< ವಿಮೋಚನಕಾಂಡ 27 >
1 “ಇದಲ್ಲದೆ ಜಾಲಿ ಮರದಿಂದ ಬಲಿಪೀಠವನ್ನು ಮಾಡಬೇಕು. ಅದರ ಎತ್ತರವು ಸುಮಾರು ಒಂದು ಮೀಟರ್ ಇರಬೇಕು. ಅದರ ಉದ್ದ ಮತ್ತು ಅಗಲವು ಸುಮಾರು ಎರಡೂವರೆ ಮೀಟರ್ ಚಚ್ಚೌಕವಾಗಿರಬೇಕು.
2 ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಬೇಕು.
3 ಅದರ ಬೂದಿಯನ್ನು ತೆಗೆಯುವದಕ್ಕಾಗಿ ಬಟ್ಟಲುಗಳು, ಸಲಿಕೆಗಳು, ಮುಳ್ಳುಚಮಚಗಳು, ಬೋಗುಣಿಗಳು, ಅಗ್ಗಿಷ್ಟಿಕೆಗಳು ಮತ್ತು ಬಲಿಪೀಠದ ಉಪಕರಣಗಳನ್ನೆಲ್ಲಾ ಕಂಚಿನಿಂದ ಮಾಡಬೇಕು.
4 ಅದಕ್ಕೆ ಹೆಣಿಗೆ ಕೆಲಸದಿಂದ ಕಂಚಿನ ಜಾಳಿಗೆಯನ್ನು ಮಾಡಿ, ಆ ಜಾಳಿಗೆಯ ನಾಲ್ಕು ಮೂಲೆಗಳಿಗೆ ಕಂಚಿನ ನಾಲ್ಕು ಬಳೆಗಳನ್ನು ಮಾಡಬೇಕು.
5 ಆ ಜಾಳಿಗೆಯು ಬಲಿಪೀಠದ ಸುತ್ತಲಿರುವ ಕಟ್ಟಿಗೆಯ ಕಟ್ಟೆಯ ಕೆಳಗೆ ಇದ್ದು, ಅದನ್ನು ಬಲಿಪೀಠದ ಕೆಳಭಾಗದಿಂದ ಮಧ್ಯದವರೆಗೆ ಇರುವಂತೆ ಮಾಡಬೇಕು.
6 ಬಲಿಪೀಠಕ್ಕೆ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳನ್ನು ಕಂಚಿನಿಂದ ಹೊದಿಸಬೇಕು.
7 ಆ ಕೋಲುಗಳನ್ನು ಬಳೆಗಳಲ್ಲಿ ಸೇರಿಸಬೇಕು. ಅವುಗಳು ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಇರಬೇಕು.
8 ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆ ಅದನ್ನು ಮಾಡಬೇಕು.
9 “ಗುಡಾರದ ಅಂಗಳವನ್ನು ಮಾಡಬೇಕು. ಹೇಗೆಂದರೆ ದಕ್ಷಿಣ ದಿಕ್ಕಿನಲ್ಲಿರುವ ಅಂಗಳಕ್ಕೋಸ್ಕರ ನಯವಾಗಿ ಹೊಸೆದ ನಾರಿನ ಪರದೆಗಳನ್ನು ಮಾಡಬೇಕು. ಅವು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು.
10 ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಬೇಕು.
11 ಹಾಗೆಯೇ ಉತ್ತರ ದಿಕ್ಕಿನ ಪರದೆಗಳು ಸುಮಾರು ನಲವತ್ತೈದು ಮೀಟರ್ ಉದ್ದವಾಗಿರಬೇಕು, ಇಪ್ಪತ್ತು ಸ್ತಂಭಗಳು ಮತ್ತು ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಆ ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯಿಂದ ಮಾಡಬೇಕು.
12 “ಅಂಗಳದ ಪಶ್ಚಿಮ ಭಾಗದಲ್ಲಿ ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾದ ಪರದೆಗಳು, ಹತ್ತು ಸ್ತಂಭಗಳು ಮತ್ತು ಆ ಸ್ತಂಭಗಳಿಗೆ ಹತ್ತು ಗದ್ದಿಗೇ ಕಲ್ಲುಗಳಿರಬೇಕು.
13 ಪೂರ್ವದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಅಂಗಳದ ಅಗಲವು ಸುಮಾರು ಇಪ್ಪತ್ತಮೂರು ಮೀಟರ್ ಉದ್ದವಾಗಿರಬೇಕು.
14 ದ್ವಾರದ ಒಂದು ಬದಿಯ ಪರದೆಗಳು ಸುಮಾರು ಆರುವರೆ ಮೀಟರ್ ಉದ್ದವಾಗಿರಬೇಕು. ಅವುಗಳಿಗೆ ಮೂರು ಸ್ತಂಭಗಳು, ಆ ಸ್ತಂಭಗಳಿಗೆ ಮೂರು ಕಾಲು ಗದ್ದಿಗೇ ಕಲ್ಲುಗಳು ಇರಬೇಕು.
15 ಎರಡೂ ಕಡೆಗಳಲ್ಲಿ ಸುಮಾರು ಆರುವರೆ ಮೀಟರ್ ಉದ್ದವಾದ ಪರದೆಗಳು, ಅವುಗಳಿಗೆ ಮೂರು ಸ್ತಂಭಗಳು ಮತ್ತು ಮೂರು ಗದ್ದಿಗೇ ಕಲ್ಲುಗಳಿರಬೇಕು.
16 “ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ, ಅದಕ್ಕೆ ನಾಲ್ಕು ಸ್ತಂಭಗಳು ಮತ್ತು ನಾಲ್ಕು ಗದ್ದಿಗೇ ಕಲ್ಲುಗಳಿರಬೇಕು.
17 ಅಂಗಳದ ಸುತ್ತಲಿರುವ ಸ್ತಂಭಗಳಿಗೆಲ್ಲಾ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಂಡಿಗಳು ಮತ್ತು ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿರಬೇಕು.
18 ಅಂಗಳದ ಉದ್ದ ಸುಮಾರು ನಲವತ್ತೈದು ಮೀಟರ್, ಅಗಲ ಸುಮಾರು ಇಪ್ಪತ್ತಮೂರು ಮೀಟರ್, ಅದರ ಎತ್ತರ ಸುಮಾರು ಎರಡು ಮೀಟರ್ ಇರಬೇಕು. ಪರದೆಗಳು ನಯವಾದ ನಾರಿನಿಂದ ಹೊಸೆದದ್ದಾಗಿದ್ದು, ಅವುಗಳ ಕುಳಿಗಳನ್ನು ಕಂಚಿನಿಂದ ಮಾಡಿಸಬೇಕು.
19 ಗುಡಾರದ ಕೆಲಸಕ್ಕೆ ಬೇಕಾಗುವ ಎಲ್ಲಾ ಉಪಕರಣಗಳು, ಅಂಗಳದ ಸುತ್ತಲೂ ಇರುವ ಎಲ್ಲಾ ಗೂಟಗಳೂ ಕಂಚಿನಿಂದ ಮಾಡಿದ್ದವುಗಳಾಗಿರಬೇಕು.
20 “ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.
21 ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ಇಸ್ರಾಯೇಲರಿಗೆ ಮತ್ತು ಅವರ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರಬೇಕು.