< ಸಮುವೇಲನು - ದ್ವಿತೀಯ ಭಾಗ 2 >
1 ಇದಾದ ಮೇಲೆ ದಾವೀದನು ಯೆಹೋವ ದೇವರನ್ನು, “ಯೆಹೂದದ ಪಟ್ಟಣಗಳಲ್ಲಿ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಿದನು. ಯೆಹೋವ ದೇವರು ಅವನಿಗೆ, “ಹೋಗು,” ಎಂದರು. ಅದಕ್ಕವನು, “ನಾನು ಎಲ್ಲಿಗೆ ಹೋಗಲಿ?” ಎಂದನು. ಅದಕ್ಕೆ ದೇವರು, “ಹೆಬ್ರೋನಿಗೆ,” ಎಂದರು.
೧ಅನಂತರ ದಾವೀದನು ಯೆಹೋವನನ್ನು, “ನಾನು ಯೆಹೂದ ದೇಶದ ಯಾವುದಾದರು ಒಂದು ಪಟ್ಟಣಕ್ಕೆ ಹೋಗಬಹುದೋ?” ಎಂದು ಕೇಳಲು ಆತನು ಹೋಗಬಹುದು ಅಂದನು. ಅವನು ತಿರುಗಿ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ ಹೆಬ್ರೋನಿಗೆ ಹೋಗು ಎಂದು ಉತ್ತರ ಸಿಕ್ಕಿತು.
2 ಹಾಗೆಯೇ ದಾವೀದನೂ, ಹಾಗೂ ಅವನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾಗಿರುವ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ವಿಧವೆಯಾಗಿದ್ದ ಅಬೀಗೈಲಳೂ ಅಲ್ಲಿಗೆ ಹೋದರು.
೨ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.
3 ಇದಲ್ಲದೆ ದಾವೀದನು ತನ್ನ ಸಂಗಡ ಇದ್ದ ಜನರನ್ನೂ, ಅವರವರ ಮನೆಯವರನ್ನೂ ಕರೆದುಕೊಂಡು ಹೋದನು. ಅವರು ಹೆಬ್ರೋನಿನ ಪಟ್ಟಣಗಳಲ್ಲಿ ವಾಸವಾಗಿದ್ದರು.
೩ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಮಾಡಿದರು.
4 ಆಗ ಯೆಹೂದನ ಮನುಷ್ಯರು ಹೆಬ್ರೋನಿಗೆ ಬಂದು ಅಲ್ಲಿ ದಾವೀದನನ್ನು ಯೆಹೂದದವರ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿಸಿದರು. ಯಾಬೇಷ್ ಗಿಲ್ಯಾದಿನವರು ಸೌಲನನ್ನು ಸಮಾಧಿಮಾಡಿದರೆಂದು ದಾವೀದನಿಗೆ ತಿಳಿಸಿದಾಗ,
೪ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ, ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದ್ ದೇಶದವರೇ ಎಂಬ ಸಂಗತಿಯು ದಾವೀದನಿಗೆ ಗೊತ್ತಾಯಿತು.
5 ದಾವೀದನು ಯಾಬೇಷ್ ಗಿಲ್ಯಾದಿನವರಿಗೆ ದೂತರನ್ನು ಕಳುಹಿಸಿ, “ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ, ಅವನನ್ನು ಸಮಾಧಿಮಾಡಿದ ಕಾರಣ, ಯೆಹೋವ ದೇವರಿಂದ ನಿಮಗೆ ಆಶೀರ್ವಾದವಾಗಲಿ.
೫ಆಗ ದಾವೀದನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ನಿಷ್ಠೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿ ಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಆಶೀರ್ವಾದವುಂಟಾಗಲಿ.
6 ಈಗ ಯೆಹೋವ ದೇವರು ನಿಮಗೆ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ, ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು.
೬ಯೆಹೋವನ ಒಡಂಬಡಿಕೆಯ ನಂಬಿಕೆ ಮತ್ತು ಸತ್ಯ ನಿಮ್ಮೊಂದಿಗಿರಲಿ. ಈ ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.
7 ನೀವು ಪರಾಕ್ರಮಶಾಲಿಗಳಾಗಿದ್ದು, ನಿಮ್ಮ ಕೈಗಳು ಬಲವಾಗಿರಲಿ. ಏಕೆಂದರೆ ನಿಮ್ಮ ಯಜಮಾನನಾದ ಸೌಲನು ಮರಣಹೊಂದಿದನು. ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕ ಮಾಡಿದರು,” ಎಂದನು.
