< ಸಮುವೇಲನು - ದ್ವಿತೀಯ ಭಾಗ 21 >
1 ದಾವೀದನ ದಿವಸಗಳಲ್ಲಿ ವರ್ಷದಿಂದ ವರ್ಷಕ್ಕೆ ಮೂರು ವರ್ಷ ಬರ ಉಂಟಾಗಿತ್ತು. ಆಗ ದಾವೀದನು ಯೆಹೋವ ದೇವರನ್ನು ವಿಚಾರಿಸಿದನು. ಆಗ ಯೆಹೋವ ದೇವರು, “ಸೌಲನು ಗಿಬ್ಯೋನ್ಯರನ್ನು ಕೊಂದುಹಾಕಿದ್ದರಿಂದ ಅವನಿಗೋಸ್ಕರವೂ ರಕ್ತಾಪರಾಧವುಳ್ಳ ಅವನ ಮನೆಗೋಸ್ಕರವೂ ಈ ಬರ ಬಂದಿದೆ,” ಎಂದು ಹೇಳಿದರು.
2 ಆಗ ಅರಸನಾದ ದಾವೀದನು ಗಿಬ್ಯೋನ್ಯರನ್ನು ಕರೆಕಳುಹಿಸಿದನು. ಗಿಬ್ಯೋನ್ಯರು ಇಸ್ರಾಯೇಲರಿಗೆ ಸೇರಿದವರಲ್ಲ. ಅಮೋರಿಯರಲ್ಲಿ ಉಳಿದ ಜನರಾಗಿದ್ದರು. ಅವರನ್ನು ಕೊಲ್ಲುವುದಿಲ್ಲವೆಂದು ಇಸ್ರಾಯೇಲರು ಆಣೆ ಇಟ್ಟಿದ್ದರು. ಆದರೆ ಸೌಲನು ಇಸ್ರಾಯೇಲರಿಗಾಗಿಯೂ, ಯೆಹೂದದವರಿಗಾಗಿಯೂ ತನಗಿದ್ದ ಆಸಕ್ತಿಯಿಂದ ಅವರನ್ನು ಕೊಂದುಹಾಕಲು ಪ್ರಯತ್ನಮಾಡಿದ್ದನು.
3 ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಮಾಡಬೇಕಾದದ್ದೇನು? ನೀವು ಯೆಹೋವ ದೇವರ ಬಾಧ್ಯತೆಯನ್ನು ಆಶೀರ್ವದಿಸುವ ಹಾಗೆ, ನಾನು ಯಾವುದರಿಂದ ಪ್ರಾಯಶ್ಚಿತ್ತ ಮಾಡಲಿ,” ಎಂದು ಕೇಳಿದನು.
4 ಆಗ ಗಿಬ್ಯೋನ್ಯರು ಅವನಿಗೆ, “ಸೌಲನ ಕೈಯಿಂದಲಾದರೂ, ಅವನ ಮನೆಯವರ ಕೈಯಿಂದಲಾದರೂ, ನಮಗೆ ಬೆಳ್ಳಿಯಾದರೂ, ಬಂಗಾರವಾದರೂ ಬೇಡ. ನೀನು ಈ ಕಾರ್ಯಕ್ಕೋಸ್ಕರ ಇಸ್ರಾಯೇಲಿನಲ್ಲಿ ಒಬ್ಬನನ್ನಾದರೂ ಕೊಂದುಹಾಕಬೇಕೆಂಬುದು ನಮಗೆ ಅಗತ್ಯವಿಲ್ಲ,” ಎಂದರು. ಆಗ ಅವನು, “ನೀವು ನನಗೆ ಏನು ಹೇಳುತ್ತೀರೋ, ನಾನು ನಿಮಗೆ ಮಾಡುವೆನು,” ಎಂದನು.
5 ಅವರು ಅರಸನಿಗೆ, “ಯಾವನು ನಮ್ಮನ್ನು ಸಂಹರಿಸಿಬಿಟ್ಟು, ನಾವು ಇಸ್ರಾಯೇಲಿನ ಸಮಸ್ತ ಮೇರೆಗಳೊಳಗೆ ನಿಲ್ಲದೆ ನಾಶವಾಗುವ ಹಾಗೆ ನಮಗೆ ಕೇಡು ಮಾಡಲು ನೆನಸಿದನೋ,
6 ಅವನ ಪುತ್ರರಲ್ಲಿ ಏಳುಮಂದಿಯನ್ನು ನಮಗೆ ಒಪ್ಪಿಸು. ಆಗ ನಾವು ಯೆಹೋವ ದೇವರು ಆಯ್ದುಕೊಂಡ ಸೌಲನ ಊರಾದ ಗಿಬೆಯದಲ್ಲಿ ಅವರನ್ನು ಯೆಹೋವ ದೇವರಿಗೋಸ್ಕರ ಗಲ್ಲಿಗೆ ಹಾಕುವೆವು,” ಎಂದರು. ಅದಕ್ಕೆ ಅರಸನು, “ನಾನು ಒಪ್ಪಿಸಿಕೊಡುವೆನು,” ಎಂದನು.
