< ವಿಮೋಚನಕಾಂಡ 36 >

1 ತರುವಾಯ ಬೆಚಲಯೇಲ್ ಮತ್ತು ಒಹೋಲಿಯಾಬನೂ ಯೆಹೋವ ದೇವರು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡುವರು. ಅವರು ಪರಿಶುದ್ಧಸ್ಥಳದ ಸೇವೆಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಯೆಹೋವ ದೇವರಿಂದ ಜ್ಞಾನ ವಿವೇಕಗಳನ್ನು ಹೊಂದಿದ ಇತರರೊಂದಿಗೆ ಕೆಲಸಮಾಡುವರು,” ಎಂದು ಹೇಳಿದನು.
“ಬೆಚಲೇಲನು ಹಾಗೂ ಒಹೋಲೀಯಾಬನು ಮತ್ತು ಬೇರೆ ಜ್ಞಾನಿಗಳೆಲ್ಲರು ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ಪವಿತ್ರ ದೇವಮಂದಿರವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ ಮಾಡುವರು” ಅಂದನು.
2 ಬೆಚಲಯೇಲನನ್ನು, ಒಹೋಲಿಯಾಬನನ್ನು ಮತ್ತು ಯೆಹೋವ ದೇವರು ಜ್ಞಾನಕೊಟ್ಟಿದ್ದ ಪ್ರತಿಯೊಬ್ಬ ಶಿಲ್ಪಿಯನ್ನೂ ಆ ಕೆಲಸ ಮಾಡುವುದಕ್ಕೆ ಸಿದ್ಧ ಮನಸ್ಸಿದ್ದ ಪ್ರತಿಯೊಬ್ಬನನ್ನೂ ಮೋಶೆಯು ಕರೆದನು.
ಬೆಚಲೇಲನನ್ನೂ ಒಹೋಲೀಯಾಬನನ್ನೂ ಮತ್ತು ಯಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಕೊಟ್ಟಿದ್ದನೋ, ಯಾರಾರಿಗೆ ಈ ಕೆಲಸಮಾಡುವುದಕ್ಕೆ ಹೃದಯದಲ್ಲಿ ಪ್ರೇರಣೆಯಾಯಿತೋ ಅಂಥ ಜ್ಞಾನಿಗಳೆಲ್ಲರನ್ನೂ ಮೋಶೆಯು ತನ್ನ ಹತ್ತಿರಕ್ಕೆ ಕರೆಯಿಸಿದನು.
3 ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.
ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯಿಂದ ಪಡೆದುಕೊಂಡರು. ಇಸ್ರಾಯೇಲರು ಪ್ರತಿದಿನ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು.
4 ಆಗ ಪರಿಶುದ್ಧಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಮ್ಮ ತಮ್ಮ ಕೆಲಸವನ್ನು ಬಿಟ್ಟು ಬಂದು,
ಆಗ ದೇವಮಂದಿರದ ಕೆಲಸವನ್ನು ಮಾಡುತ್ತಿದ್ದ ಆ ಜ್ಞಾನಿಗಳೆಲ್ಲರು,
5 ಮೋಶೆಯ ಸಂಗಡ ಮಾತನಾಡಿ, “ಯೆಹೋವ ದೇವರು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಾಣಿಕೆಗಳನ್ನು ಈ ಜನರು ತರುತ್ತಿದ್ದಾರೆ,” ಎಂದು ಹೇಳಿದರು.
ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು ಅವನಿಗೆ, “ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾಗಿರುವುದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿದ್ದಾರೆ ಎಂದು” ಹೇಳಿದರು.
6 ಆಗ ಮೋಶೆಯು, “ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.
ಆಗ ಮೋಶೆಯು ಇದನ್ನು ಗಮನಿಸಿ, “ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಇನ್ನು ಮುಂದೆ ಕಾರ್ಯಗಳನ್ನೂ ಮಾಡಬಾರದು” ಎಂದು ಅಪ್ಪಣೆಮಾಡಿ ಅದನ್ನು ಪಾಳೆಯದಲ್ಲಿ ಪ್ರಕಟಿಸಿದನು. ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.
7 ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು.
