< ಧರ್ಮೋಪದೇಶಕಾಂಡ 18 >

1 ಯಾಜಕರಾದ ಲೇವಿಯರಿಗೂ, ಆ ಎಲ್ಲಾ ಲೇವಿಯ ಗೋತ್ರಕ್ಕೂ, ಇಸ್ರಾಯೇಲಿನ ಸಂಗಡ ಪಾಲೂ ಸೊತ್ತೂ ಇರಬಾರದು. ಅವರು ಯೆಹೋವ ದೇವರಿಗೆ ಸಮರ್ಪಿಸಿದ ದಹನಬಲಿಯ ಕಾಣಿಕೆಗಳ ಮೇಲೆ ಆಧಾರಮಾಡಿಕೊಂಡು ಜೀವಿಸಬೇಕು. ಅದು ಅವರ ಬಾಧ್ಯತೆಯಾಗಿದೆ.
ಯಾಜಕಸೇವೆ ಮಾಡುವ ಲೇವಿಯರಿಗಾಗಲಿ ಅಥವಾ ಲೇವಿಯ ಕುಲದವರಲ್ಲಿ ಯಾರಿಗೇ ಆಗಲಿ ಇತರ ಇಸ್ರಾಯೇಲರೊಡನೆ ಸ್ವಂತಕ್ಕಾಗಿ ಪಾಲಾಗಲಿ ಅಥವಾ ಸ್ವಾಸ್ತ್ಯವಾಗಲಿ ದೊರೆಯುವುದಿಲ್ಲ. ಯೆಹೋವನಿಗೆ ಸಮರ್ಪಿಸಲ್ಪಡುವ ಹೋಮದ್ರವ್ಯಗಳೂ ಆತನಿಗೋಸ್ಕರ ಪ್ರತ್ಯೇಕಿಸಲ್ಪಟ್ಟದ್ದೆಲ್ಲವೂ ಅವರಿಗೆ ಜೀವನಾಧಾರ.
2 ಲೇವಿಯರಿಗೆ ಅವರ ಸಹೋದರರ ಮಧ್ಯದಲ್ಲಿ ಸೊತ್ತಿರಬಾರದು. ಯೆಹೋವ ದೇವರು ಅವರಿಗೆ ಹೇಳಿದ ಹಾಗೆ ದೇವರೇ ಅವರ ಸೊತ್ತು.
ಸ್ವದೇಶಸ್ಥರೊಂದಿಗೂ ಅವರಿಗೆ ಸ್ವತ್ತು ದೊರೆಯುವುದಿಲ್ಲ; ಯೆಹೋವನು ಅವರಿಗೆ ಹೇಳಿದಂತೆ ತಾನೇ ಅವರಿಗೆ ಸ್ವತ್ತಾಗಿರುವನು.
3 ಎತ್ತನ್ನಾಗಲಿ, ಕುರಿಯನ್ನಾಗಲಿ ಬಲಿ ಅರ್ಪಿಸುವವರಿಂದ ಯಾಜಕರಿಗೆ ಸಿಕ್ಕುವ ಪಾಲು, ಅವುಗಳ ಮುಂದೊಡೆ, ದವಡೆ ಹಾಗೂ ಒಳಗಿನ ಭಾಗಗಳು.
ಜನರ ಕಡೆಯಿಂದ ಯಾಜಕರು ಹೊಂದಬೇಕಾದವುಗಳು ಯಾವುವೆಂದರೆ: ದನಗಳಲ್ಲಿಯಾಗಲಿ, ಆಡು ಮತ್ತು ಕುರಿಗಳಲ್ಲಿಯಾಗಲಿ ಪಶುವನ್ನು ಕೊಯಿದು ಯಜ್ಞಮಾಡುವವರೆಲ್ಲರೂ ಅದರ ಮುಂದೊಡೆಯನ್ನೂ, ಎರಡು ದವಡೆಗಳನ್ನೂ, ಕೋಷ್ಠವನ್ನೂ (ಒಳಭಾಗವನ್ನು) ಯಾಜಕರಿಗೆ ಕೊಡಬೇಕು.
4 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ಪ್ರಥಮ ಫಲವನ್ನೂ, ನಿಮ್ಮ ಕುರಿಗಳ ಉಣ್ಣೆಯಲ್ಲಿ ಪ್ರಥಮವಾದದ್ದನ್ನೂ ಅವರಿಗೆ ಕೊಡಬೇಕು.
