ ಮೋಶೆ, “ಈ ಕಪ್ಪೆಗಳು ತಮ್ಮ ಬಳಿಯಿಂದಲೂ ನಿನ್ನ ಮನೆಗಳಿಂದಲೂ ತೊಲಗಿ ಹೋಗಿ, ನೈಲ್ ನದಿಯಲ್ಲಿ ಮಾತ್ರ ಉಳಿಯುವಂತೆ ನಾನು ಯಾವಾಗ ನಿನ್ನ ಪರವಾಗಿ, ನಿನ್ನ ಪ್ರಜಾ ಪರಿವಾರದ ಪರವಾಗಿ ಪ್ರಾರ್ಥನೆ ಸಲ್ಲಿಸಬೇಕು? ನಿನಗೆ ಸರಿದೋರಿದಂತೆ ನೀನೇ ಅದಕ್ಕೊಂದು ಕಾಲವನ್ನು ನಿಗದಿಮಾಡಬೇಕು,” ಎಂದು ಫರೋಹನನ್ನು ವಿನಂತಿಸಿದನು.
10 ಫರೋಹನು ಮೋಶೆಗೆ, “ನಾಳೆ,” ಎಂದನು. ಆಗ ಮೋಶೆಯು, “ನಮ್ಮ ದೇವರಾಗಿರುವ ಯೆಹೋವ ದೇವರ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ನಿನ್ನ ಮಾತಿನ ಪ್ರಕಾರ ಆಗಲಿ.
11 ಕಪ್ಪೆಗಳು ನಿನ್ನಿಂದಲೂ ನಿನ್ನ ಮನೆಗಳಿಂದಲೂ ನಿನ್ನ ಸೇವಕರಿಂದಲೂ ನಿನ್ನ ಜನರಿಂದಲೂ ಹೊರಟುಹೋಗಿ, ನೈಲ್ ನದಿಯಲ್ಲಿ ಮಾತ್ರ ಇರುವುವು,” ಎಂದನು.
12 ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ, ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ಕಾಟದ ಬಗ್ಗೆ ಯೆಹೋವ ದೇವರಿಗೆ ಮೊರೆಯಿಟ್ಟನು.
13 ಮೋಶೆ ಹೇಳಿದ ಪ್ರಕಾರ ಯೆಹೋವ ದೇವರು ಮಾಡಿದರು. ಮನೆಗಳಲ್ಲಿಯೂ ಅಂಗಳಗಳಲ್ಲಿಯೂ ಹೊಲಗಳಲ್ಲಿಯೂ ಇದ್ದ ಕಪ್ಪೆಗಳು ಸತ್ತವು.
14 ಅವರು ಅವುಗಳನ್ನು ರಾಶಿಗಳಾಗಿ ಕೂಡಿಸಿಟ್ಟಿದ್ದರಿಂದ ದೇಶವು ದುರ್ವಾಸನೆಯಿಂದ ತುಂಬಿತು.
15 ಆದರೆ ಫರೋಹನು ತನಗೆ ಉಪಶಮನವಾಯಿತೆಂದು ನೋಡಿದಾಗ, ಯೆಹೋವ ದೇವರು ಹೇಳಿದಂತೆ ಅವನು ತನ್ನ ಹೃದಯವನ್ನು ಕಠಿಣ ಮಾಡಿಕೊಂಡು, ಮೋಶೆ ಮತ್ತು ಆರೋನರ ಮಾತನ್ನು ಕೇಳಲಿಲ್ಲ.
16 ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನೀನು ಕೋಲನ್ನು ಚಾಚಿ ಭೂಮಿಯ ಧೂಳನ್ನು ಹೊಡೆ, ಆಗ ಈಜಿಪ್ಟ್ ದೇಶದಲ್ಲೆಲ್ಲಾ ಧೂಳು ಹೇನುಗಳಾಗುವುವು,’ ಎಂದು ಹೇಳು,” ಎಂದರು.
