< ವಿಮೋಚನಕಾಂಡ 4 >

1 ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ‘ಯೆಹೋವ ದೇವರು ನಿನಗೆ ಕಾಣಿಸಿಕೊಂಡೇ ಇಲ್ಲ,’ ಎಂದು ಹೇಳಬಹುದು,” ಎಂದನು.
ಅದಕ್ಕೆ ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲ ಎಂದು ಹೇಳಬಹುದು?” ಎಂದನು.
2 ಯೆಹೋವ ದೇವರು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು. ಅವನು, “ಕೋಲು,” ಎಂದನು.
ಅದಕ್ಕೆ ಯೆಹೋವನು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದನು. ಅವನು, ಇದು “ಇದು ಒಂದು ಕೋಲು” ಅಂದನು.
3 ಯೆಹೋವ ದೇವರು ಅವನಿಗೆ, “ಅದನ್ನು ನೆಲದ ಮೇಲೆ ಬಿಸಾಡು,” ಎಂದರು. ಅವನು ಅದನ್ನು ನೆಲದ ಮೇಲೆ ಬಿಸಾಡಿದನು. ಆಗ ಅದು ಸರ್ಪವಾಯಿತು. ಮೋಶೆ ಅಲ್ಲಿಂದ ಓಡಿಹೋದನು.
ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.
4 ಯೆಹೋವ ದೇವರು ಮೋಶೆಗೆ, “ನಿನ್ನ ಕೈಚಾಚಿ, ಅದರ ಬಾಲವನ್ನು ಹಿಡಿ,” ಎಂದಾಗ, ಅವನು ಕೈಚಾಚಿ ಅದನ್ನು ಹಿಡಿದ ಕೂಡಲೇ, ಅದು ಅವನ ಕೈಯಲ್ಲಿ ಕೋಲಾಯಿತು.
ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ” ಎಂದು ಹೇಳಿದನು. ಅವನು ಅದನ್ನು ಹಿಡಿದ ಕೂಡಲೇ ಅದು ಕೋಲಾಯಿತು.
5 ಆಗ ಯೆಹೋವ ದೇವರು ಅವನಿಗೆ, “ಇದರಿಂದ ಆ ಜನರು ತಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗೂ ಯಾಕೋಬರ ದೇವರಾಗಿರುವ ಯೆಹೋವ ದೇವರು ನಿನಗೆ ಪ್ರಕಟವಾಗಿದ್ದು ನಿಜ ಎಂಬುದನ್ನು ನಂಬುವರು,” ಎಂದರು.
ಆಗ ಯೆಹೋವನು ಅವನಿಗೆ, “ಇದರಿಂದ ಅವರು ತಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು, ನಿನಗೆ ಕಾಣಿಸಿಕೊಂಡಿರುವುದು ನಿಜ ಎಂದು ನಂಬುವರು” ಎಂದು ಹೇಳಿದನು.
6 ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇನ್ನೂ ಮಾತನಾಡಿ, “ನಿನ್ನ ಕೈಯನ್ನು ನಿನ್ನ ಉಡಿಯಲ್ಲಿ ಇಟ್ಟುಕೋ,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆದನು. ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.
ಯೆಹೋವನು ತಿರುಗಿ ಅವನಿಗೆ, “ನಿನ್ನ ಕೈಯನ್ನು ಎದೆಯಭಾಗದೊಳಗೆ ಇಟ್ಟುಕೋ” ಎಂದು ಹೇಳಿದನು. ಅವನು ಹಾಗೆ ಇಟ್ಟುಕೊಂಡು ಹೊರಗೆ ತೆಗೆಯಲು ಅವನ ಕೈ ಕುಷ್ಠ ಹತ್ತಿ ಹಿಮದಂತೆ ಬೆಳ್ಳಗಾಗಿತ್ತು.
7 ದೇವರು ಅವನಿಗೆ, “ನಿನ್ನ ಕೈಯನ್ನು ಉಡಿಯಲ್ಲಿ ಹಾಕು,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ, ಉಡಿಯಿಂದ ಹೊರಗೆ ತೆಗೆದಾಗ, ಅದು ಅವನ ಉಳಿದ ಮೈಯಂತೆ ಆಗಿತ್ತು.
ಯೆಹೋವನು ಅವನಿಗೆ ನಿನ್ನ ಕೈಯನ್ನು ತಿರುಗಿ ಎದೆಯಭಾಗದೊಳಗೆ “ಸೇರಿಸು” ಎಂದು ಹೇಳಿದನು. ಅವನು ಅದನ್ನು ತಿರುಗಿ ಎದೆಯಭಾಗದೊಳಗೆ ಸೇರಿಸಿ ತೆಗೆದು ನೋಡಿದಾಗ ಅದು ಉಳಿದ ದೇಹದಂತೆ ಆಗಿತ್ತು.
8 ಆಗ ಯೆಹೋವ ದೇವರು, “ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ಹೋದರೂ, ಎರಡನೆಯ ಸೂಚಕಕಾರ್ಯವನ್ನು ನೋಡಿ ನಂಬುವರು.
ಆಗ ಯೆಹೋವನು ಅವನಿಗೆ, “ಅವರು ನಿನ್ನನ್ನು ನಂಬದೆ, ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ತಿರಸ್ಕರಿಸಿದರೂ, ಎರಡನೆಯ ಸೂಚಕಕಾರ್ಯವನ್ನು ನಂಬುವರು.
9 ಆ ಎರಡೂ ಸೂಚಕಕಾರ್ಯಗಳನ್ನು ಅವರು ನಂಬದೆ, ನಿನ್ನ ಮಾತನ್ನು ಕೇಳದೆ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದು, ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ನೀನು ತೆಗೆದ ನದಿಯ ನೀರು ಒಣಗಿದ ನೆಲದ ಮೇಲೆ ರಕ್ತವಾಗುವುದು,” ಎಂದರು.
ಆ ಎರಡು ಸೂಚಕಕಾರ್ಯಗಳನ್ನೂ, ಅವರು ನಂಬದೆಯೂ, ನಿನ್ನ ಮಾತನ್ನು ಕೇಳದೆಯೂ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದುಕೊಂಡು ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ಒಣಗಿದ ನೆಲದಲ್ಲಿ ಸುರಿದ ನೀರು ರಕ್ತವಾಗುವುದು” ಎಂದು ಹೇಳಿದನು.
10 ಮೋಶೆಯು ಯೆಹೋವ ದೇವರಿಗೆ, “ಸ್ವಾಮಿ, ನನ್ನನ್ನು ಕ್ಷಮಿಸಿರಿ, ನಾನು ಮೊದಲಿನಿಂದಲೂ ನೀವು ನಿಮ್ಮ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ,” ಎಂದನು.
೧೦ಆಗ ಮೋಶೆಯು ಯೆಹೋವನಿಗೆ, “ಕರ್ತನೇ, ನಾನು ಮೊದಲಿನಿಂದಲೂ, ನೀನು ನಿನ್ನ ದಾಸನ ಸಂಗಡ ಮಾತನಾಡಿದ ಮೇಲೆಯೂ ನಾನು ವಾಕ್ಚಾತುರ್ಯವಿಲ್ಲದವನು. ನಾನು ತೊದಲುವವನಾಗಿದ್ದು ನನ್ನ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.
11 ಅದಕ್ಕೆ ಯೆಹೋವ ದೇವರು ಅವನಿಗೆ, “ಮನುಷ್ಯರಿಗೆ ಬಾಯಿ ಕೊಟ್ಟಾತನೂ ಯಾರು? ಮೂಕರನ್ನೂ ಕಿವುಡರನ್ನೂ ಮಾಡಿದಾತನೂ ಯಾರು? ದೃಷ್ಟಿಯುಳ್ಳವರನ್ನೂ ದೃಷ್ಟಿಯಿಲ್ಲದವರನ್ನೂ ಮಾಡಿದಾತನೂ ಯಾರು? ಯೆಹೋವ ದೇವರಾದ ನಾನೇ ಅಲ್ಲವೋ?
೧೧ಅದಕ್ಕೆ ಯೆಹೋವನು ಅವನಿಗೆ, “ಮನುಷ್ಯರಿಗೆ ಬಾಯಿಕೊಟ್ಟವನು ಯಾರು? ಒಬ್ಬನನ್ನು ಮೂಕನಾಗಿ, ಕಿವುಡನಾಗಿ, ದೃಷ್ಠಿಯುಳ್ಳವನಾಗಿ ಹಾಗೂ ಕುರುಡನಾಗಿ ಉಂಟುಮಾಡಿದವನಾರು? ಯೆಹೋವನಾದ ನಾನೇ ಅಲ್ಲವೇ?
12 ಹಾಗಾದರೆ ಈಗ ಹೋಗು, ನಾನೇ ನಿನ್ನ ಸಂಗಡವಿದ್ದು, ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು,” ಎಂದರು.
೧೨ಹಾಗಾದರೆ ಈಗಲೇ ನೀನು ಹೊರಡು, ನಾನು ನಿನ್ನಗೆ ಮಾತನಾಡಲು ಬೇಕಾದ ಸಾಮರ್ಥ್ಯವನ್ನು ಕೊಡುತ್ತಾ, ನೀನು ಮಾತನಾಡಬೇಕಾದದ್ದನ್ನು ನಿನಗೆ ಬೋಧಿಸುವೆನು” ಎಂದು ಹೇಳಿದನು.
13 ಅದಕ್ಕೆ ಮೋಶೆಯು, “ಸ್ವಾಮಿ, ನೀವು ಬೇರೊಬ್ಬನನ್ನು ಕಳುಹಿಸಿರಿ, ಎಂದು ಬೇಡುತ್ತೇನೆ,” ಎಂದನು.
೧೩ಅದಕ್ಕೆ ಮೋಶೆಯು, “ಕರ್ತನೇ, ದಯವಿಟ್ಟು ನೀನು ಬೇರೊಬ್ಬನನ್ನು ಕಳುಹಿಸಬೇಕು” ಎಂದನು.
14 ಯೆಹೋವ ದೇವರು ಮೋಶೆಯ ಮೇಲೆ ಬೇಸರಗೊಂಡು, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲನೆಂದು ನನಗೆ ಗೊತ್ತಿದೆ. ಅವನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ಕಂಡು, ತನ್ನ ಹೃದಯದಲ್ಲಿ ಆನಂದಿಸುವನು.
೧೪ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು.
15 ಅವನ ಸಂಗಡ ನೀನು ಮಾತನಾಡಿ, ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಂದಲೂ ಅವನ ಬಾಯಿಂದಲೂ ನಾನೇ ಮಾತನಾಡಿ ನೀವು ಮಾಡಬೇಕಾದುದನ್ನು ಕಲಿಸುವೆನು.
೧೫ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.
16 ಅವನು ನಿನ್ನ ಪರವಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿರುವನು, ನೀನು ಅವನಿಗೆ ದೇವರಂತಿರುವಿ.
೧೬ಅವನು ನಿನಗೆ ಬದಲಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತಿರುವಿ.
17 ಆದರೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಳ್ಳಬೇಕು. ಇದರಿಂದಲೇ ನೀನು ಸೂಚಕಕಾರ್ಯಗಳನ್ನು ಮಾಡುವೆ,” ಎಂದರು.
೧೭ಇದಲ್ಲದೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಹೋಗಬೇಕು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ” ಅಂದನು.
18 ಇದಾದ ಮೇಲೆ ಮೋಶೆಯು ತನ್ನ ಮಾವನಾದ ಇತ್ರೋವನ ಬಳಿಗೆ ಬಂದು ಅವನಿಗೆ, “ಈಜಿಪ್ಟಿನಲ್ಲಿರುವ ನನ್ನ ಸಹೋದರರ ಬಳಿಗೆ ಹಿಂದಿರುಗಿ ಹೋಗಿ, ಅವರು ಇನ್ನೂ ಜೀವದಿಂದ ಇದ್ದಾರೋ ಎಂಬುದನ್ನು ನೋಡುವೆನು,” ಎಂದನು. ಇತ್ರೋವನು ಮೋಶೆಗೆ, “ಸಮಾಧಾನದಿಂದ ಹೋಗು,” ಎಂದನು.
೧೮ಆಗ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು ಅವನಿಗೆ, “ನಾನು ಐಗುಪ್ತ ದೇಶದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ಎಂದು ಹೋಗಿ ನೋಡುವೆನು” ಎಂದನು. ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗು” ಅಂದನು.
19 ಯೆಹೋವ ದೇವರು ಮಿದ್ಯಾನಿನಲ್ಲಿ ಮೋಶೆಗೆ, “ಈಜಿಪ್ಟಿಗೆ ಹಿಂದಿರುಗಿ ಹೋಗು. ಏಕೆಂದರೆ ನಿನ್ನನ್ನು ಕೊಲ್ಲಬೇಕೆಂದಿದ್ದ ಜನರೆಲ್ಲಾ ಸತ್ತಿದ್ದಾರೆ,” ಎಂದರು.
೧೯ಯೆಹೋವನು ಮಿದ್ಯಾನಿನಲ್ಲಿ ಮೋಶೆಗೆ, ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗು. ನಿನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದವರೆಲ್ಲರೂ ಸತ್ತು ಹೋದರು ಎಂದನು.
20 ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರೆದುಕೊಂಡು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ, ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಬಂದನು. ಇದಲ್ಲದೆ ದೇವರ ಕೋಲನ್ನು ಕೈಯಲ್ಲಿ ತೆಗೆದುಕೊಂಡನು.
೨೦ಮೋಶೆ ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕತ್ತೆಯ ಮೇಲೆ ಕುಳ್ಳಿರಿಸಿ ಅವರನ್ನು ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಜೊತೆಯಲ್ಲಿ ಅವನು ದೇವದಂಡವನ್ನು ಕೈಯಲ್ಲಿ ತೆಗೆದುಕೊಂಡನು.
21 ಆಗ ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗುವಾಗ, ನಾನು ನಿನ್ನ ಕೈಯಲ್ಲಿ ಮಾಡಿಸಿದ ಎಲ್ಲಾ ಸೂಚಕಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವುದಿಲ್ಲ.
೨೧ಯೆಹೋವನು ಮೋಶೆಗೆ ಇಂತೆಂದನು, “ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದಾಗ ನಾನು ನಿನ್ನ ಕೈಯಿಂದ ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಫರೋಹನ ಮುಂದೆ ಮಾಡಬೇಕು. ಆದರೂ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಆದ್ದರಿಂದ ಅವನು ಜನರನ್ನು ಹೋಗಲು ಬಿಡುವುದಿಲ್ಲ.
22 ಆಗ ನೀನು ಫರೋಹನಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲ ನನ್ನ ಮಗನು, ನನ್ನ ಜೇಷ್ಠಪುತ್ರನು.
೨೨ಆಗ ನೀನು ಫರೋಹನಿಗೆ, ‘ಇಸ್ರಾಯೇಲನು ನನ್ನ ಮಗನು, ನನಗೆ ಚೊಚ್ಚಲಮಗನು.
23 ಫರೋಹನೇ, ನಾನು ನಿನಗೆ ಹೇಳುವುದೇನೆಂದರೆ: “ನನ್ನ ಸೇವೆಮಾಡುವಂತೆ ನನ್ನ ಮಗನನ್ನು ಕಳುಹಿಸು.” ನೀನು ಅವನನ್ನು ಕಳುಹಿಸುವುದನ್ನು ನಿರಾಕರಿಸಿದರೆ, ನಾನು ನಿನ್ನ ಮಗನನ್ನು ಅಂದರೆ, ನಿನ್ನ ಜೇಷ್ಠಪುತ್ರನನ್ನು ಕೊಲ್ಲುವೆನು,’ ಎಂದು ತಿಳಿಸಬೇಕು,” ಎಂದರು.
೨೩ಹಾಗೂ ನನ್ನ ಮಗನು ನಿನ್ನ ದೇಶದಿಂದ ಹೊರಟು ನನ್ನನ್ನು ಆರಾಧಿಸುವುದಕ್ಕೆ ಅವನಿಗೆ ಅಪ್ಪಣೆಕೊಡಬೇಕು. ಅದಕ್ಕೆ ನೀನು ಒಪ್ಪದೇ ಹೋದರೆ, ನಾನು ನಿನಗಿರುವ ಚೊಚ್ಚಲಮಗನನ್ನು ಸಾಯಿಸುವೆನೆಂದು ಯೆಹೋವನು ಹೇಳುತ್ತಾನೆ’” ಎಂದು ತಿಳಿಸಬೇಕು.
24 ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ ವಸತಿಗೃಹದಲ್ಲಿದ್ದಾಗ, ಯೆಹೋವ ದೇವರು ಮೋಶೆಯ ಎದುರಿಗೆ ಬಂದು ಅವನನ್ನು ಕೊಲ್ಲುವುದಕ್ಕಿದ್ದಾಗ,
೨೪ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ, ಛತ್ರದಲ್ಲಿದ್ದಾಗ ಯೆಹೋವನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು.
