< ಅಪೊಸ್ತಲರ ಕೃತ್ಯಗಳ 3 >

1 ಒಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಾರ್ಥನೆಯ ಸಮಯದಲ್ಲಿ ಪೇತ್ರ ಹಾಗೂ ಯೋಹಾನನು ದೇವಾಲಯಕ್ಕೆ ಹೋದರು.
ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು.
2 ದೇವಾಲಯದೊಳಗೆ ಹೋಗುವವರಿಂದ ಭಿಕ್ಷೆ ಬೇಡಲು ಪ್ರತಿದಿನ “ಸುಂದರದ್ವಾರ” ಎಂದು ಕರೆಯಲಾಗುತ್ತಿದ್ದ ದೇವಾಲಯದ ದ್ವಾರದ ಬಳಿಯಲ್ಲಿ ಹುಟ್ಟುಕುಂಟನೊಬ್ಬನನ್ನು ಕೆಲವರು ಹೊತ್ತುಕೊಂಡು ಬಂದು ಬಿಡುತ್ತಿದ್ದರು.
ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು.
3 ಅವನು ಪೇತ್ರ, ಯೋಹಾನರು ದೇವಾಲಯದೊಳಗೆ ಪ್ರವೇಶಿಸುತ್ತಿರುವುದನ್ನು ಕಂಡು, ಭಿಕ್ಷೆ ಬೇಡಿದನು.
ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು.
4 ಪೇತ್ರ ಯೋಹಾನರಿಬ್ಬರೂ ಭಿಕ್ಷುಕನನ್ನು ನೇರವಾಗಿ ದೃಷ್ಟಿಸಿ ನೋಡಿದರು. ಪೇತ್ರನು ಭಿಕ್ಷುಕನಿಗೆ, “ನಮ್ಮನ್ನು ನೋಡು!” ಎಂದು ಹೇಳಿದನು.
ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ “ನಮ್ಮನ್ನು ನೋಡು” ಅಂದನು.
5 ಅವರಿಂದ ಏನಾದರೂ ದೊರೆಯುವುದೆಂದು ನಿರೀಕ್ಷಿಸಿ ಅವನು ಅವರ ಕಡೆಗೆ ಲಕ್ಷ್ಯವಿಟ್ಟು ನೋಡಿದನು.
ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು.
6 ಆಗ ಪೇತ್ರನು, “ಬೆಳ್ಳಿಬಂಗಾರ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಲ್ಲಿ, ಎದ್ದು ನಡೆ,” ಎಂದು ಹೇಳಿ,
ಆಗ ಪೇತ್ರನು “ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ” ಎಂದು ಹೇಳಿ,
7 ಬಲಗೈ ಹಿಡಿದೆಬ್ಬಿಸಿದಾಗ ಕೂಡಲೇ ಆ ಮನುಷ್ಯನ ಪಾದ ಮತ್ತು ಹರಡುಗಳು ಬಲಗೊಂಡವು.
ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು.
8 ಅವನು ಜಿಗಿದು ನಿಂತು ನಡೆದಾಡಲು ಪ್ರಾರಂಭಿಸಿದನು. ಆಮೇಲೆ ನಡೆಯುತ್ತಾ, ಕುಣಿಯುತ್ತಾ, ದೇವರ ಸ್ತೋತ್ರ ಮಾಡುತ್ತಾ, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.
ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು.
9 ಅವನು ನಡೆಯುವುದನ್ನೂ ದೇವರ ಸ್ತೋತ್ರ ಮಾಡುತ್ತಿರುವುದನ್ನೂ ಜನರೆಲ್ಲರೂ ಕಂಡರು.
ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ;
10 ಅವನು ದೇವಾಲಯದ “ಸುಂದರದ್ವಾರದ” ಬಳಿಯಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಮನುಷ್ಯನೇ ಎಂದು ಗುರುತಿಸಿದರು. ಅವನಿಗೆ ಸಂಭವಿಸಿದ್ದರ ಬಗ್ಗೆ ಅವರು ವಿಸ್ಮಯಗೊಂಡು ಬೆರಗಾದರು.
೧೦ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು.
