< ಪ್ರಸಂಗಿ 6 >
1 ಸೂರ್ಯನ ಕೆಳಗೆ ಇರುವ ಇನ್ನೊಂದು ಕೇಡನ್ನು ಕಂಡೆನು, ಅದು ಮನುಷ್ಯರ ಮೇಲೆ ಬಹು ಭಾರವಾಗಿದೆ.
2 ಅದೇನೆಂದರೆ, ಮನುಷ್ಯನು ಹೃದಯದಲ್ಲಿ ಬಯಸಿದ್ದನ್ನು ಕೊರತೆಯಾಗದಂತೆ ದೇವರು ಅವನಿಗೆ ಧನ, ಐಶ್ವರ್ಯ, ಸನ್ಮಾನವನ್ನು ಕೊಡುತ್ತಾರೆ. ಆದರೆ ಅದನ್ನು ಅನುಭವಿಸುವಂತೆ ದೇವರು ಸಾಮರ್ಥ್ಯವನ್ನು ಕೊಡುವುದಿಲ್ಲ. ಆದುದರಿಂದ ಪರರು ಅದನ್ನು ಅನುಭವಿಸುತ್ತಾರೆ. ಇದು ವ್ಯರ್ಥವೂ ವ್ಯಸನಕರವಾದ ಕೇಡು.
3 ಒಬ್ಬ ಮನುಷ್ಯನಿಗೆ ನೂರು ಮಕ್ಕಳಿರಬಹುದು ಮತ್ತು ಅವನು ಬಹಳ ವರ್ಷ ಬದುಕಿರಬಹುದು. ಅವನು ತನ್ನ ಐಶ್ವರ್ಯವನ್ನು ಅನುಭವಿಸದೆ, ಸರಿಯಾದ ಶವಸಂಸ್ಕಾರ ಇಲ್ಲದೆ ಹೋದರೆ ಅವನಿಗಿಂತಲೂ ಮೃತ ಸ್ಧಿತಿಯಲ್ಲಿ ಹುಟ್ಟಿರುವ ಕೂಸೇ ಮೇಲು ಎಂದುಕೊಂಡೆ.
4 ಆ ಕೂಸು ವ್ಯರ್ಥವಾಗಿ ಬಂದು ಕತ್ತಲೆಯಲ್ಲಿ ಹೊರಟು ಹೋಗುತ್ತದೆ. ಅದರ ಹೆಸರು ಅಂಧಕಾರದಿಂದ ಕವಿದಿರುವುದು.
5 ಇದಲ್ಲದೆ ಅದು ಸೂರ್ಯನನ್ನು ನೋಡಲಿಲ್ಲ, ಯಾವುದನ್ನು ಅರಿತಿರಲಿಲ್ಲ. ಆದರೂ ಅದು ಆ ಮನುಷ್ಯನಿಗಿಂತ ಹೆಚ್ಚು ವಿಶ್ರಾಂತಿ ಹೊಂದಿದೆ.
6 ಒಂದು ವೇಳೆ ಎರಡು ಸಾವಿರ ವರ್ಷಗಳು ಆ ಮನುಷ್ಯನು ಬದುಕಿದರೂ ಅವನು ತನ್ನ ಐಶ್ವರ್ಯವನ್ನು ಅನುಭವಿಸದಿದ್ದರೆ ಏನು ಪ್ರಯೋಜನ? ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ?
7 ಪ್ರತಿಯೊಬ್ಬನ ಪ್ರಯಾಸ ಅವನ ಹೊಟ್ಟೆಗಾಗಿಯೇ, ಆದರೆ ಅವನ ಹಸಿವು ತೃಪ್ತಿಹೊಂದುವುದಿಲ್ಲ.
8 ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಲಾಭ ಏನಿದೆ? ಇತರರ ಮುಂದೆ ಹೇಗೆ ವರ್ತಿಸಬೇಕು ಎಂದು ತಿಳಿದುಕೊಳ್ಳುವುದರಿಂದ ಬಡವರಿಗೇನು ಲಾಭ?
9 ಹೆಚ್ಚು ಅಪೇಕ್ಷಿಸಿ ಅಲೆದಾಡುವುದಕ್ಕಿಂತ ಕಣ್ಣೆದುರಿಗೆ ಇರುವುದನ್ನು ಅನುಭವಿಸುವುದು ಉತ್ತಮ. ಗಾಳಿಯನ್ನು ಬೆನ್ನಟ್ಟಿದಂತೆ ಇದೂ ಕೂಡ ವ್ಯರ್ಥವೇ.
10 ಜಗತ್ತಿನಲ್ಲಿ ಇರುವ ಎಲ್ಲದಕ್ಕೂ ಈಗಾಗಲೇ ಹೆಸರನ್ನು ಇಡಲಾಗಿದೆ. ಮನುಷ್ಯನು ಯಾರು ಎಂದೂ ಗೊತ್ತಾಗಿದೆ. ತನಗಿಂತ ಬಲಿಷ್ಟನೊಂದಿಗೆ ಯಾರೂ ಹೋರಾಡುವುದಿಲ್ಲ.
11 ಮಾತು ಹೆಚ್ಚಿದಷ್ಟೂ, ಕಡಿಮೆ ಅರ್ಥೈಸುತ್ತವೆ, ಅದರಿಂದ ಯಾರಿಗೆ ಏನು ಲಾಭ?
12 ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ಎಲ್ಲಾ ದಿವಸಗಳಲ್ಲಿ ಅವನಿಗೆ ಯಾವುದು ಒಳ್ಳೆಯದೆಂದು ಯಾರಿಗೆ ಗೊತ್ತು? ಅವನು ಹೊರಟುಹೋದ ಮೇಲೆ ಸೂರ್ಯನ ಕೆಳಗೆ ಏನಾಗುತ್ತದೆಂದು ಅವನಿಗೆ ಯಾರು ಹೇಳಬಲ್ಲರು?