< ಧರ್ಮೋಪದೇಶಕಾಂಡ 4 >
1 ಈಗ ಇಸ್ರಾಯೇಲರೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ, ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ, ನ್ಯಾಯಗಳನ್ನೂ ಕೇಳಿ, ಅವುಗಳನ್ನು ಕೈಗೊಳ್ಳಿರಿ.
2 ನಾನು ನಿಮಗೆ ಆಜ್ಞಾಪಿಸುವ ವಾಕ್ಯಕ್ಕೆ ಏನನ್ನೂ ಕೂಡಿಸಬೇಡಿರಿ, ಅದರಿಂದ ಏನನ್ನೂ ತೆಗೆಯಬೇಡಿರಿ. ಆದರೆ ನಾನು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಳ್ಳಬೇಕು.
3 ಬಾಳ್ ಪೆಯೋರನ ವಿಷಯದಲ್ಲಿ ಯೆಹೋವ ದೇವರು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು. ಬಾಳ್ ಪೆಯೋರನನ್ನು ಹಿಂಬಾಲಿಸಿದ ಜನರನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿದರಲ್ಲವೇ?
4 ಆದರೆ ನಿಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾದ ನೀವೆಲ್ಲರು ಇಂದಿನವರೆಗೆ ಬದುಕಿದ್ದೀರಿ.
5 ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಯೆಹೋವ ದೇವರು ನನಗೆ ಆಜ್ಞಾಪಿಸಿದ ಆಜ್ಞಾವಿಧಿಗಳನ್ನೂ ನಿಮಗೆ ಬೋಧಿಸಿದ್ದೇನೆ.
6 ಹೀಗಿರುವುದರಿಂದ ನೀವು ಅವುಗಳನ್ನು ಎಚ್ಚರದಿಂದ ಕೈಗೊಂಡು ಅನುಸರಿಸಿರಿ. ಏಕೆಂದರೆ ಇತರ ಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು. ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, “ನಿಶ್ಚಯವಾಗಿ ಇದು ದೊಡ್ಡ ಜನಾಂಗವು ಎಂತಹ ಜ್ಞಾನವೂ ವಿವೇಕವೂ ಉಳ್ಳ ಜನಾಂಗವಾಗಿದೆ” ಎನ್ನುವರು.
7 ನಾವು ನಮ್ಮ ದೇವರಾದ ಯೆಹೋವ ದೇವರಿಗೆ ಮೊರೆಯಿಡುವಾಗೆಲ್ಲಾ ಅವರು ಸಮೀಪವಾಗಿಯೇ ಇದ್ದಾರಲ್ಲಾ. ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವರು?
8 ಇದಲ್ಲದೆ ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನಿಯಮದ ಪ್ರಕಾರ ನೀತಿ ಮತ್ತು ನ್ಯಾಯನಿಯಮಗಳುಳ್ಳ ದೊಡ್ಡ ಜನಾಂಗ ಯಾವುದು?
9 ನಿಮ್ಮ ಕಣ್ಣುಗಳಿಂದ ನೋಡಿದ ಕಾರ್ಯಗಳನ್ನು ನೀವು ಮರೆಯದ ಹಾಗೆಯೂ, ನೀವು ಬದುಕುವ ದಿನಗಳೆಲ್ಲಾ ಅವು ನಿಮ್ಮ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು, ಕಾಪಾಡಿಕೊಳ್ಳಿರಿ. ಅವುಗಳನ್ನು ನಿಮ್ಮ ಮಕ್ಕಳಿಗೂ, ನಿಮ್ಮ ಮಕ್ಕಳ ಮಕ್ಕಳಿಗೂ ಬೋಧಿಸಿರಿ.
10 ನೀವು ಹೋರೇಬಿನಲ್ಲಿ ಯೆಹೋವ ದೇವರ ಮುಂದೆ ನಿಂತ ದಿವಸದಂದು ದೇವರು ನನಗೆ, “ಜನರನ್ನು ನನಗಾಗಿ ಕೂಡಿಸು, ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿರುವುದನ್ನು ಕಲಿತು, ತಮ್ಮ ಮಕ್ಕಳಿಗೂ ಬೋಧಿಸುವಂತೆ ನಾನು ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡುವೆನು,” ಎಂದರು.