11 ಭಿಕ್ಷುಕನು ಇನ್ನೂ ಪೇತ್ರ ಯೋಹಾನರೊಂದಿಗೆ ಇದ್ದಾಗ, ಆಶ್ಚರ್ಯಚಕಿತರಾದ ಜನರೆಲ್ಲರು ಅವರಿದ್ದ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಓಡಿ ಬಂದರು.
೧೧ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.
12 ಜನರನ್ನು ಕಂಡು ಪೇತ್ರನು ಅವರಿಗೆ ಹೇಳಿದ ಮಾತುಗಳಿವು: “ಇಸ್ರಾಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮ ಸ್ವಂತ ಬಲದಿಂದಾಗಲಿ, ಭಕ್ತಿಯಿಂದಾಗಲಿ ಈ ಮನುಷ್ಯನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಿ ನಮ್ಮ ಕಡೆಗೆ ಏಕೆ ನೋಡುತ್ತಿರುವಿರಿ?
೧೨ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.
13 ಅಬ್ರಹಾಮನ, ಇಸಾಕನ, ಯಾಕೋಬನ ದೇವರು, ನಮ್ಮ ಪಿತೃಗಳ ದೇವರು, ತಮ್ಮ ಸೇವಕರಾದ ಯೇಸುವನ್ನು ಮಹಿಮೆಪಡಿಸಿದ್ದಾರೆ. ಅವರನ್ನು ಬಿಡಿಸಬೇಕೆಂದು ಪಿಲಾತನು ನಿರ್ಣಯಿಸಿಕೊಂಡಿದ್ದರೂ ನೀವು ಯೇಸುವನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಟ್ಟು ಪಿಲಾತನ ಮುಂದೆ ಅವರನ್ನು ನಿರಾಕರಿಸಿದಿರಿ.
೧೩ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ.
14 ಆದರೆ ನೀವು ಪವಿತ್ರರೂ ನೀತಿವಂತರೂ ಆಗಿರುವ ಯೇಸುವನ್ನು ನಿರಾಕರಿಸಿ ಆ ಕೊಲೆಗಾರನನ್ನು ನಿಮಗೆ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಂಡಿರಿ.
೧೪ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ.
15 ಜೀವದ ಒಡೆಯನನ್ನು ನೀವು ಕೊಂದಿರಿ. ದೇವರಾದರೋ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರು. ಇದಕ್ಕೆ ನಾವೇ ಸಾಕ್ಷಿಗಳು.
೧೫ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು.
16 ಯೇಸುವಿನ ನಾಮದಲ್ಲಿಟ್ಟ ವಿಶ್ವಾಸದಿಂದಲೇ ನೀವು ಕಂಡು ತಿಳಿದಿರುವ ಈ ಮನುಷ್ಯನು ಬಲಹೊಂದಿದ್ದಾನೆ. ಯೇಸುವಿನ ನಾಮವೂ ಅವರ ಮೂಲಕವಾಗಿ ಬರುವ ನಂಬಿಕೆಯೂ ಇವನಿಗೆ ಸಂಪೂರ್ಣ ಸ್ವಸ್ಥತೆಯನ್ನು ತಂದುಕೊಟ್ಟಿದೆ. ನೀವೆಲ್ಲರೂ ಇದನ್ನು ನೋಡಿದ್ದೀರಿ.
೧೬ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು.
17 “ಈಗ, ಪ್ರಿಯರೇ, ನೀವು ಅಜ್ಞಾನದಿಂದ ಹಾಗೆ ವರ್ತಿಸಿದಿರೆಂದು ನನಗೆ ಗೊತ್ತು. ಹಾಗೆಯೇ ನಿಮ್ಮ ನಾಯಕರೂ ಮಾಡಿದರು.
೧೭“ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು.
18 ಆದರೆ ತಮ್ಮ ಕ್ರಿಸ್ತ ಯೇಸು ಹಿಂಸೆಗೊಳಗಾಗಬೇಕೆಂದು, ಎಲ್ಲಾ ಪ್ರವಾದಿಗಳ ಬಾಯಿಯ ಮುಖಾಂತರ ದೇವರು ಮುಂತಿಳಿಸಿದ್ದನ್ನು ಈ ರೀತಿ ನೆರವೇರಿಸಿದರು.
