1“ನನಗೆ ಯಾಜಕ ಸೇವೆ ಮಾಡುವುದಕ್ಕೆ ನೀನು ಇಸ್ರಾಯೇಲರಿಂದ ನಿನ್ನ ಅಣ್ಣನಾದ ಆರೋನನನ್ನೂ, ಅವನ ಮಕ್ಕಳಾದ ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್ ಎಂಬುವರನ್ನು ನಿನ್ನ ಹತ್ತಿರ ಬರಮಾಡಬೇಕು.
This chapter is missing in the source text.
2ನಿನ್ನ ಸಹೋದರನಾದ ಆರೋನನ ಗೌರವಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.
3ಇದಲ್ಲದೆ ನಾನು ಜ್ಞಾನದ ಆತ್ಮದಿಂದ ತುಂಬಿದ ವಿವೇಕದ ಹೃದಯವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕನಾಗುವುದಕ್ಕೆ ಪ್ರತಿಷ್ಠಿತನಾಗುವನು.
4ಅವರು ಮಾಡಬೇಕಾದ ವಸ್ತ್ರಗಳು ಇವು: ಎದೆಪದಕವು, ಏಫೋದ್, ನಿಲುವಂಗಿ, ಕಸೂತಿಯ ಕೆಲಸದ ಮೇಲಂಗಿ, ಮುಂಡಾಸ, ನಡುಕಟ್ಟು. ನಿನ್ನ ಸಹೋದರನಾದ ಆರೋನನೂ ಅವನ ಪುತ್ರರೂ ನನ್ನ ಯಾಜಕರಾಗಿ ಸೇವೆ ಮಾಡುವುದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಿಸು.
6“ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡಬೇಕು.
7ಈ ಕವಚಕ್ಕೆ ಅದರ ಎರಡೂ ಕೊನೆಗಳನ್ನು ಜೋಡಿಸುವುದಕ್ಕೆ ಎರಡು ಹೆಗಲು ಪಟ್ಟಿಗಳಿರಬೇಕು.
8ಅದರ ಮೇಲಿರುವ ಕಸೂತಿ ಕೆಲಸದ ಏಫೋದಿನ ನಡುಕಟ್ಟನ್ನು ಒಂದೇ ರೀತಿಯ ವಸ್ತುಗಳಿಂದ ತಯಾರಿಸಬೇಕು ಅಂದರೆ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದ್ದಾಗಿರಬೇಕು.
9“ನೀನು ಎರಡು ಗೋಮೇಧಿಕ ರತ್ನಗಳನ್ನು ತೆಗೆದುಕೊಂಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.
10ಒಂದು ರತ್ನದ ಮೇಲೆ ಆರು ಹೆಸರುಗಳನ್ನು ಮತ್ತೊಂದು ರತ್ನದ ಮೇಲೆ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಪ್ರಕಾರ ಕೆತ್ತಬೇಕು.
11ಶಿಲ್ಪಿಗನು ಕಲ್ಲಿನ ಮೇಲೆ ಮುದ್ರೆ ಕೆತ್ತುವ ಪ್ರಕಾರ, ಆ ಎರಡೂ ರತ್ನಗಳ ಮೇಲೆ ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಕೆತ್ತಿಸಿ, ಅವುಗಳನ್ನು ಬಂಗಾರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು.
12ಆ ಎರಡು ರತ್ನಗಳನ್ನು ಏಫೋದಿನ ಹೆಗಲಿನ ಭಾಗದ ಮೇಲೆ ಇಸ್ರಾಯೇಲರ ಜ್ಞಾಪಕಾರ್ಥವಾದ ರತ್ನಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.
14ಹೊಸೆದ ಹಗ್ಗದಂತೆ ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೆ ಕೆಲಸದಿಂದ ಮಾಡಿ, ಆ ಹೆಣೆದ ಸರಪಣಿಗಳ ಕೊನೆಗಳನ್ನು ಜವೆಗಳಿಗೆ ಸೇರಿಸಿಬೇಕು.
15“ದೇವನಿರ್ಣಯ ಮಾಡುವ ಆತನ ಎದೆಪದಕವನ್ನು ಕೌಶಲ್ಯ ಕೆಲಸದಿಂದ ಎಂದರೆ ಏಫೋದಿನ ಕೆಲಸದ ಹಾಗೆಯೇ ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರಿನಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿಸಬೇಕು.
16ಅದು ಗೇಣು ಉದ್ದ, ಒಂದು ಗೇಣು ಅಗಲ ಮತ್ತು ಇದು ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿಯೂ ಇರಬೇಕು.
17ನಂತರ ಅದರಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಜೋಡಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಮತ್ತು ಸ್ಫಟಿಕಗಳಿರಬೇಕು.
18ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಮತ್ತು ಪಚ್ಚೆಗಳಿರಬೇಕು.
19ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಿಕ ಮತ್ತು ಧೂಮ್ರಮಣಿಗಳಿರಬೇಕು.
20ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಗೋಮೇಧಿಕ, ಸೂರ್ಯಕಾಂತ ಶಿಲೆ ಇವುಗಳನ್ನು ಬಂಗಾರದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.
21ಈ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿರಬೇಕು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು, ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿರಬೇಕು.
22“ಎದೆಪದಕದ ಮೇಲಿರುವ ಕೊನೆಗಳಲ್ಲಿ ಶುದ್ಧ ಬಂಗಾರದಿಂದ ಹೆಣೆದ ಕೆಲಸವಾಗಿರುವ ಹುರಿಗಳಂತಿರುವ ಸರಪಣಿಯನ್ನು ಮಾಡಬೇಕು.
23ಆ ಎದೆಪದಕದ ಮೇಲೆ ಬಂಗಾರದ ಎರಡು ಬಳೆಗಳನ್ನು ಮಾಡಿ, ಆ ಎರಡು ಬಳೆಗಳನ್ನು ಎದೆಪದಕದ ಎರಡು ಕೊನೆಗಳಲ್ಲಿ ಹಾಕಬೇಕು.
24ಬಂಗಾರದಿಂದ ಹೆಣೆದ ಆ ಎರಡು ಸರಪಣಿಗಳನ್ನು ಎದೆಪದಕದ ಕೊನೆಗಳಲ್ಲಿರುವ ಎರಡು ಬಳೆಗಳಲ್ಲಿ ಸೇರಿಸಬೇಕು.
25ಆ ಎರಡು ಹೆಣೆದ ಸರಪಣಿಗಳ ಎರಡು ಕೊನೆಗಳನ್ನು ಎರಡು ಜವೆಗಳಲ್ಲಿ ಸೇರಿಸಿ, ಏಫೋದಿನ ಹೆಗಲು ಭಾಗಗಳ ಮುಂದುಗಡೆ ಇರಿಸಬೇಕು.
26ಅದಲ್ಲದೆ ಬಂಗಾರದ ಎರಡು ಉಂಗುರಗಳನ್ನು ಮಾಡಿ, ಎದೆಪದಕದ ಎರಡು ಕೊನೆಗಳಲ್ಲಿ ಸೇರಿಸಿ, ಏಫೋದಿನ ಬದಿಗೆ ಒಳಗಡೆಯಲ್ಲಿ ಹಾಕಬೇಕು.
27ಚಿನ್ನದ ಬೇರೆ ಎರಡು ಉಂಗುರಗಳನ್ನು ಮಾಡಿ, ಏಫೋದಿನ ಮುಂಬದಿಯ ಕೆಳಗಿನ ಎರಡು ಹೆಗಲಿನ ಪಟ್ಟಿಗಳಲ್ಲಿ, ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಅದನ್ನು ಜೋಡಿಸುವ ಸ್ಥಳಕ್ಕೆ ಎದುರಾಗಿ ಇರಿಸಬೇಕು.
28ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ, ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ, ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಬೇಕು.
29“ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲರ ಹೆಸರುಗಳನ್ನು ಯಾವಾಗಲೂ ಯೆಹೋವ ದೇವರ ಮುಂದೆ ಜ್ಞಾಪಕ ಮಾಡುವುದಕ್ಕಾಗಿ ನ್ಯಾಯದ ಎದೆಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು.
30ನಿರ್ಣಯವನ್ನು ತಿಳಿಸುವ ಎದೆಪದಕದಲ್ಲಿ ಊರೀಮ್ ಮತ್ತು ತುಮ್ಮೀಮ್‌ಗಳನ್ನು ಇಡಬೇಕು. ಆರೋನನು ಯೆಹೋವ ದೇವರ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಯೆಹೋವ ದೇವರ ಮುಂದೆ ಯಾವಾಗಲೂ ಇಸ್ರಾಯೇಲರ ನಿರ್ಣಯಗಳನ್ನು ತನ್ನ ಹೃದಯದ ಮೇಲೆ ಹೊರಬೇಕು.
