< ಸಮುವೇಲನು - ಪ್ರಥಮ ಭಾಗ 7 >

1 ಕಿರ್ಯತ್ ಯಾರೀಮಿನವರು ಬಂದು ಯೆಹೋವ ದೇವರ ಮಂಜೂಷವನ್ನು ತೆಗೆದುಕೊಂಡು, ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟರು. ಅವನ ಪುತ್ರನಾದ ಎಲಿಯಾಜರನನ್ನು ಯೆಹೋವ ದೇವರ ಮಂಜೂಷವನ್ನು ಕಾಯಲು ಪ್ರತಿಷ್ಠಿಸಿದರು.
ಆಗ ಕಿರ್ಯತ್ಯಾರೀಮಿನವರು ಬಂದು ಯೆಹೋವನ ಮಂಜೂಷವನ್ನು ತೆಗೆದುಕೊಂಡು ಹೋಗಿ, ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಲ್ಲಿಟ್ಟು, ಅವನ ಮಗನಾದ ಎಲ್ಲಾಜಾರನನ್ನು ಅದರ ಸೇವೆಗೋಸ್ಕರ ಪ್ರತಿಷ್ಠಿಸಿದರು.
2 ಮಂಜೂಷವು ಕಿರ್ಯತ್ ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರ್ಷಗಳಾದವು. ಆಗ, ಇಸ್ರಾಯೇಲ್ ಮನೆತನದವರೆಲ್ಲರು ಯೆಹೋವ ದೇವರಿಗೋಸ್ಕರ ಹಂಬಲಿಸಿ ಗೋಳಾಡುತ್ತಿದ್ದರು.
ಮಂಜೂಷವು ಕಿರ್ಯಾತ್ಯಾರೀಮಿಗೆ ಬಂದು ಬಹಳ ದಿನಗಳು ಅಂದರೆ, ಇಪ್ಪತ್ತು ವರ್ಷಗಳು ಕಳೆದು ಹೋದವು. ಈ ಕಾಲದಲ್ಲಿ ಎಲ್ಲಾ ಇಸ್ರಾಯೇಲ್ಯರು ದುಃಖಿಸುತ್ತಾ ಯೆಹೋವನ ಕಡೆಗೆ ತಿರುಗಿಕೊಳ್ಳಲು ಹಂಬಲಿಸುತ್ತಿದ್ದರು.
3 ಆಗ ಸಮುಯೇಲನು ಇಸ್ರಾಯೇಲ್ ಮನೆಯವರಿಗೆಲ್ಲಾ ಮಾತನಾಡಿ, “ನೀವು ನಿಮ್ಮ ಪೂರ್ಣಹೃದಯದಿಂದ ಯೆಹೋವ ದೇವರ ಕಡೆಗೆ ತಿರುಗಿ, ನಿಮ್ಮಲ್ಲಿರುವ ಅನ್ಯದೇವರುಗಳನ್ನೂ, ಅಷ್ಟೋರೆತನ್ನೂ ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಿ, ನಿಮ್ಮ ಹೃದಯವನ್ನು ಯೆಹೋವ ದೇವರಿಗೆ ಸಿದ್ಧಮಾಡಿ, ಅವರೊಬ್ಬರನ್ನೇ ಸೇವಿಸಿದರೆ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಗಳೊಳಗಿಂದ ತಪ್ಪಿಸುವರು,” ಎಂದನು.
ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಯೆಹೋವನ ಕಡೆಗೆ ತಿರುಗಿಕೊಂಡಿರುವುದಾದರೆ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿ ಯೆಹೋವನ ಮೇಲೆಯೇ ಮನಸ್ಸಿಟ್ಟು ಆತನೊಬ್ಬನನ್ನೇ ಸೇವಿಸಿರಿ. ಆಗ ಆತನು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು” ಅಂದನು.
4 ಆಗ ಇಸ್ರಾಯೇಲರು ಬಾಳನನ್ನೂ, ಅಷ್ಟೋರೆತನ್ನೂ ತೆಗೆದುಹಾಕಿ, ಯೆಹೋವ ದೇವರೊಬ್ಬರನ್ನೇ ಸೇವಿಸಿದರು.
ಹಾಗೆಯೇ ಇಸ್ರಾಯೇಲ್ಯರು ಬಾಳ್ ಅಷ್ಟೋರೆತ್ ದೇವತೆಗಳನ್ನು ತೆಗೆದುಹಾಕಿ ಯೆಹೋವನೊಬ್ಬನನ್ನೇ ಆರಾಧಿಸತೊಡಗಿದರು.
5 ಸಮುಯೇಲನು, “ನಾನು ನಿಮಗೋಸ್ಕರವಾಗಿ ಯೆಹೋವ ದೇವರನ್ನು ಪ್ರಾರ್ಥಿಸುವ ಹಾಗೆ ಇಸ್ರಾಯೇಲರನ್ನೆಲ್ಲಾ ಮಿಚ್ಪೆಯಲ್ಲಿ ಕೂಡಿಸಿಕೊಳ್ಳಿರಿ,” ಎಂದನು.
ಸಮುವೇಲನು ತಿರುಗಿ ಅವರಿಗೆ, “ಇಸ್ರಾಯೇಲ್ಯರೆಲ್ಲರೂ ಮಿಚ್ಪೆಯಲ್ಲಿ ಕೂಡಿಬರಲಿ; ನಾನು ನಿಮಗೋಸ್ಕರ ಯೆಹೋವನನ್ನು ಪ್ರಾರ್ಥಿಸುವೆನು” ಅಂದನು.
6 ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟಾಗಿ ಕೂಡಿಬಂದು, ಯೆಹೋವ ದೇವರ ಮುಂದೆ ನೀರು ತಂದು ಹೊಯ್ದು, ಆ ದಿವಸದಲ್ಲಿ ಉಪವಾಸ ಮಾಡಿ, “ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ” ಎಂದು ಅಲ್ಲಿ ಹೇಳಿದರು. ಸಮುಯೇಲನು ಇಸ್ರಾಯೇಲರಿಗೆ ಮಿಚ್ಪೆಯಲ್ಲಿ ನ್ಯಾಯ ತೀರಿಸುತ್ತಿದ್ದನು.
ಅವರು ಅಲ್ಲಿ ಕೂಡಿಬಂದು, ನೀರು ಸೇದಿ, ಯೆಹೋವನ ಮುಂದೆ ಹೊಯ್ದು, ಆ ದಿನ ಉಪವಾಸವಿದ್ದು, “ನಾವು ನಿನಗೆ ದ್ರೋಹಿಗಳಾಗಿದ್ದೇವೆ” ಎಂದು ಯೆಹೋವನಿಗೆ ಅರಿಕೆಮಾಡಿದರು. ಆನಂತರ ಸಮುವೇಲನು ನ್ಯಾಯಪಾಲಕನಾಗಿದ್ದು, ಮಿಚ್ಪೆಯಲ್ಲಿ ಇಸ್ರಾಯೇಲ್ಯರ ವ್ಯಾಜ್ಯಗಳನ್ನು ತೀರಿಸಿದನು.
7 ಇಸ್ರಾಯೇಲರು ಮಿಚ್ಪೆಯಲ್ಲಿ ಕೂಡಿ ಬಂದರೆಂದು ಫಿಲಿಷ್ಟಿಯರು ಕೇಳಿದಾಗ, ಫಿಲಿಷ್ಟಿಯರ ಅಧಿಪತಿಗಳು ಇಸ್ರಾಯೇಲರಿಗೆ ವಿರೋಧವಾಗಿ ಏರಿ ಬಂದರು. ಆಗ ಇಸ್ರಾಯೇಲರು ಇದನ್ನು ಕೇಳಿ ಫಿಲಿಷ್ಟಿಯರಿಗೋಸ್ಕರ ಭಯಪಟ್ಟು,
ಇಸ್ರಾಯೇಲ್ಯರು ಮಿಚ್ಪೆಯಲ್ಲಿ ಕೂಡಿಬಂದಿದ್ದಾರೆ ಎಂದು ಫಿಲಿಷ್ಟಿಯರಿಗೆ ಗೊತ್ತಾದಾಗ ಅವರ ರಾಜರು ಇಸ್ರಾಯೇಲ್ಯರಿಗೆ ವಿರೋಧವಾಗಿ ಹೊರಟರು. ಇದನ್ನು ತಿಳಿದ ಇಸ್ರಾಯೇಲರು ಬಹಳವಾಗಿ ಭಯಪಟ್ಟು ಸಮುವೇಲನಿಗೆ,
8 ಅವರು ಸಮುಯೇಲನಿಗೆ, “ನಮ್ಮ ದೇವರಾದ ಯೆಹೋವ ದೇವರು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವವರೆಗೆ, ನೀನು ನಮಗೋಸ್ಕರವಾಗಿ ಪ್ರಾರ್ಥನೆಮಾಡಿ ಮೊರೆಯಿಡುವುದನ್ನು ನಿಲ್ಲಿಸಬೇಡ,” ಎಂದರು.
“ನಮ್ಮ ದೇವರಾದ ಯೆಹೋವನು ನಮ್ಮನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವ ಹಾಗೆ ನೀನು ನಮಗೋಸ್ಕರ ಆತನಿಗೆ ಮೊರೆಯಿಡು, ಸುಮ್ಮನಿರಬೇಡ” ಅಂದರು.
9 ಆಗ ಸಮುಯೇಲನು ಹಾಲು ಕುಡಿಯುವ ಕುರಿಮರಿಯನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಪೂರ್ಣ ದಹನಬಲಿಯನ್ನು ಅರ್ಪಿಸಿದನು, ಇಸ್ರಾಯೇಲರಿಗೋಸ್ಕರ ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಉತ್ತರವನ್ನು ದಯಪಾಲಿಸಿದರು.
ಆಗ ಸಮುವೇಲನು ಹಾಲುಕುಡಿಯುವ ಕುರಿಮರಿಯನ್ನು ತಂದು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಿ ಇಸ್ರಾಯೇಲ್ಯರಿಗೋಸ್ಕರ ಮೊರೆಯಿಡಲು ಆತನು ಸದುತ್ತರವನ್ನು ದಯಪಾಲಿಸಿದನು.
10 ಸಮುಯೇಲನು ದಹನಬಲಿಯನ್ನು ಅರ್ಪಿಸುವಾಗ, ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸಮೀಪಕ್ಕೆ ಬಂದರು. ಆಗ ಯೆಹೋವ ದೇವರು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಕಳವಳಗೊಳಿಸಿ, ಇಸ್ರಾಯೇಲರಿಗೆ ಸೋತು ಓಡಿಹೋಗುವಂತೆ ಮಾಡಿದರು.
೧೦ಹೇಗೆಂದರೆ, ಸಮುವೇಲನು ಯಜ್ಞವನ್ನು ಅರ್ಪಿಸುವ ವೇಳೆಯಲ್ಲಿ ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಕ್ಕೋಸ್ಕರ ಸಮೀಪಿಸಲಾಗಿ, ಯೆಹೋವನು ದೊಡ್ಡ ಗುಡುಗಿನಿಂದ ಅವರನ್ನು ಕಳವಳಗೊಳಿಸಿ ಇಸ್ರಾಯೇಲರಿಗೆ ಸೋತು ಓಡಿ ಹೋಗುವಂತೆ ಮಾಡಿದನು.
11 ಆಗ ಇಸ್ರಾಯೇಲರು ಮಿಚ್ಪೆಯಿಂದ ಹೊರಟು, ಫಿಲಿಷ್ಟಿಯರನ್ನು ಹಿಂದಟ್ಟಿ, ಬೇತ್ಕಾರಿನವರೆಗೂ ಅವರನ್ನು ಹೊಡೆದರು.
೧೧ಇಸ್ರಾಯೇಲ್ಯರಾದರೋ ಮಿಚ್ಪೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ತಗ್ಗಿನವರೆಗೆ ಅವರನ್ನು ಹತಮಾಡಿದರು.
12 ಸಮುಯೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ, ಶೇನಿಗೂ ಮಧ್ಯದಲ್ಲಿ ನಿಲ್ಲಿಸಿ, “ಇಲ್ಲಿಯವರೆಗೂ ಯೆಹೋವ ದೇವರು ನಮಗೆ ಸಹಾಯ ಮಾಡಿದ್ದಾರೆ,” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.
೧೨ಅನಂತರ ಸಮುವೇಲನು ಮಿಚ್ಪೆಗೂ ಶೇನಿಗೂ ಮಧ್ಯದಲ್ಲಿ ಒಂದು ಕಲ್ಲನ್ನು ನಿಲ್ಲಿಸಿ, “ಯೆಹೋವನು ಇಲ್ಲಿಯವರೆಗೆ ನಮಗೆ ಸಹಾಯಮಾಡಿದ್ದಾನೆ” ಎಂದು ಹೇಳಿ ಅದಕ್ಕೆ ಎಬೆನೆಜೆರ್ ಎಂದು ಹೆಸರಿಟ್ಟನು.
13 ಫಿಲಿಷ್ಟಿಯರು ಸೋತುಹೋದುದರಿಂದ ಇಸ್ರಾಯೇಲಿನ ಮೇರೆಯಲ್ಲಿ ಬರಲೇ ಇಲ್ಲ. ಇದಲ್ಲದೆ ಸಮುಯೇಲನು ಇದ್ದ ದಿವಸಗಳೆಲ್ಲಾ ಯೆಹೋವ ದೇವರ ಕೈ ಫಿಲಿಷ್ಟಿಯರಿಗೆ ವಿರೋಧವಾಗಿತ್ತು.
