< ಅರಸುಗಳು - ದ್ವಿತೀಯ ಭಾಗ 18 >
1 ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಅರಸನಾಗಿದ್ದ ಆಹಾಜನ ಮಗ ಹಿಜ್ಕೀಯನು ಆಳಲು ಆರಂಭಿಸಿದನು.
೧ಇಸ್ರಾಯೇಲರ ಅರಸನೂ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದ ರಾಜನಾದ ಆಹಾಜನ ಮಗ ಹಿಜ್ಕೀಯನು ಆಳ್ವಿಕೆಗೆ ಬಂದನು.
2 ಅವನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಅಬೀಯಾ. ಅವಳು ಜೆಕರ್ಯನ ಮಗಳಾಗಿದ್ದಳು.
೨ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಭತ್ತು ವರ್ಷಗಳ ಕಾಲ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬಾಕೆಯು ಇವನ ತಾಯಿ.
3 ಹಿಜ್ಕೀಯನು ತನ್ನ ತಂದೆ ದಾವೀದನು ಮಾಡಿದ ಪ್ರಕಾರ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು.
೩ಇವನು ಎಲ್ಲಾ ವಿಷಯಗಳಲ್ಲಿಯೂ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.
4 ಹಿಜ್ಕೀಯನು ಉನ್ನತ ಪೂಜಾಸ್ಥಳಗಳನ್ನು ತೆಗೆದುಹಾಕಿ, ವಿಗ್ರಹಗಳನ್ನು ಒಡೆದುಬಿಟ್ಟು, ಅಶೇರ ಸ್ತಂಭಗಳನ್ನು ಕಡಿದುಹಾಕಿದನು. ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಮುರಿದುಬಿಟ್ಟನು. ಏಕೆಂದರೆ ಆ ದಿವಸಗಳವರೆಗೂ ಇಸ್ರಾಯೇಲರು ಅದಕ್ಕೆ ಧೂಪ ಸುಡುತ್ತಿದ್ದರು. ಅದನ್ನು ನೆಹುಷ್ಟಾನ್ ಎಂದು ಕರೆಯುತ್ತಿದ್ದರು.
೪ಪೂಜಾಸ್ಥಳಗಳನ್ನು ಹಾಳುಮಾಡಿ, ಕಲ್ಲುಕಂಬಗಳನ್ನು ಒಡೆದು, ಅಶೇರ ವಿಗ್ರಹ ಸ್ತಂಭಗಳನ್ನು ಕತ್ತರಿಸಿ ಹಾಕಿದನು. ಮೋಶೆಯು ಮಾಡಿಸಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಇಸ್ರಾಯೇಲರು ಅದಕ್ಕೆ ಆ ವರೆಗೂ ಧೂಪವನ್ನರ್ಪಿಸುತ್ತಿದ್ದರು. ಅದಕ್ಕೆ “ನೆಹುಷ್ಟಾನ್” ಎಂಬ ಹೆಸರಿತ್ತು.
5 ಹಿಜ್ಕೀಯನು ಇಸ್ರಾಯೇಲಿನ ಯೆಹೋವ ದೇವರಲ್ಲಿ ಭರವಸೆವುಳ್ಳವನಾಗಿದ್ದನು. ಅವನಿಗೆ ಮುಂಚೆ ಇದ್ದವರಲ್ಲಿಯೂ, ಅವನ ತರುವಾಯ ಯೆಹೂದದ ಸಮಸ್ತ ಅರಸುಗಳಲ್ಲಿಯೂ ಅವನ ಹಾಗೆ ಒಬ್ಬರೂ ಇರಲಿಲ್ಲ.
೫ಹಿಜ್ಕೀಯನು ಇಸ್ರಾಯೇಲರ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು. ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಹಿಂದೆಯೂ ಇರಲಿಲ್ಲ, ಆಮೇಲೂ ಇರಲಿಲ್ಲ.
6 ಅವನು ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡದೆ, ದೇವರನ್ನೇ ಆತುಕೊಂಡು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನು ಕೈಗೊಂಡನು.
೬ಇದಲ್ಲದೆ, ಇವನು ಯೆಹೋವನನ್ನೇ ಆಶ್ರಯಿಸಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ, ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡು ನಡೆದನು.
7 ಯೆಹೋವ ದೇವರು ಅವನ ಸಂಗಡ ಇದ್ದರು. ಹಿಜ್ಕೀಯನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಯಿತು. ಅವನು ಅಸ್ಸೀರಿಯದ ಅರಸನನ್ನು ಸೇವಿಸದೆ, ಅವನ ಮೇಲೆ ತಿರುಗಿಬಿದ್ದನು.
೭ಯೆಹೋವನು ಹಿಜ್ಕೀಯನ ಸಂಗಡ ಇದ್ದುದರಿಂದ ಅವನು ಹೋದ ಎಲ್ಲ ಕಡೆ ಅಭಿವೃದ್ಧಿ ಹೊಂದಿದನು. ಇವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ದಂಗೆ ಎದ್ದು ಸ್ವತಂತ್ರನಾದನು.
8 ಅವರು ಕಾವಲು ಗೋಪುರದಿಂದ ಕೋಟೆಯುಳ್ಳ ಪಟ್ಟಣಗಳವರೆಗೂ ಫಿಲಿಷ್ಟಿಯರನ್ನು ಗಾಜಪ್ರಾಂತ್ಯದವರೆಗೆ ಸಂಹರಿಸಿದನು.
೮ಗಾಜ ಪ್ರಾಂತ್ಯದವರೆಗೆ ವಾಸವಾಗಿದ್ದ ಫಿಲಿಷ್ಟಿಯರನ್ನು ಸೋಲಿಸಿ, ಕಾವಲುಗಾರರ ಗೋಪುರ ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಚಿಕ್ಕಗ್ರಾಮ ಮೊದಲುಗೊಂಡು ಮಹಾನಗರಗಳವರೆಗೂ ಎಲ್ಲಾ ಊರುಗಳನ್ನು ನಾಶಮಾಡಿದನು.
9 ಇಸ್ರಾಯೇಲಿನ ಅರಸನಾದ ಏಲನ ಮಗ ಹೋಶೇಯನ ಆಳ್ವಿಕೆಯ ಏಳನೆಯ ವರ್ಷ, ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಅದಕ್ಕೆ ಮುತ್ತಿಗೆಹಾಕಿದನು.
೯ಇಸ್ರಾಯೇಲರ ಅರಸನೂ ಏಲನ ಮಗನೂ ಆದ ಹೋಶೇಯನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅಂದರೆ ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಶಲ್ಮನೆಸರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು.
10 ಮೂರು ವರ್ಷದ ತರುವಾಯ ಸಮಾರ್ಯವನ್ನು ಅಸ್ಸೀರಿಯದವರು ಸ್ವಾಧೀನಮಾಡಿಕೊಂಡರು. ಇಸ್ರಾಯೇಲಿನ ಅರಸನಾದ ಹೋಶೇಯನ ಒಂಬತ್ತನೆಯ ವರ್ಷವಾದ, ಹಿಜ್ಕೀಯನ ಆರನೆಯ ವರ್ಷದಲ್ಲಿ ಸಮಾರ್ಯವು ಸ್ವಾಧೀನವಾಯಿತು.
೧೦ಮೂರು ವರ್ಷಗಳ ತರುವಾಯ, ಇಸ್ರಾಯೇಲರ ಅರಸನಾದ ಹೋಶೇಯನ ಆಳ್ವಿಕೆಯ ಒಂಭತ್ತನೆಯ ವರ್ಷದಲ್ಲಿ ಅಂದರೆ ಹಿಜ್ಕೀಯನ ಆಳ್ವಿಕೆಯ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ಸ್ವಾಧೀನಮಾಡಿಕೊಂಡನು.
11 ಅಸ್ಸೀರಿಯದ ಅರಸನು ಇಸ್ರಾಯೇಲರನ್ನು ಅಸ್ಸೀರಿಯ ದೇಶಕ್ಕೆ ಸೆರೆಯಾಗಿ ಒಯ್ದು ಹಲಹ ಪ್ರಾಂತದಲ್ಲಿಯೂ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತದಲ್ಲಿಯೂ ಮತ್ತು ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.
೧೧ಅಶ್ಶೂರದ ಅರಸನು ಇಸ್ರಾಯೇಲರನ್ನು ಸೆರೆಹಿಡಿದು ಅವರನ್ನು ಹಲಹು, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯ, ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು.
12 ಏಕೆಂದರೆ ಅವರು ತಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ಅವರ ಒಡಂಬಡಿಕೆಯನ್ನೂ, ಯೆಹೋವ ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಸಮಸ್ತವನ್ನೂ ಮೀರಿದರು. ಅವರು ದೇವರ ಆಜ್ಞೆಗಳಿಗೆ ಕಿವಿಗೊಡಲಿಲ್ಲ, ಅವುಗಳಂತೆ ನಡೆಯಲಿಲ್ಲ.
೧೨ಏಕೆಂದರೆ ಅವರು ತಮ್ಮ ದೇವರಾದ ಯೆಹೋವನ ಮಾತನ್ನು ಕೇಳದೆ ಆತನ ಒಡಂಬಡಿಕೆಯನ್ನು ಮೀರಿ, ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ವಿಧೇಯರಾಗಿ ನಡೆಯಲಿಲ್ಲ. ದೇವರ ಆಜ್ಞೆಗಳಿಗೆ ಕಿವಿಗೊಡದೇ ಅವುಗಳಂತೆ ನಡೆಯದೇ ಇದ್ದುದರಿಂದಲೇ ಹೀಗಾಯಿತು.
13 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
೧೩ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತ್ಯದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
14 ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಸ್ಸೀರಿಯದ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಬಿಟ್ಟು ಹಿಂದಿರುಗಿ ಹೋಗು. ನೀನು ನನ್ನ ಮೇಲೆ ವಿಧಿಸುವುದನ್ನು ನಾನು ಕೊಡುತ್ತೇನೆ,” ಎಂದು ಹೇಳಿ ಕಳುಹಿಸಿದನು. ಆಗ ಅಸ್ಸೀರಿಯದ ಅರಸನು ಯೆಹೂದದ ಅರಸನಾದ ಹಿಜ್ಕೀಯನು ಹತ್ತು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನೂ, ಒಂದು ಸಾವಿರ ಕಿಲೋಗ್ರಾಂ ಬಂಗಾರವನ್ನೂ ಕೊಡಬೇಕೆಂದು ನೇಮಕಮಾಡಿದನು.
೧೪ಆಗ ಯೆಹೂದ್ಯರ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ಅಪರಾಧಿ; ನೀನು ನನ್ನನ್ನು ಬಿಟ್ಟು ಹೋಗು. ನೀನು ನನಗೆ ವಿಧಿಸುವಷ್ಟು ದಂಡವನ್ನು ಕೊಡುತ್ತೇನೆ” ಎಂದು ಹೇಳಿ ಕಳುಹಿಸಿದನು. ಅಶ್ಶೂರದ ಅರಸನು ಮುನ್ನೂರು ತಲಾಂತು ಬೆಳ್ಳಿಯನ್ನೂ, ಮೂವತ್ತು ತಲಾಂತು ಬಂಗಾರವನ್ನೂ ಕೊಡಬೇಕೆಂದು ಆಜ್ಞಾಪಿಸಿದನು.
15 ಆದ್ದರಿಂದ ಹಿಜ್ಕೀಯನು ಯೆಹೋವ ದೇವರ ಆಲಯದಲ್ಲಿಯೂ, ಅರಸನ ಮನೆಯ ಬೊಕ್ಕಸಗಳಲ್ಲಿಯೂ, ಸಿಕ್ಕಿದ ಸಮಸ್ತ ಬೆಳ್ಳಿಯನ್ನೂ ಕೊಟ್ಟನು.
೧೫ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿಯೂ, ಅರಸನ ಅರಮನೆಯ ಭಂಡಾರದಲ್ಲಿಯೂ ಸಿಕ್ಕಿದ ಬೆಳ್ಳಿಯನ್ನು ಅವನಿಗೆ ಕೊಟ್ಟನು.
16 ಈ ಸಮಯದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು, ಯೆಹೋವ ದೇವರ ಮಂದಿರದ ಕದಗಳ ಮೇಲೆಯೂ, ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನೂ ಕತ್ತರಿಸಿ, ಅಸ್ಸೀರಿಯದ ಅರಸನಿಗೆ ಕೊಟ್ಟನು.
೧೬ಅಲ್ಲದೆ ಹಿಜ್ಕೀಯನು ಯೆಹೋವನ ಆಲಯದ ಕದಗಳಿಗೂ, ಕಂಬಗಳಿಗೂ ಹೊದಿಸಿದ್ದ ಬಂಗಾರದ ತಗಡನ್ನೂ ತೆಗೆದು ಅಶ್ಶೂರದ ಅರಸನಿಗೆ ಕಳುಹಿಸಿದನು.
17 ಅಸ್ಸೀರಿಯದ ಅರಸನು ತನ್ನ ಅತಿ ಪ್ರಮುಖ ಅಧಿಕಾರಿಯನ್ನೂ, ಮುಖ್ಯ ನಾಯಕರನ್ನೂ, ಸೈನ್ಯಾಧಿಕಾರಿಯನ್ನೂ ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನೂ ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡರು.
೧೭ಆದರೆ ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತವಾಗಿ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬುವವರನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವರು ಗಟ್ಟಾ ಹತ್ತಿ ಯೆರೂಸಲೇಮಿಗೆ ಬಂದು ಅಗಸರ ಹೊಲದ ಮೇಲೆ ಹೋಗುವ ರಾಜಮಾರ್ಗದ ಹತ್ತಿರ ಇರುವ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯ ಮಾಡಿಕೊಂಡರು.
18 ಅವರು ಅರಸನನ್ನು ಕರೆಕಳುಹಿಸಿದರು. ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವರ ಬಳಿಗೆ ಬಂದರು.
೧೮ಅವರು ಅರಸನನ್ನು ಕೂಗಿ ಕರೆದಾಗ, ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ಅವರ ಬಳಿಗೆ ಬಂದರು.
19 ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?
೧೯ರಬ್ಷಾಕೆಯು ಅವರಿಗೆ, ನೀವು ಹೋಗಿ ಹಿಜ್ಕೀಯನಿಗೆ ಮಹಾರಾಜನಾದ ಅಶ್ಶೂರದ ಅರಸನ ಮಾತುಗಳನ್ನು ತಿಳಿಸಿರಿ. ಅವನು, “ನಿನ್ನ ಭರವಸಕ್ಕೆ ಯಾವ ಆಧಾರವುಂಟು?
20 ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?
೨೦ಬರೀ ಒಂದು ಬಾಯಿ ಮಾತಿನಲ್ಲಿ ಯುದ್ಧಕ್ಕೆ ಬೇಕಾದ ವಿವೇಕವೂ, ಬಲವೂ ಉಂಟೆಂದು ಅಂದುಕೊಳ್ಳುತ್ತಿರುವೆಯೋ? ನೀನು ಯಾರ ಮೇಲೆ ಭರವಸವಿಟ್ಟು ನನಗೆ ವಿರೋಧವಾಗಿ ತಿರುಗಿ ಬಿದ್ದಿರುವೆ?
21 ಇಗೋ, ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು! ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.
೨೧ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುವೆಯೋ? ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ; ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಇದೇ ಗತಿಯಾಗುವುದು.
22 ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು,” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
೨೨ಒಂದು ವೇಳೆ ನೀವು, ‘ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ’ ಎಂದು ಹೇಳುವುದಾದರೆ ಹಿಜ್ಕೀಯನು, ‘ಯೆರೂಸಲೇಮಿನ ಯಜ್ಞವೇದಿಯ ಮುಂದೆಯೇ ಆರಾಧನೆಮಾಡಬೇಕು’ ಎಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ ಆ ಯೆಹೋವನ ಪೂಜಾಸ್ಥಳಗಳನ್ನೂ, ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದ್ದಾನಲ್ಲಾ,
23 “‘ಹಾಗಾದರೆ ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
೨೩ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಸವಾಲು ಮಾಡಿನೋಡು. ಆಗ ಕುದುರೆ ಸವಾರರನ್ನು ಬಳಸಲು ನಿನಗೆ ಸಾಮರ್ಥ್ಯವಿದ್ದರೆ ಆತನು ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ.
24 ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?
೨೪ಹೀಗಿದ್ದಾಗ ನೀನು ನನ್ನ ಒಡೆಯನ ಸೇನಾಧಿಪತಿಗಳಲ್ಲಿ ಅತಿ ಸಣ್ಣವನನ್ನಾದರೂ ಸೋಲಿಸುವುದು ಸಾಧ್ಯವೇ? ರಥಾಶ್ವಬಲಗಳ ವಿಷಯವಾಗಿ ನೀನು ಐಗುಪ್ತರ ಮೇಲೆ ಭರವಸೆಯಿಟ್ಟಿರುವೆ.
25 ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’” ಎಂದನು.
೨೫ಈ ದೇಶವನ್ನು ಹಾಳುಮಾಡುವುದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ‘ಈ ದೇಶಕ್ಕೆ ಬಂದು, ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದ್ದಾನೆ’” ಎಂದನು.
26 ಆಗ ಹಿಲ್ಕೀಯನ ಮಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
೨೬ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ, ಯೋವ ಎಂಬುವವರು ರಬ್ಷಾಕೆಗೆ, “ನೀನು ಮಾತನಾಡುವುದು ಪೌಳಿಗೋಡೆಯ ಮೇಲಿರುವ ಯೆಹೂದ್ಯರಿಗೂ ಕೇಳಿಸುತ್ತದೆ. ಆದುದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು, ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತನಾಡಬೇಡ” ಎಂದು ಹೇಳಿದರು.
27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
೨೭ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಒಡೆಯನ ಸಂಗಡವಾಗಲಿ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಪೌಳಿಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನಿಮ್ಮೊಡನೆ ಇದ್ದರೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವುದು” ಎಂದು ಉತ್ತರಕೊಟ್ಟನು.
28 ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.
೨೮ನಂತರ, ರಬ್ಷಾಕೆಯು ಎದ್ದು ನಿಂತು ಯೂದಾಯ ಭಾಷೆಯಲ್ಲಿ, “ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ.
29 ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ. ಏಕೆಂದರೆ ಅವನು ನನ್ನ ಕೈಯಿಂದ ನಿಮ್ಮನ್ನು ಬಿಡಿಸಲು ಶಕ್ತನಲ್ಲ.
೨೯ಅರಸನು ನಿಮಗೆ, ‘ಹಿಜ್ಕೀಯನಿಂದ ಮೋಸಹೋಗಬೇಡಿರಿ, ಅವನು ನಿಮ್ಮನ್ನು ನನ್ನ ಕೈಯಿಂದ ಬಿಡಿಸಲಾರನು’
30 ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರು, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲ,’ ಎಂದು ಹೇಳಿ, ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವನು.
೩೦ಹಿಜ್ಕೀಯನು ನಿಮಗೆ, ‘ಯೆಹೋವನ ಮೇಲೆ ಭರವಸದಿಂದಿರಿ; ಆತನು ನಿಮ್ಮನ್ನು ಹೇಗೂ ರಕ್ಷಿಸುವನು. ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವುದಿಲ್ಲ’ ಎಂಬುದಾಗಿ ಹೇಳಿದರೆ ಅವನ ಮಾತಿಗೆ ಕಿವಿಗೊಡಬೇಡಿರಿ, ಒಪ್ಪಬೇಡಿರಿ”
31 “ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ: ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
೩೧ಹಿಜ್ಕೀಯನ ಮಾತನ್ನು ಕೇಳಬೇಡಿರಿ. ಅಶ್ಶೂರದ ಅರಸನಾದ ನನ್ನ ಮಾತನ್ನು ಕೇಳಿರಿ, “ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಬಂದು ನನ್ನೊಡನೆ ಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿ ಆಗ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಅಂಜೂರ ಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
32 ಸ್ವಲ್ಪ ಕಾಲವಾದ ನಂತರ ನಾನು ಬಂದು, ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಎಣ್ಣೆಮರಗಳು, ಜೇನು ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ಜೀವವನ್ನು ಆಯ್ದುಕೊಳ್ಳಿರಿ, ಮರಣವನ್ನಲ್ಲ. “‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸಿ ತಪ್ಪು ಮಾರ್ಗದಲ್ಲಿ ನಡೆಸುವಾಗ, ಅವನ ಮಾತನ್ನು ಕೇಳಬೇಡಿರಿ.
೩೨ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ ಆಹಾರ, ದ್ರಾಕ್ಷಿತೋಟ, ಎಣ್ಣೆಮರ, ಜೇನುತುಪ್ಪವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ನೀವು ಸಾಯುವುದಿಲ್ಲ, ಬದುಕುವಿರಿ. ಯೆಹೋವನು ನಿಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುವ ಹಿಜ್ಕೀಯನಿಗೆ ಕಿವಿಗೊಡಬೇಡಿರಿ.
33 ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?
೩೩ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಸಾಧ್ಯ?
34 ಹಮಾತ್, ಅರ್ಪಾದ್ ದೇವರುಗಳು ಎಲ್ಲಿ? ಸೆಫರ್ವಯಿಮ್, ಹೇನ, ಇವ್ವಗಳ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?
೩೪ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ ಮತ್ತು ಇವ್ವಾ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಲು ಸಾಧ್ಯವಾಯಿತೇ?
35 ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
೩೫ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಲು ಆಗದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
36 ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
೩೬ಆ ಸೇನಾಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು. ಏನೂ ಹೇಳಲಿಲ್ಲ.
37 ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ, ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
೩೭ಹಿಲ್ಕೀಯನ ಮಗನೂ, ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್ ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬುವವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.