೭ಯೆಹೂದ್ಯರು ನನ್ನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ನಿಮ್ಮ ಅರಸನಾದ ಸೌಲನು ಸತ್ತುಹೋದರೂ ನೀವು ಶೂರರಾಗಿರಿ, ನಿಮ್ಮ ಕೈಗಳು ಜೋಲುಬೀಳದಿರಲಿ” ಎಂದು ಹೇಳಿ ಕಳುಹಿಸಿದನು.
8 ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು.
೮ಸೌಲನ ಸೇನಾಧಿಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿಮಿಗೆ ಕರೆದುಕೊಂಡು ಹೋಗಿ
9 ಅಲ್ಲಿ ಅವನನ್ನು ಗಿಲ್ಯಾದ್, ಅಶೂರ್, ಇಜ್ರೆಯೇಲ್, ಎಫ್ರಾಯೀಮ್, ಬೆನ್ಯಾಮೀನ್ ಜನರ ಮೇಲೆಯೂ, ಇಸ್ರಾಯೇಲರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿದನು.
೯ಅವನನ್ನು ಗಿಲ್ಯಾದ್, ಆಶೇರ್, ಇಜ್ರೇಲ, ಎಫ್ರಾಯೀಮ್, ಬೆನ್ಯಾಮೀನ ಜನರಿಗೂ ಬೇರೆ ಎಲ್ಲಾ ಇಸ್ರಾಯೇಲರಿಗೂ ಅರಸನನ್ನಾಗಿ ಮಾಡಿದನು.
10 ಸೌಲನ ಮಗ ಈಷ್ಬೋಶೆತನು ಇಸ್ರಾಯೇಲಿನ ಮೇಲೆ ಆಳುವುದಕ್ಕೆ ಆರಂಭಿಸಿದಾಗ, ನಾಲ್ವತ್ತು ವರ್ಷ ಪ್ರಾಯದವನಾಗಿದ್ದು ಎರಡು ವರ್ಷ ಆಳಿದನು. ಆದರೆ ಯೆಹೂದ ಗೋತ್ರದವರು ದಾವೀದನನ್ನು ಹಿಂಬಾಲಿಸಿದರು.
೧೦ಸೌಲನ ಮಗನಾದ ಈಷ್ಬೋಶೆತನು ನಲ್ವತ್ತು ವರ್ಷದವನಾದಾಗ ಇಸ್ರಾಯೇಲರನ್ನು ಆಳತೊಡಗಿ ಎರಡು ವರ್ಷ ರಾಜ್ಯಭಾರ ಮಾಡಿದನು. ಯೆಹೂದ್ಯರು ಮಾತ್ರ ದಾವೀದನನ್ನು ಹಿಂಬಾಲಿಸಿದರು.
11 ದಾವೀದನು ಹೆಬ್ರೋನಿನಲ್ಲಿ ಯೆಹೂದ ಗೋತ್ರದವರ ಮೇಲೆ ಅರಸನಾಗಿದ್ದ ಕಾಲವು ಏಳು ವರ್ಷ ಆರು ತಿಂಗಳು.
೧೧ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿದ್ದದ್ದು ಏಳು ವರ್ಷ ಆರು ತಿಂಗಳುಗಳು.
12 ನೇರನ ಮಗನಾಗಿರುವ ಅಬ್ನೇರನೂ, ಸೌಲನ ಮಗ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದನು.
೧೨ಒಂದು ದಿನ ನೇರನ ಮಗನಾದ ಅಬ್ನೇರನೂ, ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.
13 ಚೆರೂಯಳ ಮಗ ಯೋವಾಬನೂ, ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಕೊಂಡರು. ಅವರು ಕೊಳದ ಆಚೆಯಲ್ಲಿಯೂ, ಇವರು ಕೊಳದ ಈಚೆಯಲ್ಲಿಯೂ ಕುಳಿತುಕೊಂಡರು.
೧೩ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿ, ಒಂದು ಗುಂಪು ಕೆರೆಯ ಈಚೆಯಲ್ಲಿಯೂ ಇನ್ನೊಂದು ಗುಂಪು ಆಚೆಯಲ್ಲಿಯೂ ಕುಳಿತುಕೊಂಡರು.
14 ಆಗ ಅಬ್ನೇರನು ಯೋವಾಬನಿಗೆ, “ಕೆಲವು ಜನ ಯುವಕರು ಎದ್ದು ನಮ್ಮ ಮುಂದೆ ಮುಷ್ಠಿ ಯುದ್ಧ ಸ್ಪರ್ಧಿಸಲಿ,” ಎಂದನು. ಅದಕ್ಕೆ ಯೋವಾಬನು, “ಅವರು ಹಾಗೆಯೇ ಮಾಡಲಿ,” ಎಂದನು.
೧೪ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದು ನಮ್ಮ ಮುಂದೆ ಸ್ಪರ್ಧಿಸಲಿ” ಎಂದು ಹೇಳಲು ಯೋವಾಬನು, “ಆಗಲಿ” ಅಂದನು.
15 ಆದ್ದರಿಂದ ಸೌಲನ ಮಗ ಈಷ್ಬೋಶೆತನ ಕಡೆಯವನಾದ ಬೆನ್ಯಾಮೀನ್ಯರಲ್ಲಿ ಹನ್ನೆರಡು ಮಂದಿಯೂ, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟುಬಂದು,
೧೫ಆಗ ಸೌಲನ ಮಗನಾದ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರು, ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಸಮಸಂಖ್ಯೆಯಾಗಿ ಹೊರಟು ಬಂದರು.
16 ಅವರಲ್ಲಿ ಒಬ್ಬರ ಪಕ್ಕೆಯಲ್ಲಿ ಒಬ್ಬರು ಖಡ್ಗವನ್ನು ತಿವಿದುದರಿಂದ ಎಲ್ಲರೂ ಸತ್ತುಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಅಂದರೆ, “ಹದಗತ್ತಿ ಕ್ಷೇತ್ರ” ಎಂದು ಹೆಸರಾಯಿತು.
೧೬ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆಹಿಡಿದು, ಕತ್ತಿಯಿಂದ ಪಕ್ಕೆಯಲ್ಲಿ ತಿವಿದಿದ್ದರಿಂದ ಎಲ್ಲರೂ ಸತ್ತು ಬಿದ್ದರು. ಆದ್ದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ “ಹೆಲ್ಕಾತ್ ಹಸ್ಸೂರಿಂ” ಎಂದು ಹೆಸರಾಯಿತು.
17 ಇದಲ್ಲದೆ, ಆ ದಿನದಲ್ಲಿ ಘೋರವಾದ ಯುದ್ಧವಾಯಿತು. ಅಬ್ನೇರನೂ, ಇಸ್ರಾಯೇಲರೂ ದಾವೀದನ ಸೇವಕರಿಂದ ಸೋತುಹೋದರು.
೧೭ಅನಂತರ ಆ ದಿನ ಘೋರ ಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ಯರೂ ದಾವೀದನ ಸೇವಕರಿಂದ ಸೋಲಿಸಲ್ಪಟ್ಟರು.
18 ಚೆರೂಯಳ ಮೂವರು ಮಕ್ಕಳಾದ ಯೋವಾಬನೂ, ಅಬೀಷೈಯನೂ, ಅಸಾಯೇಲನೂ ಅಲ್ಲಿ ಇದ್ದರು. ಅಸಾಯೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.
೧೮ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ, ಅಬೀಷೈ, ಅಸಾಹೇಲ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.
19 ಅಸಾಯೇಲನು ಅಬ್ನೇರನನ್ನು ಬಲಗಡೆಗಾದರೂ, ಎಡಗಡೆಗಾದರೂ ತಿರುಗದೆ ಬೆನ್ನಟ್ಟಿದನು.
೧೯ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೇ ಅಬ್ನೇರನನ್ನು ಹಿಂದಟ್ಟಿದನು.
20 ಆಗ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿ, “ನೀನು ಅಸಾಯೇಲನು ಅಲ್ಲವೇ?” ಎಂದನು. ಅದಕ್ಕವನು, “ನಾನೇ,” ಎಂದನು.
೨೦ಅಬ್ನೇರನು ಹಿಂತಿರುಗಿ ನೋಡಿ, “ನೀನು ಅಸಾಹೇಲನೋ?” ಎಂದು ಕೇಳಿದ್ದಕ್ಕೆ ಅವನು ಹೌದೆಂದು ಉತ್ತರಕೊಟ್ಟನು.
21 ಆಗ ಅಬ್ನೇರನು ಅವನಿಗೆ, “ನೀನು ಬಲಗಡೆಗಾದರೂ, ಎಡಗಡೆಗಾದರೂ ತಿರುಗು. ಯುವಕರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತೆಗೆದುಕೋ,” ಎಂದನು. ಆದರೆ ಅಸಾಯೇಲನು ಅವನನ್ನು ಹಿಂಬಾಲಿಸುವುದನ್ನು ಬಿಡಲೇ ಇಲ್ಲ.
೨೧ಆಗ ಅಬ್ನೇರನು ಅವನಿಗೆ, “ನನ್ನನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು ಸುಲಿದುಕೋ” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.
22 ಅಬ್ನೇರನು ಅಸಾಯೇಲನಿಗೆ, “ನನ್ನನ್ನು ಬೆನ್ನಟ್ಟುವುದನ್ನು ಬಿಟ್ಟುಬಿಡು, ನಾನು ಏಕೆ ನಿನ್ನನ್ನು ನೆಲಕ್ಕೆ ಹೊಡೆದು ಕೆಡವಿಬಿಡಬೇಕು? ನಾನು ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ?” ಎಂದನು.
೨೨ಅಬ್ನೇರನು ತಿರುಗಿ ಅಸಾಹೇಲನಿಗೆ, “ನನ್ನನ್ನು ಬಿಟ್ಟು ಹೋಗು, ನಾನೇಕೆ ನಿನ್ನನ್ನು ನೆಲಕ್ಕುರುಳಿಸಬೇಕು? ಹಾಗೆ ಮಾಡಿದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ಮುಖ ತೋರಿಸಲಿ” ಅಂದನು.
23 ಆದರೆ ಅಸಾಯೇಲನು ಒಪ್ಪದೆ ಹೋದದ್ದರಿಂದ, ಅಬ್ನೇರನು ತನ್ನ ಭರ್ಜಿಯ ಹಿಂಭಾಗದ ಮೊನೆಯಿಂದ ಅವನ ಹೊಟ್ಟೆಯೊಳಗೆ ತಿವಿಯಲು, ಅದು ಅವನ ಬೆನ್ನ ಹೊರಗೆ ತೂರಿ ಬಂತು. ಅವನು ಅಲ್ಲಿ ಬಿದ್ದು, ಅದೇ ಸ್ಥಳದಲ್ಲಿ ಸತ್ತನು. ಅಸಾಯೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.
೨೩ಅಸಾಹೇಲನು ಬಿಟ್ಟು ಹೋಗುವುದಕ್ಕೆ ಒಪ್ಪದ ಕಾರಣ ಅಬ್ನೇರನು ಬರ್ಜಿಯನ್ನು ಹಿಂದಿನಿಂದ ಅವನ ಹೊಟ್ಟೆಯೊಳಗೆ ತಿವಿದನು. ಬರ್ಜಿಯು ಅವನ ಬೆನ್ನಿನಿಂದ ಹಾಯ್ದು ಹೊರಗೆ ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತು ಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.
24 ಆದರೆ ಯೋವಾಬನೂ, ಅಬೀಷೈಯನೂ ಅಬ್ನೇರನನ್ನು ಹಿಂದಟ್ಟಿ, ಸೂರ್ಯ ಆಸ್ತಮಿಸುವವರೆಗೆ ಗಿಬ್ಯೋನಿನ ಮರುಭೂಮಿಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದವರೆಗೆ ಬಂದರು.
೨೪ಆದರೆ ಯೋವಾಬನೂ, ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು “ಅಮ್ಮಾ” ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮಾನವಾಯಿತು. ಆ ಗುಡ್ಡವು ಗಿಬ್ಯೋನಿನ ಅರಣ್ಯ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿರುತ್ತದೆ.
25 ಆಗ ಅಬ್ನೇರನ ಹಿಂದೆ ಬೆನ್ಯಾಮೀನನ ಜನರು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು, ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು.
೨೫ಬೆನ್ಯಾಮೀನ್ಯರು ಒಂದೇ ಗುಂಪಾಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.
26 ಆಗ ಅಬ್ನೇರನು ಯೋವಾಬನಿಗೆ, “ಖಡ್ಗವು ಯಾವಾಗಲೂ ನುಂಗಿ ಬಿಡುವುದೋ? ಅಂತ್ಯದಲ್ಲಿ ಅದು ಕಹಿತನಕ್ಕೆ ನಡೆಸುವುದೆಂದು ನಿನಗೆ ಗೊತ್ತಾಗಲಿಲ್ಲವೋ? ತಮ್ಮ ಸಹೋದರರನ್ನು ಹಿಂದಟ್ಟುವುದನ್ನು ಬಿಟ್ಟು ಹಿಂದಕ್ಕೆ ತಿರುಗುವಂತೆ ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದು ಕೂಗಿ ಹೇಳಿದನು.
೨೬ಆಗ ಅಬ್ನೇರನು, “ಯೋವಾಬನನ್ನು ಕತ್ತಿಯು ಯಾವಾಗಲೂ ತಿನ್ನುತ್ತಲೇ ಇರಬೇಕೋ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೋ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವಿ” ಎಂದನು.
27 ಅದಕ್ಕೆ ಯೋವಾಬನು, “ದೇವರ ಜೀವದಾಣೆ, ನೀನು ಮಾತನಾಡದೆ ಹೋದರೆ, ನಿಶ್ಚಯವಾಗಿ ಪ್ರತಿ ಮನುಷ್ಯನು ಉದಯದವರೆಗೆ ತನ್ನ ಸಹೋದರನನ್ನು ಹಿಂದಟ್ಟಿ ಹೋಗುತ್ತಿದ್ದನು,” ಎಂದನು.
೨೭ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ ಜನರು ನಾಳೆ ಬೆಳಗಾಗುವವರೆಗೆ ತಮ್ಮ ಬಂಧುಗಳನ್ನು ಹಿಂದಟ್ಟದೆ ಬಿಡುವುದಿಲ್ಲ” ಎಂದು ಉತ್ತರಕೊಟ್ಟು ಕೂಡಲೇ ತುತ್ತೂರಿಯನ್ನು ಊದಿಸಿದನು.
28 ಹೀಗೆ ಯೋವಾಬನು ತುತೂರಿಯನ್ನು ಊದಿದನು. ಆಗ ಸೈನಿಕರೆಲ್ಲರೂ ನಿಂತರು. ಇಸ್ರಾಯೇಲರನ್ನು ಪುನಃ ಹಿಂದಟ್ಟಲಿಲ್ಲ, ಯುದ್ಧವು ನಿಂತಿತು.
೨೮ಆಗ ಅವರು ಇಸ್ರಾಯೇಲ್ಯರನ್ನು ಹಿಂದಟ್ಟದೆ ಬಿಟ್ಟಿದ್ದರಿಂದ ಯುದ್ಧವು ನಿಂತುಹೋಯಿತು.
29 ಅಬ್ನೇರನೂ, ಅವನ ಜನರೂ ಆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ನಡೆದು, ಯೊರ್ದನನ್ನು ದಾಟಿ, ಬಿಥ್ರೋನ್ ಕಣಿವೆಯನ್ನು ಹಾದು ಮಹನಯಿಮಿಗೆ ಬಂದರು.
೨೯ಅಬ್ನೇರನೂ ಅವನ ಜನರೂ ಅರಾಬಾ ತಗ್ಗಿನಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಯೊರ್ದನ್ ಹೊಳೆದಾಟಿ, ಬಿಥ್ರೋನ ಕಣಿವೆಯನ್ನು ಹಾದು, ಮಹನಯಿಮಿಗೆ ಸೇರಿದರು.
30 ಯೋವಾಬನು ಅಬ್ನೇರನ ಹಿಂದಿನಿಂದ ತಿರುಗಿ ಜನರೆಲ್ಲರನ್ನು ಕೂಡಿಸಿಕೊಂಡಾಗ, ದಾವೀದನ ಸೇವಕರಲ್ಲಿ ಹತ್ತೊಂಬತ್ತು ಜನರೂ, ಅಸಾಯೇಲನೂ ಕಡಿಮೆಯಾಗಿದ್ದರು.
೩೦ಯೋವಾಬನು ಅಬ್ನೇರನನ್ನು ಹಿಂದಟ್ಟದೆ ಬಿಟ್ಟು, ಹಿಂದಿರುಗಿ ಬಂದು, ಜನರನ್ನು ಸೇರಿಸಿ ಲೆಕ್ಕಮಾಡಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಸೈನಿಕರೂ ಅಸಾಹೇಲನೂ ಇರಲಿಲ್ಲ.
31 ದಾವೀದನ ಸೇವಕರು ಬೆನ್ಯಾಮೀನ್ಯರಲ್ಲಿಯೂ, ಅಬ್ನೇರನ ಜನರಲ್ಲಿಯೂ ಮುನ್ನೂರ ಅರವತ್ತು ಜನರನ್ನು ಹೊಡೆದದ್ದರಿಂದ ಅವರು ಸತ್ತರು.
೩೧ಆದರೆ ದಾವೀದನ ಸೈನಿಕರು ಅಬ್ನೇರನ ಜನರಾಗಿರುವ ಬೆನ್ಯಾಮೀನ್ಯರಲ್ಲಿ ಮುನ್ನೂರ ಅರವತ್ತು ಮಂದಿಯನ್ನು ಕೊಂದಿದ್ದರು.
32 ಅವರು ಅಸಾಯೇಲನನ್ನು ಎತ್ತಿಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.
೩೨ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ, ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಯಿತು.