< ವಿಮೋಚನಕಾಂಡ 16 >
1 ಇಸ್ರಾಯೇಲರ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣಮಾಡಿ, ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ, ಸೀನಾಯಿ ಪರ್ವತಕ್ಕೂ ಮಧ್ಯೆ ಇರುವ ಸೀನ್ ಮರುಭೂಮಿಗೆ ಬಂದರು.
2 ಆಗ ಇಸ್ರಾಯೇಲರ ಸಭೆಯೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ವಿರೋಧವಾಗಿ ಗೊಣಗುಟ್ಟಿದರು.
3 ಇಸ್ರಾಯೇಲರು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಸಾಕಾಗುವಷ್ಟು ರೊಟ್ಟಿಯನ್ನು ತಿನ್ನುತ್ತಿದ್ದಾಗ, ಯೆಹೋವ ದೇವರ ಕೈಯಿಂದ ಸತ್ತು ಹೋಗಿದ್ದರೆ ಒಳ್ಳೆಯದಾಗಿತ್ತು. ಇಡೀ ಜನಾಂಗವೇ ಹಸಿವೆಯಿಂದ ಸತ್ತು ಹೋಗುವಂತೆ ನಮ್ಮನ್ನು ಈ ಮರುಭೂಮಿಗೆ ಬರಮಾಡಿದ್ದೀರಿ,” ಎಂದರು.
4 ಆಗ ಯೆಹೋವ ದೇವರು ಮೋಶೆಗೆ, “ನಾನು ರೊಟ್ಟಿಯನ್ನು ನಿಮಗಾಗಿ ಆಕಾಶದಿಂದ ಸುರಿಸುತ್ತೇನೆ. ಜನರು ಹೊರಗೆ ಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದದ್ದನ್ನು ಕೂಡಿಸಲಿ. ಇದರಿಂದ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳುವರೋ, ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇನೆ.
5 ಆರನೆಯ ದಿವಸದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಪಡಿಸಿಕೊಳ್ಳುವಾಗ, ಪ್ರತಿದಿನ ಕೂಡಿಸುವುದಕ್ಕಿಂತಲೂ ಎರಡರಷ್ಟಾಗಿರುವುದು,” ಎಂದು ಹೇಳಿದರು.
6 ಆಗ ಮೋಶೆ, ಆರೋನರು ಇಸ್ರಾಯೇಲರಿಗೆಲ್ಲಾ, “ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದವರು ಯೆಹೋವ ದೇವರೇ, ಎಂದು ಸಾಯಂಕಾಲವಾದಾಗ ನಿಮಗೆ ತಿಳಿಯುವುದು.
7 ಬೆಳಿಗ್ಗೆ ಯೆಹೋವ ದೇವರ ಮಹಿಮೆಯನ್ನು ನೋಡುವಿರಿ. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ನೀವು ಗೊಣಗುಟ್ಟಿದ್ದನ್ನು ಅವರು ಕೇಳಿದ್ದಾರೆ. ನಮಗೆ ವಿರೋಧವಾಗಿ ನೀವು ಗೊಣಗುಟ್ಟುವ ಹಾಗೆ ನಾವು ಯಾರು?” ಎಂದರು.
8 ಮೋಶೆ ಮುಂದುವರಿಸಿ, “ಸಂಜೆಯಲ್ಲಿ ಯೆಹೋವ ದೇವರು ನಿಮಗೆ ಮಾಂಸಾಹಾರವನ್ನೂ, ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ಕೊಡುವರು. ನಿಮ್ಮ ಗೊಣಗುಟ್ಟುವಿಕೆಯು ಯೆಹೋವ ದೇವರಿಗೆ ಹೊರತು ನಮಗಲ್ಲ. ನಾವು ಎಷ್ಟು ಮಾತ್ರದವರು,” ಎಂದನು.
9 ಅನಂತರ ಮೋಶೆ ಆರೋನನಿಗೆ, “ನೀನು ಇಸ್ರಾಯೇಲರ ಸಮೂಹಕ್ಕೆ, ‘ನಿಮ್ಮ ಗೊಣಗುಟ್ಟುವಿಕೆಯನ್ನು ಯೆಹೋವ ದೇವರು ಕೇಳಿದ್ದರಿಂದ ನೀವು ಅವರ ಮುಂದೆ ಬನ್ನಿರಿ,’ ಎಂದು ಹೇಳು,” ಎಂದನು.
10 ಆರೋನನು ಇಸ್ರಾಯೇಲರ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಮರುಭೂಮಿಯ ಕಡೆಗೆ ನೋಡಿದರು. ಆಗ, ಯೆಹೋವ ದೇವರ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.
11 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
12 “ಇಸ್ರಾಯೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತನಾಡಿ, ‘ನೀವು ಸಂಜೆಯಲ್ಲಿ ಮಾಂಸವನ್ನು ತಿನ್ನುವಿರಿ. ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ,’ ಎಂದು ಅವರಿಗೆ ಹೇಳು,” ಎಂದರು.
13 ಸಂಜೆಯಲ್ಲಿ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.
14 ಬಿದ್ದಿದ್ದ ಮಂಜು ಹೋದ ಮೇಲೆ, ಗಟ್ಟಿಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕದಾದದ್ದೂ, ಗುಂಡಾದದ್ದೂ ಮರುಭೂಮಿಯಲ್ಲಿ ಹರಡಿತ್ತು.
15 ಇಸ್ರಾಯೇಲರು ಅದನ್ನು ನೋಡಿದಾಗ ಅವರು, ಒಬ್ಬರಿಗೊಬ್ಬರು, “ಇದೇನು?” ಎಂದರು. ಏಕೆಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ, “ಯೆಹೋವ ದೇವರು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ.
16 ಯೆಹೋವ ದೇವರು, ‘ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ. ಪ್ರತಿಯೊಬ್ಬನಿಗೆ ಸುಮಾರು ಒಂದು ಕಿಲೋಗ್ರಾಂದಷ್ಟು ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತೆಗೆದುಕೊಳ್ಳಿರಿ,’ ಎಂದು ಹೇಳಿದ್ದಾರೆ,” ಎಂದನು.
17 ಇಸ್ರಾಯೇಲರು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.
18 ಓಮೆರದಿಂದ ಅಳತೆಮಾಡಿದಾಗ, ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ. ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು.
19 ಮೋಶೆ ಅವರಿಗೆ, “ಇದನ್ನು ಯಾರೂ ಮರುದಿನದವರೆಗೆ ಇಟ್ಟುಕೊಳ್ಳಬಾರದು,” ಎಂದು ಹೇಳಿದನು.
20 ಆದರೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನವರೆಗೆ ಇಟ್ಟುಕೊಂಡಾಗ, ಅದು ಹುಳ ಬಿದ್ದು ಹೊಲಸುವಾಸನೆ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿಕೊಂಡನು.
21 ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನುವಷ್ಟು ಪ್ರತಿದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.
22 ಆರನೆಯ ದಿನದಲ್ಲಿ ಅವರು ಎರಡರಷ್ಟು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು.
23 ಅದಕ್ಕೆ ಮೋಶೆ, “ಯೆಹೋವ ದೇವರು ಆಜ್ಞಾಪಿಸಿದ ಮಾತು ಇದೇ: ‘ನಾಳೆ ಯೆಹೋವ ದೇವರಿಗೆ ಪರಿಶುದ್ಧ ಸಬ್ಬತ್ ದಿನವಾಗಿದೆ. ಇಂದೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನವರೆಗೆ ಇಟ್ಟುಕೊಳ್ಳಿರಿ,’” ಎಂದನು.
24 ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರುದಿನದವರೆಗೆ ಇಟ್ಟುಕೊಂಡಾಗ, ಅದು ಹೊಲಸುವಾಸನೆ ಹೊಂದಲಿಲ್ಲ. ಅದರಲ್ಲಿ ಹುಳಗಳೂ ಇರಲಿಲ್ಲ.
25 ಆಗ ಮೋಶೆಯು, “ಈ ಹೊತ್ತು ಅದನ್ನು ಊಟಮಾಡಿರಿ. ಏಕೆಂದರೆ ಈ ದಿನವು ಯೆಹೋವ ದೇವರ ಸಬ್ಬತ್ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ ಆಹಾರ ಸಿಕ್ಕುವುದಿಲ್ಲ.
26 ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ,” ಎಂದನು.
27 ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವುದಕ್ಕೆ ಹೊರಗೆ ಹೋದಾಗ, ಅವರಿಗೆ ಏನೂ ಸಿಕ್ಕಲಿಲ್ಲ.
28 ಆಗ ಯೆಹೋವ ದೇವರು ಮೋಶೆಗೆ, “ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ, ನಿಯಮಗಳನ್ನೂ ಕೈಗೊಳ್ಳದೆ ನಿರಾಕರಿಸುವಿರಿ?
29 ನೋಡಿರಿ, ಯೆಹೋವ ದೇವರಾದ ನಾನು ನಿಮಗೆ ಸಬ್ಬತ್ ದಿನವನ್ನು ಕೊಟ್ಟಿದ್ದರಿಂದಲೇ, ಆರನೆಯ ದಿನದಲ್ಲಿ ನಿಮಗೆ ಎರಡು ದಿನಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟಿದ್ದೇನೆ. ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಇರಲಿ. ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದರು.
30 ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.
31 ಇಸ್ರಾಯೇಲರು ಆ ಆಹಾರಕ್ಕೆ ಮನ್ನಾ, ಎಂದು ಹೆಸರಿಟ್ಟರು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನುತುಪ್ಪ ಕಲಸಿದ ದೋಸೆಯಂತೆ ಇತ್ತು.
32 ಮೋಶೆಯು ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ: ‘ನಾನು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಡಿಸಿದಾಗ, ಮರುಭೂಮಿಯಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ್ ಮನ್ನವನ್ನು ತುಂಬಿಸಿ ಇಟ್ಟಿರಬೇಕು,’ ಎಂಬುದು,” ಎಂದನು.
33 ಮೋಶೆ ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕೋಸ್ಕರ ಅದನ್ನು ಯೆಹೋವ ದೇವರ ಮುಂದೆ ಇಡು,” ಎಂದನು.
34 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮನ್ನವನ್ನು ಸಂರಕ್ಷಿಸುವುದಕ್ಕೆ ಸಾಕ್ಷಿಯಾಗಿ ಇಟ್ಟನು.
35 ಇಸ್ರಾಯೇಲರು ತಾವು ವಾಸವಾಗಿರತಕ್ಕ ದೇಶಕ್ಕೆ ಬರುವವರೆಗೆ, ನಲವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಸೇರುವವರೆಗೂ ಅವರು ಮನ್ನವನ್ನು ತಿಂದರು.
36 ಓಮೆರ್ ಎಂದರೆ ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಅಳತೆ.