< ದಾನಿಯೇಲನು 11 >

1 ಮೇದ್ಯರ ಅರಸನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಅವರಿಗೆ ಸಹಾಯಮಾಡಿ, ಅವನನ್ನು ರಕ್ಷಿಸಲು ನಾನು ನಿಂತುಕೊಂಡೆನು.
ಮೇದ್ಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಾನೇ ಮೀಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆನು.
2 ನಾನು ಈಗ ಸತ್ಯವನ್ನು ತಿಳಿಸುತ್ತೇನೆ. ಪಾರಸಿಯ ದೇಶದಲ್ಲಿ ಇನ್ನೂ ಮೂರು ಅರಸರು ಏಳುವರು. ನಾಲ್ಕನೆಯವನು ಅವರೆಲ್ಲರಿಗಿಂತಲೂ ಬಹಳ ಐಶ್ವರ್ಯವಂತನಾಗಿರುವನು. ಅವನು ತನ್ನ ಐಶ್ವರ್ಯದಿಂದಾಗುವ ಸಾಮರ್ಥ್ಯದಿಂದ ಗ್ರೀಕ್ ರಾಜ್ಯಕ್ಕೆ ವಿರೋಧವಾಗಿ ಎಲ್ಲರನ್ನೂ ಹುರಿದುಂಬಿಸುವನು.
ನಾನು ಈಗ ಸತ್ಯಾಂಶವನ್ನು ನಿನಗೆ ತಿಳಿಸುವೆನು, “ಇಗೋ, ಪಾರಸಿಯ ದೇಶದಲ್ಲಿ ಇನ್ನು ಮೂವರು ರಾಜರು ಏಳುವರು; ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು; ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸುವನು.
3 ಆಗ ಬಲವುಳ್ಳ ಒಬ್ಬ ಅರಸನು ಉದಯಿಸುವನು. ಅವನು ಮಹಾಅಧಿಕಾರದಿಂದ ಆಳುವನು ಮತ್ತು ತನ್ನ ಇಷ್ಟದ ಪ್ರಕಾರ ಮಾಡುವನು.
ಅನಂತರ ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾ ಪ್ರಭುತ್ವದಿಂದ ಆಳುತ್ತಾ, ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು.
4 ಅವನು ಉದಯಿಸಿದ ನಂತರ, ಅವನ ರಾಜ್ಯ ಒಡೆದು ಆಕಾಶದ ನಾಲ್ಕು ದಿಕ್ಕುಗಳಿಗೂ ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಅದು ಇನ್ನು ಪ್ರಬಲವಾಗದು. ಏಕೆಂದರೆ ಅವನ ರಾಜ್ಯವನ್ನು ಅವನಿಂದ ಕಿತ್ತುಕೊಂಡು ಇತರರಿಗೆ ನೀಡಲಾಗುವುದು.
ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು. ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವುದು.
5 ದಕ್ಷಿಣದ ಅರಸನು ಬಲಿಷ್ಠನಾಗುವನು. ಆದರೆ ಅವನ ಸೇನಾಪತಿಗಳಲ್ಲಿ ಒಬ್ಬನು ಅವನಿಗಿಂತ ಬಲಿಷ್ಠನಾಗುವನು ಮತ್ತು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವುದು.
ದಕ್ಷಿಣ ರಾಜ್ಯದ ರಾಜನೂ, ಅವನ ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು. ಸರದಾರನು ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು. ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವುದು.
6 ಕೆಲವು ವರ್ಷಗಳ ನಂತರ ಅವರಿಬ್ಬರು ಒಪ್ಪಂದ ಮಾಡಿಕೊಳ್ಳುವರು. ದಕ್ಷಿಣದ ಅರಸನ ಮಗಳು ಒಪ್ಪಂದ ಮಾಡಿಕೊಳ್ಳಲು ಉತ್ತರದ ಅರಸನ ಬಳಿಗೆ ಬರುವಳು. ಆದರೆ ಅವಳು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದಿಲ್ಲ. ಅವನೂ, ಅವನ ಅಧಿಕಾರವೂ ನಿಲ್ಲುವುದಿಲ್ಲ. ಆ ದಿನಗಳಲ್ಲಿ ಅವಳೂ ಅವಳನ್ನು ಕರೆತಂದವರೂ ಮತ್ತು ಅವಳ ತಂದೆಯೂ ಅವಳಿಗೆ ಸಹಾಯ ಮಾಡಿದವರು ಯಾರೂ ಉಳಿಯುವುದಿಲ್ಲ.