25 ಚಿಪ್ಪೋರಳು ಕಲ್ಲಿನ ಚೂರಿ ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ, ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿ ಅವನಿಗೆ, “ಖಂಡಿತವಾಗಿ ನೀನು ನನಗೆ ರಕ್ತಧಾರೆಯಿಂದಾದ ಗಂಡನು,” ಎಂದಳು.
೨೫ಹೀಗಿರುವಾಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿದಳು. ನಂತರ ಅವಳು, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂದಳು.
26 ಆಗ ಯೆಹೋವ ದೇವರು ಅವನನ್ನು ಉಳಿಸಿದರು. ಆಗ ಅವಳು, “ಸುನ್ನತಿಯ ನಿಮಿತ್ತ ನೀನು ನನಗೆ ರಕ್ತಧಾರೆಯಿಂದ ಗಂಡನಾಗಿದ್ದೀ,” ಎಂದಳು.
೨೬ಆಗ ಯೆಹೋವನು ಅವನನ್ನು ಉಳಿಸಿದನು. ಆಗ ಅವಳು, “ಸುನ್ನತಿಯ ನಿಮಿತ್ತವೇ ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂಬ ಮಾತನ್ನು ಹೇಳಿದಳು.
27 ಇದಲ್ಲದೆ ಯೆಹೋವ ದೇವರು ಆರೋನನಿಗೆ, “ಮೋಶೆಯನ್ನು ಎದುರುಗೊಳ್ಳುವದಕ್ಕೆ ಮರುಭೂಮಿಗೆ ಹೋಗು,” ಎಂದರು. ಆಗ ಅವನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು.
೨೭ಇದಲ್ಲದೆ ಯೆಹೋವನು ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳುವುದಕ್ಕೆ ಮರುಭೂಮಿಗೆ ಹೊರಟುಹೋಗು” ಎಂದನು. ಅವನು ಹೋಗಿ ದೇವರ ಬೆಟ್ಟದಲ್ಲೇ ಅವನನ್ನು ಎದುರುಗೊಂಡು ಮುದ್ದಿಟ್ಟನು.
28 ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಯೆಹೋವ ದೇವರ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
೨೮ಆಗ ಮೋಶೆಯು ಆರೋನನಿಗೆ, ತನ್ನನ್ನು ಕಳುಹಿಸಿದ ಯೆಹೋವನ ಎಲ್ಲಾ ಮಾತುಗಳನ್ನೂ, ತನಗೆ ಆಜ್ಞಾಪಿಸಿದ ಸೂಚಕಕಾರ್ಯಗಳನ್ನೂ, ತಾನು ಮಾಡಿದವುಗಳನ್ನೆಲ್ಲಾ ಆರೋನನಿಗೆ ತಿಳಿಸಿದನು.
29 ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲಿನ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.
೨೯ತರುವಾಯ ಮೋಶೆ ಮತ್ತು ಆರೋನರು ಹೋಗಿ ಇಸ್ರಾಯೇಲ್ಯರ ಹಿರಿಯರನ್ನೆಲ್ಲಾ ಒಟ್ಟಿಗೆ ಸೇರಿಸಿದರು.
30 ಯೆಹೋವ ದೇವರು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ಹೇಳಿ, ಜನರ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
೩೦ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ತಿಳಿಸಿ ಜನರ ಕಣ್ಣುಗಳ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
31 ಜನರು ನಂಬಿದರು. ಯೆಹೋವ ದೇವರು ಇಸ್ರಾಯೇಲರನ್ನು ದರ್ಶಿಸಿ, ಅವರ ವ್ಯಥೆಯನ್ನು ನೋಡಿದ್ದಾರೆ ಎಂದು ಅವರು ಕೇಳಿದಾಗ, ತಲೆಬಾಗಿಸಿ ಆರಾಧಿಸಿದರು.
೩೧ಜನರು ನಂಬಿದರು. ಯೆಹೋವನು ಇಸ್ರಾಯೇಲರನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡನೆಂಬುದನ್ನು, ಇಸ್ರಾಯೇಲರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

< ವಿಮೋಚನಕಾಂಡ 4 >