< ಪ್ರಸಂಗಿ 12 >
1 ಕಷ್ಟದ ದಿನಗಳು ಬರುವುದಕ್ಕೆ ಮೊದಲು, “ಇವುಗಳಲ್ಲಿ ನನಗೆ ಸಂತೋಷವಿಲ್ಲ,” ಎಂದು ನೀನು ಹೇಳುವ ವರ್ಷಗಳು ಸಮೀಪಿಸುವುದಕ್ಕೆ ಮೊದಲು, ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ದೇವರನ್ನು ಸ್ಮರಿಸು.
2 ಸೂರ್ಯ ಚಂದ್ರ ನಕ್ಷತ್ರಗಳೂ ನಿನಗೆ ಮೊಬ್ಬಾಗಿ, ಮಳೆಯ ಮೋಡಗಳು ಮತ್ತೆ ಬರುವುದಕ್ಕಿಂತ ಮೊದಲು ದೇವರನ್ನು ಸ್ಮರಿಸು.
3 ಆ ದಿನದಲ್ಲಿ ಮನೆ ಕಾಯುವವರು ನಡುಗುವರು. ಬಲವಾದ ಮನುಷ್ಯರು ಸಹ ತಾವಾಗಿಯೇ ಬಗ್ಗುವರು. ಅರೆಯುವವರು ಕೆಲವರೇ ಉಳಿದಿರುವುದರಿಂದ ಸುಮ್ಮನಿರುವರು. ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.
4 ಬೀದಿ ಬಾಗಿಲುಗಳು ಮುಚ್ಚಿರುವುವು, ಅರೆಯುವ ಶಬ್ದವು ಕಡಿಮೆಯಾಗುವುದು; ಪಕ್ಷಿಯ ಶಬ್ದವಾದಾಗ ಎದ್ದೇಳುವುದು ತಡವಾಗುವುದು. ಮುಂಜಾನೆಯ ಗಾನಸ್ವರ ಮಂದವಾಗುವುದು.
5 ಎತ್ತರವನ್ನು ಕಂಡು ಹೆದರಿಕೆಯಾಗುವುದು. ದಾರಿಯ ಅಪಾಯಗಳ ಬಗ್ಗೆ ಅಂಜಿಕೆಯಾಗುವುದು. ಬಾದಾಮಿಯ ಮರದಂತೆ ಹೂವು ಬಿಡುವುದು. ಮಿಡತೆಯು ಸಹ ಭಾರಾವಾಗಿರುವುದು. ಆಸೆ ಕುಂದಿಹೋಗುವುದು. ಈ ರೀತಿಯಾಗಿ ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಟು ಹೋಗುವರು. ಗೋಳಾಡುವವರು ಬೀದಿಯಲ್ಲಿ ತಿರುಗಾಡುವರು.
6 ಬೆಳ್ಳಿಯಂತ ಸರ ಕಿತ್ತುಹೋಗುವುದು, ಬಂಗಾರದಂತ ಬಟ್ಟಲು ಜಜ್ಜಿ ಹೋಗುವುದು. ಮಣ್ಣಿನ ಮಡಕೆಯು ಬುಗ್ಗೆಯ ಹತ್ತಿರ ಒಡೆದು ಹೋಗುವುದು. ಬಾವಿಯ ರಾಟೆ ಮುರಿಯುವುದು.
7 ಆಮೇಲೆ ಮಣ್ಣಿನ ದೇಹ ಅದು ಇದ್ದ ಹಾಗೆಯೇ ಭೂಮಿಗೆ ಸೇರುವುದು. ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂದಿರುಗುವುದು.
8 “ವ್ಯರ್ಥ, ವ್ಯರ್ಥವೇ! ಎಲ್ಲವೂ ವ್ಯರ್ಥವೇ!” ಎಂದು ಪ್ರಸಂಗಿ ಹೇಳುತ್ತಾನೆ.
9 ಇದಲ್ಲದೆ ಜ್ಞಾನವಂತ ಪ್ರಸಂಗಿಯು ಇನ್ನೂ ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು. ಅನೇಕ ಜ್ಞಾನೋಕ್ತಿಗಳನ್ನು ಅವನು ಪರೀಕ್ಷಿಸಿ, ವಿಚಾರಿಸಿ ಕ್ರಮಪಡಿಸಿದನು.
10 ಪ್ರಸಂಗಿಯು ಸೂಕ್ತ ವಾಕ್ಯಗಳನ್ನು ಹುಡುಕಿ ಕಂಡುಹಿಡಿದನು. ಹಾಗೆ ಬರೆದವುಗಳು ಯಥಾರ್ಥ ಮತ್ತು ಸತ್ಯವಾದ ಮಾತುಗಳು.
11 ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗಿರುತ್ತವೆ. ಅವರು ಸಂಗ್ರಹಿಸಿದ ವಚನಗಳು ಒಬ್ಬ ಆತ್ಮಿಕ ಕುರುಬನಿಂದ ನೆಟ್ಟ ಮೊಳೆಗಳ ಹಾಗೆ ಕೊಡಲಾಗಿವೆ.
12 ನನ್ನ ಮಗುವೇ, ಇವುಗಳನ್ನಲ್ಲದೇ, ನೀನು ಎಚ್ಚರಿಕೆಯಿಂದ ಇರಬೇಕಾದ ವಿಷಯಗಳು ಇನ್ನೂ ಇವೆ. ಬಹಳ ಪುಸ್ತಕಗಳ ರಚನೆಗೆ ಅಂತ್ಯವಿಲ್ಲ. ಅತಿಯಾದ ಅಭ್ಯಾಸವು ದೇಹಕ್ಕೆ ಆಯಾಸ.
13 ಈಗ ನಾವು ಎಲ್ಲಾ ವಿಷಯವನ್ನೂ ಕೇಳಿ ಮುಗಿಯಿತು. ದೇವರಿಗೆ ಭಯಪಡು ಮತ್ತು ದೇವರ ಆಜ್ಞೆಗಳನ್ನು ಪಾಲಿಸು. ಇದೇ ಮನುಷ್ಯನ ಪ್ರಮುಖ ಕರ್ತವ್ಯ.
14 ಏಕೆಂದರೆ ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ, ದೇವರು ಆ ಎಲ್ಲಾ ಕಾರ್ಯಗಳನ್ನೂ ಪ್ರತಿಯೊಂದು ರಹಸ್ಯವನ್ನೂ ನ್ಯಾಯವಿಚಾರಣೆಗೆ ತರುವರು.