ಕೆಲವು ವರ್ಷಗಳಾದ ಮೇಲೆ ಅವರು ಸೇರಿಕೊಳ್ಳುವರು. ದಕ್ಷಿಣ ದಿಕ್ಕಿನ ರಾಜನ ಕುಮಾರಿಯು ಉತ್ತರ ರಾಜ್ಯದ ರಾಜನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಕ್ಕೆ ಬರುವಳು. ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಲು ಆಗದು; ಅವನೂ, ಅವನ ತೋಳೂ ನಿಲ್ಲವು; ಅವಳೂ, ಅವಳನ್ನು ಕರೆದು ತಂದವರೂ, ಪಡೆದವನೂ, ತಕ್ಕೊಂಡವನೂ ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು.
7 ಅವಳ ವಂಶದಲ್ಲಿಯ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು, ಸೈನ್ಯದೊಂದಿಗೆ ಬಂದು, ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ, ಅವರ ವಿರುದ್ಧ ಹೋರಾಡಿ ಗೆಲ್ಲುವನು.
ಅನಂತರ ಅವಳು ಹುಟ್ಟಿದ ವಂಶವೃಕ್ಷದಲ್ಲಿ ಹುಟ್ಟಿದವರು ಅದರ ಸ್ಥಾನದಲ್ಲಿ ನಿಂತು ಉತ್ತರ ದಿಕ್ಕಿನ ರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು ಅವನ ದುರ್ಗದೊಳಗೆ ನುಗ್ಗಿ, ಅವರೊಡನೆ ಯುದ್ಧಮಾಡಿ, ಅವರನ್ನು ಗೆಲ್ಲುವರು.
8 ಅವರ ದೇವರುಗಳನ್ನೂ, ಅವರ ವಿಗ್ರಹಗಳನ್ನೂ ಅವರ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನೂ ಅವನು ಸೂರೆಮಾಡಿ, ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಕೆಲವು ವರ್ಷಗಳವರೆಗೆ ಅವನು ಉತ್ತರದ ಅರಸನ ಮೇಲೆ ಬಿಟ್ಟುಬಿಡುವನು.
ಅವರ ದೇವರುಗಳನ್ನೂ, ಎರಕದ ಬೊಂಬೆಗಳನ್ನೂ, ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ, ಸೂರೆ ಮಾಡಿಕೊಂಡು ಐಗುಪ್ತಕ್ಕೆ ಬಂದು, ಕೆಲವು ವರ್ಷಗಳ ತನಕ ಉತ್ತರ ದಿಕ್ಕಿನ ರಾಜನ ತಂಟೆಗೆ ಹೋಗುವುದಿಲ್ಲ.
9 ಆಮೇಲೆ ಉತ್ತರದ ಅರಸನು, ದಕ್ಷಿಣದ ಅರಸನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗಿ ಹೋಗುವನು.
ಬಳಿಕ ಉತ್ತರ ದಿಕ್ಕಿನ ರಾಜನು ದಕ್ಷಿಣ ದಿಕ್ಕಿನ ರಾಜನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗುವನು.
10 ಅವನ ಮಕ್ಕಳು ಯುದ್ಧಕ್ಕೆ ಸಿದ್ಧರಾಗಿ ದೊಡ್ಡ ಸೈನ್ಯ ಕೂಡಿಸುವರು. ಆ ಸೈನ್ಯವು ನಿಬಂಧಿಸಲಾಗದ ಪ್ರವಾಹದಂತೆ ಹರಿದುಬಂದು, ಯುದ್ಧವನ್ನು ಅವನ ಕೋಟೆಯವರೆಗೆ ನಡೆಸುವರು.
೧೦ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ಮುಂದುವರೆದು ತುಂಬಿತುಳುಕಿ ಹಬ್ಬಿಕೊಳ್ಳುವುದು. ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣ ದಿಕ್ಕಿನ ರಾಜನ ದುರ್ಗದವರೆಗೆ ನುಗ್ಗುವರು.
11 ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಮಹಾ ಸೈನ್ಯವನ್ನು ಕೂಡಿಸಿದನು. ಉತ್ತರದ ಅರಸನ ಸಂಗಡ ಯುದ್ಧಮಾಡುವನು. ಆದರೆ ಆ ಮಹಾ ಸೈನ್ಯವು ದಕ್ಷಿಣ ಅರಸನ ಕೈವಶವಾಗುವುದು.