ಏಕೆಂದರೆ ಕೆಲಸವನ್ನೆಲ್ಲಾ ಮಾಡುವುದಕ್ಕೆ ಸಾಕಾಗುವುದಕ್ಕಿಂತಲೂ ಹೆಚ್ಚು ಸಾಮಗ್ರಿಗಳಿದ್ದವು.
8 ಕೆಲಸದವರಲ್ಲಿದ್ದ ಶಿಲ್ಪಿಗಳೆಲ್ಲರೂ ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿದರು.
ಆ ಕೆಲಸ ಮಾಡುತ್ತಿದ್ದ ಜ್ಞಾನಿಗಳೆಲ್ಲರು ಹೊಸೆದ ನಾರಿನ ಹತ್ತು ಪರದೆಗಳಿಂದ ಗುಡಾರವನ್ನು ಮಾಡಿ ಆ ಪರದೆಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರಗಳಿಂದ ನೇಯ್ಗೆಯವರಂತೆ ಕೆರೂಬಿಗಳನ್ನು ಮಾಡಿ ಅದಕ್ಕೆ ಚಮತ್ಕಾರವಾಗಿ ಕಸೂತಿ ಹಾಕಿ ಮಾಡಿದರು.
9 ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿದ್ದವು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದ್ದವು.
ಪ್ರತಿಯೊಂದು ಪರದೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು. ಎಲ್ಲಾ ಪರದೆಗಳು ಸಮಾನ ಅಳತೆಯಲ್ಲಿದ್ದವು.
10 ಅವರು ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಿದರು.
೧೦ಐದೈದು ಪರದೆಗಳನ್ನು ಒಂದೊಂದಾಗಿ ಜೋಡಿಸಿದರು.
11 ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿದ್ದಲ್ಲದೆ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಿದರು.
೧೧ಈ ಎರಡು ಜೋಡಣೆಗಳಲ್ಲಿ ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ
12 ಒಂದು ಪರದೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ, ಇನ್ನೊಂದು ಪರದೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು. ಆ ಕುಣಿಕೆಗಳು ಒಂದು ಪರದೆಯನ್ನು ಮತ್ತೊಂದು ಪರದೆಯು ಹಿಡಿದುಕೊಳ್ಳುವಂತೆ ಮಾಡಿದರು.
೧೨ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು.
13 ಅವರು ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಎರಡು ಜೋಡಣೆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು. ಹೀಗೆ ಅದು ಒಂದೇ ಗುಡಾರವಾಯಿತು.
೧೩ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು; ಹೀಗೆ ಅದು ಒಂದೇ ಗುಡಾರ ಆಯಿತು.
14 ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಅವರು ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಿದರು.
೧೪ಬೆಚಲೇಲನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಉಣ್ಣೆಯ ಹನ್ನೊಂದು ಪರದೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದನು.
15 ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿದ್ದವು.
೧೫ಒಂದೊಂದು ಪರದೆಯು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು; ಎಲ್ಲಾ ಪರದೆಗಳೂ ಒಂದೇ ಅಳತೆಯಾಗಿದ್ದವು.
16 ಅವರು ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿದರು.
೧೬ಐದು ಪರದೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಪರದೆಗಳನ್ನೂ ಒಂದಾಗಿ ಜೋಡಿಸಿದರು.
17 ಅವರು ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು.
೧೭ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿದರು.
18 ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡಣೆಗೆ ಅವರು ಕಂಚಿನ ಐವತ್ತು ಕೊಂಡಿಗಳನ್ನು ಮಾಡಿದರು.
೧೮ಒಂದೇ ಡೇರೆಯಾಗುವಂತೆ ಸಮಸ್ತವನ್ನು ಜೋಡಿಸುವುದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು.
19 ಅದಲ್ಲದೆ ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಿದರು. ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದರು.
೧೯ಅದಲ್ಲದೆ ಹದಮಾಡಿರುವ ಟಗರಿನ ತೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ, ಕಡಲಪ್ರಾಣಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು.
20 ಗುಡಾರವು ನಿಂತುಕೊಂಡಿರುವುದಕ್ಕೆ ಅವರು ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಿದರು.
೨೦ಗುಡಾರಕ್ಕೆ ಜಾಲೀಮರದಿಂದ ನೆಟ್ಟಗೆ ನಿಂತಿರುವ ಹಲಗೆಗಳಿಂದ ಚೌಕಟ್ಟುಗಳನ್ನು ಮಾಡಿದರು.