೧೩ಫಿಲಿಷ್ಟಿಯರು ಬಹಳವಾಗಿ ತಗ್ಗಿಸಲ್ಪಟ್ಟದರಿಂದ ತಿರುಗಿ ಇಸ್ರಾಯೇಲ್ಯರ ಪ್ರಾಂತ್ಯದೊಳಗೆ ಬರಲೇ ಇಲ್ಲ. ಸಮುವೇಲನ ಜೀವಮಾನದಲ್ಲೆಲ್ಲಾ ಯೆಹೋವನ ಹಸ್ತವು ಫಿಲಿಷ್ಟಿಯರಿಗೆ ವಿರೋಧವಾಗಿಯೇ ಇತ್ತು.
14 ಫಿಲಿಷ್ಟಿಯರು ಇಸ್ರಾಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್ ಮೊದಲ್ಗೊಂಡು ಗತ್ ಊರಿನವರೆಗೂ ಇರುವ ಪಟ್ಟಣಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರಿಂದ ತಿರುಗಿ ತೆಗೆದುಕೊಂಡರು. ಅವುಗಳ ಮೇರೆಗಳನ್ನು ಇಸ್ರಾಯೇಲರು ಫಿಲಿಷ್ಟಿಯರ ಕೈಯಿಂದ ಬಿಡಿಸಿಕೊಂಡರು. ಇಸ್ರಾಯೇಲಿಗೂ, ಅಮೋರಿಯರಿಗೂ ಮಧ್ಯೆ ಸಮಾಧಾನ ಉಂಟಾಗಿತ್ತು.
೧೪ಅವರು ಎಕ್ರೋನ್ ಮೊದಲುಗೊಂಡು ಗತ್ ಊರಿನ ವರೆಗೆ ಇಸ್ರಾಯೇಲರಿಂದ ಕಿತ್ತುಕೊಂಡಿದ್ದ ಎಲ್ಲಾ ಪಟ್ಟಣಗಳು ಇಸ್ರಾಯೇಲರಿಗೇ ದೊರಕಿದವು. ಅವುಗಳಿಗೆ ಸೇರಿದ ಗ್ರಾಮಗಳನ್ನೂ ಇಸ್ರಾಯೇಲರು ಫಿಲಿಷ್ಟಿಯರಿಂದ ತೆಗೆದುಕೊಂಡರು. ಇಸ್ರಾಯೇಲರಿಗೂ ಅಮೋರಿಯರಿಗೂ ಸಮಾಧಾನವಿತ್ತು.
15 ಇದಲ್ಲದೆ ಸಮುಯೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.
೧೫ಸಮುವೇಲನು ಜೀವದಿಂದ ಇರುವವರೆಗೆ ಇಸ್ರಾಯೇಲರಿಗೆ ನ್ಯಾಯತೀರಿಸುತ್ತಿದ್ದನು.
16 ಅವನು ಪ್ರತಿವರ್ಷ ಹೊರಟು ಬೇತೇಲನ್ನೂ, ಗಿಲ್ಗಾಲನ್ನೂ, ಮಿಚ್ಪೆಯನ್ನೂ ಸುತ್ತಿಕೊಂಡು ಹೋಗಿ ಆ ಸ್ಥಳಗಳಲ್ಲೆಲ್ಲಾ ಇಸ್ರಾಯೇಲರಿಗೆ ನ್ಯಾಯತೀರಿಸಿದನು.
೧೬ಅವನು ಇಸ್ರಾಯೇಲರ ನ್ಯಾಯಗಳನ್ನು ತೀರಿಸುವುದಕ್ಕೋಸ್ಕರ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಕ್ಕೆ ತಿರುಗಿ ಬರುತ್ತಿದ್ದನು.
17 ಆದರೆ ಅವನು ರಾಮಕ್ಕೆ ತಿರುಗಿ ಬರುತ್ತಾ ಇದ್ದನು. ಏಕೆಂದರೆ ಅಲ್ಲಿ ಅವನ ಮನೆ ಇತ್ತು, ಅಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು. ಯೆಹೋವ ದೇವರಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.
೧೭ಅಲ್ಲಿ ಅವನ ಸ್ವಂತ ಮನೆಯಿದ್ದುದರಿಂದ ಅಲ್ಲಿಯೇ ಯೆಹೋವನಿಗೆ ಒಂದು ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲರ ವಿವಾದಗಳನ್ನು ತೀರಿಸುತ್ತಿದ್ದನು.

< ಸಮುವೇಲನು - ಪ್ರಥಮ ಭಾಗ 7 >