< ಆಮೋಸನು 8 >
1 ಸಾರ್ವಭೌಮ ಯೆಹೋವ ದೇವರು ನನಗೆ ಮಾಗಿದ ಹಣ್ಣುಗಳುಳ್ಳ ಬುಟ್ಟಿ ತೋರಿಸಿದರು.
೧ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಇಗೋ, ಮಾಗಿದ ಹಣ್ಣಿನ ಪುಟ್ಟಿಯನ್ನು ಕಂಡೆನು!
2 ಆಗ, “ಆಮೋಸನೇ, ಏನು ನೋಡುತ್ತಿರುವೆ?” ಎಂದು ಕೇಳಿದರು. ನಾನು, “ಮಾಗಿದ ಹಣ್ಣುಗಳ ಬುಟ್ಟಿ,” ಎಂದೆನು. ಆಗ ಯೆಹೋವ ದೇವರು ನನಗೆ, “ನನ್ನ ಜನರಾದ ಇಸ್ರಾಯೇಲರ ಸಮಯವು ಮಾಗುತ್ತಾ ಬಂತು. ನಾನು ಇನ್ನು ಮೇಲೆ ಅವರನ್ನು ಉಳಿಸುವುದಿಲ್ಲ,” ಎಂದು ಹೇಳಿದರು.
೨ಆತನು ನನಗೆ, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಲು, ನಾನು ಅದಕ್ಕೆ, “ಮಾಗಿದ ಹಣ್ಣಿನ ಪುಟ್ಟಿ” ಎಂದೆನು. ಆಗ ಯೆಹೋವನು ನನಗೆ ಹೀಗೆ ಹೇಳಿದನು, “ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ. ಇನ್ನು ಮೇಲೆ ನಾನು ಅವರನ್ನು ಉಳಿಸುವುದಿಲ್ಲ.
3 “ಆ ದಿನದಲ್ಲಿ ದೇವಾಲಯದ ಹಾಡುಗಳು ವಿಲಾಪವಾಗುವುವು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. “ಎಲ್ಲಾ ಕಡೆಗಳಲ್ಲಿ ಅನೇಕ ಹೆಣಗಳು ಬಿದ್ದಿರುವುವು. ಮೌನವಾಗಿರಿ!”
೩ಆ ದಿನದಲ್ಲಿ ದೇವಾಲಯದ ಹಾಡುಗಳು ಕಿರಿಚಾಟವಾಗುವವು” ಕರ್ತನಾದ ಯೆಹೋವನು ಹೀಗೆ ನುಡಿಯುತ್ತಾನೆ, “ಆಗ ಹೆಣಗಳು ಹೆಚ್ಚುವವು, ಅವುಗಳನ್ನು ಎಲ್ಲಾ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೆ ಬಿಸಾಡಿಬಿಡುವರು!”
4 ಬಡವರನ್ನು ನುಂಗುವವರೇ, ನಾಡಿನ ಬಡವರನ್ನು ಮುಗಿಸಿಬಿಡಬೇಕೆಂದಿರುವವರೇ, ಇದನ್ನು ಕೇಳಿರಿ.
೪“ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ.
5 ನೀವು ಹೇಳುವುದೇನೆಂದರೆ, “ನಾವು ಧಾನ್ಯವನ್ನು ಮಾರುವ ಹಾಗೆ ಅಮಾವಾಸ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಗೋಧಿಯನ್ನು ಮಾರುವ ಹಾಗೆ ಸಬ್ಬತ್ ದಿನವು ಯಾವಾಗ ಮುಗಿಯುವುದು? ಕೊಳಗವನ್ನು ಚಿಕ್ಕದಾಗಿಯೂ ತೊಲಗಳನ್ನು ದೊಡ್ಡದಾಗಿಯೂ, ಕಳ್ಳತಕ್ಕಡಿಗಳನ್ನು ಮೋಸಕ್ಕಾಗಿಯೂ ಮಾಡೋಣವೆಂದೂ,
೫ಬಡವರನ್ನು ಬೆಳ್ಳಿಗೂ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಗಳ ಜೋಡಿಗೂ ಕೊಂಡುಕೊಳ್ಳೋಣ; ಗೋದಿಯ ನುಚ್ಚುನ್ನು ಮಾರಿಬಿಡೋಣ” ಎಂದು ಹೇಳುತ್ತೀರಿ ಅಲ್ಲವೇ?
6 ಬಡವರನ್ನು ಬೆಳ್ಳಿಗೂ ದರಿದ್ರರನ್ನು ಕೆರಗಳ ಜೋಡಿಗೂ ಕೊಂಡುಕೊಳ್ಳುವೆವು, ಹೌದು ಗೋಧಿಯ ಕಸವನ್ನು ಸಹ ಮಾರೋಣ.”
೬ದಿಕ್ಕಿಲ್ಲದವರನ್ನು ತುಳಿದು ಬಿಡುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ!
7 ಯೆಹೋವ ದೇವರು ಯಾಕೋಬಿನ ಅಹಂಕಾರದ ಮೇಲೆ ಆಣೆ ಇಟ್ಟುಕೊಂಡು ಹೇಳುವುದೇನೆಂದರೆ: “ನಿಶ್ಚಯವಾಗಿಯೂ ನಾನು ಎಂದೆಂದಿಗೂ ಅವರ ಯಾವ ಕ್ರಿಯೆಗಳನ್ನೂ ಮರೆಯುವುದಿಲ್ಲ.