11 ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ. ಆ ಬೆಟ್ಟವು ಕತ್ತಲೆಯಾಗಿದ್ದು, ಮೇಘಗಳೂ, ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದವರೆಗೆ ಬೆಂಕಿಯಿಂದ ಉರಿಯುತ್ತಿತ್ತು.
12 ಬೆಂಕಿಯ ಮಧ್ಯದೊಳಗಿಂದ ಯೆಹೋವ ದೇವರು ನಿಮ್ಮ ಸಂಗಡ ಮಾತಾಡಿದರು. ವಾಕ್ಯಗಳ ಧ್ವನಿಯನ್ನು ನೀವು ಕೇಳಿದಿರಿ, ಆದರೆ ಆಕಾರವನ್ನು ನೋಡಲಿಲ್ಲ, ಧ್ವನಿಯನ್ನು ಮಾತ್ರ ಕೇಳಿದಿರಿ.
13 ಅವರು ಹತ್ತು ಆಜ್ಞೆಗಳೆಂಬ ತಮ್ಮ ಒಡಂಬಡಿಕೆಯನ್ನು ನಿಮಗೆ ತಿಳಿಸಿ, ಅದನ್ನು ಮಾಡಬೇಕೆಂದು ನಿಮಗೆ ಆಜ್ಞಾಪಿಸಿ, ಅವುಗಳನ್ನು ಕಲ್ಲಿನ ಎರಡು ಹಲಗೆಗಳ ಮೇಲೆ ಬರೆದರು.
14 ನೀವು ದಾಟಿ ಹೋಗಿ, ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಮಾಡತಕ್ಕ ನ್ಯಾಯನಿಯಮಗಳನ್ನು ನಿಮಗೆ ಬೋಧಿಸಬೇಕೆಂದು ಆಗಲೇ ಯೆಹೋವ ದೇವರು ನನಗೆ ಆಜ್ಞಾಪಿಸಿದರು.
15 ಆದ್ದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರಿ. ಯೆಹೋವ ದೇವರು ಹೋರೇಬಿನಲ್ಲಿ ಬೆಂಕಿಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿಲ್ಲವಲ್ಲ.
16 ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಮಾಡಿಕೊಳ್ಳಬೇಡಿರಿ. ಎಂದರೆ, ಸ್ತ್ರೀಪುರುಷರ ರೂಪದಲ್ಲಾಗಲಿ,
17 ಭೂಮಿಯ ಮೇಲಿರುವ ಯಾವುದೊಂದು ಮೃಗದ ಹೋಲಿಕೆಯನ್ನೂ, ಆಕಾಶದಲ್ಲಿ ಹಾರುವಂಥ ರೆಕ್ಕೆಯುಳ್ಳ ಯಾವುದೊಂದು ಪಕ್ಷಿಯ ಹೋಲಿಕೆಯನ್ನೂ, ಭೂಮಿಯ ಮೇಲೆ ಹರಿದಾಡುವಂಥ ಕ್ರಿಮಿಕೀಟ ಯಾವುದೊಂದರ ಹೋಲಿಕೆಯನ್ನೂ,
18 ಭೂಮಿಯ ಕೆಳಗಿನ ನೀರುಗಳಲ್ಲಿರುವ ಯಾವುದೊಂದು ಮೀನಿನ ಹೋಲಿಕೆಯ ವಿಗ್ರಹವನ್ನೂ ಮಾಡಬಾರದು.
19 ನೀವು ನಿಮ್ಮ ಕಣ್ಣುಗಳನ್ನು ಆಕಾಶಕ್ಕೆ ಎತ್ತಿ, ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ, ನಿಮ್ಮ ದೇವರಾದ ಯೆಹೋವ ದೇವರು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಕೊಟ್ಟಿದ್ದಾರೆ. ನೀವು ಅವುಗಳಿಗೆ ಅಡ್ಡಬಿದ್ದು, ಮರುಳುಗೊಂಡು ಅವುಗಳನ್ನು ಪೂಜಿಸದಂತೆಯೂ ನೋಡಿಕೊಳ್ಳಿರಿ.
20 ನಿಮ್ಮನ್ನಾದರೋ ಯೆಹೋವ ದೇವರು ತಮಗೆ ಸ್ವಕೀಯ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಈಜಿಪ್ಟ್ ದೇಶದಿಂದ ಹೊರತಂದರು.
21 ನಾನು ಯೊರ್ದನಿನ ಆಚೆಗೆ ಹೋಗದ ಹಾಗೆಯೂ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಆ ಒಳ್ಳೆಯ ದೇಶದಲ್ಲಿ ಪ್ರವೇಶಿಸದಂತೆ, ನಿಮ್ಮ ನಿಮಿತ್ತ ಯೆಹೋವ ದೇವರು ನನ್ನ ಮೇಲೆ ಕೋಪಮಾಡಿಕೊಂಡು ಪ್ರಮಾಣ ಮಾಡಿದರು.
22 ಆದರೆ ನಾನು ಈ ದೇಶದಲ್ಲಿ ಸಾಯಲೇಬೇಕು. ನಾನು ಯೊರ್ದನಿನ ಆಚೆಗೆ ಹೋಗತಕ್ಕದ್ದಲ್ಲ. ಆದರೆ ನೀವು ಆಚೆಗೆ ಹೋಗಿ, ಆ ಒಳ್ಳೆಯ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ.
23 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಡಬೇಡಿರಿ. ನಿಮ್ಮ ದೇವರಾದ ಯೆಹೋವ ದೇವರು ಪೂಜಿಸಬೇಡವೆಂದು ಹೇಳಿದ ಯಾವ ಕೆತ್ತಿದ ವಿಗ್ರಹವನ್ನು ಮಾಡಿಕೊಳ್ಳದಂತೆ ಜಾಗ್ರತೆಯಾಗಿರಿ.
24 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ದಹಿಸುವ ಅಗ್ನಿಯೂ, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರೂ ಆಗಿದ್ದಾರೆ.
25 ನಿಮ್ಮಿಂದ ಮಕ್ಕಳೂ, ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು, ತರುವಾಯ ಯಾವುದಾದರೂ ಕೆತ್ತಿದ ವಿಗ್ರಹವನ್ನು ಮಾಡಿ ನಿಮ್ಮನ್ನು ಕೆಡಿಸಿಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಅವರಿಗೆ ಕೋಪಗೊಳಿಸಿದರೆ,
26 ನಾನು ಈ ದಿನ ಆಕಾಶವನ್ನೂ, ಭೂಮಿಯನ್ನೂ ಸಾಕ್ಷಿಗೆ ಕರೆದು, ನಿಮಗೆ ಹೇಳುವುದೇನೆಂದರೆ, ನೀವು ಯೊರ್ದನನ್ನು ದಾಟಿ ಸ್ವಾಧೀನಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ, ಸಂಪೂರ್ಣವಾಗಿ ನಶಿಸುವಿರಿ.
27 ಆಗ ಯೆಹೋವ ದೇವರು ನಿಮ್ಮನ್ನು ದೇಶಗಳಲ್ಲಿ ಚದರಿಸಿಬಿಡುವರು. ಯೆಹೋವ ದೇವರು ನಿಮ್ಮನ್ನು ಅಟ್ಟಿದ ದೇಶಗಳ ಮಧ್ಯದಲ್ಲಿ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ.
28 ಅಲ್ಲಿ ನೀವು ಮನುಷ್ಯರ ಕೈಯಿಂದ ಮಾಡಿದ ಎಂದರೆ, ನೋಡದೆಯೂ, ಕೇಳದೆಯೂ, ಉಣ್ಣದೆಯೂ, ಮೂಸಿ ನೋಡದೆಯೂ ಇರುವಂಥ ಮರ ಮತ್ತು ಕಲ್ಲುಗಳಿಂದ ಮಾಡಿದ ದೇವರುಗಳನ್ನು ಸೇವಿಸುವಿರಿ.
29 ಆದರೆ ಅಲ್ಲಿಂದಲೂ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು, ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಅವರನ್ನು ಕಂಡುಕೊಳ್ಳುವಿರಿ.
30 ನೀವು ಇಕ್ಕಟ್ಟಿಗೆ ಗುರಿಯಾಗಿ ಇವೆಲ್ಲವುಗಳು ನಿಮಗೆ ಸಂಭವಿಸಿದಾಗ, ಕಡೇ ದಿವಸಗಳಲ್ಲಿ ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಂಡು ವಿಧೇಯರಾಗಿರಿ.
31 ನಿಮ್ಮ ದೇವರಾದ ಯೆಹೋವ ದೇವರು ಕರುಣೆಯುಳ್ಳ ದೇವರು, ಅವರು ನಿಮ್ಮನ್ನು ಕೈಬಿಡುವುದಿಲ್ಲ, ನಾಶಮಾಡುವುದಿಲ್ಲ, ಅವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಒಡಂಬಡಿಕೆಯನ್ನು ಮರೆಯುವುದಿಲ್ಲ.
32 ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿದ ಪೂರ್ವಕಾಲವನ್ನು ವಿಚಾರಿಸಿ ನೋಡಿರಿ. ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ವಿಚಾರಿಸಿರಿ. ಇಂಥ ಅದ್ಭುತಕಾರ್ಯ ಉಂಟಾಯಿತೇ? ಇಲ್ಲವೆ ಇಂಥ ಸುದ್ದಿ ಕೇಳಿದ್ದುಂಟ್ಟೋ?
33 ನೀವು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೋ?
34 ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿ ನಿಮ್ಮ ಕಣ್ಣ ಮುಂದೆಯೇ ನಿಮಗೆ ಮಾಡಿದ್ದೆಲ್ಲದರ ಹಾಗೆ ಯಾವ ದೇವರು ಒಂದು ಜನಾಂಗವನ್ನು ಮತ್ತೊಂದು ಜನಾಂಗದಿಂದ ತಮಗಾಗಿ ಆಯ್ದು ತೆಗೆದುಕೊಳ್ಳುವುದಕ್ಕೆ ಪರೀಕ್ಷೆಗಳು, ಗುರುತುಗಳು, ಅದ್ಭುತಗಳು ಇವುಗಳ ಮೂಲಕವಾಗಿಯೂ, ಯುದ್ಧದಿಂದಲೂ, ಭುಜಬಲದಿಂದಲೂ, ಚಾಚಿದ ತೋಳಿನಿಂದಲೂ, ದೊಡ್ಡ ಭಯಗಳಿಂದಲೂ ಪ್ರಯತ್ನ ಮಾಡಿದರೋ?
35 ಯೆಹೋವ ದೇವರಲ್ಲದೆ ಮತ್ತೊಬ್ಬರಿಲ್ಲ. ಅವರೇ ದೇವರೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ.
36 ದೇವರು ನಿಮ್ಮ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತಮ್ಮ ಸ್ವರವನ್ನು ನಿಮಗೆ ಕೇಳಮಾಡಿದರು, ಭೂಮಿಯ ಮೇಲೆ ತಮ್ಮ ದೊಡ್ಡ ಬೆಂಕಿಯನ್ನು ನಿಮಗೆ ತೋರಿಸಿದರು. ನೀವು ಬೆಂಕಿಯೊಳಗಿಂದ ಅವರ ಮಾತುಗಳನ್ನು ಕೇಳಿದಿರಿ.
37 ದೇವರು ನಿಮ್ಮ ಪಿತೃಗಳನ್ನು ಪ್ರೀತಿಮಾಡಿದ್ದರಿಂದ, ಅವರ ತರುವಾಯ ಅವರ ಸಂತತಿಯನ್ನು ಆಯ್ದುಕೊಂಡು, ನಿಮ್ಮನ್ನು ತಮ್ಮ ದೃಷ್ಟಿಯಲ್ಲಿ ತಮ್ಮ ದೊಡ್ಡ ಬಲದಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
38 ದೇವರು ನಿಮಗಿಂತ ದೊಡ್ಡದಾದ, ನಿಮಗಿಂತ ಬಲಿಷ್ಠವಾದ ಜನಾಂಗಗಳನ್ನು ನಿಮ್ಮ ಮುಂದೆ ಓಡಿಸಿ, ನಿಮ್ಮನ್ನು ಅವರ ದೇಶದೊಳಗೆ ಬರಮಾಡಿ, ಈ ದಿನ ನೀವು ಇರುವಂತೆ ನಿಮಗೆ ಅವರ ದೇಶವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ.