21 ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇತ್ತು.
೨೧ಪ್ರತಿಯೊಂದು ಚೌಕಟ್ಟೂ ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು;
22 ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದರು. ಅದೇ ಪ್ರಕಾರ ಅವರು ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಿದರು.
೨೨ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿಸಿದರು.
23 ಅವರು ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
೨೩ಗುಡಾರದ ದಕ್ಷಿಣದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು;
24 ಅವರು ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಿದರು.
೨೪ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೆಕಲ್ಲನ್ನು ಇಟ್ಟರು.
25 ಇನ್ನೊಂದು ಭಾಗಕ್ಕೆ ಅಂದರೆ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
೨೫ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು
26 ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು.
೨೬ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೆಕಲ್ಲುಗಳ ಮೇರೆಗೆ ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲಗಳನ್ನು ಮಾಡಿದರು.
27 ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಿದರು.
೨೭ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು.
28 ಅವರು ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.
೨೮ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.
29 ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿದರು. ಇದೇ ರೀತಿಯಲ್ಲಿ ಅವರು ಎರಡು ಮೂಲೆಗಳಲ್ಲಿ ಎರಡಕ್ಕೂ ಮಾಡಿದರು.
೨೯ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯವರೆಗೂ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು.
30 ಇಂಥ ಎಂಟು ಚೌಕಟ್ಟುಗಳಿದ್ದವು. ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳಿದ್ದವು.
೩೦ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೆಕಲ್ಲುಗಳೂ ಒಟ್ಟು ಹದಿನಾರು ಗದ್ದಿಗೆಕಲ್ಲುಗಳಿದ್ದವು.
31 ಅವರು ಜಾಲಿ ಮರದಿಂದ ಅಗುಳಿಗಳನ್ನು ಮಾಡಿದರು, ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳು,
೩೧ಜಾಲೀಮರದಿಂದ ಅಗುಳಿಗಳನ್ನು ಮಾಡಿದರು.
32 ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಿದರು.
೩೨ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು.
33 ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹಾದು ಹೋಗುವಹಾಗೆ ಮಾಡಿದರು.
೩೩ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು.
34 ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಿ, ಆ ಅಗುಳಿಗಳಿಗಾಗಿ ಬಂಗಾರದಿಂದ ಬಳೆಗಳನ್ನು ಮಾಡಿ, ಮಾಡಿದ ಅಗುಳಿಗಳನ್ನು ಬಂಗಾರದಿಂದ ಹೊದಿಸಿದರು.
೩೪ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು.
35 ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಿದರು.
೩೫ನಯವಾಗಿ ಹೊಸೆದ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ಕೆರೂಬಿಗಳಿಗೆ ಚಮತ್ಕಾರವಾಗಿ ಕಸೂತಿಹಾಕಿ ಒಂದು ತೆರೆಯನ್ನು ಮಾಡಿದರು.
36 ಅದಕ್ಕೆ ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಅವುಗಳಿಗೆ ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳನ್ನು ಎರಕ ಹೊಯ್ದರು.
೩೬ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ ನಾಲ್ಕು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಎರಕಹೊಯಿಸಿದರು.
37 ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಿದರು.
೩೭ಡೇರೆಯ ಬಾಗಿಲಿಗೆ ಹುರಿ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿಹಾಕಿ ಪರದೆಯನ್ನು ಮಾಡಿದರು.
38 ಕೊಂಡಿಯಿರುವ ಐದು ಕಂಬಗಳನ್ನು ಮಾಡಿ, ಅವುಗಳ ತಲೆಗಳನ್ನೂ ಕಂಬಗಳನ್ನೂ ಬಂಗಾರದಿಂದ ಹೊದಿಸಿದರು. ಆದರೆ ಅವುಗಳ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಮಾಡಿದರು.
೩೮ಆ ಪರದೆಯನ್ನು ತೂಗು ಹಾಕುವುದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ ಅವುಗಳ ಸುತ್ತಲ ಮೆಟ್ಟಿಲುಗಳಿಗೂ, ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ತಳಭಾಗಗಳನ್ನು ತಾಮ್ರದಿಂದ ಮಾಡಿದರು.

< ವಿಮೋಚನಕಾಂಡ 36 >