17 ಅವರು ಹಾಗೆಯೇ ಮಾಡಲಾರಂಭಿಸಿದರು. ಆರೋನನು ಕೋಲನ್ನು ಕೈಯಲ್ಲಿ ಹಿಡಿದು, ಅದನ್ನು ಚಾಚಿ, ಭೂಮಿಯ ಧೂಳನ್ನು ಹೊಡೆದನು. ಆಗ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹೇನುಗಳಾದವು. ಈಜಿಪ್ಟ್ ದೇಶದಲ್ಲೆಲ್ಲಾ ನೆಲದ ಧೂಳು ಹೇನುಗಳಾದವು
18 ಮಂತ್ರಗಾರರು ಹೇನುಗಳನ್ನು ಬರಮಾಡುವುದಕ್ಕೆ ತಮ್ಮ ಮಾಟಗಳಿಂದ ಪ್ರಯತ್ನಿಸಿದರು, ಆದರೆ ಸಾಧ್ಯವಾಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹಾಗೆಯೇ ಇದ್ದವು.
19 ಆಗ ಮಂತ್ರಗಾರರು ಫರೋಹನಿಗೆ, “ಇದು ದೇವರ ಕೈಕೆಲಸವೇ ಸರಿ,” ಎಂದರು. ಆದರೆ ಯೆಹೋವ ದೇವರು ಹೇಳಿದಂತೆ ಫರೋಹನ ಹೃದಯ ಕಠಿಣವಾಯಿತು. ಆದ್ದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.
20 ಆಗ ಯೆಹೋವ ದೇವರು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ. ಅವನು ಹೊರಗೆ ನದಿಯ ಬಳಿಗೆ ಬರುತ್ತಾನೆ. ನೀನು ಅವನಿಗೆ ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜನರು ನನ್ನನ್ನು ಆರಾಧಿಸುವಂತೆ ಅವರನ್ನು ಕಳುಹಿಸು.
21 ನೀನು ನನ್ನ ಜನರನ್ನು ಕಳುಹಿಸದೆ ಹೋದರೆ, ನಾನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ನಿನ್ನ ಮನೆಗಳಿಗೂ ನೊಣಗಳನ್ನು ಕಳುಹಿಸುವೆನು. ಈಜಿಪ್ಟಿನವರ ಮನೆಗಳೂ, ಅವರು ವಾಸವಾಗಿರುವ ಭೂಮಿಯೂ ನೊಣಗಳಿಂದ ತುಂಬಿರುವುವು.
22 “‘ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವಂತೆ, ನನ್ನ ಜನರು ವಾಸಿಸುವ ಗೋಷೆನ್ ಪ್ರಾಂತದಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.
23 ನನ್ನ ಜನರನ್ನೂ, ನಿನ್ನ ಜನರನ್ನೂ ವಿಂಗಡಿಸುವೆನು. ನಾಳೆ ಈ ಸೂಚಕಕಾರ್ಯ ಕಾಣುವುದು,’ ಎಂದು ಹೇಳು,” ಎಂದರು.
24 ಯೆಹೋವ ದೇವರು ಹಾಗೆಯೇ ಮಾಡಲಾರಂಭಿಸಿದರು. ಬಾಧಿಸುವ ನೊಣಗಳು ಫರೋಹನ ಮನೆಯಲ್ಲಿಯೂ ಅವನ ಸೇವಕರ ಮನೆಗಳಲ್ಲಿಯೂ ಸಮಸ್ತ ಈಜಿಪ್ಟ್ ದೇಶದಲ್ಲಿಯೂ ಬಂದವು. ನೊಣಗಳಿಂದ ದೇಶವು ಹಾಳಾಗಿ ಹೋಯಿತು.