ಧಾನ್ಯ, ದ್ರಾಕ್ಷಾರಸ ಮತ್ತು ಎಣ್ಣೆ ಇವುಗಳ ಪ್ರಥಮಫಲಗಳನ್ನು ಹಾಗೂ ಮೊದಲನೆಯ ಸಾರಿ ಕತ್ತರಿಸುವ ಕುರಿಗಳ ಉಣ್ಣೆಯನ್ನೂ ಅವರಿಗೆ ಕೊಡಬೇಕು.
5 ಏಕೆಂದರೆ ಅವರೂ, ಅವರ ಪುತ್ರರೂ ನಿತ್ಯವಾಗಿ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡುತ್ತಾ ನಿಂತಿರುವ ಹಾಗೆ ಅವರನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಗೋತ್ರಗಳೊಳಗಿಂದ ಆಯ್ದುಕೊಂಡಿದ್ದಾರೆ.
ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕುಲಗಳಲ್ಲಿ ಇವರನ್ನೂ ಮತ್ತು ಇವರ ತರುವಾಯ ಇವರ ಸಂತತಿಯವರನ್ನೂ ತನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆ ಮಾಡುವುದಕ್ಕೆ ತಾನೇ ನೇಮಿಸಿಕೊಂಡನಲ್ಲಾ.
6 ಒಬ್ಬ ಲೇವಿಯು ಸಮಸ್ತ ಇಸ್ರಾಯೇಲಿನಲ್ಲಿರುವ ಯಾವುದೇ ಊರಿನಲ್ಲಿ ಇಳಿದುಕೊಂಡಿರುವ ಸ್ಥಳದಿಂದ ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಬರಬಹುದು.
ಇಸ್ರಾಯೇಲರ ಯಾವುದಾದರೂ ಒಂದು ಊರಲ್ಲಿ ಇಳಿದುಕೊಂಡಿರುವ ಲೇವಿಯನು ಸ್ವಂತ ಮನಸ್ಸಿನಿಂದ ಆ ಊರನ್ನು ಬಿಟ್ಟು, ಯೆಹೋವನು ಆರಿಸಿಕೊಂಡ ಪವಿತ್ರ ಸ್ಥಳಕ್ಕೆ ಬಂದು,
7 ಅಲ್ಲಿ ಯೆಹೋವ ದೇವರ ಮುಂದೆ ನಿಂತುಕೊಳ್ಳುವ ಇತರ ಲೇವಿಯರಂತೆ ಅವನೂ ತನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡಬಹುದು.
ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಸೇವೆಮಾಡುವ ತನ್ನ ಸ್ವಕುಲದವರಂತೆ ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ತಾನೂ ಸೇವೆ ನಡಿಸಿದರೆ,
8 ಅವನು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದರಲ್ಲಿ ಹಣದ ಪಾಲನ್ನು ಸ್ವೀಕರಿಸಿದ್ದರೂ, ಮಿಕ್ಕ ಲೇವಿಯರೊಡನೆ ಸಮಾನ ಪಾಲು ಹೊಂದಬೇಕು.
ಅವನ ಕೈಯಲ್ಲಿ ಪಿತ್ರಾರ್ಜಿತ ಸೊತ್ತನ್ನು ಮಾರಿದ ಹಣವಿದ್ದರೂ, ಇತರ ಲೇವಿಯರೊಂದಿಗೆ ಸಮವಾಗಿ ಭೋಗಿಸುವುದಕ್ಕೆ ಬಾಧ್ಯನಾಗಿರುವನು.
9 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಆ ಜನಾಂಗಗಳು ಮಾಡುವ ಅಸಹ್ಯ ಕಾರ್ಯಗಳನ್ನು ನೀವು ಕಲಿಯಬಾರದು.
ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸೇರಿದಾಗ ಅಲ್ಲಿರುವ ಜನಗಳು ಮಾಡುವ ಅಸಹ್ಯವಾದ ಕೆಲಸಗಳನ್ನು ನೀವು ಅನುಸರಿಸಲೇಬಾರದು.
10 ತನ್ನ ಮಗನನ್ನು ಇಲ್ಲವೆ ಮಗಳನ್ನು ಆಹುತಿ ಕೊಡುವವನೂ, ಕಣಿ ಹೇಳುವವನೂ, ಶಕುನ ನೋಡುವವನೂ, ಸರ್ಪ ಮಂತ್ರದವನೂ, ಮಾಟಗಾರನೂ,
೧೦ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು,
11 ಗಾರುಡಿಗಾರನೂ, ಯಕ್ಷಿಣಿಗಾರನೂ, ಮಂತ್ರಗಾರನೂ, ಸತ್ತವರ ಹತ್ತಿರ ವಿಚಾರಿಸುವವನೂ ನಿಮ್ಮಲ್ಲಿ ಇರಬಾರದು.
೧೧ಮಾಟಗಾರರು, ತಂತ್ರಗಾರರು, ಸತ್ತವರಲ್ಲಿ ವಿಚಾರಿಸುವವರು, ಬೇತಾಳ, ಪ್ರೇತ, ಭೂತ ಎಂದು ಪೂಜಿಸುವವರು ಯಾರೂ ನಿಮ್ಮಲ್ಲಿ ಇರಬಾರದು.
12 ಏಕೆಂದರೆ ಇಂಥವುಗಳನ್ನು ಮಾಡುವವರೆಲ್ಲಾ ಯೆಹೋವ ದೇವರಿಗೆ ಅಸಹ್ಯರಾಗಿದ್ದಾರೆ. ಈ ಅಸಹ್ಯಗಳ ನಿಮಿತ್ತವೇ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರದೂಡಿಸಿಬಿಡುತ್ತಾರೆ.
೧೨ಇಂಥ ಕೆಲಸಗಳನ್ನು ನಡಿಸುವವರನ್ನು ಯೆಹೋವನು ಸಹಿಸುವುದಿಲ್ಲ; ನಿಮ್ಮ ದೇವರಾದ ಯೆಹೋವನು ಇಂಥ ಹೇಯಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮಿಂದ ಹೊರ ಹೋಗುವಂತೆ ಮಾಡಿದ್ದಾನೆ.
13 ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿರ್ದೋಷಿಯಾಗಿರಬೇಕು.
೧೩ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿರ್ದೊಷಿಗಳಾಗಿರಬೇಕು.
14 ನೀವು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಶಕುನ ನೋಡುವವರ ಹಾಗೂ ಕಣಿಹೇಳುವವರ ಮಾತನ್ನು ಕೇಳುತ್ತಿದ್ದರು. ನಿಮ್ಮನ್ನಾದರೋ ನಿಮ್ಮ ದೇವರಾದ ಯೆಹೋವ ದೇವರು ಹಾಗೆ ಮಾಡಲು ಅನುಮತಿಸಲಿಲ್ಲ.
೧೪ನೀವು ಸ್ವಾಧೀನಮಾಡಿಕೊಳ್ಳುವ ದೇಶದ ಜನಾಂಗಗಳು ಶಕುನಗಳನ್ನು ನೋಡುತ್ತಾರೆ ಮತ್ತು ಯಂತ್ರ ಮಂತ್ರಗಳನ್ನು ಮಾಡುತ್ತಾರೆ. ನೀವಾದರೋ ಹಾಗೆ ಮಾಡುವುದಕ್ಕೆ ನಿಮ್ಮ ದೇವರಾದ ಯೆಹೋವನಿಂದ ಅಪ್ಪಣೆಹೊಂದಲಿಲ್ಲ.
15 ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಿಮ್ಮ ಸಹೋದರರ ನಡುವೆಯಿಂದ ಎಬ್ಬಿಸುವರು. ಆ ಪ್ರವಾದಿಯ ಮಾತನ್ನು ನೀವು ಕೇಳಬೇಕು.
೧೫ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರರಲ್ಲಿ ನನ್ನಂಥ ಪ್ರವಾದಿಯನ್ನು ನಿಮಗೆ ಏರ್ಪಡಿಸುವನು; ಅವನಿಗೆ ನೀವು ಕಿವಿಗೊಡಬೇಕು.
16 ನೀವು ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಂದ ಬೇಡಿಕೊಂಡ ಪ್ರಕಾರ ಆಗುವುದು. ಆಗ ನೀವು, “ನಾವು ಸಾಯದಂತೆ ಇನ್ನು ಮೇಲೆ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ನಾವು ಕೇಳುವುದಿಲ್ಲ, ಈ ದೊಡ್ಡ ಬೆಂಕಿಯನ್ನೂ ನೋಡುವುದಿಲ್ಲ,” ಎಂದು ಹೇಳಿದಿರಿ.
೧೬ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನೀವು, “ನಮ್ಮ ದೇವರಾದ ಯೆಹೋವನ ಸ್ವರವನ್ನು ಇನ್ನು ಕೇಳುವುದಕ್ಕಾಗಲಿ ಅಥವಾ ಈ ಘೋರವಾದ ಅಗ್ನಿಜ್ವಾಲೆಯನ್ನು ಇನ್ನು ನೋಡವುದಕ್ಕಾಗಲಿ ನಮಗೆ ಮನಸ್ಸಿಲ್ಲ, ಹಾಗೇನಾದರು ಕೇಳಿ ನೋಡಿದರೆ ಸತ್ತು ಹೋಗುವೆವು” ಎಂದು ನೀವು ಹೇಳಿದಿರಷ್ಟೆ.