೧೮ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು.
19 ಆದ್ದರಿಂದ ನಿಮ್ಮ ಪಾಪಗಳು ತೊಳೆದುಹೋಗುವಂತೆ ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಿರಿ. ಆಗ ನಿಮ್ಮ ಪಾಪಗಳು ಪರಿಹಾರವಾಗಿ ಕರ್ತ ದೇವರಿಂದ ವಿಶ್ರಾಂತಿಯ ಕಾಲಗಳು ನಿಮಗೆ ಒದಗಿ ಬರುವವು.
೧೯ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ
20 ದೇವರು ನಿಮಗೋಸ್ಕರ ನೇಮಕವಾಗಿರುವ ಕ್ರಿಸ್ತ ಯೇಸುವನ್ನು ಕಳುಹಿಸಿಕೊಡುವರು.
೨೦ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು.
21 ದೇವರು ತಮ್ಮ ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲದ ಹಿಂದೆಯೇ ವಾಗ್ದಾನಮಾಡಿದ ಪ್ರಕಾರ, ಅವರು ಸಮಸ್ತವನ್ನು ಪುನಃಸ್ಥಾಪಿಸಿದರು. ಆ ಕಾಲ ಬರುವವರೆಗೆ ಕ್ರಿಸ್ತ ಯೇಸು ಪರಲೋಕದಲ್ಲಿಯೇ ಇರುವರು. (aiōn g165)
೨೧ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. (aiōn g165)
22 ಮೋಶೆಯು ಹೇಳಿದ್ದೇನೆಂದರೆ: ‘ನಿಮ್ಮ ಕರ್ತದೇವರು ನಿಮ್ಮ ಸ್ವಂತ ಸಹೋದರರೊಳಗಿಂದ ನನ್ನಂಥ ಒಬ್ಬ ಪ್ರವಾದಿಯನ್ನು ನಿಮಗಾಗಿ ಎಬ್ಬಿಸುವರು. ಅವರು ನಿಮಗೆ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗಿರಬೇಕು.
೨೨ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.
23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ತನ್ನ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.’
೨೩ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ.
24 “ಸಮುಯೇಲನು ಮೊದಲುಗೊಂಡು, ಮಾತನಾಡಿದ ಎಲ್ಲಾ ಪ್ರವಾದಿಗಳು ಕ್ರಮವಾಗಿ ಈ ದಿನಗಳನ್ನು ಕುರಿತು ಮುಂತಿಳಿಸಿದ್ದಾರೆ.
೨೪ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು.
25 ನೀವು ಪ್ರವಾದಿಗಳ ಮತ್ತು ನಿಮ್ಮ ಪಿತೃಗಳೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಯ ಮಕ್ಕಳಾಗಿದ್ದೀರಿ. ಏಕೆಂದರೆ ದೇವರು, ‘ನಿನ್ನ ಸಂತತಿಯ ಮುಖಾಂತರವಾಗಿ ಭೂಲೋಕದ ಎಲ್ಲಾ ಕುಟುಂಬಗಳಿಗೆ ಆಶೀರ್ವಾದವುಂಟಾಗುವುದು,’ ಎಂದು ಅಬ್ರಹಾಮನಿಗೆ ಹೇಳಿದರು.
೨೫ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ.
26 ದೇವರು ತಮ್ಮ ಸೇವಕರಾದ ಯೇಸುವನ್ನು ಜೀವಂತವಾಗಿ ಎಬ್ಬಿಸಿದಾಗ, ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ದುರ್ಮಾರ್ಗಗಳಿಂದ ತಿರುಗಿಸಿ ನಿಮ್ಮನ್ನು ಮೊಟ್ಟಮೊದಲು ಆಶೀರ್ವದಿಸಲು ಯೇಸುವನ್ನು ನಿಮ್ಮ ಬಳಿಗೆ ಕಳುಹಿಸಿದರು.”
೨೬ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.

< ಅಪೊಸ್ತಲರ ಕೃತ್ಯಗಳ 3 >