7 ಆದರೆ ತಮಗೂ, ದಾವೀದನಿಗೂ, ಸೌಲನ ಮಗ ಯೋನಾತಾನನಿಗೂ ಯೆಹೋವ ದೇವರನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ, ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ,
8 ಅಯ್ಯಾಹನ ಮಗಳಾಗಿರುವ ರಿಚ್ಪಳು ಸೌಲನಿಗೆ ಹೆತ್ತ ಅವಳ ಇಬ್ಬರು ಮಕ್ಕಳಾದ ಅರ್ಮೋನಿಯನ್ನೂ, ಮತ್ತೊಬ್ಬ ಮೆಫೀಬೋಶೆತನನ್ನೂ, ಸೌಲನ ಮಗಳಾಗಿರುವ ಮೇರಬಳು ಮೆಹೋಲದವನಾದ ಬರ್ಜಿಲ್ಲೈಯ ಮಗನಾಗಿರುವ ಅದ್ರಿಯೇಲನಿಗೆ ಸಾಕಿದ ಐದು ಮಂದಿ ಮಕ್ಕಳನ್ನೂ ಹಿಡಿದುಕೊಂಡು,
9 ಅವರನ್ನು ಗಿಬ್ಯೋನ್ಯರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಇವರನ್ನು ಕೊಂದು, ಯೆಹೋವ ದೇವರ ಮುಂದೆ ಬೆಟ್ಟದ ಮೇಲೆ ನೇತುಹಾಕಿದರು. ಈ ಏಳುಮಂದಿಯೂ ಒಂದೇ ಸಾರಿ ಹತರಾದರು. ಇವರನ್ನು ಕೊಂದಾಗ ಜವೆಗೋಧಿ ಸುಗ್ಗಿಯ ಆರಂಭವಾಗಿತ್ತು.
10 ಆಗ ಅಯ್ಯಾಹನ ಮಗಳಾದ ರಿಚ್ಪಳು ಗೋಣಿತಟ್ಟನ್ನು ತೆಗೆದುಕೊಂಡುಹೋಗಿ, ಗುಡ್ಡದ ಮೇಲೆ ಅದನ್ನು ತನಗೋಸ್ಕರ ಹಾಸಿ ಅದರ ಮೇಲೆ ಕುಳಿತುಕೊಂಡಳು. ಸುಗ್ಗಿಯ ದಿವಸ ಮೊದಲ್ಗೊಂಡು ಆಕಾಶದಿಂದ ಶವಗಳ ಮೇಲೆ ಮಳೆ ಬೀಳುವ ತನಕ, ಹಗಲಲ್ಲಿ ಆಕಾಶದ ಪಕ್ಷಿಗಳಾದರೂ, ರಾತ್ರಿಯಲ್ಲಿ ಕಾಡುಮೃಗಗಳಾದರೂ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11 ಅಯ್ಯಾಹನ ಮಗಳಾದ ರಿಚ್ಪಳೆಂಬ ಸೌಲನ ಉಪಪತ್ನಿ ಮಾಡಿದ್ದು ದಾವೀದನಿಗೆ ತಿಳಿಸಲಾಯಿತು.
12 ಆಗ ದಾವೀದನು ಹೋಗಿ ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕೆ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೌಲನನ್ನು ಸೋಲಿಸಿದ ನಂತರ, ಅವನ ಮತ್ತು ಅವನ ಮಗನಾದ ಯೋನಾತಾನನ ಶವಗಳನ್ನು ಬೇತ್ ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್ ಗಿಲ್ಯಾದಿನವರು ಅಲ್ಲಿಂದ ಆ ಶವಗಳನ್ನು ಕದ್ದುಕೊಂಡು ಹೋಗಿದ್ದರು.
13 ದಾವೀದನು ಸೌಲನ ಎಲುಬುಗಳನ್ನೂ ಅವನ ಮಗನಾದ ಯೋನಾತಾನನ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಆ ಮನುಷ್ಯರ ಎಲುಬುಗಳನ್ನೂ ಅವರಿಂದ ತೆಗೆದುಕೊಂಡನು.
14 ಅವುಗಳನ್ನು ಬೆನ್ಯಾಮೀನನ ದೇಶದ ಚೇಲದಲ್ಲಿರುವ ಸೌಲನ ತಂದೆಯಾದ ಕೀಷನ ಸಮಾಧಿಯಲ್ಲಿ ಹೂಳಿಟ್ಟರು. ಅವರು ಅರಸನು ಆಜ್ಞಾಪಿಸಿದ್ದನ್ನೆಲ್ಲಾ ತೀರಿಸಿದ ತರುವಾಯ, ದೇವರು ದೇಶಕ್ಕೋಸ್ಕರ ಮಾಡಿದ ಬಿನ್ನಹವನ್ನು ಕೇಳಿದರು.
15 ಫಿಲಿಷ್ಟಿಯರು ತಿರುಗಿ ಇಸ್ರಾಯೇಲರ ಮೇಲೆ ಯುದ್ಧಮಾಡಿದರು. ಆಗ ದಾವೀದನು ತನ್ನ ಜನರೊಂದಿಗೆ ಹೋಗಿ, ಫಿಲಿಷ್ಟಿಯರ ಸಂಗಡ ಯುದ್ಧಮಾಡಿದನು. ದಾವೀದನು ದಣಿದು ಹೋದನು.
16 ಆಗ ಮುನ್ನೂರು ಬೆಳ್ಳಿ ನಾಣ್ಯದ ತೂಕದ ಕಂಚು ಈಟಿಯುಳ್ಳ, ಹೊಸ ಖಡ್ಗವನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ರೆಫಾಯನ ಮಕ್ಕಳಲ್ಲಿ ಇಷ್ಬೀಬೆನೋಬನು ದಾವೀದನನ್ನು ಕೊಲ್ಲಬೇಕೆಂದಿದ್ದನು.
17 ಆದರೆ ಚೆರೂಯಳ ಮಗ ಅಬೀಷೈಯನು ಅವನಿಗೆ ಸಹಾಯವಾಗಿ ಬಂದು, ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿದನು. ಆಗ ದಾವೀದನ ಜನರು ಅವನಿಗೆ, “ಇಸ್ರಾಯೇಲಿನ ಬೆಳಕಾಗಿರುವ ನೀನು ಆರಿಹೋಗದಂತೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಬರಬೇಡ,” ಎಂದು ಆಣೆ ಇಟ್ಟರು.
18 ಇದರ ತರುವಾಯ, ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಮತ್ತೊಂದು ಯುದ್ಧನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19 ಅನಂತರ ಫಿಲಿಷ್ಟಿಯರ ಸಂಗಡ ಗೋಬದಲ್ಲಿ ಯುದ್ಧ ಉಂಟಾದಾಗ, ಬೇತ್ಲೆಹೇಮಿನವನಾದ ಯಾಯೀರನ ಮಗನಾದ ಎಲ್ಹನಾನನು ಗಿತ್ತೀಯನಾದ ಗೊಲ್ಯಾತನ ಸಹೋದರರನ್ನು ಕೊಂದನು. ಈ ಗೊಲ್ಯಾತನ ಈಟಿಯ ಹಿಡಿಕೆಯು ನೇಯುವವರ ಕುಂಟೆ ಕಟ್ಟಿಗೆಗೆ ಸಮನಾಗಿತ್ತು.
20 ಇನ್ನೊಂದು ಸಾರಿ ಗತ್ ಊರಿನಲ್ಲಿ ಯುದ್ಧ ಉಂಟಾದಾಗ, ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು. ಅವನ ಕೈಕಾಲುಗಳ ಬೆರಳುಗಳು ಆರಾರರಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನು ಸಹ ರೆಫಾಯನಿಗೆ ಹುಟ್ಟಿದವನಾಗಿದ್ದನು.
21 ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾದ ಶಿಮೆಯನ ಮಗನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.
22 ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ರೆಫಾಯರ ವಂಶಜರು. ಇವರು ದಾವೀದನಿಂದಲೂ ಅವನ ಜನರಿಂದಲೂ ಸಂಹಾರವಾಗಿ ಹೋದರು.