< ಧರ್ಮೋಪದೇಶಕಾಂಡ 20 >
1 ನೀವು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟಾಗ ಅವರ ಕುದುರೆಗಳನ್ನೂ ರಥಗಳನ್ನೂ ನಿಮಗಿಂತ ಹೆಚ್ಚಾಗಿರುವ ಜನರನ್ನೂ ನೋಡಿದರೆ ಭಯಪಡಬೇಡಿರಿ. ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದಾರೆ.
2 ನೀವು ಯುದ್ಧಕ್ಕೆ ಸಮೀಪ ಬಂದಾಗ, ಯಾಜಕನು ಹತ್ತಿರ ಬಂದು, ಯೋಧರ ಸಂಗಡ ಮಾತನಾಡಿ ಅವರಿಗೆ,
3 “ಇಸ್ರಾಯೇಲರೇ ಕೇಳಿರಿ, ನೀವು ಈ ಹೊತ್ತು ನಿಮ್ಮ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಸಮೀಪ ಬಂದಿದ್ದೀರಿ. ನಿಮ್ಮ ಹೃದಯಗಳು ಕುಗ್ಗಬಾರದು. ನೀವು ಭಯಪಡಬೇಡಿರಿ, ನಡುಗಬೇಡಿರಿ, ಅವರಿಗೆ ಹೆದರಲೂ ಬೇಡಿರಿ.
4 ಏಕೆಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ, ನಿಮ್ಮನ್ನು ರಕ್ಷಿಸುವುದಕ್ಕೆ ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಸಂಗಡ ಬರುತ್ತಾರೆ,” ಎಂದು ಹೇಳಬೇಕು.
5 ಮತ್ತು ಅಧಿಕಾರಿಗಳು ಅವರಿಗೆ ಹೀಗೆ ಹೇಳಬೇಕು, “ನಿಮ್ಮಲ್ಲಿ ಯಾವನಾದರು ಹೊಸ ಮನೆಯನ್ನು ಕಟ್ಟಿ, ಗೃಹ ಪ್ರತಿಷ್ಠೆ ಇನ್ನು ಮಾಡದಿದ್ದರೆ, ಅವನು ತನ್ನ ಮನೆಗೆ ಹೋಗಲಿ. ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಮನೆಯನ್ನು ಸೇರಿಕೊಂಡಾನು.
6 ದ್ರಾಕ್ಷಿತೋಟವನ್ನು ನೆಟ್ಟು ಅದರ ಫಲವನ್ನು ತಿನ್ನದೇ ಇರುವ ಮನುಷ್ಯನು, ತನ್ನ ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ ಬೇರೊಬ್ಬನು ಆ ಫಲ ತಿಂದಾನು.
7 ಯಾವನಾದರೂ ಮದುವೆ ಮಾಡಿಕೊಂಡಿದ್ದು, ತನ್ನ ಹೆಂಡತಿಯೊಂದಿಗೆ ಸಂಸಾರ ಮಾಡಿರದಿದ್ದರೆ, ಅಂಥವನು ಮನೆಗೆ ಹೋಗಲಿ. ಅವನು ಯುದ್ಧದಲ್ಲಿ ಸತ್ತರೆ, ಬೇರೊಬ್ಬನು ಆಕೆಯನ್ನು ಸೇರಿಸಿಕೊಂಡಾನು.”
8 ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.
9 ಅಧಿಕಾರಿಗಳು ಯೋಧರ ಸಂಗಡ ಮಾತನಾಡಿ ಮುಗಿಸಿದಾಗ, ಅವರು ಅದರ ಮೇಲೆ ಸೇನಾಧಿಪತಿಗಳನ್ನು ನೇಮಿಸಬೇಕು.
10 ನೀವು ಯುದ್ಧಮಾಡುವುದಕ್ಕಾಗಿ ಒಂದು ಪಟ್ಟಣದ ಹತ್ತಿರ ಬಂದಾಗ, ಮೊದಲು ಅದನ್ನು ಸಮಾಧಾನಕ್ಕಾಗಿ ಕರೆಯಬೇಕು.
11 ಆ ಪಟ್ಟಣವು ನಿಮಗೆ ಸಮಾಧಾನದ ಉತ್ತರಕೊಟ್ಟು ಬಾಗಿಲನ್ನು ತೆರೆದರೆ, ಅದರಲ್ಲಿರುವ ಜನರೆಲ್ಲರೂ ನಿಮಗೆ ಕಪ್ಪಕೊಟ್ಟು, ನಿಮಗಾಗಿ ಕೆಲಸ ಮಾಡಬೇಕು.
12 ಅವರು ನಿಮ್ಮ ಮಾತಿಗೆ ಸಮ್ಮತಿಸದೆ ನಿಮ್ಮ ಸಂಗಡ ಯುದ್ಧಮಾಡಿದರೆ, ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು.
13 ನಿಮ್ಮ ದೇವರಾದ ಯೆಹೋವ ದೇವರು ಅದನ್ನು ನಿಮ್ಮ ಕೈಗೆ ಕೊಟ್ಟಾಗ, ಅದರ ಗಂಡಸರೆಲ್ಲರನ್ನು ಸಂಹಾರಮಾಡಬೇಕು.
14 ಆದರೆ ಸ್ತ್ರೀಯರನ್ನೂ ಚಿಕ್ಕವರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲಾ ಆಸ್ತಿಯನ್ನೂ ನಿಮಗಾಗಿ ತಗೆದುಕೊಳ್ಳಬಹುದು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವಂಥ ನಿಮ್ಮ ಶತ್ರುಗಳ ಆಸ್ತಿಯನ್ನು ನೀವೇ ಅನುಭೋಗಿಸಬಹುದು.
15 ಹೀಗೆ ಈ ದೇಶದ ಜನಾಂಗಗಳಿಗೆ ಸೇರದೆ ನಿಮಗೆ ದೂರವಾಗಿರುವ ಜನಾಂಗಗಳ ಪಟ್ಟಣಗಳಿಗೆಲ್ಲಾ ಹಾಗೆಯೇ ಮಾಡಬೇಕು.
16 ಆದರೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಈ ಜನರ ಪಟ್ಟಣಗಳಲ್ಲಿ ಉಸಿರಾಡುವ ಯಾವುದನ್ನಾದರೂ ಉಳಿಸಬಾರದು.
17 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಹಿತ್ತಿಯರನ್ನೂ, ಅಮೋರಿಯರನ್ನೂ, ಕಾನಾನ್ಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಪೂರ್ಣವಾಗಿ ದಂಡಿಸಬೇಕು.
18 ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಆರಾಧಿಸುವಾಗ ಮಾಡಿದ ಎಲ್ಲಾ ಅಸಹ್ಯಕರವಾದ ಆಚಾರಗಳನ್ನು ನಿಮಗೆ ಕಲಿಸಿಕೊಡಬಹುದು ಮತ್ತು ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ದ್ರೋಹಿಗಳಾಗಬಹುದು.
19 ನೀವು ಒಂದು ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳಲು ಅದಕ್ಕೆ ಬಹು ದಿವಸ ಮುತ್ತಿಗೆ ಹಾಕಬೇಕಾಗಬಹುದು. ಆಗ ಅದಕ್ಕೆ ಸೇರಿದ ಮರಗಳನ್ನು ಹಾಳುಮಾಡಬಾರದು. ಅವುಗಳಿಗೆ ಕೊಡಲಿಯನ್ನು ಹಾಕಲೇಬಾರದು. ಅವುಗಳ ಹಣ್ಣನ್ನು ತಿನ್ನಬಹುದೇ ಹೊರತು ಮರಗಳನ್ನು ಕಡಿಯಬಾರದು. ಅಡವಿಯ ಮರಗಳು ಶತ್ರುಗಳೇನು? ಅವುಗಳೊಡನೆ ಯುದ್ಧ ಮಾಡಬಹುದೇ?
20 ತಿನ್ನತಕ್ಕ ಹಣ್ಣು ಕೊಡುವುದಿಲ್ಲ ಎಂದು ನೀವು ತಿಳಿದ ಮರಗಳನ್ನು ಮಾತ್ರ ಕಡಿದು ಹಾಕಬಹುದು. ಅವುಗಳಿಂದ ಯುದ್ಧ ಯಂತ್ರಗಳನ್ನು ಮಾಡಿಕೊಂಡು ನಿಮಗೆ ವಿರುದ್ಧವಾಗಿರುವ ಆ ಪಟ್ಟಣ ಬೀಳುವ ತನಕ ಅದಕ್ಕೆ ಮುತ್ತಿಗೆ ಹಾಕಬೇಕು.