< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 8 >

1 ಪ್ರಿಯರೇ, ಮಕೆದೋನ್ಯದಲ್ಲಿರುವ ಸಭೆಗಳಿಗೆ ದೇವರು ಕೊಟ್ಟಿರುವ ಕೃಪೆಯನ್ನು ಕುರಿತು ನೀವು ತಿಳಿದಿರಬೇಕೆಂದು ನಮ್ಮ ಅಪೇಕ್ಷೆ. 2 ಅವರು ಘೋರ ಹಿಂಸೆಯ ನಡುವೆಯಿದ್ದರೂ ಕಡುಬಡತನದಲ್ಲಿ ಬಳಲುತ್ತಿದ್ದರೂ ಅವರು ಬಹಳ ಸಂತೋಷದಿಂದ, ಉದಾರಮನಸ್ಸಿನಿಂದ ಕೊಡುವವರಾಗಿದ್ದಾರೆ. 3 ಅವರು ತಮಗೆ ಸಾಧ್ಯವಾದಷ್ಟು ಕೊಟ್ಟಿದ್ದಾರೆ. ಮಾತ್ರವಲ್ಲದೇ ತಮ್ಮ ಶಕ್ತಿ ಮೀರಿ ಕೊಟ್ಟಿದ್ದಾರೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. 4 ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು. 5 ಇವೆಲ್ಲವನ್ನೂ ನಾವು ನೆನಸಿದ್ದಕ್ಕಿಂತಲೂ ಅವರು ಹೆಚ್ಚಾಗಿಯೇ ಮಾಡಿದರು. ಹೇಗೆಂದರೆ ಮೊದಲು ಅವರು ತಮ್ಮನ್ನೇ ಕರ್ತ ಯೇಸುವಿಗೆ ಒಪ್ಪಿಸಿಕೊಟ್ಟರು. ಅನಂತರ ದೇವರ ಚಿತ್ತಾನುಸಾರವಾಗಿ ತಮ್ಮನ್ನು ನಮಗೂ ಒಪ್ಪಿಸಿಕೊಟ್ಟರು. 6 ಹೀಗಿರಲಾಗಿ, ತೀತನು ಪ್ರಾರಂಭಿಸಿದ ಈ ದಾನ ಕಾರ್ಯವನ್ನು ನಿಮ್ಮಲ್ಲಿ ಸಹ ಪೂರ್ಣಗೊಳಿಸಬೇಕೆಂದು ನಾವು ಅವನನ್ನು ಬಹಳವಾಗಿ ಕೇಳಿಕೊಂಡೆವು. 7 ಹೇಗೆ ನೀವು ವಿಶ್ವಾಸ, ವಾಕ್ಚಾತುರ್ಯ, ತಿಳುವಳಿಕೆ, ಉತ್ಸಾಹ ಹಾಗೂ ನಮ್ಮ ಮೇಲೆ ನಿಮಗಿರುವ ಪ್ರೀತಿ, ಇವೆಲ್ಲವುಗಳಲ್ಲಿ ನೀವು ಸಮೃದ್ಧರಾಗಿದ್ದಂತೆ, ಈ ದಾನವೆಂಬ ಕೃಪಾಕಾರ್ಯದಲ್ಲಿಯೂ ಸಮೃದ್ಧರಾಗಿರಿ. 8 ಇದು ನಿಮಗೆ ನನ್ನ ಆಜ್ಞೆಯಲ್ಲ. ಆದರೆ ಇತರರಿಗೆ ನಿಮಗಿರುವ ಈ ಸೇವಾಕಾರ್ಯದ ಉತ್ಸಾಹವನ್ನೂ ನಮ್ಮ ಮೇಲಿರುವ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾಗಿದೆಯೆಂಬುದನ್ನೂ ಹೋಲಿಕೆಮಾಡಿ ಪರೀಕ್ಷಿಸಿನೋಡಲು ಬಯಸುತ್ತಿದ್ದೇನೆ. 9 ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯನ್ನು ನೀವು ಬಲ್ಲವರಾಗಿದ್ದೀರಿ. ಅವರು ಐಶ್ವರ್ಯವಂತರಾಗಿದ್ದರೂ ತಮ್ಮ ಬಡತನದ ಮೂಲಕ ನೀವು ಐಶ್ವರ್ಯವಂತರಾಗುವಂತೆ ಅವರು ನಿಮಗೋಸ್ಕರ ಬಡವರಾದರು. 10 ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ, ಕಳೆದ ವರ್ಷದಲ್ಲಿ ಮೊದಲು ನೀವೇ ಈ ಕಾರ್ಯವನ್ನು ಪ್ರಾರಂಭಿಸಿದ್ದಲ್ಲದೇ ಇದನ್ನು ಮಾಡಬೇಕೆಂದು ಬಯಸಿದ್ದೀರಿ. 11 ಆದ್ದರಿಂದ ನೀವು ಎಷ್ಟು ಆಸಕ್ತರಾಗಿ ಪ್ರಾರಂಭಿಸಿದ್ದೀರೋ, ಅಷ್ಟೇ ಆಸಕ್ತಿಯಿಂದ ಅದನ್ನು ಮುಗಿಸಿರಿ. ನಿಮ್ಮ ನಿಮ್ಮ ಶಕ್ತ್ಯಾನುಸಾರವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿರಿ. 12 ಯಾರಿಗಾದರೂ ಕೊಡುವ ಮನಸ್ಸಿದ್ದರೆ, ಅದು ದೇವರ ದೃಷ್ಟಿಯಲ್ಲಿ ಕೊಟ್ಟಂತೆ ಪರಿಗಣಿಸಲಾಗುವುದು. ಏಕೆಂದರೆ ಕೊಡುವವರು ಎಷ್ಟು ಕೊಟ್ಟಿದ್ದಾರೆ ಎಂಬುದು ಪ್ರಾಮುಖ್ಯವಲ್ಲ, ಆದರೆ ಇಲ್ಲದಿರುವುದನ್ನು ದೇವರು ಬಯಸದೇ ಇರುವುದನ್ನು ಕೊಡಬಯಸುತ್ತಾರೆ. 