31“ಏಫೋದಿನ ನಿಲುವಂಗಿಯನ್ನೆಲ್ಲಾ ನೀಲಿ ಬಣ್ಣದ ಬಟ್ಟೆಯಿಂದ ಮಾಡಬೇಕು.
32ಅದರ ಮಧ್ಯದಲ್ಲಿ ಮೇಲ್ಗಡೆ ತಲೆದೂರಿಸುವುದಕ್ಕೆ ರಂದ್ರವಿರಬೇಕು. ಅದು ಹರಿಯದ ಆ ರಂದ್ರದ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿಸಬೇಕು.
33ನಿಲುವಂಗಿಯ ಅಂಚಿನ ಮೇಲೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ದಾಳಿಂಬೆ ಹಣ್ಣಿನಂತೆ ಅದರ ಅಂಚಿನ ಸುತ್ತಲೂ ಮಾಡಿ, ಅವುಗಳ ಮಧ್ಯದಲ್ಲಿ ಬಂಗಾರದ ಗಂಟೆಗಳನ್ನೂ ಸುತ್ತಲೂ ಇರಿಸಬೇಕು.
34ಒಂದು ಗೆಜ್ಜೆ, ಒಂದು ದಾಳಿಂಬೆಯಂತಿರುವ ಚೆಂಡನ್ನು ಒಂದಾದ ಮೇಲೆ ಒಂದು ಮೇಲಂಗಿಯ ಅಂಚಿನ ಸುತ್ತಲೂ ಇರಬೇಕು.
35ಇದು ಸೇವೆಗಾಗಿ ಆರೋನನ ಮೇಲೆ ಇರಬೇಕು. ಅವನು ಯೆಹೋವ ದೇವರ ಸಮ್ಮುಖದಲ್ಲಿ ಪರಿಶುದ್ಧ ಸ್ಥಳಕ್ಕೆ ಬರುತ್ತಾ ಹೋಗುತ್ತಾ ಇರುವ ಸಮಯದಲ್ಲಿ, ಅವನು ಸಾಯದಂತೆ ಅವನ ಶಬ್ದವು ಕೇಳಿಸಬೇಕು.
36“ಶುದ್ಧ ಬಂಗಾರದ ತಗಡನ್ನು ಮಾಡಿ ಮುದ್ರೆ ಕೆತ್ತುವ ಪ್ರಕಾರ, ಅದರಲ್ಲಿ ಹೀಗೆ ಕೆತ್ತಬೇಕು: ‘ಯೆಹೋವ ದೇವರಿಗೆ ಪರಿಶುದ್ಧ.’
37ಅದು ಮುಂಡಾಸದ ಮುಂಭಾಗದಲ್ಲಿರುವಂತೆ ಅದನ್ನು ನೀಲಿ ದಾರಿನಿಂದ ಕಟ್ಟಬೇಕು.
38ಇಸ್ರಾಯೇಲರು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ದೋಷವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಯೆಹೋವ ದೇವರ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
39“ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸದಿಂದ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿಸಬೇಕು.
40ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗೂ ಶೋಭೆ ಸಿಗುವಂತೆ ನಿಲುವಂಗಿಗಳನ್ನೂ, ನಡುಕಟ್ಟುಗಳನ್ನೂ ಹಾಗೂ ಪೇಟಗಳನ್ನೂ ಮಾಡಿಸು.
41ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.
42“ಅವರ ಬೆತ್ತಲೆಯನ್ನು ಮುಚ್ಚುವ ಹಾಗೆ ನಾರಿನ ಚಡ್ಡಿಗಳನ್ನು ಮಾಡಿಸು. ಅವು ಸೊಂಟದಿಂದ ತೊಡೆಯವರೆಗೆ ಇರಬೇಕು.
43ಆರೋನನೂ ಅವನ ಪುತ್ರರೂ ದೇವದರ್ಶನದ ಗುಡಾರಕ್ಕೆ ಬರುವ ಸಮಯದಲ್ಲಿಯೂ ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ದೋಷವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. “ಇದೇ ಆರೋನನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.