೭ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ, “ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ಮರೆತುಬಿಡುವುದಿಲ್ಲ”
8 “ಇದಕ್ಕಾಗಿ ದೇಶವು ನಡುಗುವುದಿಲ್ಲವೇ? ಅದರಲ್ಲಿ ವಾಸಿಸುವವರೆಲ್ಲರೂ ಗೋಳಾಡುವುದಿಲ್ಲವೇ? ದೇಶವೆಲ್ಲಾ ನೈಲ್ ನದಿಯ ಪ್ರವಾಹದಂತೆ ಉಬ್ಬಿ ಅಲ್ಲೊಲಕಲ್ಲೋಲವಾಗುವುದು, ಈಜಿಪ್ಟಿನ ನದಿಯಂತೆ ಇಳಿದುಹೋಗುವದು.
೮ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು.
9 “ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ, “ಆ ದಿನದಲ್ಲಿ,” ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡುತ್ತೇನೆ.
೯ಆ ದಿನದಲ್ಲಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ಸೂರ್ಯನನ್ನು ಮಧ್ಯಾಹ್ನಕ್ಕೆ ಮುಣುಗಿಸುವೆನು, ಭೂಮಿಯನ್ನು ಹಗಲಿನಲ್ಲೇ ಕತ್ತಲು ಮಾಡುವೆನು.
10 ನಿಮ್ಮ ಹಬ್ಬಗಳನ್ನು ದುಃಖಕ್ಕೂ, ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು. ಎಲ್ಲರೂ ಸೊಂಟಗಳಿಗೆ ಗೋಣಿತಟ್ಟನ್ನು ಕಟ್ಟಿಕೊಂಡು, ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು. ಒಬ್ಬನೇ ಮಗನಿಗಾಗಿ ಗೋಳಾಡುವ ಸಮಯದಂತೆ ಮಾಡುವೆನು. ಅದರ ಅಂತ್ಯವು ಕಹಿಯಾದ ದಿನದಂತಿರುವುದು.
೧೦ನಿಮ್ಮ ಉತ್ಸವಗಳನ್ನು ದುಃಖಕ್ಕೆ ಮಾರ್ಪಡಿಸುವೆನು ಮತ್ತು ನಿಮ್ಮ ಹರ್ಷಗೀತೆಗಳನ್ನೆಲ್ಲಾ ಶೋಕಗೀತೆಗೆ ತಿರುಗಿಸುವೆನು. ಎಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆಬೋಳಿಸಿಕೊಳ್ಳುವಂತೆ ಮಾಡುವೆನು. ನಿಮ್ಮ ಪ್ರಲಾಪವು ಏಕಪುತ್ರಶೋಕಕ್ಕೆ ಸಮಾನವಾಗುವುದು, ಅದು ಆದ ಮೇಲೆಯೂ ಶೋಕವು ಇದ್ದೇ ಇರುವುದು.
11 ದಿನಗಳು ಬರುವುವು, ಆಗ ನಾನು ದೇಶದಲ್ಲಿ ಕ್ಷಾಮವನ್ನು ಕಳುಹಿಸುವೆನು. ಅದು ರೊಟ್ಟಿಯ ಕ್ಷಾಮವಲ್ಲ, ನೀರಿನ ದಾಹದ ಬರವಲ್ಲ. ಯೆಹೋವ ದೇವರ ವಾಕ್ಯಗಳನ್ನು ಕೇಳಬೇಕೆಂಬ ಕ್ಷಾಮವನ್ನೇ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ.
೧೧ಇಗೋ, ಆ ದಿನಗಳು ಬರುವವು.” ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತವೆ, ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ.
12 ಆಗ ಅವರು ಸಮುದ್ರದಿಂದ ಸಮುದ್ರಕ್ಕೂ, ಉತ್ತರದಿಂದ ಪೂರ್ವಕ್ಕೂ ಅಲೆದು ಯೆಹೋವ ದೇವರ ವಾಕ್ಯವನ್ನು ಹುಡುಕುವುದಕ್ಕೆ ಅತ್ತಿತ್ತ ಓಡಾಡಿ, ಅದನ್ನು ಕಾಣದೆ ಹೋಗುವರು.
೧೨ಸಮುದ್ರದಿಂದ ಸಮುದ್ರಕ್ಕೆ; ಉತ್ತರದಿಂದ ಪೂರ್ವಕ್ಕೂ ಬಳಲುತ್ತಾ ಹೋಗುವರು ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕುವುದಿಲ್ಲ.
13 “ಆ ದಿನದಲ್ಲಿ, “ಸೌಂದರ್ಯವತಿಯರಾದ ಕನ್ಯೆಯರು ಮತ್ತು ಯೌವನಸ್ಥರು ಸಹ ದಾಹದಿಂದ ಕುಗ್ಗಿ ಹೋಗುವರು.
೧೩ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು.
14 ಅವರು ಸಮಾರ್ಯದ ಪಾಪದ ಮೇಲೆ ಆಣೆ ಇಟ್ಟುಕೊಂಡು, ದಾನೇ, ನಿನ್ನ ದೇವರ ಜೀವದಾಣೆ ಎಂದೂ, ಬೇರ್ಷೆಬದ ಮಾರ್ಗದ ಜೀವದಾಣೆ ಎಂದೂ ಹೇಳುವರು. ಅವರು ಬಿದ್ದು ಮತ್ತೆ ಮೇಲೆ ಏಳಲಾರರು.”
೧೪‘ದಾನೇ, ನಿನ್ನ ದೇವರ ಜೀವದಾಣೆ’ ಎಂದೂ ‘ಮತ್ತು ಬೇರ್ಷೆಬದ ಮಾರ್ಗದ ಜೀವದಾಣೆ’” ಎಂದೂ ಹೇಳುವರು. ಅವರು ಸಮಾರ್ಯದ ಪಾಪದ ಮೇಲೆ ಪ್ರಮಾಣಮಾಡಿಕೊಂಡು, ಅವರು ಬಿದ್ದು ಮತ್ತೆ ಮೇಲೆ ಏಳಲಾರರು.