13 ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಬೇರೆಯವರನ್ನು ಕಷ್ಟಕ್ಕೆ ಒಳಪಡಿಸಬಾರದೆಂಬುದು ನಮ್ಮ ಉದ್ದೇಶವಲ್ಲ. ಸಮಾನತ್ವವಿರಬೇಕೆಂಬುದೇ ನಮ್ಮ ಉದ್ದೇಶವಾಗಿದೆ. 14 ಸದ್ಯದಲ್ಲಿ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುವುದು. ಅನಂತರ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದು. ಆಗ ಸಮಾನತೆಯ ಗುರಿಯು ಉಂಟಾಗುವುದು. 15 ಪವಿತ್ರ ವೇದದಲ್ಲಿ ಬರೆದಿರುವಂತೆ: “ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ.” 16 ನಿಮ್ಮ ವಿಷಯವಾಗಿ ನನಗಿರುವ ಹಿತಚಿಂತನೆಯನ್ನು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. 17 ನಮ್ಮ ವಿನಂತಿಯನ್ನು ತೀತನು ಒಪ್ಪಿಕೊಂಡದ್ದು ಮಾತ್ರವಲ್ಲದೆ, ತನ್ನ ಸ್ವಂತ ಇಚ್ಛೆಯಿಂದ ನಿಮ್ಮಲ್ಲಿಗೆ ಬರಲು ಆಸಕ್ತಿಯಿಂದ ಹೊರಟಿರುತ್ತಾನೆ. 18 ಅವನೊಂದಿಗೆ ಇನ್ನೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇನೆ. ಆ ಸಹೋದರನು ಮಾಡಿದ ಸುವಾರ್ತೆ ಸೇವೆಯನ್ನು ಎಲ್ಲಾ ಸಭೆಗಳವರು ಪ್ರಶಂಶಿಸಿದ್ದಾರೆ. 19 ಅಲ್ಲದೆ, ಕರ್ತ ಯೇಸುವಿನ ಮಹಿಮೆಗಾಗಿಯೂ ಸಹಾಯಮಾಡಬೇಕೆಂಬ ಸದುದ್ದೇಶ ತೋರಿಸುವುದಕ್ಕಾಗಿಯೂ ನಾವು ಸೇವೆಯನ್ನು ನಿರ್ವಹಿಸುತ್ತೇವೆ. ಇದಕ್ಕಾಗಿಯೇ, ನಮ್ಮ ಜೊತೆ ಬಂದು ಸಹಾಯಮಾಡಲು ಸಭೆಗಳಿಂದ ಆಯ್ಕೆಯಾದವನು ಆ ಸಹೋದರನು. 20 ಹೀಗೆ ನಮ್ಮ ಕೈಗೆ ಒಪ್ಪಿಸಲಾದ ಈ ಉದಾರ ಕೊಡುಗೆಯ ವಿತರಣೆಯ ಕಾರ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸಲು ಆಸ್ಪದವಿರಕೂಡದು. 21 ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ. 22 ಇವರಿಬ್ಬರ ಜೊತೆಯಲ್ಲಿ ನಾವು ನಮ್ಮ ಅನೇಕ ಅನುಭವಗಳಿಂದ ಆಸಕ್ತಿಯುಳ್ಳವನೆಂಬುದನ್ನು ದೃಢಪಡಿಸಿಕೊಂಡ ಬೇರೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಅವನು ನಿಮ್ಮ ಬಗ್ಗೆ ಪೂರ್ಣ ಭರವಸೆಯನ್ನಿಟ್ಟು ನಿಮಗೆ ನೆರವಾಗಲು ಇನ್ನೂ ಉತ್ಸುಕತೆಯಲ್ಲಿದ್ದಾನೆ. 23 ತೀತನು ನನ್ನ ಸಹೋದ್ಯೋಗಿ ಮತ್ತು ನಿಮ್ಮ ನಡುವೆಯಿರುವ ನನ್ನ ಸಹಕಾರಿಯಾಗಿರುತ್ತಾನೆ. ಇವನ ಸಂಗಡ ಬರುತ್ತಿರುವ ನಮ್ಮ ಸಹೋದರರು ಸಭೆಗಳ ಪ್ರತಿನಿಧಿಗಳಾಗಿದ್ದಾರೆ ಮತ್ತು ಕ್ರಿಸ್ತ ಯೇಸುವಿನ ಮಹಿಮೆಗೆ ಕಾರಣಸ್ಥರೂ ಆಗಿದ್ದಾರೆ. 24 ಆದ್ದರಿಂದ, ಇವರೊಂದಿಗೆ ನಿಮಗಿರುವ ಪ್ರೀತಿಯನ್ನೂ ನಿಮ್ಮ ಬಗ್ಗೆಯಿರುವ ನಮ್ಮ ಹೊಗಳಿಕೆಯನ್ನೂ ಸಭೆಗಳವರ ಮುಂದೆ ರುಜುಪಡಿಸಿ ತೋರಿಸಿರಿ.

< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 8 >