25 ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಹೋಗಿ ಈ ದೇಶದಲ್ಲಿಯೇ ನಿಮ್ಮ ದೇವರಿಗೆ ಯಜ್ಞವನ್ನರ್ಪಿಸಿರಿ,” ಎಂದನು.
26 ಆದರೆ ಮೋಶೆಯು ಫರೋಹನಿಗೆ, “ಹಾಗೆ ಮಾಡುವುದು ಯುಕ್ತವಲ್ಲ. ಏಕೆಂದರೆ ನಮ್ಮ ಯೆಹೋವ ದೇವರಾದ ದೇವರಿಗೆ ಯಜ್ಞವನ್ನರ್ಪಿಸುವುದು ಈಜಿಪ್ಟಿನವರಿಗೆ ಅಸಹ್ಯವಾಗಿರುವುದು. ಈಜಿಪ್ಟಿನವರಿಗೆ ಅಸಹ್ಯವಾಗಿರುವುದನ್ನು ಅವರ ಕಣ್ಣೆದುರಿಗೆ ಅರ್ಪಿಸಿದರೆ, ಅವರು ನಮ್ಮ ಮೇಲೆ ಕಲ್ಲೆಸೆದಾರು.
27 ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿ, ನಮ್ಮ ದೇವರಾದ ಯೆಹೋವ ದೇವರಿಗೆ ಅವರ ಅಪ್ಪಣೆಯಂತೆ ಯಜ್ಞಮಾಡುವೆವು,” ಎಂದು ಹೇಳಿದನು.
28 ಅದಕ್ಕೆ ಫರೋಹನು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರಿಗೆ ಮರುಭೂಮಿಯಲ್ಲಿ ಯಜ್ಞವನ್ನರ್ಪಿಸುವಂತೆ ನಿಮ್ಮನ್ನು ಕಳುಹಿಸುತ್ತೇನೆ. ಆದರೆ ದೂರ ಹೋಗಬೇಡಿರಿ, ನನಗೋಸ್ಕರ ಪ್ರಾರ್ಥನೆಮಾಡಿರಿ,” ಎಂದನು.
29 ಆಗ ಮೋಶೆಯು ಅವನಿಗೆ, “ನಾನು ನಿನ್ನನ್ನು ಬಿಟ್ಟು ಹೋಗಿ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವೆನು. ನೊಣಗಳು ನಾಳೆ ಫರೋಹನನ್ನೂ, ಅವನ ಸೇವಕರನ್ನೂ, ಅವರ ಜನರನ್ನೂ ಬಿಟ್ಟು ಹೋಗುವುವು. ಆದರೆ ಯೆಹೋವ ದೇವರಿಗೆ ಯಜ್ಞವನ್ನರ್ಪಿಸುವುದಕ್ಕೆ ಫರೋಹನಾದ ನೀನು ಜನರನ್ನು ಕಳುಹಿಸದೆ ಇನ್ನು ಮೇಲೆ ವಂಚಿಸಬಾರದು,” ಎಂದನು.
30 ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಹೋಗಿ, ಯೆಹೋವ ದೇವರನ್ನು ಬೇಡಿಕೊಂಡನು.
31 ಮೋಶೆಯು ಕೇಳಿದಂತೆಯೇ ಯೆಹೋವ ದೇವರು ಮಾಡಿದರು. ಅವರು ಫರೋಹನಿಂದಲೂ ಅವನ ಸೇವಕರಿಂದಲೂ, ಅವರ ಜನರಿಂದಲೂ ನೊಣಗಳನ್ನು ತೆಗೆದುಹಾಕಿದರು. ಅಲ್ಲಿ ಒಂದಾದರೂ ಉಳಿಯಲಿಲ್ಲ.
32 ಆದರೆ ಫರೋಹನು ಆ ಸಮಯದಲ್ಲಿಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡಿದ್ದಲ್ಲದೆ, ಜನರನ್ನೂ ಹೋಗಗೊಡಿಸಲಿಲ್ಲ.