< ಅಪೊಸ್ತಲರ ಕೃತ್ಯಗಳ 15 >
1 ಕೆಲವು ಜನರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು ಅಲ್ಲಿಯ ಸಹೋದರರಿಗೆ, “ಮೋಶೆ ಬೋಧಿಸಿದ ಪದ್ಧತಿಯಂತೆ ನೀವು ಸುನ್ನತಿ ಹೊಂದದಿದ್ದರೆ ನೀವು ರಕ್ಷಣೆ ಹೊಂದಲಾರಿರಿ,” ಎಂದು ಬೋಧಿಸತೊಡಗಿದರು.
2 ಇದರಿಂದ ಪೌಲ, ಬಾರ್ನಬರು ಅವರೊಂದಿಗೆ ಭಿನ್ನಾಭಿಪ್ರಾಯವುಳ್ಳವರಾಗಿ ತೀವ್ರ ವಿವಾದವುಂಟಾಯಿತು. ಈ ಪ್ರಶ್ನೆಯ ವಿಷಯದಲ್ಲಿ ಅಪೊಸ್ತಲರನ್ನೂ ಹಿರಿಯರನ್ನೂ ಭೇಟಿಯಾಗಲು, ತಮ್ಮಲ್ಲಿ ಬೇರೆ ಕೆಲವರು ಪೌಲ, ಬಾರ್ನಬರೊಂದಿಗೆ ಯೆರೂಸಲೇಮಿಗೆ ಹೋಗಬೇಕೆಂದು ನಿರ್ಣಯಿಸಲಾಯಿತು.
3 ಆದ್ದರಿಂದ ಸಭೆಯವರು ಅವರನ್ನು ಸಾಗಕಳುಹಿಸಲು, ಅವರು ಫೊಯಿನಿಕೆಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣ ಮಾಡುವಾಗ, ಯೆಹೂದ್ಯರಲ್ಲದವರ ಪರಿವರ್ತನೆಯನ್ನು ವಿವರವಾಗಿ ಅಲ್ಲಿಯವರೆಗೆ ತಿಳಿಸುತ್ತಾ ಸಹೋದರರೆಲ್ಲರಿಗೂ ಮಹಾಸಂತೋಷವನ್ನುಂಟುಮಾಡಿದರು.
4 ಅವರು ಯೆರೂಸಲೇಮನ್ನು ತಲುಪಿದಾಗ, ಸಭೆಯವರು, ಅಪೊಸ್ತಲರು ಹಾಗೂ ಹಿರಿಯರು ಅವರನ್ನು ಸ್ವಾಗತಿಸಿದರು. ದೇವರು ತಮ್ಮ ಮುಖಾಂತರವಾಗಿ ಮಾಡಿದ್ದನ್ನು ಅವರು ತಿಳಿಸಿದರು.
5 ಆದರೆ ಫರಿಸಾಯರ ಪಂಗಡಕ್ಕೆ ಸೇರಿದ ಕೆಲವು ವಿಶ್ವಾಸಿಗಳು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದವರು ಸುನ್ನತಿ ಹೊಂದಬೇಕು ಮತ್ತು ಮೋಶೆಯ ನಿಯಮಕ್ಕೆ ವಿಧೇಯರಾಗಬೇಕು,” ಎಂದರು.
6 ಅಪೊಸ್ತಲರು ಮತ್ತು ಹಿರಿಯರು ಈ ವಿಷಯದ ಕುರಿತಾಗಿ ವಿಚಾರಿಸಲು ಸಭೆ ಸೇರಿದರು.
7 ಬಹಳ ಚರ್ಚೆಯಾಗುತ್ತಿರುವಾಗ ಪೇತ್ರನು ಎದ್ದು ನಿಂತು ಅವರಿಗೆ, “ಸಹೋದರರೇ, ಯೆಹೂದ್ಯರಲ್ಲದವರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂಬ ಉದ್ದೇಶದಿಂದ ನಿಮ್ಮೊಳಗಿಂದ ನನ್ನನ್ನು ದೇವರು ಬಹು ದಿನಗಳ ಹಿಂದೆ ಆಯ್ದುಕೊಂಡರೆಂಬುದು ನಿಮಗೆ ತಿಳಿದೇ ಇದೆ.
8 ಹೃದಯವನ್ನು ಬಲ್ಲ ದೇವರು, ನಮಗೆ ಪವಿತ್ರಾತ್ಮ ದೇವರನ್ನು ಕೊಟ್ಟಂತೆಯೇ ಯಹೂದ್ಯರಲ್ಲದವರಿಗೂ ದಯಪಾಲಿಸಿ, ಅವರ ಬಗ್ಗೆ ಸಾಕ್ಷಿಕೊಟ್ಟರು.
9 ದೇವರು ಅವರಿಗೂ ನಮಗೂ ಮಧ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೆ, ವಿಶ್ವಾಸದ ಮೂಲಕ ಅವರ ಹೃದಯಗಳನ್ನು ಶುದ್ಧೀಕರಿಸಿದರು.
10 ಆದ್ದರಿಂದ ನಾವಾಗಲಿ, ನಮ್ಮ ಪಿತೃಗಳಾಗಲಿ, ಹೊರಲಾರದ ನೊಗವನ್ನು ಯೆಹೂದ್ಯರಲ್ಲದ ಶಿಷ್ಯರ ಹೆಗಲ ಮೇಲೆ ಹಾಕಿ, ಈಗ ಏಕೆ ದೇವರನ್ನು ಪರೀಕ್ಷಿಸಲು ಪ್ರಯತ್ನಿಸುತ್ತೀರಿ?
11 ಆದರೆ ನಾವು ರಕ್ಷಣೆ ಹೊಂದಿದ್ದು ನಮ್ಮ ಕರ್ತ ಯೇಸುವಿನ ಕೃಪೆಯಿಂದಲೇ, ಹಾಗೆಯೇ ಅವರೂ ಹೊಂದುವರು ಎಂಬುದು ನಮ್ಮ ನಂಬಿಕೆ,” ಎಂದನು.
12 ಇದಕ್ಕೆ ಜನರು ಮೌನವಾಗಿದ್ದು, ಯೆಹೂದ್ಯರಲ್ಲದವರ ಮಧ್ಯದಲ್ಲಿ ದೇವರು ತಮ್ಮ ಮೂಲಕ ಮಾಡಿದ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಕುರಿತು ಬಾರ್ನಬ ಮತ್ತು ಪೌಲ ಹೇಳುವುದನ್ನು ಕೇಳಿಸಿಕೊಂಡರು.
13 ಅವರು ಹೇಳಿ ಮುಗಿಸಿದಾಗ, ಯಾಕೋಬನು ಮಾತನಾಡಿ, “ಸಹೋದರರೇ, ನನ್ನ ಮಾತುಗಳನ್ನು ಆಲಿಸಿರಿ,
14 ದೇವರು ಯೆಹೂದ್ಯರಲ್ಲದವರೊಳಗಿಂದ ತಮ್ಮ ಹೆಸರಿಗಾಗಿ ಜನರನ್ನು ಆರಿಸಿಕೊಳ್ಳಲು ಹೇಗೆ ದಯೆತೋರಿಸಿದರೆಂದು ಸೀಮೋನನು ಈಗಾಗಲೇ ನಮಗೆ ವಿವರಿಸಿದ್ದಾನೆ.
15 ಪ್ರವಾದಿಗಳು ಬರೆದಿರುವ ಮಾತುಗಳು ಇದಕ್ಕೆ ಸರಿಹೊಂದುತ್ತವೆ:
16 “‘ಇದಾದನಂತರ ನಾನು ಮರಳಿ ಬರುವೆನು. ಬಿದ್ದುಹೋದ ದಾವೀದನ ಗುಡಾರವನ್ನು ಕಟ್ಟುವೆನು. ಪಾಳುಬಿದ್ದದ್ದನ್ನು ಜೀರ್ಣೋದ್ಧಾರ ಮಾಡಿ, ಅದನ್ನು ಪುನರುಜ್ಜೀವನಗೊಳಿಸುವೆನು.
17 ಆಗ ಉಳಿದಿರುವ ಜನರಲ್ಲಿ ಯೆಹೂದ್ಯರಲ್ಲದವರೂ ನನ್ನ ಹೆಸರೆತ್ತಿ ಕರೆಯುವವರೂ ಸಹ ಕರ್ತದೇವರನ್ನು ಹುಡುಕುವರು,’
18 ಎಂದು ನಿತ್ಯತ್ವವನ್ನು ತಿಳಿದಿರುವವರೂ ಇವುಗಳನ್ನೆಲ್ಲಾ ಮಾಡುವವರೂ ಆಗಿರುವ ದೇವರು ಹೇಳುತ್ತಾರೆ. (aiōn )
19 “ಆದ್ದರಿಂದ, ದೇವರ ಕಡೆಗೆ ತಿರುಗುತ್ತಿರುವ ಯೆಹೂದ್ಯರಲ್ಲದವರಿಗೆ ನಾವು ತೊಂದರೆ ಮಾಡಬಾರದು ಎಂಬುದೇ ನನ್ನ ತೀರ್ಮಾನ.
20 ಅದರ ಬದಲಾಗಿ ನಾವು ಅವರಿಗೆ, ದೇವರಲ್ಲದವುಗಳಿಂದ ಮಲಿನವಾದ ಆಹಾರದಿಂದಲೂ ಅನೈತಿಕತೆಯಿಂದಲೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ರಕ್ತದಿಂದಲೂ ದೂರವಿರಬೇಕು.
21 ಏಕೆಂದರೆ ಆರಂಭ ಕಾಲದಿಂದಲೂ ಪ್ರತಿಯೊಂದು ಪಟ್ಟಣದಲ್ಲಿ ಮೋಶೆಯ ಗ್ರಂಥವನ್ನು ಬೋಧಿಸಲಾಗುತ್ತದೆ ಹಾಗೂ ಪ್ರತಿ ಸಬ್ಬತ್ ದಿನ ಸಭಾಮಂದಿರಗಳಲ್ಲಿ ಓದಲಾಗುತ್ತದೆ,” ಎಂದು ಹೇಳಿದನು.
22 ಆಗ ಅಪೊಸ್ತಲರು ಮತ್ತು ಹಿರಿಯರು ಇಡೀ ಸಭೆಯ ಸಮ್ಮತಿ ಪಡೆದು, ಸಹೋದರರಲ್ಲಿ ನಾಯಕರಾಗಿದ್ದ ಬಾರ್ಸಬನೆಂದು ಕರೆಯಲಾದ ಯೂದ ಮತ್ತು ಸೀಲ ಎಂಬಿಬ್ಬರನ್ನು ಆಯ್ದುಕೊಂಡರು. ಅವರನ್ನು ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಲು ನಿರ್ಧರಿಸಿದರು.
23 ಅವರ ಕೈಯಿಂದ ಬರೆದು ಕೊಟ್ಟದ್ದೇನೆಂದರೆ: ಅಪೊಸ್ತಲರು ಹಾಗೂ ಹಿರಿಯ ಸಹೋದರರು, ಅಂತಿಯೋಕ್ಯ, ಸಿರಿಯ ಮತ್ತು ಕಿಲಿಕ್ಯದಲ್ಲಿ ವಾಸಿಸುವ ಯೆಹೂದ್ಯರಲ್ಲದವರೊಳಗಿನ ಸಹೋದರರಿಗೆ: ವಂದನೆಗಳು.
24 ನಮ್ಮಿಂದ ಕೆಲವರು ನಮ್ಮ ಅಪ್ಪಣೆಯಿಲ್ಲದೆ ತಮ್ಮ ಮಾತುಗಳಿಂದ ನಿಮ್ಮ ಮನಸ್ಸಿಗೆ ತೊಂದರೆ ಕೊಟ್ಟರೆಂದು ನಾವು ಕೇಳಿದೆವು.
25 ಆದ್ದರಿಂದ ಕೆಲವರನ್ನು ಆಯ್ದುಕೊಂಡು ಅವರನ್ನು ನಮ್ಮ ಪ್ರಿಯರಾದ ಬಾರ್ನಬ ಮತ್ತು ಪೌಲರೊಂದಿಗೆ ನಿಮ್ಮ ಬಳಿಗೆ ಕಳುಹಿಸುವುದು ಯುಕ್ತವೆಂದು ಒಂದೇ ಮನಸ್ಸಾಗಿರುವ ನಮಗೆ ತೋಚಿತು.
26 ಅವರು ನಮ್ಮ ಕರ್ತ ಕ್ರಿಸ್ತ ಯೇಸುವಿನ ಹೆಸರಿನ ಪರವಾಗಿ ತಮ್ಮ ಪ್ರಾಣಗಳನ್ನೇ ಬಿಟ್ಟು ಕೊಡುವವರಾಗಿದ್ದಾರೆ.
27 ಆದ್ದರಿಂದ ನಾವು ಈ ಸಂಗತಿಗಳನ್ನು ಬಾಯಿಮಾತುಗಳಿಂದ ಪ್ರಕಟಿಸುವುದಕ್ಕಾಗಿ ಯೂದ ಮತ್ತು ಸೀಲರನ್ನು ಕಳುಹಿಸುತ್ತಿದ್ದೇವೆ.
28 ಈ ಅಗತ್ಯವಾದವುಗಳನ್ನು ಬಿಟ್ಟು ಬೇರೆಯವುಗಳನ್ನು ನಿಮ್ಮ ಮೇಲೆ ಹೊರೆಯಾಗಿ ಹಾಕಬಾರದೆಂಬುದು, ಪವಿತ್ರಾತ್ಮರಿಗೂ ನಮಗೂ ಒಳ್ಳೆಯದೆಂದು ತೋಚಿತು.
29 ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕು. ಇವುಗಳಿಂದ ನಿಮ್ಮನ್ನು ಕಾಪಾಡಿಕೊಳ್ಳುವುದರಿಂದ ನಿಮಗೆ ಒಳಿತಾಗುವುದು. ನಿಮಗೆ ಶುಭವಾಗಲಿ.
30 ಅವರು ಹೊರಟುಹೋಗಿ ಅಂತಿಯೋಕ್ಯವನ್ನು ತಲುಪಿದರು. ಅಲ್ಲಿ ದೇವಸಭೆಯನ್ನು ಕೂಡಿಸಿ ಆ ಪತ್ರವನ್ನು ಕೊಟ್ಟರು.
31 ಸಭೆಯವರು ಅದನ್ನು ಓದಿ ಅದರಲ್ಲಿದ್ದ ಆದರಣೆ ಮಾತುಗಳಿಗಾಗಿ ಸಂತೋಷಪಟ್ಟರು.
32 ಯೂದ ಮತ್ತು ಸೀಲರು ಸ್ವತಃ ಪ್ರವಾದಿಗಳಾಗಿದ್ದುದರಿಂದ ಅಲ್ಲಿದ್ದ ವಿಶ್ವಾಸಿಗಳನ್ನು ಅನೇಕ ಬುದ್ಧಿವಾದಗಳಿಂದ ಬಲಪಡಿಸಿದರು.
33 ಅವರು ಕೆಲವು ದಿನಗಳು ಇದ್ದ ನಂತರ ಅಲ್ಲಿಯ ವಿಶ್ವಾಸಿಗಳನ್ನು ಬೀಳ್ಕೊಟ್ಟು ತಮ್ಮನ್ನು ಕಳುಹಿಸಿಕೊಟ್ಟವರ ಬಳಿಗೆ ಹಿಂದಿರುಗಿದರು.
34 ಸೀಲನು ಅಲ್ಲಿಯೇ ಇರಲು ತೀರ್ಮಾನಿಸಿದನು.
35 ಆದರೆ ಪೌಲನು ಮತ್ತು ಬಾರ್ನಬರು ಅಂತಿಯೋಕ್ಯದಲ್ಲಿಯೇ ಉಳಿದುಕೊಂಡು ಅನೇಕರಿಗೆ ಕರ್ತ ಯೇಸುವಿನ ವಾಕ್ಯವನ್ನು ಬೋಧಿಸುತ್ತಾ ಸುವಾರ್ತೆ ಸಾರಿದರು.
36 ಕೆಲವು ದಿನಗಳ ನಂತರ ಪೌಲನು ಬಾರ್ನಬನಿಗೆ, “ನಾವು ಕರ್ತ ಯೇಸುವಿನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ಹೋಗಿ ಅಲ್ಲಿದ್ದ ವಿಶ್ವಾಸಿಗಳನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ,” ಎಂದು ಹೇಳಿದನು.
37 ಬಾರ್ನಬನು ಮಾರ್ಕ ಎಂಬ ಹೆಸರಿನ ಯೋಹಾನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬಯಸಿದನು,
38 ಆದರೆ ಪಂಫುಲ್ಯದಲ್ಲಿ ತಮ್ಮನ್ನು ಬಿಟ್ಟು ತಮ್ಮೊಂದಿಗೆ ಸೇವೆಗೆ ಸಹಕರಿಸದೆ ಹೋದ ಮಾರ್ಕನನ್ನು ಕರೆದುಕೊಂಡು ಹೋಗುವುದು ಸರಿಯಲ್ಲವೆಂದು ಪೌಲನು ಭಾವಿಸಿದನು.
39 ಇದರಿಂದ ಅವರಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾಗಿ ಹೋಗಬೇಕಾಯಿತು. ಬಾರ್ನಬನು ಮಾರ್ಕನನ್ನು ಕರೆದುಕೊಂಡು ಸೈಪ್ರಸ್ ದ್ವೀಪಕ್ಕೆ ಪ್ರಯಾಣಮಾಡಿದನು,
40 ಆದರೆ ಪೌಲನು ಸೀಲನನ್ನು ಆರಿಸಿಕೊಂಡು ಹೋದನು. ವಿಶ್ವಾಸಿಗಳಿಂದ ಅವನನ್ನು ಕರ್ತ ಯೇಸುವಿನ ಕೃಪೆಗೆ ಒಪ್ಪಿಸಿ, ಕಳುಹಿಸಿಕೊಟ್ಟುರು.
41 ಪೌಲನು ಸಿರಿಯ ಮತ್ತು ಕಿಲಿಕ್ಯ ಸೀಮೆಗಳನ್ನು ಹಾದುಹೋಗುತ್ತಾ, ಅಲ್ಲಿದ್ದ ಸಭೆಗಳ ನಂಬಿಕೆಯನ್ನು ಬಲಪಡಿಸಿದನು.