< ವಿಮೋಚನಕಾಂಡ 37 >
1 ಬೆಚಲಯೇಲನು ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಎತ್ತರವಾಗಿರುವ ಮಂಜೂಷವನ್ನು ಮಾಡಿದನು.
2 ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿದನು.
3 ಅದರ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇರಿಸಿದನು.
4 ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.
5 ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು.
6 ಇದಲ್ಲದೆ ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಿದನು.
7 ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿದನು.
8 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿದನು.
9 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿದ್ದವು.
10 ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಿದನು.
11 ಆಮೇಲೆ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಸುತ್ತಲೂ ಬಂಗಾರದ ತೋರಣ ಕಟ್ಟಿದನು.
12 ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಕಟ್ಟಿದರು.
13 ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಎರಕ ಹೊಯ್ದು, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಿದರು.
14 ಮೇಜನ್ನು ಹೊತ್ತುಕೊಂಡು ಹೋಗಲು ಕೋಲುಗಳನ್ನು ಮಾಡಿ, ಈ ಬಳೆಗಳನ್ನು ಅಡ್ಡಪಟ್ಟಿಗೆ ಸಮೀಪದಲ್ಲಿ ಕೂಡಿಸಿದರು.
15 ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳಿಗೆ ಬಂಗಾರದಿಂದ ಹೊದಿಸಲಾಯಿತು.
16 ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣ, ಧೂಪಾರತಿಗಳು, ಹೂಜೆಗಳು, ಪಾನದ್ರವ್ಯಗಳ ಅರ್ಪಣೆಗಾಗಿ ಬೇಕಾಗುವ ಬಟ್ಟಲುಗಳನ್ನು ಶುದ್ಧ ಬಂಗಾರದಿಂದ ಮಾಡಿದರು.
17 ಚೊಕ್ಕ ಬಂಗಾರದಿಂದ ದೀಪಸ್ತಂಭವನ್ನು ಮಾಡಿದರು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದರು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇದ್ದವು.
18 ಆ ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬಂದಿದ್ದವು.
19 ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿದ್ದವು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು ಮೊಗ್ಗು ಪುಷ್ಟಗಳಿದ್ದವು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇದ್ದವು.
20 ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇದ್ದವು.
21 ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿತ್ತು, ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳಿದ್ದವು.
22 ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿದ್ದವು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿತ್ತು.
23 ಅವರು ಏಳು ದೀಪಗಳನ್ನೂ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಿದರು.
24 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಿದರು.
25 ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಿದರು. ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿತ್ತು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಲಾಗಿತ್ತು.
26 ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿದರು. ಅದರ ಸುತ್ತಲೂ ಬಂಗಾರದ ಗೋಟನ್ನು ಕಟ್ಟಿಸಿದರು.
27 ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಿದರು, ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಿದರು.
28 ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಿದರು.
29 ಅನಂತರ ಅವರು ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮತ್ತು ಪರಿಮಳ ದ್ರವ್ಯದಿಂದ ಶುದ್ಧವಾದ ಧೂಪವನ್ನು ತಯಾರಿಸಿದರು.