< ಪ್ರಸಂಗಿ 11 >
1 ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಕಳುಹಿಸು. ಬಹಳ ದಿನಗಳ ಮೇಲೆ ಅದರಿಂದ ನಿನಗೆ ಲಾಭ ಸಿಗುವುದು.
೧ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹಳ ದಿನಗಳ ನಂತರ ಅದು ನಿನಗೆ ಸಿಕ್ಕುವುದು.
2 ನಿನ್ನ ಹಣವನ್ನು ಏಳೆಂಟು ಮಂದಿಗೆ ವೆಚ್ಚಮಾಡು. ಏಕೆಂದರೆ ಭೂಮಿಯ ಮೇಲೆ ಮುಂದೆ ಯಾವ ವಿಪತ್ತು ಬರುವುದೋ ನಿನಗೆ ತಿಳಿಯದು.
೨ನೀನು ಅದನ್ನು ಏಳು ಮತ್ತು ಎಂಟು ಮಂದಿಗೆ ಹಂಚಿಬಿಡು. ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ.
3 ಮೋಡಗಳು ಮಳೆಯಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಸುರಿದುಬಿಡುತ್ತವೆ. ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ, ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವುದು.
೩ಮಳೆ ತುಂಬಿದ ಮೋಡಗಳು, ತಾವಾಗಿಯೇ ಭೂಮಿಯ ಮೇಲೆ ಸುರಿದುಬಿಡುವವು, ಮರವು ಉತ್ತರಕ್ಕಾಗಲಿ, ದಕ್ಷಿಣಕ್ಕಾಗಲಿ, ಬಿದ್ದರೆ ಬಿದ್ದ ಸ್ಥಳದಲ್ಲಿಯೇ ಇರುವುದು.
4 ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ. ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.
೪ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ, ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯುವುದಿಲ್ಲ.
5 ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನೀನು ಹೇಗೆ ಗ್ರಹಿಸಲಾರೆಯೋ, ಹಾಗೆಯೇ, ಸರ್ವ ಸೃಷ್ಟಿಕರ್ತ ಆಗಿರುವ ದೇವರ ಕೆಲಸವನ್ನು ನೀನು ಗ್ರಹಿಸಲಾರೆ.
೫ಗಾಳಿಯ ಮಾರ್ಗವನ್ನೂ, ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ, ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ, ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ.
6 ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು. ಸಾಯಂಕಾಲದವರೆಗೂ ನಿನ್ನ ಕೈಗೆ ಬಿಡುವು ಕೊಡಬೇಡ. ಏಕೆಂದರೆ ಇದು ಸಫಲವೋ ಅದು ಸಫಲವೋ ನಿನಗೆ ತಿಳಿಯದು. ಎರಡೂ ಒಳ್ಳೆಯ ಬೆಳೆಯನ್ನು ಕೊಡಲು ಸಾಧ್ಯವಿದೆ.
೬ಮುಂಜಾನೆ ಬೀಜ ಬಿತ್ತು; ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, ಇಲ್ಲವೇ ಒಂದು ವೇಳೆ ಎರಡೂ ಒಳ್ಳೆಯದಾಗುವುದೋ ನಿನಗೆ ತಿಳಿಯದು.
7 ಬೆಳಕು ಹಿತಕರ. ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.
೭ನಿಜವಾಗಿ ಬೆಳಕು ಇಂಪಾಗಿಯೂ, ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು.
8 ಒಬ್ಬನು ಅನೇಕ ವರ್ಷಗಳು ಬದುಕಿ, ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಕತ್ತಲೆಯ ದಿನಗಳನ್ನು ನೆನಪಿಸಿಕೊಳ್ಳಲಿ, ಏಕೆಂದರೆ ಅಂಥ ದಿನಗಳು ಬಹಳ. ಮುಂದಾಗುವುದೆಲ್ಲವೂ ವ್ಯರ್ಥವೇ.
೮ಬಹಳ ವರ್ಷ ಬದುಕುವವನು, ಅವುಗಳಲ್ಲೆಲ್ಲಾ ಆನಂದಿಸಲಿ, ಆದರೆ ಅಂಧಕಾರದ ದಿನಗಳನ್ನು ನೆನಪಿಗೆ ತರಲಿ, ಏಕೆಂದರೆ ಅವು ಬಹಳವಾಗಿರುವವು. ಮುಂದಾಗುವುದೆಲ್ಲ ವ್ಯರ್ಥವೇ.
9 ಯುವಕನೇ, ನಿನ್ನ ಯೌವನದಲ್ಲಿ ಸಂತೋಷಪಡು. ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ. ನೀನು ನಿನ್ನ ಮನಸ್ಸಿಗೆ ಬಂದಂತೆಯೂ ನಿನ್ನ ಕಣ್ಣಿನ ನೋಟದಂತೆಯೂ ನಡೆ. ಆದರೆ ಈ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯವಿಚಾರಿಸುವರು ಎಂದು ತಿಳಿದುಕೋ.
೯ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು, ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ. ಮನಸ್ಸಿಗೆ ತಕ್ಕಂತೆಯೂ, ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ. ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.
10 ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು. ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು. ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.
೧೦ನಿನ್ನ ಹೃದಯದಿಂದ ದುಃಖವನ್ನೂ, ದೇಹದಿಂದ ಶ್ರಮೆಯನ್ನೂ ತೊಲಗಿಸು, ಏಕೆಂದರೆ ಬಾಲ್ಯವೂ, ಯೌವನವೂ ವ್ಯರ್ಥವಷ್ಟೆ.