< ಎಫೆಸದವರಿಗೆ ಬರೆದ ಪತ್ರಿಕೆ 2 >
1 ನೀವು ನಿಮ್ಮ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಹಿಂದೊಮ್ಮೆ ಸತ್ತವರಾಗಿದ್ದೀರಿ.
2 ನೀವು, ಹಿಂದೆ ಇಹಲೋಕದ ಮಾರ್ಗಕ್ಕೆ ಅನುಸಾರವಾಗಿ ನಡೆದುಕೊಂಡು, ವಾಯುಮಂಡಲದ ಅಧಿಪತಿಯ ಆತ್ಮನಿಗನುಸಾರವಾಗಿದ್ದೀರಿ. ಆ ದುರಾತ್ಮವು ಈಗ ಅವಿಧೇಯತೆಯ ಮಕ್ಕಳಲ್ಲಿ ಕಾರ್ಯಮಾಡುತ್ತಿದೆ. (aiōn )
3 ಹಿಂದೊಮ್ಮೆ ನಾವೆಲ್ಲರೂ ಅವರೊಂದಿಗೆ ನಮ್ಮ ದೇಹದ ಆಶೆಗಳ ಪ್ರಕಾರ ಜೀವಿಸುತ್ತಿದ್ದಾಗ ಮನಸ್ಸಿನ ಹಾಗೂ ಶರೀರದ ಆಶೆಗಳನ್ನು ನೆರವೇರಿಸುತ್ತಾ ನಡೆದು, ಉಳಿದವರಂತೆ ಸ್ವಾಭಾವಿಕವಾಗಿ ದೇವರ ಕೋಪಕ್ಕೆ ಗುರಿಯಾದವರಾಗಿದ್ದೆವು.
4 ಆದರೆ ಕರುಣೆಯಲ್ಲಿ ಐಶ್ವರ್ಯವಂತರಾದ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿದರು.
5 ಹೇಗೆದಂರೆ, ಅಪರಾಧಗಳಲ್ಲಿ ಸತ್ತವರಾಗಿದ್ದರೂ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದರು. ಹೀಗೆ ನೀವು ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ.
6 ಕ್ರಿಸ್ತ ಯೇಸುವಿನೊಂದಿಗೆ ದೇವರು ನಮ್ಮನ್ನು ಎಬ್ಬಿಸಿ ಪರಲೋಕದ ಉನ್ನತ ಸ್ಥಳಗಳಲ್ಲಿ ಕ್ರಿಸ್ತನೊಂದಿಗೇ ನಮ್ಮನ್ನು ಕೂತುಕೊಳ್ಳುವಂತೆ ಮಾಡಿದ್ದಾರೆ.
7 ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ. (aiōn )
8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ.
9 ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ.
10 ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.
11 ಆದಕಾರಣ ಸುನ್ನತಿಮಾಡಿಸಿಕೊಂಡಿದ್ದೇವೆ ಎಂದು ತಮ್ಮ ಬಗ್ಗೆ ಹೇಳಿಕೊಂಡವರು, ಹುಟ್ಟಿದಂದಿನಿಂದ ಯೆಹೂದ್ಯರಲ್ಲದವರಾದ ನಿಮಗೆ ಸುನ್ನತಿಮಾಡಿಸಿಕೊಳ್ಳದವರು ಎಂದು ಹೇಳಿದ್ದನು ನೆನಪುಮಾಡಿಕೊಳ್ಳಿ. ಈ ಸುನ್ನತಿಯು ಮನುಷ್ಯರಿಂದಾದದ್ದಷ್ಟೇ.
12 ಇದಲ್ಲದೆ ನೀವು ಆಗ ಕ್ರಿಸ್ತನಿಲ್ಲದವರೂ ಇಸ್ರಾಯೇಲಿನ ಪೌರತ್ವದಿಂದ ಪ್ರತ್ಯೇಕಿಸಲಾದವರೂ ಒಡಂಬಡಿಕೆಯ ವಾಗ್ದಾನಕ್ಕೆ ವಿದೇಶಿಯವರೂ ಲೋಕದಲ್ಲಿ ದೇವರೊಂದಿಗೆ ಯಾವ ಸಂಬಂಧವಿಲ್ಲದೆ ನಿರೀಕ್ಷೆಯಿಲ್ಲದವರೂ ಆಗಿದ್ದೀರೆಂದು ಜ್ಞಾಪಕಮಾಡಿಕೊಳ್ಳಿರಿ.
13 ಮೊದಲು ಕ್ರಿಸ್ತ ಯೇಸುವಿಗೆ ದೂರವಾಗಿದ್ದ ನೀವು ಈಗ ಕ್ರಿಸ್ತನ ರಕ್ತದ ಮೂಲಕ ಹತ್ತಿರವಾಗಿದ್ದೀರಿ.
14 ಕ್ರಿಸ್ತ ಯೇಸು ತಾವೇ ನಮ್ಮ ಸಮಾಧಾನವಾಗಿದ್ದು, ಎರಡು ಗುಂಪಿನವರನ್ನು ಒಂದು ಮಾಡಿ, ಅಗಲಿಸಿದ ವೈರತ್ವದ ಅಡ್ಡಗೋಡೆಯನ್ನು ತಮ್ಮ ಶರೀರದ ಮೂಲಕ ಕೆಡವಿಹಾಕಿದರು.
15 ಹೀಗೆ ಕ್ರಿಸ್ತ ಯೇಸು ತಮ್ಮ ದೇಹವನ್ನು ಶಿಲುಬೆಯಲ್ಲಿ ಸಮರ್ಪಿಸಿದ್ದರಿಂದ ನಿಯಮದ ಆಜ್ಞೆಗಳುಳ್ಳ ಶಾಸನಗಳನ್ನು ರದ್ದುಗೊಳಿಸಿದರು. ಈ ರೀತಿಯಾಗಿ ಇವೆರಡೂ ಗುಂಪಿನವರಿಂದ ಒಬ್ಬ ನೂತನ ಮಾನವತ್ವವನ್ನು ತಮ್ಮಲ್ಲಿ ಸೃಷ್ಟಿಸಿ ಸಮಾಧಾನವನ್ನು ಉಂಟುಮಾಡಿದರು.
16 ಶಿಲುಬೆಯ ಮರಣದ ಮೂಲಕ ಇವೆರಡೂ ಗುಂಪಿನವರಿಂದ ಒಂದೇ ದೇಹದವರನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿ, ಇದ್ದ ವೈರತ್ವವನ್ನು ಇಲ್ಲದಂತೆ ಮಾಡಿದರು.
17 ಇದಲ್ಲದೆ ಕ್ರಿಸ್ತ ಯೇಸುವು ಬಂದು ದೂರವಾಗಿದ್ದ ನಿಮಗೂ ಸಮೀಪವಾಗಿದ್ದ ನಮಗೂ ಸಮಾಧಾನವನ್ನು ಸಾರಿದರು.
18 ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ನಾವೂ ನೀವೂ ಪವಿತ್ರಾತ್ಮ ದೇವರಿಂದ ತಂದೆಯ ಬಳಿಗೆ ಪ್ರವೇಶಿಸುವುದಕ್ಕೆ ಮಾರ್ಗವಾಯಿತು.
19 ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶದವರೂ ಆಗಿರದೆ ದೇವಜನರೊಂದಿಗೆ ಜೊತೆ ನಾಗರಿಕರೂ ದೇವರ ಮನೆಯವರೂ ಆಗಿದ್ದೀರಿ.
20 ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ.
21 ಕ್ರಿಸ್ತನಲ್ಲಿ ಕಟ್ಟಡವೆಲ್ಲವೂ ಒಂದಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.
22 ನೀವೂ ಸಹ ಆತ್ಮನ ಮೂಲಕ ಕ್ರಿಸ್ತನಲ್ಲಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ನಿರ್ಮಿತರಾಗುತ್ತಿದ್ದೀರಿ.