39 ಹೀಗಿರುವುದರಿಂದ ಮೇಲಿನ ಆಕಾಶದಲ್ಲಿಯೂ, ಕೆಳಗಿನ ಭೂಮಿಯಲ್ಲಿಯೂ ಯೆಹೋವ ದೇವರೇ ದೇವರೆಂದೂ ಮತ್ತೊಬ್ಬರಿಲ್ಲವೆಂಬುದನ್ನೂ ನೀವು ಈಗ ಗ್ರಹಿಸಿಕೊಂಡು ಮನಸ್ಸಿಗೆ ತಂದುಕೊಳ್ಳಿರಿ.
40 ನಿಮಗೂ, ನಿಮ್ಮ ತರುವಾಯ ನಿಮ್ಮ ಮಕ್ಕಳಿಗೂ ಒಳ್ಳೆಯದು ಆಗುವ ಹಾಗೆಯೂ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸದಾಕಾಲಕ್ಕೆ ಕೊಡುವ ಭೂಮಿಯ ಮೇಲೆ ನೀವು ಬಹಳ ದಿವಸವಿರುವ ಹಾಗೆಯೂ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅನುಸರಿಸಿರಿ.
41 ಮೋಶೆಯು ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯ ನಗರಗಳನ್ನು ಪ್ರತ್ಯೇಕ ಮಾಡಿದನು.
42 ಯಾವ ಹಗೆಯಿಲ್ಲದೆ ತನ್ನ ನೆರೆಯವನನ್ನು ಕೈತಪ್ಪಿ ಕೊಂದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳುವಂತೆ ಆ ನಗರಗಳನ್ನು ನೇಮಿಸಿದನು.
43 ಅವು ಯಾವುವೆಂದರೆ, ರೂಬೇನ್ಯರಿಗೆ ಮರುಭೂಮಿಯ ಬಯಲಿನಲ್ಲಿ ಇರುವ ಬೆಚೆರ್, ಗಾದನವರಿಗೆ ಗಿಲ್ಯಾದಿನ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.
44 ಮೋಶೆಯು ಇಸ್ರಾಯೇಲರ ಮುಂದೆ ಇಟ್ಟ ದೇವರ ನಿಯಮವು ಇದೇ.
45 ಇಸ್ರಾಯೇಲರು ಈಜಿಪ್ಟಿನೊಳಗಿಂದ ಹೊರಟ ಮೇಲೆ ಮೋಶೆಯು ಇಸ್ರಾಯೇಲರಿಗೆ ನುಡಿದ ಸಾಕ್ಷಿಗಳೂ, ನಿಯಮಗಳೂ, ನ್ಯಾಯಗಳೂ ಇವೇ.
46 ಯೊರ್ದನ್ ನದಿಯ ಆಚೆಯಲ್ಲಿ ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಅವನನ್ನು ಮೋಶೆಯೂ, ಇಸ್ರಾಯೇಲರೂ ಈಜಿಪ್ಟಿನೊಳಗಿಂದ ಹೊರಟ ಮೇಲೆ ಸೋಲಿಸಿದರು.
47 ಸೀಹೋನನ ದೇಶವನ್ನೂ, ಬಾಷಾನಿನ ಅರಸನಾದ ಓಗನ ದೇಶವನ್ನೂ ಯೊರ್ದನಿನ ಆಚೆಯಲ್ಲಿ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ದೇಶಗಳನ್ನೂ ಗೆದ್ದುಕೊಂಡರು.
48 ಅರ್ನೋನ್ ನದಿಯ ತೀರದಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸಿರ್ಯೋನ ಪರ್ವತದವರೆಗೂ ಹರಡಿತ್ತು.
49 ಯೊರ್ದನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿ ಇರುವ ಎಲ್ಲಾ ಅರಾಬಾದನ್ನು ಸಹ, ಪಿಸ್ಗಾದ ಬೆಟ್ಟದ ತಗ್ಗಿನಲ್ಲಿರುವ ಬಯಲಿನ ಸಮುದ್ರದವರೆಗೆ ಸ್ವಾಧೀನಮಾಡಿಕೊಂಡರು.