< ಎಸ್ತೇರಳು 4 >
1 ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು.
2 ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ.
3 ಇದಲ್ಲದೆ ಅರಸನ ಮಾತೂ ಅವನ ಕಟ್ಟಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡರು.
4 ಆಗ ಎಸ್ತೇರಳ ದಾಸಿಯರೂ ಅವಳ ಕಂಚುಕಿಯರೂ ಬಂದು ಮೊರ್ದೆಕೈ ಬಗ್ಗೆ ಅವಳಿಗೆ ತಿಳಿಸಿದರು. ಆದ್ದರಿಂದ ರಾಣಿಯು ಬಹು ವ್ಯಥೆಪಟ್ಟಳು. ಇದಲ್ಲದೆ ಮೊರ್ದೆಕೈಯು ಗೋಣಿತಟ್ಟನ್ನು ತೆಗೆದುಹಾಕಿ, ವಸ್ತ್ರಗಳನ್ನು ಧರಿಸಿಕೊಳ್ಳುವಂತೆ ಉಡುಪನ್ನು ಕಳುಹಿಸಿಕೊಟ್ಟಳು. ಆದರೆ ಅವನು ಅದನ್ನು ತೆಗೆದುಕೊಳ್ಳಲಿಲ್ಲ.
5 ಆಗ ಎಸ್ತೇರಳು ತನ್ನ ಬಳಿಯಲ್ಲಿ ಸೇವೆಗಾಗಿ ನೇಮಿಸಲಾಗಿದ್ದ ಅರಸನ ರಾಜಕಂಚುಕಿಯರಲ್ಲಿ ಹತಾಕನನ್ನು ಕರೆದು, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ವರ್ತನೆಗೆ ಕಾರಣವನ್ನೂ ಅವನಿಂದ ತಿಳಿದುಕೊಂಡು ಬರಬೇಕೆಂದು ಆಜ್ಞಾಪಿಸಿದಳು.
6 ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು.
7 ಆಗ ಮೊರ್ದೆಕೈ ತನಗೆ ಆದ ಎಲ್ಲವನ್ನೂ, ಹಾಮಾನನು ಯೆಹೂದ್ಯರನ್ನು ನಾಶಮಾಡಲು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿಕೊಂಡ ಹಣದ ವಿಷಯವನ್ನೂ ಅವನಿಗೆ ತಿಳಿಸಿದನು.
8 ಯೆಹೂದ್ಯರನ್ನು ನಾಶಮಾಡಲು ಶೂಷನಿನಲ್ಲಿ ಪ್ರಕಟಗೊಂಡ ರಾಜಾಜ್ಞೆಯ ಪತ್ರದ ಪ್ರತಿಯನ್ನು ಅವನ ಕೈಯಲ್ಲಿ ಕೊಟ್ಟು ಅದನ್ನು ಎಸ್ತೇರಳಿಗೆ ತೋರಿಸಿ ವಿವರಿಸುವಂತೆಯೂ, ಅವಳು ತನ್ನ ಜನರಿಗಾಗಿ ಅರಸನ ಮುಂದೆ ಹೋಗಿ ಬಿನ್ನಹ ಮಾಡುವಂತೆಯೂ ಆಕೆಗೆ ತಿಳಿಸಲು ಹೇಳಿದನು.
9 ಆಗ ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಿದನು.
10 ಎಸ್ತೇರಳು ಮತ್ತೊಮ್ಮೆ ಹತಾಕನನ್ನು ಮೊರ್ದೆಕೈಯ ಬಳಿಗೆ ಕಳುಹಿಸಿ,
11 “ಅರಸನು ಹೇಳಿಕಳುಹಿಸದೆ ಅರಸನ ಬಳಿಗೆ ಅರಮನೆಯ ಒಳಾಂಗಣಕ್ಕೆ ಹೋಗುವ ಗಂಡಸರಿಗಾಗಲಿ, ಹೆಂಗಸರಿಗಾಗಲಿ ಮರಣದಂಡನೆಯಾಗುವುದು. ಒಂದು ವೇಳೆ ಒಳಗೆ ಬಂದ ವ್ಯಕ್ತಿಯ ಕಡೆಗೆ ಅರಸನು ತನ್ನ ಸ್ವರ್ಣದಂಡವನ್ನು ಚಾಚಿದರೆ ಅವನಿಗೆ ಮಾತ್ರ ಮರಣದಂಡನೆಯಾಗದೆ ಜೀವದಿಂದ ಉಳಿಯುವರು. ಈ ರಾಜಾಜ್ಞೆಯನ್ನು ಅರಸನ ಸಮಸ್ತ ಸೇವಕರೂ ಅರಸನ ಪ್ರಾಂತಗಳ ಜನರೂ ತಿಳಿದಿದ್ದಾರೆ. ಆದರೆ ಕಳೆದ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ನನಗೆ ಆಮಂತ್ರಣವೇ ಬರಲಿಲ್ಲ,” ಎಂದು ತಿಳಿಸುವಂತೆ ಹೇಳಿದಳು.
12 ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದನು.
13 ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ.
14 ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು.
15 ಆಗ ಎಸ್ತೇರಳು ಮತ್ತೆ ಮೊರ್ದೆಕೈಗೆ,
16 “ನೀನು ಹೋಗಿ ಶೂಷನಿನಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವು ರಾತ್ರಿ ಹಗಲೂ ಮೂರು ದಿನ ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸಮಾಡಿರಿ. ಹಾಗೆಯೇ ನಾನೂ ನನ್ನ ದಾಸಿಯರೊಡನೆ ಉಪವಾಸ ಮಾಡುವೆನು. ಅನಂತರ ನಾನು ರಾಜಾಜ್ಞೆಯನ್ನು ಮೀರಿ ಅರಸನ ಬಳಿಗೆ ಹೋಗುವೆನು. ನಾನು ಸತ್ತರೂ ಸಾಯುವೆನು,” ಎಂದು ಹೇಳಿಕಳುಸಿದಳು.
17 ಆಗ ಮೊರ್ದೆಕೈ ಹೊರಟುಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.