೧೧ಆಗ ದಕ್ಷಿಣ ದಿಕ್ಕಿನ ರಾಜನು ಕ್ರೋಧದಿಂದ ಉರಿಯುತ್ತಾ ಹೊರಟು ಬಂದು, ಉತ್ತರ ದಿಕ್ಕಿನ ರಾಜನ ಸಂಗಡ ಯುದ್ಧ ಮಾಡುವನು. ಉತ್ತರ ದಿಕ್ಕಿನ ರಾಜನು ಮಹಾವ್ಯೂಹವನ್ನು ಕಟ್ಟಿದರೂ, ಅದೆಲ್ಲಾ ದಕ್ಷಿಣ ದಿಕ್ಕಿನ ರಾಜನ ಕೈಗೆ ಸಿಕ್ಕಿ ಒಯ್ಯಲ್ಪಡುವುದು.
12 ಆ ಮಹಾ ಸೈನ್ಯವನ್ನು ಅವನು ತೆಗೆದುಹಾಕಿದ ಮೇಲೆ, ಅವನ ಹೃದಯವು ಹೆಚ್ಚಳ ಪಡುವುದು. ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ, ಪ್ರಾಬಲ್ಯಕ್ಕೆ ಬರುವುದಿಲ್ಲ.
೧೨ಆದುದರಿಂದ ಅವನ ಮನಸ್ಸು ಗರ್ವದಿಂದ ತುಂಬುವುದು. ಅವನು ಲಕ್ಷಾಂತರ ಸೈನಿಕರನ್ನು ಬೀಳಿಸಿದರೂ ಪ್ರಾಬಲ್ಯಕ್ಕೆ ಬರುವುದಿಲ್ಲ.
13 ಏಕೆಂದರೆ ಉತ್ತರದ ಅರಸನು ಪುನಃ ತಿರುಗಿಕೊಂಡು ಮೊದಲನೆಯದಕ್ಕಿಂತಲೂ ದೊಡ್ಡ ಸೈನ್ಯವನ್ನು ನಿಲ್ಲಿಸಿ, ಕೆಲವು ವರ್ಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ, ಬಹಳ ಆಯುಧಗಳ ಸಂಗಡವೂ ನಿಶ್ಚಯವಾಗಿ ಬರುವನು.
೧೩ತರುವಾಯ ಉತ್ತರ ದಿಕ್ಕಿನ ರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿ ಬಹಳ ವರ್ಷಗಳ ನಂತರ ಮಹಾ ಸೈನ್ಯದಿಂದಲೂ, ಅಧಿಕ ಆಯುಧಗಳ ಸಮೇತವಾಗಿಯೂ ಬರುವನು.
14 ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು. ನಿನ್ನ ಜನರಲ್ಲಿ ಹಿಂಸಾಕಾರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಿರುಗಿ ಬೀಳುವರು. ಆದರೆ ಸೋತುಹೋಗುವರು.
೧೪ಆ ಕಾಲದಲ್ಲಿ ಅನೇಕರು ದಕ್ಷಿಣ ದಿಕ್ಕಿನ ರಾಜನಿಗೆ ಎದುರು ನಿಲ್ಲುವರು. ಇದಲ್ಲದೆ ನಿನ್ನ ಜನರಲ್ಲಿ ಹಿಂಸಕರು ಕನಸನ್ನು ನಿಜ ಮಾಡಬೇಕೆಂದು ದಂಗೆ ಏಳುವರು. ಆದರೆ ಬಿದ್ದುಹೋಗುವರು.
15 ಆಗ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ, ದಿಬ್ಬವನ್ನು ಕೆಡವಿ, ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವನು. ದಕ್ಷಿಣದ ಭುಜಬಲವಾದರೂ ಅವನು ಆಯ್ದುಕೊಂಡ ಜನರಾದರೂ ಎದುರಿಸಿ ನಿಲ್ಲುವುದಕ್ಕೆ ಅಶಕ್ತರಾಗುವರು.
೧೫ಉತ್ತರ ದಿಕ್ಕಿನ ರಾಜನು ಬಂದು ದಿಬ್ಬ ಹಾಕಿ, ಕೋಟೆ ಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು.
16 ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು. ಯಾರೂ ಅವನ ಮುಂದೆ ನಿಲ್ಲಲಾರರು. ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದನ್ನು ನಾಶಮಾಡುವ ಅಧಿಕಾರ ಹೊಂದಿರುವನು.
೧೬ದಕ್ಷಿಣ ದಿಕ್ಕಿನ ರಾಜನಿಗೆ ವಿರುದ್ಧವಾಗಿ ಬರುವವನು ತನ್ನ ಇಚ್ಛಾನುಸಾರ ನಡೆಯುವನು. ಅವನನ್ನು ಎದುರಿಸುವವರು ಯಾರು ಇಲ್ಲ, ನಾಶವನ್ನು ಕೈಯಲ್ಲಿಟ್ಟುಕೊಂಡು ಅಂದ ಚಂದದ ದೇಶದಲ್ಲಿ ನಿಂತಿರುವನು.
