< ಎಸ್ತೇರಳು 7 >
1 ಅರಸನೂ ಹಾಮಾನನೂ ಎಸ್ತೇರ್ ರಾಣಿಯ ಔತಣಕ್ಕೆ ಬಂದರು.
2 ಎರಡನೆಯ ದಿವಸ ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
3 ಆಗ ಎಸ್ತೇರ್ ರಾಣಿಯು ಉತ್ತರವಾಗಿ, “ಅರಸನೇ, ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವಳಾಗಿದ್ದರೆ, ನನ್ನ ಪ್ರಾಣವನ್ನೂ ನನ್ನ ಜನರ ಪ್ರಾಣವನ್ನೂ ಉಳಿಸಬೇಕು. ಇದೇ ನನ್ನ ವಿಜ್ಞಾಪನೆ. ಇದೇ ನನ್ನ ಬೇಡಿಕೆ.
4 ಏಕೆಂದರೆ ನಾನು ಮತ್ತು ನನ್ನ ಜನರು ದುರಂತಕ್ಕೂ, ಕೊಲೆಗೂ, ಸರ್ವನಾಶಕ್ಕೂ ಮಾರಟವಾಗಿದ್ದೇವೆ. ಒಂದು ವೇಳೆ, ನಾವು ದಾಸರಾಗಿಯಾಗಲಿ, ದಾಸಿಯರಾಗಲಿ ಮಾರಾಟವಾಗಿದ್ದರೆ ನಾನು ಸುಮ್ಮನಿರುತ್ತಿದ್ದೆ. ಅಂಥ ಕಷ್ಟಕ್ಕಾಗಿ ನಾನು ಅರಸನನ್ನು ತೊಂದರೆಪಡಿಸದೆ ಸುಮ್ಮನೆ ಇದ್ದುಬಿಡುತ್ತಿದ್ದೆನು,” ಎಂದಳು.
5 ಆಗ ಅರಸನಾದ ಅಹಷ್ವೇರೋಷನು ರಾಣಿಯಾದ ಎಸ್ತೇರಳಿಗೆ, “ಯಾರು ಅವನು? ಈ ಪ್ರಕಾರ ಮಾಡಲು ಧೈರ್ಯಗೊಂಡವನು ಯಾರು? ಅವನು ಎಲ್ಲಿದ್ದಾನೆ?” ಎಂದನು.
6 ಅದಕ್ಕೆ ಎಸ್ತೇರಳು, “ಆ ವೈರಿಯೂ ಹಗೆಗಾರನೂ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನನೇ!” ಎಂದಳು. ಆಗ ಹಾಮಾನನು ಅರಸನ ಮುಂದೆಯೂ, ರಾಣಿಯ ಮುಂದೆಯೂ ಬೆಪ್ಪಾದನು.
7 ಅರಸನು ಕೋಪಗೊಂಡು ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟು, ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು. ಏಕೆಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ಅವನಿಗೆ ತಿಳಿದಿತ್ತು.
8 ಅರಸನು ಅರಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ಹಿಂದಿರುಗಿ ಬಂದಾಗ, ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು, “ನನ್ನ ಮುಂದೆಯೇ ಇವನು ರಾಣಿಯನ್ನು ಬಲಾತ್ಕಾರ ಮಾಡಬೇಕೆಂದಿರುವನೋ?” ಎಂದನು. ಆ ಮಾತು ಅರಸನ ಬಾಯಿಂದ ಹೊರಟ ಕೂಡಲೆ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಹಾಕಿದರು.
9 ಆಗ ರಾಜಕಂಚುಕಿಯರಲ್ಲಿ ಒಬ್ಬನಾದ ಹರ್ಬೋನನು ಅರಸನ ಮುಂದೆ ಬಂದು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಮಾತಾಡಿದ ಮೊರ್ದೆಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಮಾಡಿಸಿದ ಇಪ್ಪತ್ತೆರಡು ಮೀಟರ್ ಗಲ್ಲುಮರವು ಹಾಮಾನನ ಮನೆಯ ಹತ್ತಿರ ಇದೆ,” ಎಂದನು. ಅದಕ್ಕೆ ಅರಸನು, “ಇವನನ್ನು ಅದರಲ್ಲಿ ನೇತುಹಾಕಿರಿ” ಎಂದನು.
10 ಅವರು ಮೊರ್ದೆಕೈಗೋಸ್ಕರ ಹಾಮಾನನು ಸಿದ್ಧಮಾಡಿದ್ದ ಅದೇ ಗಲ್ಲುಮರದಲ್ಲಿ ಅವನನ್ನು ನೇತುಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.