17 ಆಗ ಯೆಹೋವ ದೇವರು ನನಗೆ, “ಅವರು ಹೇಳಿದ್ದು ಸರಿಯಾಗಿದೆ.
೧೭ಆಗ ಯೆಹೋವನು ನನಗೆ, “ಇವರು ಹೇಳಿದ ಮಾತು ಒಳ್ಳೆಯದೇ;
18 ನಿನ್ನ ಹಾಗಿರುವ ಪ್ರವಾದಿಯನ್ನು ನಾನು ಅವರ ಸಹೋದರರ ಮಧ್ಯದಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಆತನ ಬಾಯಿಯಲ್ಲಿ ಇಡುವೆನು. ನಾನು ಆತನಿಗೆ ಆಜ್ಞಾಪಿಸುವುದನ್ನೆಲ್ಲಾ ಆತನು ಅವರಿಗೆ ಹೇಳುವನು.
೧೮ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.
19 ಆ ಪ್ರವಾದಿ ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
೧೯ಅವನು ನನ್ನ ಹೆಸರಿನಲ್ಲಿ ಹೇಳಿದ ಮಾತುಗಳಿಗೆ ಯಾರು ಕಿವಿಗೊಡುವದಿಲ್ಲವೋ ಅಂಥವರನ್ನು ನಾನು ಶಿಕ್ಷಿಸುವೆನು.
20 ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವುದನ್ನು ನನ್ನ ಹೆಸರಿನಿಂದ ಮಾತನಾಡುವ ಪ್ರವಾದಿಯೂ, ಬೇರೆ ದೇವರುಗಳ ಹೆಸರಿನಿಂದ ಮಾತನಾಡುವ ಪ್ರವಾದಿಯೂ ಸಾಯಬೇಕು.”
೨೦ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ, ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ, ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತನಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.
21 ಇದಲ್ಲದೆ ನೀವು, “ಇದು ಯೆಹೋವ ದೇವರು ಹೇಳಿದ ವಾಕ್ಯವು ಅಲ್ಲ ಎಂದು ನಾವು ತಿಳಿದುಕೊಳ್ಳುವುದು ಹೇಗೆ?” ಎಂದು ನೀವು ನಿಮ್ಮ ಹೃದಯದಲ್ಲಿ ಆಲೋಚಿಸಬಹುದು.
೨೧‘ಪ್ರವಾದಿಯು ಹೇಳಿದ ಮಾತು ಯೆಹೋವನ ಮಾತಲ್ಲವೆಂದು ತಿಳಿದುಕೊಳ್ಳುವುದು ಹೇಗೆ’ ಅಂದುಕೊಳ್ಳುತ್ತೀರೋ?
22 ಒಬ್ಬ ಪ್ರವಾದಿಯು ಯೆಹೋವ ದೇವರ ಹೆಸರಿನಲ್ಲಿ ಮುಂತಿಳಿಸಿದ ಮಾತು ಸಂಭವಿಸದೆ ಹೋದರೆ ಅಥವಾ ನಿಜವಾಗದಿದ್ದರೆ, ಅದು ಯೆಹೋವ ದೇವರ ಮಾತು ಅಲ್ಲವೆಂದು ನೀವು ತಿಳಿದುಕೊಳ್ಳಬೇಕು. ಆ ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ, ಆದ್ದರಿಂದ ನೀವು ಅವನಿಗೆ ಭಯಪಡಬಾರದು.
೨೨ಪ್ರವಾದಿಯು ‘ಇದು ಯೆಹೋವನ ನುಡಿ’ ಎಂದು ಹೇಳಿ, ಆತನು ತಿಳಿಸಿದ ಸಂಗತಿಯೂ ನಡೆಯದೆ ಹೋದರೆ, ಅವನ ಮಾತು ಯೆಹೋವನದಲ್ಲವೆಂದು ನೀವು ತಿಳಿದುಕೊಳ್ಳಬೇಕು. ಅವನು ನನ್ನ ಅಪ್ಪಣೆ ಇಲ್ಲದೆ ಮಾತನಾಡಿದವನು ಮತ್ತು ನೀವು ಅವನಿಗೆ ಹೆದರಬಾರದು” ಎಂದು ಹೇಳಿದನು.

< ಧರ್ಮೋಪದೇಶಕಾಂಡ 18 >