17 ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ದಕ್ಷಿಣದ ರಾಜನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವನು. ಅವನ ರಾಜ್ಯವನ್ನು ಉರುಳಿಸಲು ಅವನಿಗೆ ಮಗಳನ್ನು ಕೊಡುವನು. ಆದರೆ ಅವನ ಯೋಜನೆಗಳು ಜಯಹೊಂದುವುದಿಲ್ಲ. ಇಲ್ಲವೆ ಅವನಿಗೆ ಸಹಾಯ ಮಾಡುವುದಿಲ್ಲ.
೧೭ದಕ್ಷಿಣ ದಿಕ್ಕಿನ ರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣು ಮಗಳನ್ನು ಕೊಡುವನು. ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲವಾಗುವುದಿಲ್ಲ.
18 ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ, ಅನೇಕರನ್ನು ವಶಪಡಿಸಿಕೊಳ್ಳುವನು. ಆದರೆ ಒಬ್ಬ ಅಧಿಪತಿಯು ಅವನ ಅಹಂಕಾರವನ್ನು ಅಡಗಿಸಿಬಿಡುವನು. ಆ ಅಹಂಕಾರವನ್ನು ತನ್ನ ಮೇಲೆ ಹಾಕಿಕೊಳ್ಳದೆ, ಅವನ ಮೇಲೆ ತಿರುಗಿಸಿ ಬಿಡುವನು.
೧೮ಆ ಮೇಲೆ ಅವನು ಕರಾವಳಿಯ ಕಡೆಗೆ ಕಣ್ಣಿಟ್ಟು ಅಲ್ಲಿ ಬಹಳ ದೇಶಗಳನ್ನು ಆಕ್ರಮಿಸುವನು. ಆದರೆ ಅವನು ಮಾಡುವ ನಿಂದೆಯನ್ನು ಒಬ್ಬ ಸರದಾರನು ನಿಲ್ಲಿಸಿ ಬಿಡುವುದಲ್ಲದೆ, ಅದು ಅವನ ಮೇಲೆಯೇ ತಿರುಗುವಂತೆ ಮಾಡುವನು.
19 ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು. ಆದರೆ ಅವನು ಎಡವಿಬಿದ್ದು, ಕಾಣದೆ ಹೋಗುವನು.
೧೯ಆ ಮೇಲೆ ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗಿ ಎಡವಿ ಬಿದ್ದು ಇಲ್ಲವಾಗುವನು.
20 ಅವನ ಉತ್ತರಾಧಿಕಾರಿಯು ಅರಸೊತ್ತಿಗೆಯ ಸೊಗಸನ್ನು ಕಾದುಕೊಳ್ಳುವುದಕ್ಕಾಗಿ ಸುಂಕ ವಸೂಲಿ ಮಾಡುವವನನ್ನು ಕಳುಹಿಸುವನು. ಆದರೂ ಕೆಲವೇ ವರ್ಷಗಳಲ್ಲಿ ಅವನು ನಾಶ ಹೊಂದುವನು. ಇದು ಕೋಪದಿಂದಾಗಲಿ ಇಲ್ಲವೆ ಯುದ್ಧದಿಂದಾಗಲಿ ಆಗುವುದಿಲ್ಲ.
೨೦ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು, ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇಮಿಸುವನು. ಅವನು ಕೆಲವು ದಿನಗಳೊಳಗೆ ನಾಶವಾಗುವನು. ಅವನ ನಾಶ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.
21 ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು. ಅವನಿಗೆ ರಾಜಮರ್ಯಾದೆಯನ್ನು ಕೊಡುವುದಿಲ್ಲ. ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
೨೧“ಅವನ ಸ್ಥಾನದಲ್ಲಿ ರಾಜ್ಯಪದವಿಗೆ ಹಕ್ಕುದಾರನಲ್ಲದ ಒಬ್ಬ ನೀಚನು ಎದ್ದು, ನೆಮ್ಮದಿಯ ಕಾಲದಲ್ಲಿ ಬಂದು ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
22 ಪ್ರವಾಹದಂತಿರುವ ಆ ಸೈನ್ಯವೂ, ಒಡಂಬಡಿಕೆಯ ರಾಜಕುಮಾರನೂ ಅವನ ರಭಸಕ್ಕೆ ಸಿಕ್ಕಿ ಒಡೆದುಹೋಗಿ ನಾಶವಾಗುವರು.
೨೨ತುಂಬಿ ತುಳುಕುವ ವ್ಯೂಹಗಳೂ, ದೇವರ ನಿಬಂಧನಾಧಿಪತಿಯೂ ಅವನ ರಭಸಕ್ಕೆ ಸಿಕ್ಕಿ ಹೊಡೆದುಕೊಂಡು ಹೋಗಿ ಭಂಗವಾಗುವರು.
23 ಅವನ ಸಂಗಡ ಒಪ್ಪಂದ ಮಾಡಿಕೊಂಡ ಮೇಲೆ ಕಪಟವಾಗಿ ನಡೆಯುವನು. ಕೆಲವು ಜನರ ಸಹಾಯದಿಂದ ಅಧಿಕಾರ ಪಡೆಯುವನು.
೨೩ಅವನ ಸಂಗಡ ಒಪ್ಪಂದ ಮಾಡಿಕೊಂಡವನಿಗೆ ಕೂಡಲೆ ಮೋಸ ಮಾಡುವನು; ಸ್ವಲ್ಪ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು.
24 ನೆಮ್ಮದಿಯ ಕಾಲದಲ್ಲಿ ಸಂಸ್ಥಾನಗಳ ಫಲವತ್ತಾದ ಪ್ರದೇಶಗಳಲ್ಲಿ ನುಗ್ಗಿ, ತಂದೆ ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು. ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು, ತನ್ನನ್ನು ಅವರಿಗೆ ಹಂಚುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.
೨೪ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು. ತಂದೆ, ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು, ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.
25 ಅವನು ದಕ್ಷಿಣದ ಅರಸನಿಗೆ ವಿರೋಧವಾಗಿ ತನ್ನ ಶಕ್ತಿಯಿಂದಲೂ ಧೈರ್ಯದಿಂದಲೂ ದೊಡ್ಡ ಸೈನ್ಯದ ಸಂಗಡ ಯುದ್ಧಕ್ಕೆ ಸನ್ನದ್ಧನಾಗುವನು, ಆದರೆ ನಿಲ್ಲಲಾರದೆ ಹೋಗುವನು. ಏಕೆಂದರೆ ಅವನಿಗೆ ವಿರೋಧವಾಗಿ ಕುಯುಕ್ತಿಗಳನ್ನು ಕಲ್ಪಿಸುವರು.
೨೫ಅವನು ದೊಡ್ಡ ದಂಡೆತ್ತಿ ದಕ್ಷಿಣ ದಿಕ್ಕಿನ ರಾಜನ ವಿರುದ್ಧವಾಗಿ ತನ್ನ ರಾಜ್ಯದ ಬಲವನ್ನೆಲ್ಲ ಕೂಡಿಸಿ ಧೈರ್ಯದಿಂದ ಹೊರಡುವನು. ದಕ್ಷಿಣ ದಿಕ್ಕಿನ ರಾಜನು ಅತ್ಯಧಿಕ ಬಲವುಳ್ಳ ಮಹಾ ಸೈನ್ಯಸಮೇತನಾಗಿ ಯುದ್ಧಕ್ಕೆ ಹೊರಡುವನು. ಆದರೆ ನಿಲ್ಲಲಾರನು, ಅವನು ಸೋಲುವ ಹಾಗೆ ಕುಯುಕ್ತಿಗಳನ್ನು ಕಲ್ಪಿಸುವನು.
26 ಅವನ ರಾಜ ಭೋಜನದಲ್ಲಿ ಭಾಗವನ್ನು ತಿಂದವರೇ, ಅವನನ್ನು ನಾಶಮಾಡುವರು. ಅವನ ಸೈನ್ಯವು ತುಂಬಿ ತುಳುಕುವುದು ಮತ್ತು ಅನೇಕರು ಹತರಾಗುವರು.
೨೬ಅವನ ಮೃಷ್ಟಾನ್ನವನ್ನು ತಿನ್ನುವವರೇ ಅವನನ್ನು ಭಂಗಪಡಿಸುವರು; ಉತ್ತರ ದಿಕ್ಕಿನ ರಾಜನ ಸೈನ್ಯವು ತುಂಬಿ ತುಳುಕುವುದು. ಬಹಳ ಜನರು ಹತರಾಗಿ ಬೀಳುವರು.
27 ಈ ಇಬ್ಬರ ಅರಸನ ಹೃದಯಗಳು ಕೇಡನ್ನು ಮಾಡುವಂತವುಗಳಾಗಿರುವುವು. ಒಂದೇ ಮೇಜಿನಲ್ಲಿ ಕುಳಿತು ಒಬ್ಬರಿಗೊಬ್ಬರು ಸುಳ್ಳು ಹೇಳುವರು. ಆದರೆ ಅದು ಅನುಕೂಲವಾಗದು. ಏಕೆಂದರೆ ಅದು ಹೇಗಾದರೂ ನಿಶ್ಚಿತ ಕಾಲದಲ್ಲಿಯೇ ಅಂತ್ಯವಾಗುವುದು.
೨೭ಆ ಇಬ್ಬರು ರಾಜರು ಒಬ್ಬರಿಗೊಬ್ಬರು ಕೇಡಿನ ಮನಸುಳ್ಳವರಾಗಿ ಸಹ ಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತನಾಡಿಕೊಳ್ಳುವರು. ಆದರೆ ಏನೂ ಸಾಗದು, ಪರಿಣಾಮವು ನಿಶ್ಚಿತ ಕಾಲದಲ್ಲೇ ತಲೆದೋರುವುದು.
28 ಆಗ ಉತ್ತರದ ಅರಸನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂದಿರುಗುವನು, ಆದರೆ ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವುದು; ಅವನು ಇದಕ್ಕೆ ವಿರುದ್ಧವಾಗಿ ಕಾರ್ಯಸಾಧಿಸಿ, ಸ್ವಂತ ದೇಶಕ್ಕೆ ಹಿಂದಿರುಗುವನು.
೨೮ಅನಂತರ ಉತ್ತರ ದಿಕ್ಕಿನ ರಾಜನು ಬಹಳ ಆಸ್ತಿಯನ್ನು ಐಶ್ವರ್ಯವನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂದಿರುಗುವನು. ಅವನ ಮನಸ್ಸು ಪರಿಶುದ್ಧ ನಿಬಂಧನೆಗೆ ವಿರುದ್ಧವಾಗಿರುವುದು. ಅವನು ತನಗೆ ಇಷ್ಟ ಬಂದಂತೆ ಮಾಡಿ ಮತ್ತೆ ಸ್ವದೇಶವನ್ನು ಸೇರುವನು.
29 ನೇಮಕವಾದ ಕಾಲದಲ್ಲಿಯೇ ಅವನು ಹಿಂದಿರುಗಿ ದಕ್ಷಿಣಕ್ಕೆ ಬರುವನು, ಆದರೆ ಮೊದಲು ಆದಂತೆ ಎರಡನೆಯ ಸಾರಿ ಆಗುವುದಿಲ್ಲ.
೨೯ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣ ದಿಕ್ಕಿನ ದೇಶದ ಮೇಲೆ ನುಗ್ಗುವನು. ಆದರೆ ಮೊದಲು ಆದಂತೆಯೇ ಎರಡನೆಯ ಸಲ ಆಗದು.
30 ಏಕೆಂದರೆ ಕಿತ್ತೀಮಿನ ಹಡಗುಗಳು ಅವನಿಗೆ ವಿರೋಧವಾಗಿ ಬರುವುವು. ಆದ್ದರಿಂದ ಅವನು ಎದೆಗುಂದಿ, ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿ ಕೋಪಿಸಿಕೊಳ್ಳುವನು. ಹಿಂದಿರುಗಿ ಬಂದು ಪರಿಶುದ್ಧ ಒಡಂಬಡಿಕೆಯನ್ನು ತೊರೆದವರಿಗೆ ದಯೆ ತೋರಿಸುವನು.
೩೦ಅವನ ವಿರುದ್ಧವಾಗಿ ಕಿತ್ತೀಮಿನ ಹಡಗುಗಳು ಬರಲು, ಅವನು ಎದೆಗುಂದಿ ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ತನಗೆ ಇಷ್ಟ ಬಂದಂತೆ ಮಾಡುವನು. ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆಯನ್ನು ತೊರೆದವರನ್ನು ಕಟಾಕ್ಷಿಸುವನು.
31 ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲಸುಮಾಡಿ, ನಿತ್ಯ ಯಜ್ಞವನ್ನು ನಿಲ್ಲಿಸುವುದು. ಹಾಳುಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವುದು.
೩೧ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯಹೋಮವನ್ನು ನೀಗಿಸಿ, ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವುದು.
32 ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆಯುವವರನ್ನು ನಯವಾದ ಮಾತುಗಳಿಂದ ಕೆಡಿಸುವನು, ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಎದುರಿಸುವರು.
೩೨ನಿಬಂಧನ ದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.
33 ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದರೂ ಖಡ್ಗದಿಂದಲೂ ಬೆಂಕಿಯಿಂದಲೂ ಸೆರೆಯಿಂದಲೂ ಕೊಳ್ಳೆಯಿಂದಲೂ ಕೆಲಕಾಲ ಸಿಕ್ಕಿ ಬೀಳುವರು.
೩೩ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ, ಅವರು ಬಹಳ ದಿನ ಕತ್ತಿ, ಬೆಂಕಿ, ಸೆರೆಸೂರೆಗಳಿಗೆ ಸಿಕ್ಕಿ ಬೀಳುವರು.
34 ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು, ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಸೇರಿಕೊಳ್ಳುವರು.
೩೪ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು. ಆ ಮೇಲೆ ಬಹಳ ಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.
35 ಇದಲ್ಲದೆ ಅಂತ್ಯಕಾಲದವರೆಗೆ ಜ್ಞಾನಿಗಳನ್ನು ಶೋಧಿಸುವುದಕ್ಕೂ ಅದರಲ್ಲಿ ಅನೇಕರು ಬೀಳುವರು; ಏಕೆಂದರೆ ಇದು ನೇಮಕವಾದ ಸಮಯದಲ್ಲಿ ಬರುವುದು.
೩೫ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು.
36 ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು. ತನ್ನನ್ನು ತಾನೇ ಹೆಚ್ಚಿಸಿಕೊಂಡು, ತನ್ನನ್ನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನನ್ನಾಗಿ ಮಾಡಿಕೊಂಡು, ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ, ರೋಷವು ತೀರುವವರೆಗೂ ವೃದ್ಧಿಯಾಗಿರುವನು. ಹೀಗೆ ನಿಶ್ಚಯವಾದದ್ದು ನೆರವೇರಲೇಬೇಕು.
೩೬“ರಾಜನು ತನ್ನ ಇಚ್ಛಾನುಸಾರ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಗರ್ವದಿಂದ ಉಬ್ಬಿ, ದೇವಾಧಿ ದೇವನನ್ನು ಮಿತಿಮೀರಿ ದೂಷಿಸಿ ನಿಮ್ಮ ಮೇಲಿನ ದೈವ ಕೋಪವು ತೀರುವ ತನಕ ವೃದ್ಧಿಯಾಗಿರುವನು. ದೈವಸಂಕಲ್ಪವು ನೆರವೇರಲೇ ಬೇಕು.
37 ಅವನು ತನ್ನ ಪಿತೃಗಳ ದೇವರನ್ನಾಗಲೀ, ಸ್ತ್ರೀಯರಿಂದ ಅಪೇಕ್ಷಿಸಿದವರನ್ನಾಗಲೀ ಅವನು ಲಕ್ಷಿಸುವುದಿಲ್ಲ, ಯಾವ ದೇವರನ್ನೂ ಲಕ್ಷಿಸುವುದಿಲ್ಲ; ಆದರೆ ಅವನು ಎಲ್ಲವುಗಳಿಗಿಂತ ಹೆಚ್ಚಿ, ತನ್ನನ್ನು ತಾನೇ ಹೆಚ್ಚಿಸಿಕೊಂಡಿದ್ದಾನೆ.
೩೭ಅವನು ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಸ್ತ್ರೀಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನಾಗಲಿ ಲಕ್ಷಿಸುವುದಿಲ್ಲ. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.
38 ಅವನು ಕುಲ ದೇವರಿಗೆ ಬದಲಾಗಿ, ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿ ಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
೩೮ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿ ದೇವರನ್ನು ಘನಪಡಿಸುವನು; ಪೂರ್ವಿಕರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ವಸ್ತುಗಳಿಂದಲೂ ಸೇವಿಸುವನು.
39 ಅವನು ಅನ್ಯ ದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ತನಗೆ ಮೆಚ್ಚುಗೆಯಾದವರನ್ನು ಹೆಚ್ಚಾಗಿ ಸತ್ಕರಿಸುವನು. ಅವರನ್ನು ಬಹುಜನರ ಮೇಲೆ ಅಧಿಕಾರಿಗಳನ್ನಾಗಿ ನೇಮಿಸುವನು. ಹಣಕ್ಕಾಗಿ ದೇಶವನ್ನೇ ಹಂಚಿಬಿಡುವನು.
೩೯ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು; ಯಾರನ್ನು ಕಟಾಕ್ಷಿಸುವನೋ ಅವರಿಗೆ ಮಹಿಮೆ ಹೆಚ್ಚುವುದು; ಬಹಳ ಜನರ ಮೇಲೆ ಆಳ್ವಿಕೆಯನ್ನು ನಡೆಸುವನು; ದೇಶವನ್ನು ಕ್ರಯಕ್ಕೆ ಹಂಚುವನು.
40 ಅಂತ್ಯಕಾಲದಲ್ಲಿ ದಕ್ಷಿಣದ ಅರಸನು ಅವನ ಮೇಲೆ ಬೀಳುವನು; ಉತ್ತರದ ಅರಸನು ರಥಗಳೊಂದಿಗೂ, ಸವಾರರೊಂದಿಗೂ, ಅನೇಕ ಹಡಗುಗಳೊಂದಿಗೂ ಸುಳಿಗಾಳಿಯಂತೆ ಅವನಿಗೆ ವಿರೋಧವಾಗಿ ದೇಶಗಳನ್ನು ಪ್ರವೇಶಿಸಿ ಪ್ರಳಯದಂತೆ ಹಾದುಹೋಗುವನು.
೪೦“ಅಂತ್ಯಕಾಲದಲ್ಲಿ ದಕ್ಷಿಣ ದಿಕ್ಕಿನ ರಾಜನು ಉತ್ತರ ದಿಕ್ಕಿನ ರಾಜನ ಮೇಲೆ ಬೀಳಲು, ಅವನು ರಥಾಶ್ವಬಲಗಳಿಂದಲೂ, ಬಹು ನಾವೆಗಳಿಂದಲೂ ಕೂಡಿ ದಕ್ಷಿಣ ದಿಕ್ಕಿನ ರಾಜನ ಮೇಲೆ ರಭಸವಾಗಿ ಬಿದ್ದು ಎಲ್ಲಾ ನಾಡುನಾಡುಗಳಲ್ಲಿ ನುಗ್ಗಿ, ತುಂಬಿ ತುಳುಕಿ ಹರಡಿಕೊಳ್ಳುವನು.
41 ಅವನು ರಮ್ಯವಾದ ದೇಶದೊಳಕ್ಕೂ ನುಗ್ಗುವನು; ಅನೇಕ ದೇಶಗಳನ್ನು ನಾಶಮಾಡುವನು; ಆದರೆ ಎದೋಮು, ಮೋವಾಬು ಮತ್ತು ಅಮ್ಮೋನಿಯರಲ್ಲಿ ಮುಖ್ಯಸ್ಥರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.
೪೧ಅಂದ ಚಂದದ ದೇಶಕ್ಕೂ ನುಗ್ಗುವನು. ಅನೇಕ ಸೀಮೆಗಳು ಅವನಿಂದ ಹಾಳಾಗುವವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಅವನ ಕೈಯಿಂದ ತಪ್ಪಿಸಿಕೊಳ್ಳುವರು.
42 ಅವನು ಇತರ ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಈಜಿಪ್ಟ್ ದೇಶವು ತಪ್ಪಿಸಿಕೊಳ್ಳದು.
೪೨ಅವನು ದೇಶಗಳ ಮೇಲೆ ಕೈಮಾಡಲು ಐಗುಪ್ತ ದೇಶವೂ ತನ್ನನ್ನು ರಕ್ಷಿಸಿಕೊಳ್ಳದು.
43 ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ, ಈಜಿಪ್ಟಿನ ಎಲ್ಲಾ ಅಮೂಲ್ಯ ವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವುದು. ಲಿಬಿಯದವರೂ ಕೂಷ್ಯರೂ ಅವನಿಗೆ ಅಧೀನರಾಗುವರು.
೪೩ಅವನು ಬೆಳ್ಳಿ ಬಂಗಾರಗಳ ನಿಧಿನಿಕ್ಷೇಪಗಳನ್ನೂ, ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು. ಲೂಬ್ಯರೂ, ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.
44 ಆದರೆ ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವುವು. ಆದ್ದರಿಂದ ಅವನು ಮಹಾ ಉಗ್ರವಾಗಿ ಅನೇಕರನ್ನು ಸಂಹರಿಸುವುದಕ್ಕೂ, ನಿರ್ಮೂಲ ಮಾಡುವುದಕ್ಕೂ ಹೊರಡುವನು.
೪೪ಹೀಗಿರಲು ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವುದು ಅವನು ಅತಿ ರೋಷಗೊಂಡು ಬಹಳ ಜನರನ್ನು ಧ್ವಂಸ ಮಾಡಿ, ನಿರ್ನಾಮ ಮಾಡುವುದಕ್ಕೆ ಹೊರಡುವನು.
45 ಅವನು ತನ್ನ ರಾಜ ಗುಡಾರಗಳನ್ನು ಸಮುದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು. ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
೪೫ಸಮುದ್ರಕ್ಕೂ, ಅಂದ ಚಂದದ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು. ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯ ಮಾಡರು.”

< ದಾನಿಯೇಲನು 11 >